ಹೊಸ ತಲೆಮಾರಿನ ಬಹುಮುಖ ಪ್ರತಿಭೆ, ವಿಮರ್ಶಕ, ಲೇಖಕ ಸಿ.ಎಸ್.ಭೀಮರಾಯ
ಹೊಸ ತಲೆಮಾರಿನ ಬಹುಮುಖ ಪ್ರತಿಭೆಯ ವಿಮರ್ಶಕ, ಲೇಖಕ CSB
ಸಾಹಿತ್ಯ ವಿಮರ್ಶೆ ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಭಾಗವಹಿಸುತ್ತಿರುವ ಕಾರ್ಯ. ಕೃತಿಕಾರ ಮತ್ತು ವಿಮರ್ಶಕರಿಬ್ಬರೂ ಸಂಸ್ಕೃತಿ ನಿರ್ಮಾಣ ಕಾರ್ಯದಲ್ಲಿ ತಮ್ಮ ಪ್ರತಿಭೆ, ಸಾಮರ್ಥ್ಯ, ಶಕ್ತಿಗಳ ಮೀರಿ ಮೇರೆಗಳಲ್ಲಿ ಭಾಗವಹಿಸುತ್ತಾರೆ. ಆಗ ಪರಸ್ಪರರ ವೈಯಕ್ತಿಕ ಸಂಬಂಧಗಳಿಗಿಂತ ಭಿನ್ನವಾದ ವಿಸ್ತಾರದಲ್ಲಿ ಗ್ರಹಿಕೆ, ವ್ಯಾಖ್ಯಾನ, ಮೌಲ್ಯಮಾಪನ ನಡೆಯುತ್ತಿರುತ್ತದೆ.
ಈ ಪ್ರಯತ್ನದ ಪರಿಣಾಮ ಅಥವಾ ಫಲವೇ ಸಾಹಿತ್ಯ ವಿಮರ್ಶೆ ನಾಡಿನ ಹಿರಿಯ ಸಾಹಿತಿ, ವಿಮರ್ಶಕ ಪ್ರೊ. ಜಿ.ಎಚ್. ನಾಯಕ್ ಅವರ ವಿಮರ್ಶೆ ಕುರಿತಾದ ಈ ಸಾಲುಗಳು ಹೊಸ ತಲೆಮಾರಿನ ಕವಿ, ಲೇಖಕ, ವಿಮರ್ಶಕ ಸಿ.ಎಸ್. ಭೀಮರಾಯ ಅವರ ವಿಮರ್ಶಾ ಕೃತಿಗಳಿಗೆ ತುಂಬಾ ಅನ್ವಯಿಸುತ್ತವೆ.
ಕಲ್ಬುರ್ಗಿಯವರಾದ ಸಾಹಿತಿ ಸಿ.ಎಸ್.ಭೀಮರಾಯ ಮಿತಭಾಷಿ, ಉತ್ತಮ ವಾಗ್ಮಿ, ಸ್ನೇಹಮಹಿ. ತನ್ನ ಆಸಕ್ತಿ ಕ್ಷೇತ್ರದಲ್ಲಿ ಮುನ್ನುಗ್ಗಿ ಸಾಧನೆಯ ಹಾದಿಯನ್ನು ಹಿಡಿದವರು. ಕಾರ್ಯಸಾಧಿಸುವ ಛಲ, ಅವಿರತ ಶ್ರಮಪಡುವ ಮನೋಭಾವದವರು.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್ ಪದವಿ ಪಡೆದರು. ಪ್ರಸ್ತುತವಾಗಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಕಲ್ಯಾಣ ಕರ್ನಾಟಕ ಕಂಡ ಅಪರೂಪದ ಪ್ರತಿಭಾನ್ವಿತ ಯುವ ಸಾಹಿತಿ ಮತ್ತು ವಿಮರ್ಶಕರಲ್ಲಿ ಪ್ರಮುಖರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೂ ತನ್ನ ಪಠ್ಯದ ಓದಿನ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಗಳನ್ನು ಮೈಗೂಡಿಸಿಕೊಂಡಿದ್ದ ಸಿ.ಎಸ್. ಭೀಮರಾಯ ಅವರು ಅಕ್ಷರ ಲೋಕಕ್ಕೆ ತೆರೆದುಕೊಳ್ಳುತ್ತಾ ಕಾವ್ಯ, ಪ್ರಬಂಧ, ವಿಮರ್ಶೆ ಬರಹಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಕನ್ನಡ ಮತ್ತು ಆಂಗ್ಲ ಭಾಷೆಗಳೇರಡರಲ್ಲಿ ಪರಿಣತಿ ಪಡೆದಿರುವ ಅವರು ಇದುವರೆಗೆ ಕನ್ನಡದಲ್ಲಿ ‘ನೆಲದ ಮಗನ ಹಾಡು’ ಕವನ ಸಂಕಲನ, ‘ ಸಂಗಮ’ ಸಂವರ್ಧನ’ ‘ಸಂವೇದನೆ’ ‘ಅನ್ವೇಷಣೆ’ ಮತ್ತು ಆರೋಹಣ ಸೇರಿದಂತೆ ಆರು ಕೃತಿಗಳು ಹಾಗೂ ಆಂಗ್ಲ ಭಾಷೆಯಲ್ಲಿ ‘Super English Grammar and composition’ ‘Easy to Get more marks’ ‘ Communication skills in English and Facilitating Learning English ಐದು ಕೃತಿಗಳನ್ನು ಪ್ರಕಟಿಸಿದ್ದಾರೆ.
ಯುವ ಬರಹಗಾರರಿಗೆ, ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಮಾರ್ಗದರ್ಶಿಯಾಗಿರುವ ಸಿ.ಎಸ್ ಭೀಮರಾಯ ಅವರ ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು, ಇಪ್ಪತ್ತಕ್ಕೂ ಹೆಚ್ಚು ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಬದುಕಿನ ಹಲವು ಅನುಭವಗಳು, ಸಾಹಿತ್ಯದ ವಿಸ್ತಾರವಾದ ಓದು ಹಾಗೂ ಅನುಸಂಧಾನದಿಂದ ಪಕ್ವಗೊಂಡ ಮನಸ್ಸಿನ ಭೀಮರಾಯ ಅವರು ಸದಾ ಹಸನ್ಮುಖದ ಕ್ರಿಯಾಶೀಲ ಬರಹಗಾರ. ಅವರ ಸಾಹಿತ್ಯ ವೈವಿಧ್ಯಮಯವಾದದ್ದು. ವಿಮರ್ಶೆ, ಕಾವ್ಯ, ಸಂಪಾದನೆ, ಅದ್ಯಾಪನ ಮುಂತಾದ ವಲಯಗಳಲ್ಲಿ ತಮ್ಮದೇಯಾದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ.
ಅವರ ಸಾಹಿತ್ಯಿಕ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ದಿವಂಗತ ಕೆ.ವಿ. ರತ್ನಮ್ಮ ದತ್ತಿ ನಿಧಿ ಪ್ರಶಸ್ತಿ, ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ನಾಡಿನ ಸಾಹಿತ್ಯ ಪರಿಸರದ ವಿದ್ವತ್ ವಲಯದಲ್ಲಿ ಬಹು ಚರ್ಚೆಯಾಗುತ್ತಿರುವ, ವಿದ್ವಾಂಸರಿಗೆ ಬೇಕಾಗುವ ಅಪರೂಪದ ಕವಿ, ಲೇಖಕ, ವಿಮರ್ಶಕ, ಸಂಪನ್ಮೂಲ ಅಧ್ಯಾಪಕರಾಗಿದ್ದಾರೆ. ಡಾ.ಎಚ್.ಎಸ್ ರಾಘವೇಂದ್ರರಾವ್, ಡಾ. ಬಸವರಾಜ ಸಬರದ, ಡಾ.ಎಚ್.ಟಿ.ಪೋತೆ ಮುಂತಾದ ಹಿರಿಯ ಸಾಹಿತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯಾವ ಹಮ್ಮು-ಬಿಮ್ಮುಗಳು ಇಲ್ಲದ ಸರಳ ಸಜ್ಜನಿಕೆಯ ಸೂಕ್ಷ್ಮ ಸಂವೇದನೆಯ ಸಾಹಿತಿ, ವಿಮರ್ಶಕ ಸಿ.ಎಸ್. ಭೀಮರಾಯ ಅವರ ಸಾಹಿತ್ಯ ಬರಹಗಳಲ್ಲಿ ನಯವಾದ, ಮೃದುವಾದ ಪದಗಳನ್ನು ಲೀಲಾಜಾಲವಾಗಿ ಬಳಸಿಕೊಳ್ಳುತ್ತಾರೆ. ಅವರ ದೃಷ್ಟಿ ಪ್ರಗತಿಪರವಾದದು. ವರ್ತಮಾನದ ಸಾಮಾಜಿಕ ತಲ್ಲಣಗಳಿಗೆ, ಸಮಸ್ಯೆಗಳಿಗೆ, ಜಾಗತಿಕರಣದ ಹಲವು ಆಯಾಮಗಳಿಗೆ ಅವರ ಸಾಹಿತ್ಯ ಬರಹಗಳು ಮುಖಾಮುಖಿಯಾಗುತ್ತವೆ. ಸ್ಪಂದಿಸುತ್ತವೆ. ಅನುಸಂಧಾನವಾಗುತ್ತವೆ.
ಸಮಾನತೆಯ, ಮಾನವೀಯ ಸಂವೇದನೆಯ ಆಶಯಗಳನ್ನು ಸಿ.ಎಸ್. ಭೀಮರಾಯ ಅವರ ಬರಹಗಳು ಪ್ರತಿಪಾದಿಸುತ್ತವೆ. ಸಮಕಾಲೀನ ಸಂದರ್ಭಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಸೂಕ್ಷ್ಮತೆ ಅವರಲ್ಲಿ ಕಂಡುಬರುತ್ತದೆ.
ಕೃತಿಗಳನ್ನು ಓದಿ, ಅವುಗಳಲ್ಲಿ ಪ್ರವೇಶ ಪಡೆದು, ಸಮರ್ಪಕ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ತುಂಬಾ ತೊಡಕಿನ ಕೆಲಸ ಎಂದು ವಿಮರ್ಶಕ ಹೆಲೆನ್ ಗಿಲ್ ಬಟ್ ಅಭಿಪ್ರಾಯಪಡುತ್ತಾರೆ. ಈ ಕಡಿದಾದ ಹಾದಿಯಲ್ಲಿ ತಮ್ಮ ಪ್ರತಿಭೆ, ಗಂಭೀರ ಅಧ್ಯಯನದ ಮೂಲಕ ಭೀಮರಾಯ ಅವರು ವಿಮರ್ಶಾ ಸಾಹಿತ್ಯ ಕೃಷಿಯಲ್ಲಿ ಶ್ರಮಿಸುತ್ತಿದ್ದಾರೆ.
ಎಲ್ಲರೂ ಕೂಡಿ ಬಾಳುವ ಮಾನವೀಯ ಅಂತಃಕರಣ ಸಂಸ್ಕೃತಿಯನ್ನು ಕಟ್ಟುವ ಆಶಯ, ಜೀವಪರ ಕಾಳಜಿ ಮುಂತಾದ ಪ್ರಮುಖ ಅಂಶಗಳನ್ನು ಇಟ್ಟುಕೊಂಡು ವಿಮರ್ಶಾ ಬರಹಗಳಲ್ಲಿ, ಸಾಹಿತ್ಯ ಕೃಷಿಯಲ್ಲಿ ವಿಶಿಷ್ಠವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಕೃತಿಗಳಲ್ಲಿ ಸಾಮಾಜಿಕ ಚಿಂತನೆ ಹಾಗೂ ವೈಯಕ್ತಿಕ ಜೀವನ ಬೇರೆ ಬೇರೆ ಮಾಡುವುದಿಲ್ಲ.
ಮನುಷ್ಯನ ಸಾಮಾಜಿಕ ಜೀವನದ ಸಾಂಸ್ಕೃತಿಕ ಬದುಕು, ಮೌಲ್ಯಗಳು ಮತ್ತು ಅವುಗಳಲ್ಲಿನ ಸ್ಥಿತ್ಯಂತರಗಳು, ಹಲವು ಸಮಸ್ಯೆಗಳು ತಲ್ಲಣಗಳು, ಅಸಮಾನತೆಗಳು ಮುಂತಾದವು ಸೂಕ್ಷ್ಮವಾದ ಗ್ರಹಿಸುವಿಕೆ, ಅವುಗಳನ್ನು ಹೋಗಲಾಡಿಸಲು ಬಳಸುವುದನ್ನು ಕಾಣಬಹುದು. ವೈಚಾರಿಕತೆ, ತಳಸ್ಪರಿಸಿಯ ಚಿಂತನೆ, ಅನ್ಯಾಯದ ಬಗ್ಗೆ ಆಕ್ರೋಶ, ಮಾನವೀಯ ಭಾವಸ್ಪಂದನ ಕಾಣಬಹುದಾಗಿದೆ.
ವಿಮರ್ಶೆಯ ಬರಹಗಳನ್ನು ಕ್ರಿಯಾಶೀಲಗೊಳಿಸುತ್ತಾ, ಗಟ್ಟಿ ಬರಹಗಾರರಾಗಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷವಾಗಿ ವಿಮರ್ಶಾ ಕ್ಷೇತ್ರದಲ್ಲಿ ಕನ್ನಡ ವಿಮರ್ಶಾ ಪರಂಪರೆಯ ನಾಡಿನ ಶ್ರೇಷ್ಠ ಪ್ರತಿನಿಧಿಯಾಗಿ ಸಿ.ಎಸ್. ಭೀಮರಾಯ ಅವರು ಹೊರಹೊಮ್ಮಲಿ. ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಲಿ ಎಂದು ಆಶಿಸೋಣ. –
– ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.
ಸಿಎಸ್ಬಿ ಅವರನ್ನು ತುಂಬಾ ಚೆನ್ನಾಗಿ ಪರಿಚಯಿಸಿದ್ದೀರಿ ಸಹೋದರ. ಇಬ್ಬರೂ ಅಭಿನಂದನಾರ್ಹರು.
ತ್ಯಾಂಕ್ಯೂ ಮಿತ್ರ