ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು, ಟ್ರ್ಯಾಲಿ ಬೆಂಕಿಗಾಹುತಿ
ಶಹಾಪುರ: ಟ್ರ್ಯಾಕ್ಟರ್ವೊಂದರಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದಾಗ ಭಾನುವಾರ ಆಕಸ್ಮಿಕವಾಗಿ ವಿದ್ಯತ್ ತಂತಿ ತಗುಲಿ ಹುಲ್ಲು ಮತ್ತು ಟ್ರ್ಯಾಲಿ ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಕೊಳ್ಳೂರ(ಎಂ) ಗ್ರಾಮದಲ್ಲಿ ನಡೆದಿದೆ. ಟ್ರ್ಯಾಲಿ ಮತ್ತು ಭತ್ತದ ಹುಲ್ಲಿನ ಮೌಲ್ಯ 1.50 ಲಕ್ಷ ದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗದ ರೈತ ಚೆನ್ನಪ್ಪ ಎನ್ನುವರು ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ರೈತ ನಾಗಪ್ಪ ನರಬೋಳ ಎನ್ನುವರ ಜಮೀನಿನಲ್ಲಿನ ಭತ್ತದ ಹುಲ್ಲು ಸಾಗಿಸುತ್ತಿದ್ದಾಗ ಜೋತು ಬಿದ್ದ ವಿದ್ಯುತ್ ವೈರ್ ಆಕಸ್ಮಿಕವಾಗಿ ಹುಲ್ಲಿಗೆ ತಾಗಿ ಬೆಂಕಿ ಹತ್ತಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಟ್ರ್ಯಾಕ್ಟರ್ ಎಂಜಿನ ಹೊರ ತೆಗೆದುಕೊಂಡಿದ್ದಾರೆ ಎಂದು ಗ್ರಾಮದ ನಾಗಪ್ಪ ತಿಳಿಸಿದರು. ಸುದ್ದಿ ತಿಳಿದು ಅಗ್ನಿಶಾಮಕದಳ ಸ್ಥಳಕ್ಕೆ ಬರುವಷ್ಟರಲ್ಲಿ ಹುಲ್ಲು ಸುಟ್ಟು ಹೋಗಿತ್ತು.
ಜೋತು ಬಿದ್ದ ವೈರ್: ಶಹಾಪುರ – ದೇವದುರ್ಗ ಹೆದ್ದಾರಿಯಾಗಿದ್ದು, ಸಾಕಷ್ಟು ವಾಹನಗಳು ಓಡಾಡುತ್ತವೆ. ಅದರಲ್ಲಿ ಲಾರಿಯಲ್ಲಿ ಹತ್ತಿ ತುಂಬಿಕೊಂಡು ರಾಯಚೂರಿಗೆ ಮಾರಾಟ ಮಾಡಲು ರೈತರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆಗೆ ಹೊಂದಿಕೊಂಡಂತೆ ವಿದ್ಯುತ್ ವೈರ್ ಜೋತು ಬಿದ್ದಿವೆ. ಯಾವ ಸಮಯದಲ್ಲಿ ಜೀವ ಹಾಗೂ ವಸ್ತುವನ್ನು ಬಲಿ ತೆಗೆದುಕೊಳ್ಳುತ್ತವೆ ತಿಳಿಯದಾಗಿದೆ. ಜೆಸ್ಕಾಂ ಇಲಾಖೆಯ ತಕ್ಷಣ ಸ್ಪಂದಿಸಿ, ಜೋತು ಬಿದ್ದ ವಿದ್ಯುತ್ ವೈರ್ ಎತ್ತರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.