ಹಾಸ್ಟೇಲ್ನಿಂದ ಓಡಿ ಹೋದ ಪ್ರಹಸನ ಭಾಗ-3 ಸಾಸನೂರ ಬರಹ
ನಮ್ಮಪ್ಪ ಆಗ ಜ್ಯೂನಿಯರ್ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದರು. ಆ ಕಾಲೇಜು ಹೈಸ್ಕೂಲ್ ನ ಆವರಣದಲ್ಲಿ ಇದ್ದುದರಿಂದ ಬೆಳಿಗ್ಗೆ ಎಲ್ಲ ತರಗತಿಗಳೂ ಮುಗಿಸಿ ಹೈಸ್ಕೂಲ್ ಆರಂಭಿಸಬೇಕು.
ಇನ್ನುಳಿದ ಹೊತ್ತನ್ನು ಕಳೆಯುವದಕ್ಕೋಸ್ಕರ ನಾಲ್ಕು ಸಮಾನಮನಸ್ಕರೊಂದಿಗೆ ಮಕ್ತಪ್ಪ ದೇಗಲಮಡಿ ಮಾಸ್ಟರ್ ಅವರ ಮಳಿಗೆಯಲ್ಲಿ ಬಟ್ಟೆ ಅಂಗಡಿ ಪ್ರಾರಂಭಿಸಿದರು. ಮಕ್ತಪ್ಪ ದೇಗಲಮಡಿ ಅವರು ಶಹಾಪುರದ ಹೈಸ್ಕೂಲ್ನಲ್ಲಿ ದೈಹಿಕ ಶಿಕ್ಷಕರಾಗಿದ್ದರು. ಹೈರಾಣಾಗಿದ್ದ ನನಗೆ ರಾತ್ರಿ ನೆಮ್ಮದಿ ನಿದ್ದೆ ಆಯಿತು. ನಸುಕಿನ ಮಬ್ಬುಗತ್ತಲಿನಲ್ಲಿ ನಮ್ಮ ಸ್ವಂತ ಊರು ಅರಿಕೇರಿಯ ಕಡೆ ಹೋಗತ್ತಿದ್ದಾಗ ಮಕ್ತಪ್ಪ ಮಾಸ್ಟರ ನೆನಪಾಯಿತು.
ಆವಾಗೇನು ಅಷ್ಟೊಂದು ಲ್ಯಾಂಡ್ ಫೋನುಗಳು ಇರಲಿಲ್ಲ. ಇದ್ದರೂ ಅದಕ್ಕೆ ಚಾರ್ಜು ಜಾಸ್ತಿ. ಅವರು ನನ್ನ ನೋಡಲೇ ಇಲ್ಲ ಅದು ಬೇರೆ ಮಾತು. ಅರಿಕೇರಿಯ ಕಡೆಗೆ ಏಳೆಂಟು ಕಿಮೀ ಆದ ಮೇಲೆ ದೊಡ್ಡ ಕೆನಾಲ್ ಇತ್ತು ನಸುಕಿನ ಮಬ್ಬುಗತ್ತಲು ಇನ್ನೂ ಇತ್ತು . ಆಕಡಿ ಈಕಡಿ ನೋಡಿದೆ ಅಂಬ್ರಿಗಿಡ ಕಾಣ್ಸಿತು ಅದರ ಕಡ್ಡಿ ಮುರಿದು ಹಲ್ಲು ತಿಳ್ಕೊಂಡು ಮುಖ ತೊಳೆದು ಫ್ರೆಶ್ ಆಗಿ ಮೇಲೆ ಬಂದೆ.
ಸ್ವಲ್ಪ ದೂರದಲ್ಲಿ ಅಸಂತಾಪುರದ ಕ್ರಾಸ್ ನಲ್ಲಿ ಜೋರಾಗಿ ಚಿಟ್ಟನೆ ಚೀರಿದಂಗಾಯ್ತು ದೆವ್ವ ನೋಡಿದವರ ತರ. ನಾನೂ ಅಷ್ಟೇ ವಿಚಿತ್ರ ರೀತಿಯಲ್ಲಿ ಚೀರಿದೆ . ಧೈರ್ಯ ಮಾಡಿ ಸಮೀಪ ಹೋದೆ. ಇಲ್ಕಲ್ ಸೀರೆ ಉಟ್ಟ ಒಬ್ಬ ಮುದುಕಿ ಚೀಲ ಹಿಡ್ಕೊಂಡು ಕುಂತಿದ್ಲು. ಕೊನೆಗೆ ಅಕೀನೆ ” ಏ ತಮ್ಮ ಇಟ್ಹೋತ್ತಿನ್ಯಾಗ ಕ್ಯಾನಲ್ ದಾಗ ಯಾಕ್ ಇಳ್ದೋ ತ್ವಾಳ, ನರಿ ಇರ್ತಾವ ಸ್ವಲ್ಪನ ಖಬರ್ ಆದೆನೂ ” ಅಂದಳು.
ನನಗ ಮಾತು ಬೇಕಿರ್ಲಿಲ್ಲ ನನ್ನ ಪಾಡಿಗೆ ನಾನು ಮತ್ತೆ ಪ್ರಯಾಣ ಮುಂದುವರೆಸಿದೆ. ಆಗ ಅಕೀನೆ ಕೇಳಿದಳು ” ಯಾವೂರಿಗಿ ಹೊಂಟಿದ್ದಿ, ಇಟ್ ನಸಿನ್ಯಾಗ?” . ” ಏ ಆಯಿ ಅರಿಕೇರಿಗೆ ಹೊಂಟಿನಿ” ಅಂದೆ. ದಿಟ್ಟಿಸಿ ನೋಡಿದರ ಆಕಿ ಗುಂಡಲಗೇರಿಯ ನಮ್ಮ ನೀಲವ್ವತ್ತಿ ಮನಿಯ ನೆರೆಮನೆಯ ಚಾಂದ್ ಬೀ ಆಗಿದ್ದಳು. ನಿಟ್ಟುಸಿರು ಬಿಡೋಕು ಮುಂಚೆನೆ ” ಯಾರ ಮನೀಗಿ ಹೋಗಾಂವ ನೀನು ಅರಿಕೇರ್ಯಾಗ?” ಅಂತ ಕೇಳಿದಳು. ” ಸಾಸನೂರ ತಿಪ್ಪಣ್ಣ ಸಾವ್ಕಾರನ ಮನಿಗಿ ” ಅಂದೆ.
ಅದಕ್ಕೆ ಅವಳು ತಮ್ಮಾ ಗುಂಡಲಗೇರಿಗಿ ಹೋಗಮು ಬಾ ಅಲ್ಲಿ ನೀಲಮ್ಮ ಸಾವ್ಕಾರ್ತಿಗಿ ಭೆಟ್ಟಿ ಆಗಿ ಅರಿಕೇರಿ ಹೋಗು” ಅಂದಳು. ” ಅಕೀ ಯಾರೋ ಗೊತ್ತಿಲ್ಲ ” ಅಂದೆ ” ನೀನು ತಿಪ್ಪಣ್ಣ ಸಾವ್ಕಾರನ ತಮ್ಮ ಮಲ್ಲೇಶಪ್ಪ ಮಾಸ್ತರನ ಮಗ ಅಲ್ಲೇನು? ಟೆಂಪೋ ಬರ್ತಾದ ಅಲ್ಲಿ ಮಟ ಅದರಾಗ ಹೋಗು ” ಅಂದಳು ಕಾಳಜಿಯಿಂದ.
ಅಸಂತಾಪುರದ ಕ್ರಾಸ್ನಿಂದ ಮುಂದ ಒಂದು ಗುಡ್ಡ ಇಳ್ದು ಹೋದರೆ ಮೊದಲಿಗೆ ಗುಂಡಲಗೇರಿ ಆಮೇಲೆ ಅರಿಕೇರಿ ಬರೋದು. ಹುಂಬತನ ಆ ಮುದುಕಿಯ ಕಾಳಜಿ ಮಾತು ಕೇಳ್ಲಿಲ್ಲ. ನನ್ನ ದಾರಿ ನಾ ಹಿಡಿದು ಹೊಂಟೆ. ಮೂರು ತಾಸಿನ ನಡೆದ ಮೇಲೆ ಅರಿಕೇರಿಯ ಕೆನಾಲ್ ಬಂತು ಅಲ್ಲಿ ನೀರು ಕುಡಿದು ದೊಡ್ಡಪ್ಪನ ಮನೆಗೆ ಹೋದೆ.