ಆನ್‍ಲೈನ್ ಕ್ಲಾಸ್ ವರ್ಕೌಟ್ ಆಗಲ್ಲ..! ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೇಕೆ ಹೂ.?
ಕೊರೊನಾ ಮಹಾಮಾರಿ ಬದುಕನ್ನೆ ಕಂಗೆಡಿಸಿರುವಾಗ ಆನ್ ಲೈನ್ ಪಾಠ ಕೆಳೋರಾರು.?
–ರಾಘವೇಂದ್ರ ಹಾರಣಗೇರಾ
ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಎಲ್ಲಾ ಸ್ನಾತಕ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನೀಡಬೇಕೆಂದು ತಿರ್ಮಾನಿಸಿದೆ ಮತ್ತು ಶಿಕ್ಷಣ ಇಲಾಖೆ ಆದೇಶಿಸಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿರುವ ವಿವಿಧ ಪದವಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಬಹುತೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ಮಾರ್ಟ್ ಫೊನ್ ಉಪಯೋಗಿಸುವುದಿಲ್ಲ. ಹಲವು ವಿದ್ಯಾರ್ಥಿನಿಯರು ಮಾಹಿತಿಗಾಗಿ ಕಾಲೇಜಿನ ಕಛೇರಿಗೆ ತಮ್ಮ ಪಾಲಕ, ಪೋಷಕರ ಮೊಬೈಲ್ ನಂಬರ ನೀಡಿರುತ್ತಾರೆ. ಈ ಪಾಲಕರಿಗೆ ಆನ್‍ಲೈನ್ ಕ್ಲಾಸ್, ವಾಟ್ಸಪ್ ವಿಡಿಯೊ, ಮುಂತಾದವುಗಳ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಆನ್‍ಲೈನ್ ತರಗತಿಯಿಂದ ಸಹಸ್ರಾರು ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ.
ಸ್ನಾತಕೋತ್ತರ ಪದವಿಯ ಪ್ರತಿ ವಿಭಾಗಕ್ಕೆ 50 ವಿದ್ಯಾರ್ಥಿಗಳ ಸಂಖ್ಯೆ ಮಿತಿಯಿರುವುದರಿಂದ ಈ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ಸ್ವಲ್ಪಮಟ್ಟಿಗೆ ಉಪಯೋಗವಾಗಬಹುದು. ಆದರೆ ಪದವಿ ಕಾಲೇಜುಗಳಲ್ಲಿ ಒದೊಂದು ವಿಭಾಗಕ್ಕೆ 300 ರಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವುದರಿಂದ ಆನ್‍ಲೈನ್ ತರಗತಿ ಸಮಂಜಸವಾಗುವುದಿಲ್ಲ. ಕೆಲವು ಅಧ್ಯಾಪಕರು ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ಗ್ರೂಪ್ ಮಾಡಿ ಸರ್ಕಾರದ ದಾಖಲೆಗಾಗಿ ಆನ್‍ಲೈನ್ ತರಗತಿಗಳು ನಡೆಸುವ ಸಾಧ್ಯತೆಗಳಿವೆ.
ಮಹಾಮಾರಿ ಕರೋನಾ ಪರಿಣಾಮದಿಂದ ಕರ್ನಾಟಕದ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳ ಕುಟುಂಬಗಳು ಕುಡಿಯುವ ನೀರು, ಆಹಾರ, ಬೆಳೆದ ಕೃಷಿ ಬೆಳೆಗಳು ಮಾರಾಟವಾಗದೆ ಇರುವುದು ಮುಂತಾದ ಅನೇಕ ಸಮಸ್ಯೆಗಳಿಂದ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಮತ್ತು ಲಾಕ್‍ಡೌನದಿಂದ ಬೇರೆ ಬೇರೆ ಪ್ರದೇಶಗಳಿಗೆ ದುಡಿಯಲು ಹೋಗಿದ್ದ ವಿದ್ಯಾರ್ಥಿಗಳ ಕೃಷಿಕ ಕುಟುಂಬಗಳು ನಿರಾಶ್ರಿತ ತಾಣಗಳಲ್ಲಿ ಅತಂತ್ರದ ಜೀವನ ನಡೆಸುತ್ತಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಫೋನ್ ಇರುವದು ವಿರಳ. ಅಲ್ಲದೆ ಕೊರೊನಾದಂತ ಮಹಾಮಾರಿ ಮೈಮೇಲೆರಗಿದ್ದು, ಲಾಕ್ ಡೌನ್ ನಿಂದಾಗಿ ನಿತ್ಯ ತಿನ್ನುವ ತುತ್ತು ಅನ್ನವು ಕಸಿದುಕೊಂಡತಂತಾಗಿದೆ. ದುಡಿಯಲು ಕೆಲಸವಿಲ್ಲ. ಹೊರಗಡೆ ಬರಲು ಅಸಾಧ್ಯ, ನಿಯಮ ಉಲ್ಲಂಘನೆ. ಇಂತಹ ವಿಷಯ ಸ್ಥಿತಿಯಲ್ಲಿ ಪಾಲಕರ ನೆರವಿಗೆ ವಿದ್ಯಾರ್ಥಿಗಳು ನಿಂತಿದ್ದಾರೆ. ಇಂತಹ ಸ್ಥಿತಿ ಇರುವಾಗ ಆನ್ ಲೈನ್ ನಲ್ಲಿ ಪಾಠ ಎಲ್ಲಿಂದ ಕೇಳಬೇಕು ವಿದ್ಯಾರ್ಥಿಗಳು ಎಂಬ ಕೂಗು ಹಲವಡೆ ಕೇಳಿ ಬರುತ್ತಿದೆ.
ತುತ್ತು ಅನ್ನಕ್ಕೆ ಪರಿತಪಿಸುತ್ತಿರುವ ಕೊರೊನಾ ಕಾಲದಲ್ಲಿ ಈ ಆಧುನಿಕ ಪಾಠದ ವ್ಯವಸ್ಥೆ ಸರಿದೂಗಲ್ಲ. ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೇಕೆ ಹೂ ಎಂಬಂತ ನಿರ್ಧಾರ ಸರ್ಕಾರದ್ದಾಗಿದೆ. ಗ್ರಾಮೀಣ ಭಾಗದ ರೈತಾಪಿ ಜನರು ತಾವೂ ಬೆಳೆದ ತರಕಾರಿ, ಹಣ್ಣು ಇತರೆ ದವಸ ಧಾನ್ಯಗಳನ್ನು ತಾವೇ ಸ್ವತಃ ತಲೆ ಮೇಲೆ ಹೊತ್ತು ಮನೆ ಮನೆ ಸಂಚರಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಕೊರೊನಾ ಹಾವಳಿಯಿಂದ ದಲ್ಲಾಳಿಗಳು ಕಡಿಮೆಯಾಗಿದ್ದಾರೆ. ಎಲ್ಲರೂ ತಮ್ಮ ಕೆಲಸವನ್ನು ಸ್ವಂತವಾಗಿ ಮಾಡಿಕೊಳ್ಳುತ್ತಿರುವಾಗ, ಆನ್ ಲೈನ್ ಪಾಠದ ವ್ಯವಸ್ಥೆ ಅಸಾಧ್ಯವಾದದು.
ಇಂತಹ ಸಂದರ್ಭಗಳಲ್ಲಿ ಆನ್‍ಲೈನ್ ತರಗತಿಗಳು ನಡೆಸುವುದು, ಕೆಲವು ವಿದ್ಯಾರ್ಥಿಗಳ ಮೊಬೈಲ್‍ಗಳಿಗೆ ವಿಡಿಯೊ ಕಳುಹಿಸುವುದು ಸರಿಯಾದ ಕ್ರಮವಲ್ಲ. ಎಲ್ಲಾ ವಿದ್ಯಾರ್ಥಿಗಳು ಪ್ರಾಚಾರ್ಯರೊಂದಿಗೆ, ಅಧ್ಯಾಪಕರೊಂದಿಗೆ ಹಾಗೂ ಸಿಬ್ಬಂಧಿಗಳೊಂದಿಗೆ ಮೊಬೈಲ್ ಸಂವಹನ ಸಂಪರ್ಕಗಳು ಇರುವುದು ಕಡಿಮೆ. ಅನೇಕ ಕಾಲೇಜುಗಳಲ್ಲಿ ತರಗತಿಯ ಬೋಧನೆಗಳಿಗೆ ಕುಳಿತುಕೊಳ್ಳದೆ ಸರಿಯಾಗಿ ಸ್ಪಂಧಿಸದ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗೆ ಸ್ಪಂಧಿಸುವುದಾದರೂ ಹೇಗೆ? ಇದೊಂದು ವ್ಯರ್ಥ ಕಾರ್ಯವೆಂದು ಹೇಳಿದರೆ ತಪ್ಪಾಗಲಾರದು.
ಸಾವಿರಾರು ಬಡ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಕುಟುಂಬಗಳು ಕರೋನಾ ಪರಿಣಾಮದಿಂದ ಬದುಕು ಸಾಗಿಸುವುದು ದುಸ್ತರವಾಗಿದೆ. ಅನೇಕ ಅಧ್ಯಾಪಕರು ಬೇರೆ ಬೇರೆ ಊರುಗಳಲ್ಲಿ ಲಾಕ್‍ಡೌನ ಆಗಿದ್ದಾರೆ. ಅತಿಥಿ ಉಪನ್ಯಾಸಕರ ಕುಟುಂಬ, ಬದುಕು ಬವಣೆ ಹೇಳತಿರದು. ಬಹುತೇಕ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳ ವಿವಿಧ ಪದವಿಯ ವಿಷಯಗಳು ಪಾಠ ಬೋಧನೆಯ ಯೂನಿಟ್‍ಗಳು ಮುಗಿಯುವ ಹಂತದಲ್ಲಿವೆ. ಇನ್ನೂ ಎರಡು ಮೂರು ಯೂನಿಟ್‍ಗಳಿರಬಹುದು. ಲಾಕ್‍ಡೌನ ಮುಗಿದ ನಂತರ ಕರೋನಾ ಪರಿಣಾಮದ ಪರಿಸ್ಥಿತಿಯನ್ನು ಅವಲೋಕಿಸಿ 15 ರಿಂದ 20 ದಿನ ತರಗತಿಗಳನ್ನು ನಡೆಸಿ ಒಂದು ವಾರ ವಿರಾಮ ನೀಡಿ ನಂತರ ಪರೀಕ್ಷೆಗಳನ್ನು ನಡೆಸಿದರೆ ಯಾವುದೇ ತೊಂದರೆಯಾಗುವುದಿಲ್ಲ.
ಮನುಕುಲಕ್ಕೆ ಮಾರಕವಾಗಿರುವ, ಸಾವಿರಾರು ಸಾವು ನೋವುಗಳಿಗೆ ಕಾರಣವಾಗುತ್ತಿರುವ ಸಂಕಷ್ಟದ ಸಂಧಿಗ್ದದ ಸಂದರ್ಭದಲ್ಲಿ ಕರೋನಾದ ಪರಿಣಾಮದ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡುವ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕ ಸೇನಾನಿಯಾಗಿ ಕಾರ್ಯ ನಿರ್ವಹಿಸುವ ಅಗತ್ಯತೆಯಿರುವ ಈ ಪರಿಸ್ಥಿತಿಯಲ್ಲಿ ಆನ್‍ಲೈನ್ ತರಗತಿಗಳು ನಡೆಸುವುದು ಸರಿಯಾದ ಕ್ರಮವಲ್ಲ. ಇತ್ತಿಚೀಗೆ ಉನ್ನತ ಶಿಕ್ಷಣ ಸಚಿವರ ಜೊತೆ ಟಿವಿ ಮಾಧ್ಯಮಗಳಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅನೇಕರು ಆನ್‍ಲೈನ್ ತರಗತಿಯನ್ನು ವಿರೋಧಿಸಿದ್ದಾರೆ. ಆದರೂ ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಆನ್‍ಲೈನ್ ತರಗತಿಗೆ ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳು ಮುಂದಾಗಿರುವುದು ವಿಷಾದನೀಯ ಸಂಗತಿ.
ಗ್ರಾಮೀಣ ಭಾಗದ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಲಾಕ್‍ಡೌನದಿಂದ ಬೇರೆ ಬೇರೆ ಊರುಗಳಲ್ಲಿ ತಮ್ಮ ಬಂಧುಗಳ ಕುಟುಂಬಗಳಲ್ಲಿರುವ ಸಾವಿರಾರು ವಿದ್ಯಾರ್ಥಿಗಳು, ವಿವಿಧ ಕಾರ್ಮಿಕರ ಕುಟುಂಬಗಳಲ್ಲಿರುವ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಯಿಂದ ವಂಚಿತರಾಗುವುದರಿಂದ ಆನ್‍ಲೈನ್ ತರಗತಿಯನ್ನು ನಡೆಸಬಾರದು. ಇದರ ಸಾಧಕ-ಬಾಧಕಗಳನ್ನು ಶಿಕ್ಷಣತಜ್ಞರೊಂದಿಗೆ, ವಿದ್ವಾಂಸರೊಂದಿಗೆ ಚರ್ಚಿಸಿ ಲಾಕ್‍ಡೌನ ಮುಗಿದ ನಂತರ ತರಗತಿಗಳನ್ನು ನಡೆಸಿ ಪರೀಕ್ಷೆಗಳು ನಡೆಸಿದರೆ ಸರ್ವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ.
-ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು.
ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ
ಪದವಿ ಕಾಲೇಜು ಶಹಾಪುರ ಜಿಲ್ಲೆ: ಯಾದಗಿರಿ.
ಮೊ. 9901559873.