ಲಾಕ್ ಫ್ರೀ ಬುಕ್ಸ್ ಇನ್ ಲಾಕ್ ಡೌನ್ ಪಿರಡ್ ಗ್ರಂಥಾಲಯದ ಹೊಸ ಆಲೋಚನೆ
ಲಾಕ್ ಫ್ರೀ ಬುಕ್ಸ್ ಇನ್ ಲಾಕ್ ಡೌನ್ ಪಿರಡ್
ಹೊಸ ಆಲೋಚನೆಯೆಡೆಗೆ ಗ್ರಂಥಾಲಯ ಇಲಾಖೆ
ಇಡೀ ಜಗತ್ತೇ ಕೊರೊನಾದಿಂದ ತತ್ತರಿಸಿ ಹೋಗಿರುವ ಟೈಮಲ್ಲಿ ಭಾರತದಾದ್ಯಂತ ಲಾಕ್ ಡೌನ್ ಇದೆ. ಈ ಹೊತ್ತಲ್ಲಾದರೂ ಮನೆಯಲ್ಲಿ ಕುಳಿತು ರೆಸ್ಟ್ ಮಾಡ್ತಿರಬಹುದೆಂದು ಬಹಳ ಸಲ ಅಂದುಕೊಂಡಿದ್ದುಂಟು. ಇಡೀ ರಾಜ್ಯವನ್ನೇ ಸುತ್ತಾಡಿದ್ದಾರೆ.
ದಿನಂಪ್ರತಿ ಕಛೇರಿ ಕೆಲಸ, ಗ್ರಂಥಾಲಯಗಳಿಗೆ ಭೇಟಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದು, ಮೀಟಿಂಗ್ ಗಳಿಗೆ ಹಾಜರಾಗುವದು, ಹೀಗೆ ಊಟಕ್ಕಾದ್ರೂ ಇವರಿಗೆ ಪುರಸೊತ್ತಿದೆಯೋ ಇಲ್ಲವೋ ಎಂಬಂತೆ ಓಡಾಡ್ತಿದ್ದ ವ್ಯಕ್ತಿ ಕೊರೊನಾದಿಂದಾದ ಲಾಕ್ ಡೌನ್ ಟೈಮಲ್ಲಾದರೂ ರೆಸ್ಟ್ ಮಾಡ್ತಿದಾರೆ ಅಂತ ಅಂದುಕೊಂಡಿದ್ದು ನನ್ನ ಮೂರ್ಖತನವೇ ಸರಿ.
ಶಾಲೆ ಕಾಲೇಜುಗಳು ಬಂದ್ ಆದ ಪ್ರಯುಕ್ತ ವಾಟ್ಸಪ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳುವ ಯೋಚನೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಈಗಾಗಲೇ ಸದ್ದಿಲ್ಲದೆ ದೂರದರ್ಶನ, ಆಕಾಶವಾಣಿ, ಅಂತರ್ಜಾಲದ ಮೂಲಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ|| ಸತೀಶ್ ಕುಮಾರ ಹೊಸಮನಿಯವರು ಮನೆಯಲ್ಲೇ ಕುಳಿತು (work from home) ಇಲಾಖೆಯ ಹೆಸರನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಜನರು ಹೊರಗೆ ಹೋಗುವಂತಿಲ್ಲ, ಸಿನಿಮಾ, ಪಾರ್ಕ, ಹೊಟೆಲ್, ಮಾಲ್, ವಾಕಿಂಗ್, ಮಾರ್ಕೆಟ್ ಊಹೂಂ….. ಎಲ್ಲೂ ಹೋಗುವಂತಿಲ್ಲ. ಹೋಗಲಿ ಗ್ರಂಥಾಲಯಕ್ಕಾದರೂ ಹೋಗಬೇಕೆಂದರೆ ಅಲ್ಲೂ ಜನ ಸೇರುತ್ತಾರೆಂದು ಸರಕಾರ ಗ್ರಂಥಾಲಯಗಳನ್ನು ಬಂದ್ ಮಾಡಿಸಿದ್ದಾರೆ.
ಜನ ಮನೆಯಲ್ಲೇ ಕುಳಿತು ಏನು ಮಾಡಬೇಕು? ಓದುವ ಹವ್ಯಾಸವುಳ್ಳವರು ಗ್ರಂಥಾಲಯಕ್ಕೆ ಹೋಗುವಂತಿಲ್ಲ. ಪತ್ರಿಕೆ ಸಿಗುವುದಿಲ್ಲ. ನೆಚ್ಚಿನ ಕೃತಿಗಳು ಸಿಗುವುದಿಲ್ಲ. ಹಿರಿಯರು, ಮಕ್ಕಳು ತಮ್ಮ ಈ ಲಾಕ್ ಡೌನ್ ಪಿರಡ್ ನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕೆಂದು ಯೋಚಿಸುತ್ತಿರುವಾಗಲೇ ಡಾ|| ಸತೀಶ್ ಕುಮಾರ ಹೊಸಮನಿಯವರು ಮನೆಯಲ್ಲೇ ಕುಳಿತು ಇಲಾಖೆಯ ಆಪ್ ನ್ನು ಹೆಚ್ಚು ಪ್ರಚಾರಗೊಳ್ಳುವಂತೆ ಮಾಡುತ್ತಿದ್ದಾರೆ.
ಲಾಕ್ ಡೌನ್ ಪಿರಡ್ ನಲ್ಲಿ ಪ್ರತಿಯೊಬ್ಬರೂ ಇಲಾಖೆಯ ಆಪ್ ನ್ನು ಸದುಪಯೋಗ ಪಡೆಯಬೇಕೆಂಬ ಹಂಬಲದಿಂದ “lock free e-books during covid-19 lock down period” ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿ ಹೆಚ್ಚು ಜನರನ್ನು ತಲುಪುವಂತೆ ಮಾಡುತ್ತಿದ್ದಾರೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಬೆಂಗಳೂರಿನಲ್ಲೇ ಕುಳಿತು ಕಲಬುರ್ಗಿ, ಧಾರವಾಡ, ಮೈಸೂರು ಆಕಾಶವಾಣಿಗಳಲ್ಲಿ ನೇರವಾಗಿ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ನೀಡುವದು, ಬೆಂಗಳೂರು, ಕಲಬುರ್ಗಿ ಖಾಸಗಿ ದೂರದರ್ಶನ ವಾಹಿನಿಗಳಲ್ಲಿ ನೇರ ಪ್ರಸಾರದಲ್ಲಿ ಇಲಾಖೆಯ ಈ ವೆಬ್ ಸೈಟ್ ಮತ್ತು ಆಪ್ ಕುರಿತು ವಿವರಿಸುತ್ತ ಓದುಗರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸುತ್ತಿದ್ದಾರೆ.
ಇದಷ್ಟೇ ಅಲ್ಲದೆ ವಾಟ್ಸಪ್ ಮೂಲಕ ವಿಶೇಷವಾಗಿ ಈ ವೆಬ್ ಸೈಟ್ ಗೆ ಸಂಬಂಧಿಸಿದಂತೆ ಫೇಸ್ ಬುಕ್, ಟ್ವಿಟರ್ ಹಾಗೂ ಯೂಟೂಬ್ ಚಾನಲ್ ನಲ್ಲಿ ಪೇಜ್ ವೊಂದನ್ನು ಸೃಷ್ಟಿಸಿದ್ದಾರೆ.
https://www.facebook.com/KarnatakaDigitalPublicLibrary, https://youtube.com/channel/KarnatakaDigitalPublicLibrary, https://www.twitter.com/karnatakapubliclibrary
ಈ ಲಿಂಕ್ ಉಪಯೋಗಿಸಲು ಇಲಾಖೆಯ ಉಪನಿರ್ದೇಶಕರಿಗೆ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿಗಳಿಗೆ ಹಾಗೂ ಹಲವಾರು ಸಿಬ್ಬಂದಿಗಳಿಗೆ ವಾಟ್ಸಪ್ ಮೂಲಕ ಓದುಗರಿಗೆ ಇದರ ಸದುಪಯೋಗವಾಗುವಂತೆ ಮಾಡಲು ನಿರ್ದೇಶನ ನೀಡುತ್ತಿದ್ದಾರೆ.
“lock free e-books during covid-19 lock down period” ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶಕುಮಾರ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರಕಾರ ಗ್ರಂಥಾಲಯ ಇಲಾಖೆಯಿಂದ ವೆಬ್ ಸೈಟ್ ಮತ್ತು ಆಪ್ ವೊಂದನ್ನು ಬಿಡುಗಡೆಗೊಳಿಸಿದ್ದು, ಲಾಕ್ ಡೌನ್ ಪಿರಡ್ ನಲ್ಲಿ 16500 ಕ್ಕೂ ಹೆಚ್ಚು ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದು, ಕೇವಲ ಕರ್ನಾಟಕದವರಷ್ಟೇ ಅಲ್ಲದೆ ಅಮೇರಿಕಾ, ಸ್ಪೇನ್, ದೆಹಲಿ, ಮುಂಬೈ ಕನ್ನಡಿಗರು ಆಕರ್ಷಿತರಾಗಿ ಇವುಗಳ ಉಪಯೋಗವನ್ನು ಪಡೆಯುತ್ತಿದ್ದಾರೆ.
ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿಯೇ “ಸಾರ್ವಜನಿಕ ಇ-ಗ್ರಂಥಾಲಯ ಆಪ್” ಮೂಲಕವೇ ಓದಬಹುದಾಗಿದೆ. ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಈಗಾಗಲೇ ವೆಬ್ ಸೈಟ್ ನಲ್ಲಿ ಡಿಜಿಟಲೀಕರಣಗೊಳಿಸಿ ಅಳವಡಿಸಲಾಗಿದೆ. ಕಲೆ-4966, ವಾಣಿಜ್ಯ-6443, ಸಾಹಿತ್ಯ-7033, ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ದಿ-2896, ವಿಜ್ಞಾನ ಮತ್ತು ತಂತ್ರಜ್ಞಾನ-8661, ವಿವಿಧ ರೀತಿಯ ಸ್ಪರ್ಧಾತ್ಮಕ ಕೃತಿಗಳು-973, ಪತ್ರಿಕೆಗಳು-445, ರಾಷ್ಟ್ರೀಯ- ಅಂತಾರಾಷ್ಟ್ರೀಯ ನಿಯತಕಾಲಿಕೆಗಳು-59980, ಆಡಿಯೋ-ವಿಡಿಯೋ-4501, ಸಾಹಿತ್ಯೇತರ ಕೃತಿಗಳು-7033, ಲ್ಯಾಬೋರೇಟರಿ-285, ಸೇರಿದಂತೆ ಒಂದನೇ ತರಗತಿಯಿಂದ 12 ನೇ ತರಗತಿವರೆಗಿನ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ., ಹಾಗೂ ರಾಜ್ಯ ಸರಕಾರದ ಪಠ್ಯಕ್ರಮಗಳ ಕೃತಿಗಳೂ ಇದರಲ್ಲಿ ದೊರಕುತ್ತವೆ. ಓದುಗ ತನಗೆ ಬೇಕಾದ ಪುಸ್ತಕದಲ್ಲಿನ ಮುಖ್ಯ ಮಾಹಿತಿಯನ್ನು ಮಾರ್ಕ ಮಾಡಬಹುದು, ಬೋಲ್ಡ್ ಮಾಡಬಹುದು, ಸೇವ್ ಕೂಡ ಮಾಡಬಹುದು.
ಈ ಸೌಲಭ್ಯವನ್ನು ಪಡೆಯಲು ಓದುಗರು ಗೂಗಲ್ ನಲ್ಲಿ www.karnatakadigitalpubliclibrary.org ಹಾಗೂ e – sarvajanikagranthalaya app ನ್ನು ಡೌನ್ ಲೋಡ್ ಮಾಡಿಕೊಂಡು 10 ಹಂತಗಳಲ್ಲಿ ಲಾಗಿನ ಆಗಿ ಮಾಹಿತಿ ಪಡೆಯಬಹುದು. ಹೊಸದಾಗಿ ಲಾಗಿನ ಆಗಿ ತಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸಿದಾಗ ಓದುಗನ ಮೊಬೈಲ್ ಗೆ ಓ.ಟಿ.ಪಿ. ದೊರಕುತ್ತದೆ. ಇದರ ಮೂಲಕ ತಮಗೆ ಇಷ್ಟವಾದ ಪಾಸ್ವರ್ಡ ಇಟ್ಟುಕೊಳ್ಳಬೇಕು. ನಂತರ ಗ್ರಂಥಪಾಲಕರು ಓದುಗನಿಗೆ ಮೊಬೈಲ್ ಮೂಲಕವೇ ಅನುಮೋದಿಸುವರು.
ಇಂತಹ ಅಪೂರ್ವವಾದ ಕಾರ್ಯಕ್ರಮವನ್ನು ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶಕುಮಾರ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ 16500 ಜನರು ಈ ಆಪ್ ನ ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸುತ್ತಿದ್ದಾರೆ.
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದರ ಮೂಲಕ ತಂತ್ರಜ್ಞಾನ ಆಧಾರಿತ ಓದುಗರಿಗೂ ಗ್ರಂಥಾಲಯ ಇಲಾಖೆ ತನ್ನ ಸೇವೆಯನ್ನು ವಿಸ್ತರಿಸಿಕೊಂಡಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ|| ಸತೀಶಕುಮಾರ ಹೊಸಮನಿ ತಿಳಿಸುತ್ತಾರೆ. ಮನೆಯಲ್ಲೇ ಕುಳಿತು ಕಾಲಹರಣ ಮಾಡದೆ ಇಡೀ ಕುಟುಂಬಕ್ಕೆ ಉಪಯುಕ್ತವಾದ ಮತ್ತು ಅತಿ ಸುಲಭ, ಉಚಿತ ಪುಸ್ತಕಗಳು ತಮ್ಮ ಕೈಯಲ್ಲೇ ಸಿಗುವಂತೆ ಮಾಡುವ ಈ ಕಾರ್ಯ ಜನಮೆಚ್ಚುಗೆಯಾಗಿದೆ.
ಪಾಟೀಲ ಬಸನಗೌಡ.ಹುಣಸಗಿ
ಗ್ರಂಥಾಲಯ ಸಹಾಯಕರು
9900771427