ಬಸ್ ನಿಲ್ದಾಣ ಖಾಲಿ ಖಾಲಿ, ವಿಶ್ರಾಂತಿಗೆ ಜಾರಿದ ರಸ್ತೆಗಳು
ಪ್ರಧಾನಿ ಕರೆಗೆ ಯಾದಗಿರಿ ಜಿಲ್ಲೆ ಸ್ತಬ್ಧ, ರಸ್ತೆಗಿಳಿಯದ ಜನತೆ
ಯಾದಗಿರಿಃ ಕೊರೊನಾ ವೈರಸ್ ಹರಡುವಿಕೆಯಿಂದ ಇಡಿ ಜಗತ್ತು ತಲ್ಲಣಗೊಂಡಿದೆ. ದೇಶದಲ್ಲೂ ತೀವ್ರತೆ ಹೆಚ್ಚಾದ ಹಿನ್ನೆಲೆ ಇಡಿ ದೇಶದಾದ್ಯಂತ ಇಂದು ರವಿವಾರ ಯಾರೊಬ್ಬರು ಮನೆಯಿಂದ ಹೊರಬರದಂತೆ ಎಲ್ಲರೂ ಮನೆಯಲ್ಲಿಯೇ ಉಳಿದು ಸ್ವಯಂ ದಿಗ್ಭಂದನಕ್ಕೆ ಒಳಗಾಗುವ ಮೂಲಕ (ಜನತಾ ಕರ್ಫ್ಯೂ) ಕೊರೊನಾ ವೈರಸ್ ತೀವ್ರತೆಗೆ ಬ್ರೇಕ್ ಹಾಕಬೇಕಿದೆ ಕಾರಣ ಎಲ್ಲರೂ ಸಹಕರಿಸಬೇಕು ಎಂದು ಪ್ರಧಾನಿ ಮೋದಿಯವರು ನೀಡಿದ ಕರೆಗೆ ಇಂದು ದೇಶದೆಲ್ಲಡೆ ಬೆಂಬಲ ವ್ಯಕ್ತವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿಯೂ ಯಾರೊಬ್ಬರು ಹೊರಗಡೆ ಕಾಣದ ಬಣಗುಟ್ಟುತ್ತಿರುವದು ಕಂಡು ಬಂದಿತು.

ಬೆಳಗ್ಗೆ 7 ರಿಂದಲೇ ಇಂದು ಜನತೆ ಯಾದಗಿರಿ, ಶಹಾಪುರ, ಸುರಪುರನಲ್ಲಿ ಯಾರೊಬ್ಬರು ಹೊರಗಡೆ ಬಾರದೆ ಪ್ರಧಾನಿ ಕರೆಗೆ ಬೆಂಬಲಿಸುವ ಮೂಲಕ ಜನತೆ ಕೊರೊನಾ ತಡೆಗೆ ಕೈಗೊಂಡ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಶಹಾಪುರ, ಯಾದಗಿರಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ರಸ್ತೆಗಳು ಇಂದು ಆರಾಮವಾಗಿ ಒತ್ತಡವಿಲ್ಲದೆ ವಿರಮಿಸುತ್ತಿವೆ. ಒಂದು ನರಪಿಳ್ಳೆಯು ಹಾದು ಹೋಗದಂತ ಸ್ಥಿತಿ ಕಾಣಬಹುದಾಗಿದೆ.

ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಕೊರೊನಾ ವೈರಸ್ ಎಲ್ಲಾದರೂ ದೇಶದಲ್ಲಿ ಹೊರಗಡೆ ಉಳಿದುಕೊಂಡಿದ್ದಲ್ಲಿ ಈ14 ತಾಸಿನಲ್ಲಿ ಅದು ಸಾಯುತ್ತದೆ. ಇನ್ನೂ ಮುಂದಿನ ಕ್ರಮಗಳ ಬಗ್ಗೆ ಜನರು ಸರ್ಕಾರ ಸೂಚಿಸುವ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
ಆಗ ನಮ್ಮ ದೇಶ ಕೊರೊನಾದಿಂದ ಮುಕ್ತಿ ಹೊಂದಲು ಸಾಧ್ಯವಿದೆ. ಅಲ್ಲದೆ ಸಂಜೆ 5 ಗಂಟೆಗೆ ತಮ್ಮ ತಮ್ಮ ಮನೆ ಬಾಗಿಲ ಮುಂದೆ ನಿಂತು ಚಪ್ಪಾಳೆ ತಟ್ಟಿ ಕೃತಜ್ಞತೆ ಹೇಳುವದು ಮರೆಯದಿರಿ.
ಈಗಾಗಲೇ ಕೊರೊನಾ ಶಂಕಿತ ಹಾಗೂ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮತ್ತು ಎಲ್ಲಡೆ ಕೊರೊನಾ ತಪಾಸಣೆಯಲ್ಲಿ ಭಾಗಿಯಾದ ಕ್ಷಣ ಕ್ಷಣಕ್ಕೂ ಸುದ್ದಿ ಒದಗಿಸುತ್ತಿರುವ ಪತ್ರಕರ್ತರು ಸೇರಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಚಪ್ಪಾಳೆ ತಟ್ಟುವ ಮೂಲಕ ಮತ್ತು ಗಂಟೆ, ಜಾಗಟೆ ಬಾರಿಸುವ ಮೂಲಕ ಕೃತಜ್ಞತೆಯನ್ನು ಸಲ್ಲಿಸೋಣ ಅಲ್ಲವೇ.?
–ವಿನಯವಾಣಿ