ಅಂಕಣಕಥೆ

ಅಪೇಕ್ಷೆ ಇಲ್ಲದ ಮನಸ್ಸು ಗರಿಬಿಚ್ಚಿದ ಹಕ್ಕಿಯಂತೆ -ಡಾ.ಈಶ್ವರಾನಂದ ಬರಹ

ದಿನಕ್ಕೊಂದು ಕಥೆ

ಪ್ರತ್ಯುಪಕಾರದ ಅಪೇಕ್ಷೆ ಸಲ್ಲದು

ನಾರಾಯಣಪುರದ ಗೋವಿಂದಶೆಟ್ಟಿ ಭಾರಿ ಶ್ರೀಮಂತ, ಅಷ್ಟೇ ನ್ಯಾಯ­ವಂತ. ತನ್ನ ಸಹೋದ್ಯೋಗಿಗಳನ್ನು ಮನೆಯ­ವ­ರಂತೆಯೇ ನೋಡಿಕೊ­ಳ್ಳುತ್ತಿದ್ದ. ಶ್ರೀಧರ­ಪುರದ ಸಿದ್ದಪ್ಪಶೆಟ್ಟಿಯೂ ಆಗರ್ಭ ಶ್ರೀಮಂತನೇ. ಅವನಿಗೆ ಗೋವಿಂದ­­ಶೆಟ್ಟಿಯೊಡನೆ ವ್ಯವಹಾರದೊಂದಿಗೆ ಸ್ನೇಹವೂ ಇತ್ತು. ಇಬ್ಬರೂ ತಮ್ಮ ತಮ್ಮ ವ್ಯವಹಾರಗಳನ್ನು ಮಾಡಿಕೊಂಡು ಸುಖ­ವಾಗಿದ್ದರು.

ಒಂದು ಬಾರಿ ಶ್ರೀಧರ­­ಪುರದ ಸಿದ್ದಪ್ಪಶೆಟ್ಟಿಗೆ ಅನೇಕ ಕಾರಣ­ಗಳಿಂದ ವ್ಯಾಪಾರದಲ್ಲಿ ಭಾರಿ ಹಾನಿ­ಯಾಯಿತು. ಬದುಕುವುದೇ ದುಸ್ತರ­ವಾಯಿತು. ಆಗ ಸಿದ್ದಪ್ಪಶೆಟ್ಟಿ ನಾರಾಯ­ಣಪುರಕ್ಕೆ ಬಂದು ಗೋವಿಂದ ಶೆಟ್ಟಿ­ಯನ್ನು ಕಂಡ. ಸ್ನೇಹಿತನನ್ನು ಕಂಡೊಡನೆ ಗೋವಿಂದಶೆಟ್ಟಿ ಎದ್ದು ಆಲಂಗಿಸಿ­ಕೊಂಡು, ಮನೆಗೆ ಕರೆದೊಯ್ದು ಸ್ವಾಗತ ಮಾಡಿದ.  ಬಂದ ಕಾರಣವನ್ನು ತಿಳಿದ ಮೇಲೆ ಹೇಳಿದ, ‘ಗೆಳೆಯಾ, ನಿನ್ನ ಕಷ್ಟ ಸಮಯ­ದಲ್ಲಿ ಸಮಾನಭಾಗಿ  ನಾನು. ನನ್ನದೆಲ್ಲದರ ಅರ್ಧ ನಿನಗೆ ಕೊಡುತ್ತೇನೆ, ಚಿಂತೆ ಬೇಡ’ . ನಂತರ ತನ್ನಲ್ಲಿದ್ದ ಐವತ್ತು ಕೋಟಿ ಹಣದಲ್ಲಿ ಇಪ್ಪತ್ತೈದು ಕೋಟಿ ಹಣವನ್ನು ಕೊಡುವುದಲ್ಲದೇ ತನ್ನ ಸಮಸ್ತ ಆಸ್ತಿಯನ್ನು ಎರಡು ಭಾಗ ಮಾಡಿಸಿ ಒಂದು ಭಾಗವನ್ನು ಸಿದ್ದಪ್ಪ­ಶೆಟ್ಟಿಗೆ ಕೊಟ್ಟುಬಿಟ್ಟ.

ಸಿದ್ದಪ್ಪಶೆಟ್ಟಿ ಸಂತೋಷದಿಂದ ಶ್ರೀಧರಪುರಕ್ಕೆ ಮರಳಿ ಮತ್ತೆ ತನ್ನ ವ್ಯಾಪಾರ ಪ್ರಾರಂಭಿಸಿ ಹಣ ಗಳಿಸಿದ. ಹತ್ತು ವರ್ಷಗಳು ಕಳೆದವು.  ಈಗ ನಾರಾಯಣಪುರದ ಗೋವಿಂದ­ಶೆಟ್ಟಿಗೆ ಅದೇ ಸ್ಥಿತಿ ಬಂತು. ತೀರ ನಿರ್ಗತಿಕನಾದಾಗ ಗೋವಿಂದಶೆಟ್ಟಿ ತನ್ನ ಸ್ನೇಹಿತ ಸಿದ್ದಪ್ಪಶೆಟ್ಟಿಯನ್ನು ನೆನಪಿಸಿ­ಕೊಂಡ.

ತನ್ನ ಆತ್ಮೀಯ ಗೆಳೆಯ ತನ್ನ ಕೈ ಬಿಡುವುದಿಲ್ಲವೆಂಬ ಅಪಾರ ನಂಬಿಕೆ ಅವನಿಗೆ. ತನ್ನ ಹೆಂಡತಿಯನ್ನು ಕರೆದು­ಕೊಂಡು ಶ್ರೀಧರಪುರಕ್ಕೆ ಬಂದ. ಹೆಂಡತಿ­­ಯನ್ನು ಧರ್ಮಶಾಲೆಯಲ್ಲಿ ಇಳಿಸಿ ‘ನೀನು ರಸ್ತೆಯಲ್ಲಿ ನಡೆದು­ಕೊಂಡು ಬರುವುದು ಸರಿಯಲ್ಲ. ನಾನು ಹೋಗಿ ಗೆಳೆಯನ ಜೊತೆಗೆ ಮಾತನಾ­ಡಿದಾಗ ಅವನು ಒಂದು ಸಾರೋಟು ಕಳುಹಿಸುತ್ತಾನೆ. ನೀನು ಅದರಲ್ಲಿ ಬಾ’ ಎಂದು ಹೇಳಿ ಶೆಟ್ಟಿಯ ಮನೆಗೆ ಹೋದ.

ಆಳುಗಳಿಗೆ ತಾನು ಬಂದ ವಿಷಯವನ್ನು ಸಿದ್ದಪ್ಪ ಶೆಟ್ಟಿಗೆ ಹೇಳಲು ಕೇಳಿಕೊಂಡ. ಅವರು ಶೆಟ್ಟಿಗೆ ಹೇಳಿದಾಗ, ‘ಇದೆಲ್ಲಿಂದ ಪೀಡೆ ಬಂತಪ್ಪಾ?’ ಎಂದುಕೊಂಡು  ಹೊರಗೆ ಬರದೇ  ಮೂರು  ತಾಸು  ಗೋವಿಂದ­ಶೆಟ್ಟಿಯನ್ನು ಮನೆಯ ಹೊರಗೇ ಕಾಯಿಸಿದ. ನಂತರ ತಾನೇ ಹೊರಗೆ ಬಂದು ಮುಖ ಗಂಟಿಕ್ಕಿ­ಕೊಂಡು, ‘ಏನು ಬಂದೆ?’ ಎಂದು ಕೇಳಿದ.

ಗೋವಿಂದಶೆಟ್ಟಿ ತನ್ನ ಕಷ್ಟ­ಗಳನ್ನು ಹೇಳಿಕೊಂಡ ಮೇಲೆ ‘ನಿನ್ನ ಕರ್ಮಕ್ಕೆ ನಾನೇನು ಮಾಡಲಿ?’ ಎಂದ. ಆಮೇಲೆ, ‘ನನ್ನಿಂದೇನಾಗುತ್ತದೋ ಅದನ್ನು ಮಾಡುತ್ತೇನೆ. ನಿನ್ನೆಯೇ ಎರಡು ಸಾವಿರ ಚೀಲ ಅಕ್ಕಿಯ ರಾಶಿ ಮಾಡಿದ್ದೇನೆ.  ಅದರ ಹೊಟ್ಟು ಬೇಕಾ­ದಷ್ಟಿದೆ. ನನ್ನ ಒಂದು ಸೇರು ಹೊಟ್ಟು ಐದು ಕೋಟಿ ಹಣಕ್ಕೆ ಸಮ’ ಎಂದು ಸೇವಕರನ್ನು ಕರೆಸಿ ಗೋವಿಂದಶೆಟ್ಟಿಯ ಉಡಿಯಲ್ಲಿ ಐದು ಸೇರು ಹೊಟ್ಟು ಹಾಕಿ ಕಳಿಸಿದ.

ಧರ್ಮಶಾಲೆಗೆ ಹೊಟ್ಟಿ­ನೊಂದಿಗೆ ಬಂದ ಗಂಡನನ್ನು ಕಂಡು ಶೆಟ್ಟಿಯ ಹೆಂಡತಿ ಬಹಳ ದುಃಖದಿಂದ ಅಳತೊಡಗಿದಳು. ಆಗ ಅಲ್ಲಿಗೆ ಮತ್ತೊಬ್ಬ ವ್ಯಾಪಾರಿ ಬಂದ. ಅವನು ಹಿಂದೆ ಗೋವಿಂದಶೆಟ್ಟಿಯಿಂದ ಸಹಾಯ ಪಡೆದವನು. ಓಡಿ ಬಂದು ಗೋವಿಂದ­ಶೆಟ್ಟಿಯ ಕಾಲಿಗೆರಗಿ ವಿಷಯ ತಿಳಿದ.

ಅವನ ಮಾವನೇ ಆ ರಾಜ್ಯದ ರಾಜನ ಮಂತ್ರಿ. ಗೋವಿಂದಶೆಟ್ಟಿಯನ್ನು ಮಂತ್ರಿ ರಾಜನ ಬಳಿಗೆ ಕರೆ­ದೊಯ್ದ.
ರಾಜ ಸಿದ್ದಪ್ಪಶೆಟ್ಟಿಯನ್ನು ಕರೆಯಿಸಿ ಹಿಂದೆ ಗೋವಿಂದಶೆಟ್ಟಿ ಕೊಟ್ಟಿದ್ದ­ನ್ನೆಲ್ಲ ಮರಳಿಸು­ವಂತೆ ಆಜ್ಞೆ ಮಾಡಿದ.

ಆದರೆ ಗೋವಿಂದ ಶೆಟ್ಟಿ ಹೇಳಿದ, ‘ಪ್ರಭೂ, ನನಗೆ ನಾನು ಕೊಟ್ಟ ಹಣ ಬೇಡ. ನನ್ನ ವ್ಯಾಪಾರ ಪ್ರಾರಂಭಿಸುವುದಕ್ಕೆ ಸ್ವಲ್ಪ ಹಣ ಕೊಡಿಸಿದರೆ ಸಾಕು. ನಾನು ಅದನ್ನೇ ಶಕ್ತಿಯಿಂದ ಬೆಳೆಸುತ್ತೇನೆ. ಕೊಟ್ಟಿ­ದ್ದನ್ನೆಲ್ಲ ಮರಳಿ ಪಡೆದರೆ ಅದು ಸ್ನೇಹ ಹೇಗಾದೀತು? ಅದೂ ವ್ಯಾಪಾರವೇ ಅಗು­ತ್ತದೆ’. ಅಂತೆಯೇ ಸ್ವಲ್ಪ ಹಣವನ್ನು ತೆಗೆದುಕೊಂಡು ನಾರಾಯಣಪುರಕ್ಕೆ ನಡೆದ.

ನೀವು ಮಾಡಿದ ಉಪಕಾರಕ್ಕೆ ಪ್ರತಿ­ಯಾಗಿ ಯಾರಾದರೂ ಉಪಕಾರ ಮಾಡಿದರೆ ದಯವಿಟ್ಟು ಧನ್ಯವಾದ ಹೇಳಿ. ಪ್ರತ್ಯುಪಕಾರ ಅಪೇಕ್ಷಿಸ­ಬೇಡಿ. ಹಾಗೆ ಅಪೇಕ್ಷೆ ಇಟ್ಟುಕೊಂಡರೆ ಅದು ಉಪಕಾರವಾಗದೇ ವ್ಯಾಪಾರ­ವಾಗು­ತ್ತದೆ. ನಿಮ್ಮಿಂದ ಸಾಧ್ಯ­­ವಿ­ದ್ದರೆ, ಸಾಧ್ಯವಿದ್ದಷ್ಟು ಮಟ್ಟಿಗೆ, ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ. ಅವರಿಂದ ಅಪೇಕ್ಷೆ ಎಷ್ಟು ಹೆಚ್ಚು ಮಾಡಿಕೊಳ್ಳು­ತ್ತೀರೋ ಅಷ್ಟು ಹೆಚ್ಚು ಕೊರಗುತ್ತೀರಿ.

ನೀವು ಮಾಡಿದ್ದು, ರಾಷ್ಟ್ರಕ್ಕೆ, ಸಮಾಜಕ್ಕೆ, ಪರಿವಾರಕ್ಕೆ, ಹೆಂಡತಿಗೆ, ಮಕ್ಕಳಿಗೆ ಹೀಗೆ ಯಾರಿಗಾದರೂ ಆಗಬಹುದು. ಮಾಡಿ ಮರೆತು ಬಿಡಿ. ಪಡೆದವರು ನೆನಪಿಟ್ಟು­ಕೊಂಡರೆ ಭಗವಂತನಿಗೆ ಕೃತಜ್ಞತೆ ಹೇಳಿ. ಆಗ ನಿಮ್ಮ ಮನಸ್ಸಿಗೆ ನೋವಾಗು­ವುದಿಲ್ಲ. ಅಪೇಕ್ಷೆ ಇಲ್ಲದ ಮನಸ್ಸು ಸದಾ ಗರಿಬಿಚ್ಚಿದ ಹಕ್ಕಿಯಂತೆ ಹಗುರ.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button