ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನ ವಾಪಸ್ ದರ್ಶನಾಪುರ ಆರೋಪ
ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನ ವಾಪಸ್ ದರ್ಶನಾಪುರ ಆರೋಪ
ಶಹಾಪುರ: ಶಹಾಪುರ ಮತಕ್ಷೇತ್ರಕ್ಕೆ ವಿವಿಧ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆಯಾಗಿದ್ದ 7ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಹಿಂಪಡೆಯುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆರೋಪಿಸಿದರು.
ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, (30-54 ಆರ್‍ಡಿಪಿ ಯೋಜನೆ) ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗಾಗಿ 7 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ ಈಗಾಗಲೇ 2 ಕೋಟಿ ವೆಚ್ಚದ ಕೆಲಸ ಪೂರ್ಣಗೊಳಿಸಲಾಗಿದೆ. ಆದರೆ 5ಕೋಟಿ ಅನುದಾನ ವಾಪಸ್ಸು ಪಡೆಯಲಾಗಿದೆ. ಎಸ್‍ಸಿಎಫ್ ಯೋಜನೆ ಅಡಿಯಲ್ಲಿ 2ಕೋಟಿ ಅನುದಾನ ತಡೆ ಹಿಡಿಯಲಾಗಿದೆ.
ಬಿಜೆಪಿ ಸರ್ಕಾರ ರಚನೆಗೊಂಡು ಒಂದು ವರ್ಷ ಸಮೀಪಿಸುತ್ತಿರುವಾಗ ಕ್ಷೇತ್ರಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ ಎಂದು ಅವರು ಆರೋಪಿಸಿದರು.
ಅಲ್ಲದೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಹಾಪುರ ನಗರಕ್ಕೆ ಭೀಮಾನದಿಯಿಂದ ಶಾಶ್ವತವಾಗಿ ಕುಡಿಯುವ ನೀರಿನ 160ಕೋಟಿ ವೆಚ್ಚ ಯೋಜನೆ ಮಂಜುರಾತಿ ನೀಡಿತ್ತು. ಅದರಲ್ಲಿ ಪ್ರಥಮ ಹಂತವಾಗಿ 80ಕೋಟಿ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸೂಚಿಸಿತ್ತು. ಮುಂದೆ ಸಚಿವ ಸಂಪುಟದಲ್ಲಿ ಇಟ್ಟು ಅನುಮೋದನೆ ಪಡೆಯಬೇಕು.ಆದರೆ ಇಂದಿಗೂ ಅನುಮೋದನೆ ನೀಡಿಲ್ಲ.
ನಗರದಲ್ಲಿ ಸುಮಾರು 60 ಸಾವಿರ ಜನಸಂಖ್ಯೆ ಇದೆ. ಕುಡಿಯುವ ನೀರಿನಲ್ಲಿ ರಾಜಕೀಯ ಬೇಡ. ಅದೇ ಬಿಜೆಪಿ ಕ್ಷೇತ್ರದ ಶಾಸಕರಿಗೆ 3000ರಿಂದ 4000 ಕೋಟಿ ಅನುದಾನ ನೀಡಿದ್ದಾರೆ. ಇದ್ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ಅಲ್ಲದೆ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಇಂದಿಗೂ ಮಂಜೂರಾತಿ ನೀಡಿಲ್ಲ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ರಾಜಕೀಯ ದ್ವೇಷಬೇಡ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಶರಣಪ್ಪ ಸಲಾದಪುರ, ಶಿವಮಹಾಂತ ಚಂದಾಪುರ ಇದ್ದರು.
————————————-