*ಕರುಣೆ ತೋರೋ ಕೊರೋನಾ..!!*
*ಕರುಣೆ ತೋರೋ ಕೊರೋನಾ..!!*
ತುತ್ತಿನ ಚೀಲಕ್ಕಾಗಿ ಹಳ್ಳಿ ತೊರೆದು ಮಹಾನಗರಕ್ಕೆ ಲಗ್ಗೆ ಇಟ್ಟಿತು ಜೀವ..! ಒಕ್ಕಲೆದು ಬಡದಾಡುತ್ತಿವೆ ಇಂದು ಬಡವನ ಜೀವ..! ಅಟ್ಟಹಾಸದಿ ಮೆರೆಯದಿರು ಕೊರೋನಾ.. ಕರುಣೆ ತೋರು ನೀನು..!
ಕೂಲಿ ಕೆಲಸಕ್ಕೆ ಜಡಿದಿದೆ ಕೊರೋನಾದ ಕೀಲಿ..!
ಬಟ್ಟೆ ಗಂಟು ಕಟ್ಟಿ ಬೆತ್ತಲಾಗಿದೆ ಬದುಕು..!
ನಿನ್ನ ಭೀತಿಗೆ ಬೆಂಡಾಗಿವೆ ಸಿಂಬಳು ಸೂಸುವ ಕೂಸುಗಳು ಸಹ..! ಗುಳೆಯ ಬದುಕನ್ನು ಕೊರಗಿಸದಿರು ಕೊರೋನಾ.. ನಿಲ್ಲಿಸು ನಿನ್ನ ರೌದ್ರನರ್ತನ..!
ಏನೂ ಅರಿಯದ ಮಗ್ಧ ಜೀವಗಳು ದಿಕ್ಕಪಾಲಾಗಿ ದಿಗ್ಭ್ರಮೆಗೊಂಡಿವೆ..! ಗುಳೆಯ ಬದುಕು ಹೌಹಾರಿ ಬೆನ್ನೆಲುಬು ಪುಡಿ ಪುಡಿಯಾಗುತ್ತಿವೆ..! ಸೆರಗಿನಲ್ಲಿ ಬೆಂಕಿಯ ಉಂಡಿ ಕಟ್ಟಿಕೊಂಡಂತಾಗಿದೆ ಬಡವನ ಜೀವ..! ಗುಡುಗದೆ ತಣ್ಣಗಾಗೋ ಕೊರೋನಾ..!
ನಿನ್ನ ಆರ್ಭಟಕ್ಕೆ ದೇವಾನು ದೇವತೆಗಳು
ದಿಗ್ಬಂಧನಗೊಂಡಿವೆ…! ಮನುಕುಲವು ತಲ್ಲಣಿಸಿ ಚೆಲ್ಲಾಪಿಲ್ಲಿಯಾಗಿವೆ..! ರಾಶಿ ರಾಶಿ ಜೀವ ನುಂಗಿ, ಮರಣ ಮೃದಂಗಕ್ಕೆ ಮುದ್ರೆ ಜಡಿದಿ..! ಕರುಣೆ ಬಾರದೆ ಕೊರೋನಾ..! ಸಾಕು ನಿಲ್ಲಿಸು ನಿನ್ನ ಸಾವಿನಾಟ..!
*ಚಂದಪ್ಪ ದೋರನಹಳ್ಳಿ*