ಅನ್ನದ ಕಿಮ್ಮತ್ತು ಭಾಗ-8 ಸಾಸನೂರ ಬರಹ
–ಆನಂದಕುಮಾರ ಸಾಸನೂರ
ನಮ್ಮಪ್ಪ ಮೊದಲಿಗೆ ಗುಂಡಲಗೇರಿ ಶಾಲೆಗೆ ನನ್ನನ್ನು ಕರೆದುಕೊಂಡು ಹೋಗಿ ಅಲ್ಲಿಯ ಶಿಕ್ಷಕರೊಂದಿಗೆ ನನ್ನ ಕುರಿತು ವಿಚಾರಿಸಿದಾಗ ನಿಮ್ಮ ಮಗ ಹುಶಾರ ಅದಾನ್ರಿ ಸರ್ ಅಂದರು.
ನಮ್ಮಪ್ಪನಿಗೆ ಶಿಕ್ಷಕರು ನನ್ನ ಬಗ್ಗೆ ಕೊಟ್ಟ ತೀರ್ಮಾನ ಮನಸ್ಸಿಗೆ ಹಿಡಿಸಲಿಲ್ಲ ಅಂತ ಕಾಣಿಸಿತು. ಆಯ್ತು ಸರ್ ತಾಳಿಕೋಟೆಗೆ ಹೋಗಿ ಅವನ ಟೀಸಿ ಮತ್ತು ಟ್ರಂಕು ತರ್ತೀವಿ ಅಂತ ನಟನೆ ಮಾಡಿದರೂ ಅಮಾಯಕನಾದ ನನಗೆ ಅದು ಅರ್ಥ ಆಗಲಿಲ್ಲ.
ಇಬ್ಬರೂ ಕೂಡಿ ಗುಂಡಲಗೇರಿಯ ಮುಖ್ಯ ರಸ್ತೆಗೆ ನಡೆದುಕೊಂಡೆ ತಲುಪಿದೆವು. ಯಾವುದೋ ಟ್ರ್ಯಾಕ್ಟರ್ ಬಂತು ಅದರಲ್ಲಿ ಕುಳಿತು ಹುಣಸಿಗಿ ಹೋಗಿ ತಾಳಿಕೋಟೆಗೆ ಬಸ್ ನಲ್ಲಿ ಹೋದೆವು.
ತಾಳಿಕೋಟೆಯಲ್ಲಿ ಇಳಿದ ಕೂಡಲೇ ನನ್ನ ಎದೆ ಲಬ್ ಡಬ್ ಹೆಚ್ಚಾಯಿತು. ನಸುಕಿಗೆ ಬರುವ ಸರ್, ಗೂಟಕ್ಕ ಸಿಗಿಸಿದಬೆಲ್ಟು, 35 ತನಕ ಮಗ್ಗಿ ಎಲ್ಲ ನೆನಪಾಗಿ ಮೈ ಬೆವರತಾ ಇತ್ತು. ನಮ್ಮಪ್ಪ ನನ್ನ ನೋಡಿ ಏನು ಆಗಲ್ಲ ನಿನಗ ಗುಂಡಲಗೇರಿ ಶಾಲೆಗೆ ಹಚ್ತೀನಿ ಅಂದ್ರೂನೂ ನನ್ನ ಭಯ ಕಮ್ಮಿ ಆಗಲಿಲ್ಲ.
ಇನ್ನೇನು ವಸತಿ ಶಾಲೆ ಸಮೀಪ ಬಂತು ಅನ್ನುವಾಗ ನನ್ನ ಮನಸ್ಸಿನಲ್ಲಿ ಮತ್ತೊಮ್ಮೆ ಓಡಿ ಹೋಗುವ ವಿಚಾರ ಬಂತು. ಆದರೆ ಈ ಸಲ ಯಾವ ಕಡೆಗೆ ಹೋಗಬೇಕು ಅನ್ನುವ ಗೊಂದಲ ಆಯ್ತು ಗೊಂದಲದ ವಿಚಾರದಲ್ಲಿಯೇ ವಸತಿ ಶಾಲೆ ಬಂದದ್ದು ಗೊತ್ತಾಗಲಿಲ್ಲ.
ನಾನು ಓಡಿ ಹೋಗಿದ್ದು, ಗುಂಡಲಗೇರಿಯಲ್ಲಿ ರಾವುತಪ್ಪ ಕಾಕಾನ ಮನೆಯಲ್ಲಿ ಇದ್ದದ್ದು ನಮ್ಮಪ್ಪನಿಗೆ ಗೊತ್ತು ಆಗಿದ್ದಾದರೂ ಹೆಂಗೆ ಅನ್ನುವ ಯೋಚನೆ ಮಾಡಲೇ ಇಲ್ಲ ನಾನು. ವಸತಿ ಶಾಲೆಗೆ ಹೋದ ಮೇಲೆ ಗೊತ್ತಾಗಿದ್ದದು ಏನೆಂದರೆ ನಾನು ಓಡಿ ಹೋದ ಮರುದಿನವೇ ಶಾಲೆಯಿಂದ ಶಹಾಪುರದ ನಮ್ಮ ಮನೆಗೆ ಪತ್ರ ಬರೆದಿದ್ದರು.
ಪತ್ರ ಯಾವಾಗ ಮುಟ್ಟಿತು ಅಂತ ಅಲ್ಲಿಯ ಶಿಕ್ಷಕರು ಕೇಳಿದಾಗ ಐದು ದಿನಗಳ ಹಿಂದೆ ತಲುಪಿತು ಅಂತ ನಮ್ಮಪ್ಪ ಹೇಳಿದರು. ಯಾಕಪಾ ಆನಂದ ನಮ್ಮಲ್ಲಿ ಇರುವುದು ಇಷ್ಟ ಆಗಲಿಲ್ಲ ಏನು ಅಂತ ಪಾಟೀಲ ಸರ ಮಗಳು ಕೇಳಿದಳು.
ನಾನು ನಿರುತ್ತರನಾಗಿ ನಿಂತಿದ್ದೆ. ಅವಮಾನ, ಅಸಹಾಯಕತೆ, ಹಠಮಾರಿ ಹುಲಿಯನ್ನು ಹಂಟರ್ ನ ಸುಪರ್ದಿಗೆ ಕೊಟ್ಟು ನಮ್ಮ ಅಪ್ಪ ನಗುತ್ತಾ ಇದ್ದರು. ದಾರಿಯಲ್ಲಿ ನಾ ಎಲ್ಲ ಹೇಳಿನಿ ಇನ್ನು ಮುಂದೆ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ ಆಗುವ ತನಕ ಇಲ್ಲೆ ಇರ್ತಾವ ಅಂದಾನ್ರಿ ಅಂದರು.
ಗೋಣು ಕೆಳಗ ಹಾಗಿ ಬಲಿ ತೊಗೊಳ್ರೋ ನನ್ನ ಅಂತ ಶರಣಾದೆ. ನಮ್ಮಪ್ಪ ಹೊರಡೋ ಅವಸರ ಮಾಡಿದಾಗ ಊಟ ಮಾಡಿಕೊಂಡು ಹೊಗ್ರಿ ಅಂತ ಕಾಳಜಿ ವಹಿಸಿದರು. ಯಾಕ ಓಡಿ ಹೋದ ಮಗ ಏನು ಕೊರತೆ ಇತ್ತು? ಸರಿಯಾದ ಸಮಯಕ್ಕೆ ಊಟ ಕೊಡ್ತಾರ ಇಲ್ಲ, ಕಾಳಜಿ ವಹಿಸ್ತಾರ ಇಲ್ಲ ,ಆರಾಮಾಗಿ ನೋಡಿಕೊಳ್ಳತಾರ ಇಲ್ಲ ಏನೂ ಕೇಳದೆ ಬಿಟ್ಟು ಹೋದರು.
ನಮ್ಮಪ್ಪ ನನ್ನ ಹಾಸ್ಟೆಲ್ಗೆ ಒಪ್ಪಿಸಿ ಹೋದ ಹತ್ತು ನಿಮಿಷಕ್ಕೆ ಬಾಗಿಲ ಸಂದಿ ಗೂಟದ ಬೆಲ್ಟಿಗೆ ಭಯಂಕರ ಸಿಟ್ಟು ಬಂದು ಆ ಸಿಟ್ಟಿಗೆ ನಾನೇ ಆಹಾರ ಆಗಿ ಮೂರು ದಿನ ಕೂಡ್ಲಾಕ ಬರ್ಲಿಲ್ಲ, ಮಗ್ಗಲು ಮೊಕ್ಕೊಳ್ಳಾಕ ಬರಲಿಲ್ಲ. ಮತ್ತದೇ ಮೊದಲ ದಿನಚರಿಯಂತೆ ದಿನಗಳು ನಡೆದವು.
ನಸುಕಿಗೆ ನಾಲ್ಕು ಗಂಟೆಗೆ ಶಿಕ್ಷಕರು ಬಂದು ಚಿಲಕ ಬಾರಿಸೋದು, ನಾನೆ ಬಾಗಿಲು ತೆಗೆದು 35 ತನಕ ಮಗ್ಗಿ ಹೇಳಿ ಬೆಲ್ಟಿಗೂ ನನಗೂ ಸಂಬಂಧವೇ ಇಲ್ಲ ಎಂಬಂತೆ ಆಮೇಲೆ ಅದು ನನಗೆ ಮುಟ್ಟಿದೆ ಇತ್ತು. ನಸುಕಿಗೆ ನಾಲ್ಕು ಗಂಟೆಗೆಯಿಂದ 7:30 ತನಕ ತರಬೇತಿ ನಂತರ ಡೋಣಿ ಹಳ್ಳದಾಗ ಸ್ನಾನ, ನಾಷ್ಟಾ ಆದ ಮೇಲೆ ವಸತಿ ಶಾಲೆಯಿಂದ ತಾಳಿಕೋಟೆಯ ಇನ್ನೊಂದು ಕಡೆಯ ರಾಜವಾಡೆಯಲ್ಲಿದ್ದ ಸರಕಾರಿ ಕಿರಿಯ ಗಂಡುಮಕ್ಕಳ ಶಾಲೆಗೆ ನಡಕೊಂಡು ಹೋಗೋದು.
ರಾಜವಾಡೆ ಯಲ್ಲಿದ್ದ ನಮ್ಮ ತಾಯಿಯ ತವರು ಮನೆಗೆ ಹೊಗೋದು. ಹಗಟಗಿ ( ಹಗರಟಗಿ) ಮಲ್ಲಣ್ಣಗೌಡ ಮುತ್ಯಾ ಬಂದ್ಯಾ ಮೊಮ್ಮಟ್ಯಾ ನಮ್ ಮನೀ ಕೂಳಿಗಿ ಅನ್ನುವ ಮಾತು ಕೇಳೋದು….ಮುಂದುವರೆಯುವದು..