ಮಹಿಳಾ ವಾಣಿಯೂತ್ ಐಕಾನ್

ಮಹಿಳಾ ಸಾಧಕಿ, ಚಿಂತಕಿ ಹಣಮಂತಿ ಗುತ್ತೇದಾರ ಕುರಿತು ಒಂದು ಬರಹ

ಸಗರನಾಡಿನ ಪ್ರಮುಖ ಮಹಿಳಾ ಸಾಧಕಿ, ಚಿಂತಕಿ  ಹಣಮಂತಿ ಗುತ್ತೇದಾರ.!

ಆವಿಷ್ಕಾರಗಳು ಆಕಸ್ಮಿಕಗಳಲ್ಲ ಅವು ನಿರಂತರ ಶ್ರಮಕ್ಕೆ ಒಲಿದ ವರಗಳು. ಪ್ರತಿಭೆಯಲ್ಲಿ ನಿಜವಾಗಿಯೂ ಸ್ಪೂರ್ತಿಯ ಪಾಲು ಒಂದಾದರೆ, ಉಳಿದ ತೊಂಬತ್ತುತೊಂಬತ್ತು ಪಾಲು ಸತತ ಪರಿಶ್ರಮದ ಪಾಲಾಗಿರುತ್ತದೆ. ನಿಜವಾದ ಸಫಲತೆ ಮತ್ತು ಸತತ ಪರಿಶ್ರಮ ಇವು ಯಾವಾಗಲೂ ಒಡನಾಡಿಗಳು. ಅವಿರತ ಪರಿಶ್ರಮದಿಂದ ಮಾತ್ರ ಅತ್ಯಂತ ಅಮೂಲ್ಯ ವಸ್ತುವನ್ನು ಪಡೆಯಬಹುದು”.

ಥಾಮಸ್ ಆಲ್ವ ಎಡಿಸನ್ ಅವರ ಈ ಸಾಲುಗಳು ಯುವ ಸಾಧಕರಿಗೆ ಸ್ಪೂರ್ತಿದಾಯಕ ಮತ್ತು ಪ್ರೇರಣಾದಾಯಕವಾಗಿವೆ. – ಸಗರನಾಡಿನ ಮಹಿಳಾ ಯುವ ಸಾಧಕಿ, ಮಹಿಳಾ ಸಂವೇದನೆಯ ಚಿಂತಕಿ, ಕ್ರಿಯಾಶೀಲ ಇತಿಹಾಸ ಅಧ್ಯಾಪಕಿ, ಲೇಖಕಿ ಶ್ರೀಮತಿ ಹಣಮಂತಿ ಗುತ್ತೇದಾರ ಅವರು ತಮ್ಮ ಶ್ರದ್ಧೆಯ ಅಧ್ಯಯನ, ನಿರಂತರ ಪ್ರಯತ್ನ, ಸಾಧನೆಯ ಛಲದೊಂದಿಗೆ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ನೇಮಕವಾಗಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಆದರ್ಶ ಅಧ್ಯಾಪಕಿಯಾಗಿ, ನೂರಾರು ವಿದ್ಯಾರ್ಥಿಗಳಿಗೆ ಪ್ರೇರಕಶಕ್ತಿಯಾಗಿದ್ದಾರೆ. – ಯಾದಗಿರಿ ಜಿಲ್ಲೆಯ ಶಹಾಪುರದ ಶ್ರೀ ಬುಡ್ಡಯ್ಯ ಮತ್ತು ಶ್ರೀಮತಿ ಈರಮ್ಮ ಗುತ್ತೇದಾರ ದಂಪತಿಗಳ ಉದರದಲ್ಲಿ ಜನಿಸಿದ ಶ್ರೀಮತಿ ಹಣಮಂತಿ ಗುತ್ತೇದಾರ ಅವರು ಶಹಾಪುರ ನಗರದ ಶಾಲೆ – ಕಾಲೇಜುಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಶಿಕ್ಷಣದವರೆಗೆ ಅದ್ಯಯನ ಮಾಡಿದರು.

ಹೈಸ್ಕೂಲ್, ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಅಧ್ಯಯನದ ಸಂದರ್ಭದಲ್ಲಿ ಖೋಖೊ, ಓಟ, ಎತ್ತರ ಜಿಗಿತ, ಗುಂಡು ಎಸೆತ ಮುಂತಾದ ಕ್ರೀಡೆಗಳಲ್ಲಿ ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ ಹಾಗೂ ವಿಶ್ವವಿದ್ಯಾಲಯ ಮತ್ತು ಅಂತರ್ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದ ಅವರು ೨೦೧೫ ರಲ್ಲಿ ಕೆ – ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಕಳೆದ ಒಂದು ದಶಕದಿಂದ ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಮತ್ತು ಇತಿಹಾಸ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಹಣಮಂತಿ ಗುತ್ತೇದಾರ ಅವರು ಕಾವ್ಯ, ಲೇಖನ, ಸಂಶೋಧನಾ ಬರಹಗಳಲ್ಲಿ ತೊಡಗಿಸಿಕೊಂಡಿರುವ ಅವರ ಅನೇಕ ಲೇಖನಗಳು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿವಿಧ ಸಂಪಾದನೆ ಕೃತಿಗಳಲ್ಲಿ , ಸ್ಮರಣ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ.

ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿ, ಉಪನ್ಯಾಸ ಗೊಷ್ಢಿಗಳಲ್ಲಿ ಭಾಗವಹಿಸಿ ಕವಿತೆ ವಾಚನ, ಉಪನ್ಯಾಸ ನೀಡಿರುವ ಹಣಮಂತಿ ಗುತ್ತೇದಾರ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಪ್ರಮುಖ ಮಹಿಳಾ ಲೇಖಕಿ, ಮಹಿಳಾ ಸಂವೇದನೆಯ ಚಿಂತಕಿ, ಕ್ರಿಯಾಶೀಲ ಮಹಿಳಾ ಸಂಘಟಕಿ, ಹೋರಾಟಗಾರ್ತಿ, ಉತ್ತಮ ವಾಗ್ಮಿಯಾಗಿ ಕಲ್ಯಾಣ ಕರ್ನಾಟಕದಲ್ಲಿ ಶಹಾಪುರ ತಾಲ್ಲೂಕನ್ನು ಪ್ರತಿನಿಧಿಸಿದವರು ಮತ್ತು ಮಹಿಳೆಯರ ದನಿಯಾಗಿ, ಪ್ರಗತಿಪರ ವಿಚಾರವಂತೆಯಾಗಿ, ವಿದ್ಯಾರ್ಥಿ ವೃಂದದ ಅಚ್ಚುಮೆಚ್ಚಿನ ಅಧ್ಯಾಪಕಿಯಾಗಿ, ಒಳ್ಳೆಯ ಭಾಷಣಕಾರ್ತಿಯಾಗಿ ಸಗರನಾಡಿನ ಸಾಂಸ್ಕೃತಿಕ ಲೋಕದ ಗಮನ ಸೆಳೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಾಗೂ ಮಹಿಳಾ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ಸರಳ, ಸಾತ್ವಿಕ, ನಿರಾಡಂಬರ, ವಿನಯಶೀಲ, ನೇರ ನಡೆ, ಮುಕ್ತ ಮನಸ್ಸು, ಸೂಕ್ಷ್ಮ ಸಂವೇದನೆ, ಮಾನವೀಯ ಮಮತೆ, ಸ್ಪಂದನಾಶೀಲ, ಸಹಕಾರ ಮನೋಭಾವ ಮುಂತಾದ ಗುಣಗಳೊಂದಿಗೆ ಅಧ್ಯಯನ, ಅಧ್ಯಾಪಕ ವೃತ್ತಿಯ ಜೊತೆಗೆ ಸಾಹಿತ್ಯ ಸೇವೆ, ಸಮಾಜ ಸೇವೆಯಲ್ಲಿ ತುಂಬಾ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡವರು.

ಶಹಾಪುರದ ಸಾಂಸ್ಕೃತಿಕ ಪರಿಸರದಲ್ಲಿ ಡಾ. ಶೈಲಜಾ ಬಾಗೇವಾಡಿ, ಹಣಮಂತಿ ಗುತ್ತೇದಾರ, ಪ್ರೊ. ಆನಂದಕುಮಾರ ಸಾಸನೂರ, ರುದ್ರಪ್ಪ ತಳವಾರ, ಡಾ. ಬಸವರಾಜ ಇಜೇರಿ, ಮಹೇಶ್ ಪತ್ತಾರ, ರಾಘವೇಂದ್ರ ದೇಸಾಯಿ, ಗೌಡಪ್ಪಗೌಡ ಹುಲ್ಕಲ್, ಶ್ರೀಮತಿ ನಿರ್ಮಲಾ ತುಂಬಗಿ, ಶ್ರೀಮತಿ ಭಾಗ್ಯ ಧೊರೆ, ಡಾ. ಜ್ಯೋತಿಲತಾ ತಡಿಬಿಡಿಮಠ, ವಿಶಾಲ ಶಿಂಧೆ, ಬೂದಯ್ಯ ಹಿರೇಮಠ, ಗೌತಮ ಕುಲಕರ್ಣಿ, ಶ್ರೀನಿವಾಸ ದೋರನಹಳ್ಳಿ ಮುಂತಾದ ಸಾಂಸ್ಕೃತಿಕ ಮನಸ್ಸುಗಳು ಸಾಹಿತಿಗಳ ಮತ್ತು ಸಾಹಿತ್ಯದ ಕಥೆ, ಕಾದಂಬರಿ, ಕಾವ್ಯ, ಜಾನಪದ ಮುಂತಾದ ಸಾಹಿತ್ಯ ಪ್ರಕಾರಗಳು, ಚಿತ್ರಕಲೆ, ಸಂಗೀತ, ಜನಪದ ಇತ್ಯಾದಿಗಳ ಕುರಿತು ಚರ್ಚೆ, ಸಂವಾದ, ಚಿಂಥನ- ಮಂಥನ, ಉಪನ್ಯಾಸ, ಸಂಗೀತ…ಹೀಗೆ ಅನೇಕ ರಚನಾತ್ಮಕ, ಸೃಜನಾತ್ಮಕ ಕಾರ್ಯಗಳನ್ನು ನಡೆಸುತ್ತಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಸದಾ ಎಚ್ಚರವಾಗಿಡಲು ಶ್ರಮಿಸುವುದರ ಜೊತೆಗೆ ಉತ್ತಮವಾದ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ. ಈ ಬಳಗದಲ್ಲಿ ಶ್ರೀಮತಿ ಹಣಮಂತಿ ಗುತ್ತೇದಾರ ಅವರು ನಮಗೆಲ್ಲಾ ಹಿರಿಯ ಅಕ್ಕಳಾಗಿ ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಿದ್ದಾರೆ.

ನಾನು ಕೆಲವು ಸಂದರ್ಭಗಳಲ್ಲಿ ಅಕ್ಕ ಹಣಮಂತಿ ಗುತ್ತೇದಾರ ಅವರೊಂದಿಗೆ ಸಿಟ್ಟು ಮಾಡಿಕೊಂಡರೂ ಸಹ ಸಮಧಾನದಿಂದ ನನ್ನ ಸಾತ್ವಿಕ ಸಿಟ್ಟನ್ನು ತಾಳಿಕೊಂಡವರು. ಭಿನ್ನ ವಿಚಾರಗಳನ್ನು ಗೌರವಿಸಿದವರು. ನಮ್ಮ ಸೃಜನಶೀಲ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ಹಿರಿಯ ಸದಸ್ಯರಲ್ಲಿ ಒಬ್ಬರಾದ ಶ್ರೀಮತಿ ಹಣಮಂತಿ ಗುತ್ತೇದಾರ ಅವರು ಇತಿಹಾಸ ಉಪನ್ಯಾಸಕರಾಗಿ ಸರ್ಕಾರಿ ಹುದ್ದೆಗೆ ನೇಮಕವಾಗಿರುವುದು ನಮಗೆಲ್ಲರಿಗೂ ಹೆಮ್ಮೆ. ಅವರು ಶಿಕ್ಷಣ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನೂ ವಿಶಿಷ್ಠವಾದುದ್ದನ್ನು ಉನ್ನತವಾದುದ್ದನ್ನು ಸಾಧಿಸಲಿ ಎಂದು ಆಶಿಸುತ್ತೇವೆ.

ರಾಘವೇಂದ್ರ ಹಾರಣಗೇರಾ.

  ಉಪನ್ಯಾಸಕರು ಶಹಾಪುರ.

Related Articles

Leave a Reply

Your email address will not be published. Required fields are marked *

Back to top button