ಪ್ರಮುಖ ಸುದ್ದಿ

ಕೊರೊನಾ ಭೀತಿ ನಡುವೆ ಹೋಳಿ ಆಚರಣೆ

ಶಹಾಪುರಃ ಬಣ್ಣದಲ್ಲಿ ಮಿಂದ ಮಕ್ಕಳು, ಯುವಕರು

ಯಾದಗಿರಿ, ಶಹಾಪುರ: ಕರೊನಾ ಭೀತಿ ನಡುವೆಯೇ ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಓಕುಳಿ ಆಟದ ಸಂಭ್ರಮ ಕಂಡು ಬಂದಿತು. ಬೇರೆಡೆ ಕಾಮ ದಹನದ ನಂತರ ಬಣ್ಣದಾಟವಾಡಿದರೆ, ಶಹಾಪುರದಲ್ಲಿ ಮಾತ್ರ ಓಕುಳಿ ಆಡಿದ ನಂತರ ಕಾಮ ದಹಿಸುವ ವಾಡಿಕೆ ಪ್ರಾಚೀನ ಕಾಲದಿಂದಲೂ ಬಂದಿದೆ.

ಅಂತೇಯೇ ಮಂಗಳವಾರ ಜೀವೇಶ್ವರ ನಗರದ ಹೋಳಿ ಕಟ್ಟಿ, ಪಟ್ಟಣದ ಗಾಂಧಿ ಚೌಕ್, ಗಣೇಶ ನಗರ, ಬುದ್ಧ, ಲಕ್ಷ್ಮೀ ನಗರ ಸೇರಿದಂತೆ ಇತರಡೆ ಕಾಮದಹನ ಮಾಡಲಾಯಿತು.

ಕಾಮ ದಹಿಸುವ ಮುಂಚೆ ಬಡಾವಣೆಯ ಮಹಿಳೆಯರು ಕಾಮದೇವನಿಗೆ ಹೋಳಿಗೆ, ಕಡಬು ಸೇರಿದಂತೆ ಖಾದ್ಯ ಪದಾರ್ಥಗಳ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.

ಕೊರೊನಾದ ಕರಿ ನೆರಳು ಹೋಳಿ ಹಬ್ಬದ ಮೇಲೆ ಬೀರಿದ್ದು, ಮೊದಲಿನಂತ ಉತ್ಸಾಹ ಕಂಡು ಬರಲಿಲ್ಲ. ಅಲ್ಲಲ್ಲಿ ಮಕ್ಕಳು ಬಣ್ಣದಾಟ ಆಡುತ್ತಿರುವದು ಕಂಡು ಬಂದಿತು. ಬಹುತೇಕ ಯುವ ಸಮೂಹ ನಗರದ ಹೊರ ವಲಯದಲ್ಲಿ ಊಟದ ವ್ಯವಸ್ಥೆ ಮಾಡಿಕೊಂಡು ದಿನಪೂರ್ತಿ ಎಂಜಾಯ್ ಮಾಡುತ್ತಿರುವದು ಕಂಡು ಬಂದಿತು.

ಹಲವಡೆ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಉಳಿದಂತೆ ಯಾವುದೇ ಗಲಾಟೆ ನಡೆಯದೇ ಶಾಂತಿ ಸೌಹಾರ್ಧಯುತವಾಗಿ ಹೋಳಿ ಹಬ್ಬ ಆಚರಣೆ ಮಾಡಲಾಯಿತು. ಹಲವು ಬಡಾವಣೆಯಲ್ಲಿ ಹಿರಿಯರು ಮಕ್ಕಳಿಗೆ ಕೊರೊನಾ ವೈರಸ್ ಕುರಿತು ಬುದ್ಧಿವಾದ ಹೇಳಿ ಬಣ್ಣದಾಟ ಆಡುವದನ್ನು ಬಿಡಿಸಿರುವ ಕುರಿತು ಪೋಷಕರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button