ಧಾರಕಾರ ಮಳೆ – ಬಿತ್ತಿದ ಬೀಜಗಳು ನೀರು ಪಾಲು
ಕೆರೆಯಂತಾದ ಹೊಲ, ಗದ್ದೆಗಳು ನಷ್ಟದಲ್ಲಿ ರೈತರು
yadgiri,ಶಹಾಪುರಃ ತಾಲೂಕಿನಾದ್ಯಂತ ಶನಿವಾರ ರಾತ್ರಿ ಧಾರಕಾರ ಮಳೆ ಸುರಿದ ಪರಿಣಾಮ ರೈತಾಪಿ ಜನರು ಈಚೆಗೆ ಹೊಲಗಳಲ್ಲಿ ಬಿತ್ತಿದ ಹತ್ತಿ, ತೊಗರಿ ಮತ್ತು ಹೆಸರು ಬೀಜಗಳು ನೀರಲ್ಲಿ ಹರಿದುಕೊಂಡು ಹೋಗಿವೆ. ಅಲ್ಲದೆ ಗದ್ದೆ ಹೊಲಗಳು ಕೆರೆಯಂತಾಗಿದ್ದು, ಹೊಲಕ್ಕೆ ಹಾಕಿದ್ದ ಒಡ್ಡುಗಳು ಸಹ ಮಳೆ ನೀರಲ್ಲಿ ಒಡ್ಡಿನ ಮಣ್ಣು ಕೊಚ್ಚಿಕೊಂಡು ಹೋಗಿರುವ ಪರಿಣಾಮ ರೈತರು ಮತ್ತೆ ನಷ್ಟ ಅನುಭವಿಸುವಂತಾಗಿದೆ.
ಸಾಲ ಸೂಲ ಮಾಡಿ ರೈತರು ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಆರಂಭದಲ್ಲಿ ಮುಂಗಾರು ಚುರುಕುಗೊಂಡಿರುವ ಕುರಿತು ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ದಿಡೀರನೆ ಶನಿವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ. ಈ ಕುರಿತು ಕೃಷಿ ಇಲಾಖೆ ಸರ್ವೇ ಕಾರ್ಯ ನಡೆಸಿ ನಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಯುವ ರೈತ ಬಸವರಾಜ ಚೌದ್ರಿ ಆಗ್ರಹಿಸಿದ್ದಾರೆ.
ಗದ್ದೆಗಳು ಮತ್ತು ಬೀಜ ಬಿತ್ತಿದ ಹಲವಾರು ಎಕರೆ ಜಮೀನುಗಳು ನೀರಿನಲ್ಲಿ ಮುಳುಗಿದ್ದು, ರೈತರಿಗೆ ನಷ್ಟವೇ ಸರಿ ಹೀಗಾಗಿ ಜಿಲ್ಲಾಡಳಿತ ಧಾರಕಾರ ಮಳೆಗೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕಲ್ಪಿಸಲಿ ಎಂದು ಅವರು ಮನವಿ ಮಾಡಿದ್ದಾರೆ. ಸಗರ, ಗೋಗಿ ಮತ್ತು ಹತ್ತಿಗೂಡೂರ ಭಾಗದಲ್ಲಿ ಸಾಕಷ್ಟು ಮಳೆಯಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎನ್ನಲಾಗಿದೆ.