ಹಾಸ್ಟೇಲ್ನಿಂದ ಓಡಿ ಹೋದ ಪ್ರಹಸನ – ನೈಜ ಕಥನ ಸಾಸನೂರ ಬರಹ
ಅನ್ನದ ಖಿಮ್ಮತ್ತು – ಸಾಸನೂರ ಬರಹ
ಬಾಲ್ಯದಲ್ಲಿ ಹಸಿವಾದಾಗ ಊಟ ಮಾಡಿಸಿದಾತ ಮಾಳಿಂಗರಾಯ ತಾತಾನಾ..!
ಸುಮಾರು 31 ವರ್ಷಗಳ ಹಿಂದಿನ ಮಾತು. ಆವಾಗ ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿ ತಾಳಿಕೋಟೆಯ ಸೈನಿಕ ತರಬೇತಿ ಕೇಂದ್ರದಲ್ಲಿ ಓದುತ್ತಿದ್ದೆ. ಅಲ್ಲಿಯ ಶಿಕ್ಷಕರ ಅತೀಯಾದ ಶಿಸ್ತಿಗೆ ಅಂಜಿ ಅಲ್ಲಿಂದ ಓಡಿ ಹೋದೆ.
ಓಡಿ ಹೋಗಿದ್ದೆ ಅಂದರೆ ಅವಗೇನು ಈಗಿನಂಗ ಬಸ್ಸುಗಳ ನಿರಂತರ ಓಡಾಟವಿರಲಿಲ್ಲ. ವಸ್ತಿ ಬಸ್ಸೆ ಗತಿ. ಬಸ್ನ್ಯಾಗ ಹೋಗ್ಬೇಕು ಅಂದರೆ ರೊಕ್ಕ ಇರಲಿಲ್ಲ. ಅದಕ್ಕ ಓಡ್ಕೊಂತೆ ಹದಿನೈದು ಕಿಲೋಮೀಟರ್ ಹೋದೆ. ನಿತ್ರಾಣಾಗಿ ಸುಸ್ತಾಗಿ ಕೆನಾಲ್ ದಂಡಿಬಲ್ಲಿ ನಿಂತಿದ್ದೆ.
ಅದೆಲ್ಲಿಂದ ಬಂದ್ನೋ ಒಬ್ಬ ಕುರಿಕಾಯವ ತಲಿಮ್ಯಾಗ ಹಳದಿ ಪಟಗಾ, ಹಣೀ ತುಂಬಾ ಭಂಡಾರ, ಹೆಗಲಮ್ಯಾಲ ಕಂಬಳಿ, ಕೈಯಾಗ ಕುರಿನೂಲು ಸುತ್ತುತ್ತ , ಬಾಯ್ತುಂಬ ಎಲಿ ಅಡಿಕಿ ಹಾಕ್ಕೊಂಡು ಅಗದಿ ಗಭರು ಪೈಲ್ವಾನನಂಗ ಎತ್ತರದ ಆಳು ನೋಡಿದರೆ ಹಂಗೆ ತಲಿ ಬಾಗಿ ಗೌರವಕೊಡುವಂತ ಭಾವ.
ನನ್ ನೋಡಿ ಏ ಮುದುಕಾ ಎಲ್ಲಿ ಹೊಂಟಿದೋ ಅಂದ. ಹಾಫ್ ಅಂಗಿ, ಹಾಫ್ ಚಡ್ಡಿ, ಹೆಗಲಮ್ಯಾಲ ಒಂದು ಸಣ್ಣ ಟಾವೆಲ್, ಕಾಲಾಗ ದಪ್ಪನ ಹವಾಯ್ ಚಪ್ಪಲ ಹಾಕ್ಕೊಂಡಿದ್ದ ನಾನು ಹಾಸ್ಟೆಲ್ನಿಂದ ಓಡಿ ಹೊಂಟಿದ್ದೆ ಎಲ್ಲಿಗಿ ಹೋಗ್ಬೇಕು ಅನ್ನುವ ಗೊತ್ತಿಲ್ಲ ಗುರಿಯಿಲ್ಲ ಯಾವ್ದಾನ ಲಾರಿಯಂವ ಡ್ರೈವರ್ ಕರದ್ರ ಕ್ಲೀನರ ಆಗಿ ಹೋಗ್ಬೇಕು ಅನ್ಕೊಂಡಿದ್ದೆ.
ಅವ ಹಂಗ ಕೇಳಿದ ಕೂಡಲೇ ಏನೇನೂ ಹೊಳಿಲಿಲ್ಲ ತಲಿಗಿ ತಡಮಾಡದೆ ” ಮುತ್ಯಾ ಅಪ್ಪ ಅವ್ವಗ ಆರಾಮಿಲ್ಲ ಹುಣ್ಸಿಗ್ಗಿ ಹೊಂಟಿನಿ ” ಅಂದೆ. ” ನೋಡಾಕೆನೋ ತಟಗ್ ಕಾಣ್ತಿದಿ ಮೊಮ್ಮಟ್ಯಾ ಸುಳ್ಳ್ ಹೇಳ್ತ್ಯಾ” ಅಂದ. ಹೊತ್ತೇರ್ಯ್ಯಾದ ಉಂಡಿದ್ಯಾ ಇಲ್ಲ ಅಂದ ನನ್ ಬಾಯಾಗ ಮಾತು ಬರಕಿನ ಮೊದಲ ತೊಗೋ ಬುತ್ತಿ ಮೊದಲ ಊಣು ” ಅಂದ ಹಸ್ತಿದ್ದ ಭೂರೀಭೋಜನ ಸಿಕ್ಕಂತಾಯ್ತು.
ಬುತ್ತಿ ಬಿಚ್ಚಿ ನೋಡ್ತಿನಿ ಮಾರ್ ಮಾರ್ಯನ ಮುಂಗಾರಿ ಜ್ವಾಳದ ರೊಟ್ಟಿ, ಹಸೀ ಖರ್ಚಿಕಾಯಿ, ಹಸೀ ಮೆಣಸಿನಕಾಯಿ ಇತ್ತು. ಬಾಜು ಹೊಲ್ದಾಗ ಉಳ್ಳಾಗಡ್ಡಿ ಇತ್ತು ಉಳ್ಳಾಗಡ್ಡಿ, ಹಸೀ ತಪ್ಪಲ ತಿಂದು ಕ್ಯಾನಲ್ ನೀರು ಕುಡಿದು ನೋಡಿದರೆ ಬುತ್ತಿ ಕೊಟ್ಟ ವ್ಯಕ್ತಿ ಮಟಮಾಯ. ಹೊಟ್ಟಿ ತುಂಬಾ ಉಂಡ ಮ್ಯಾಲೆ ಸಣ್ಣ ಜೊಂಪು ತೊಗೊಂತು ಹಂಗೆ ಮೈ ಚಾಚಿದೆ. ಮುಂದಿದ್ದು ಬ್ಯಾರೆನೆ ಕತಿ ಆದ.
ಭಾಳ ವರ್ಷಗಳ ನಂತರ ಮಾಳಿಂಗರಾಯನ ಬಗ್ಗೆ ತಿಳ್ಕೊಂಡು ಮ್ಯಾಲೆ ಅವತ್ತು ಬುತ್ತಿ ಕೊಟ್ಟು ಮಟಮಾಯ ಆದಂವ ಮಾಳಿಂಗರಾಯನೇ ಅನ್ನೋದು ತಿಳಿಯಿತು.
ಇಷ್ಟು ವರ್ಷ ಆದ ಮೇಲೂ ಇನ್ನೂ ಊಟಕ್ಕೆ ಕುಂತಾಗ ಗಂಗಾಳ್ದಾಗ ಏನ್ಯಾಕ ಇರಲಿ ನನಗ ಅದು ಮುಂಗಾರಿ ಜ್ವಾಳದ ರೊಟ್ಟಿ, ಹಸೀ ಖರ್ಚಿಕಾಯಿ ಮತ್ತು ಹಸೀ ಮೆಣಸಿನಕಾಯಿ ಕಂಡ್ಹಂಗ ಆಗಿ ಗಂಗಾಳ್ದಾಗ ಏನೂ ಉಳ್ಸಲಾರದೆ ಎಲ್ಲ ಖಾಲಿ ಮಾಡ್ತಿನಿ.(ಮುಂದುವರೆಯುವದು..)
– ಆನಂದಕುಮಾರ ಸಾಸನೂರ. ಲೇಖಕರು.
ಸಹಾಯಕ ಆಂಗ್ಲಭಾಷೆ ಪ್ರಾಧ್ಯಾಪಕರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ. m-7019190473.
ಒಳ್ಳೆಯ ಬರಹ ಸರ್