ದಲಿತ ಸಂಘಟನೆಯ ಒಕ್ಕೂಟದಿಂದ ಅನಿರ್ಧಿಷ್ಟಾವಧಿ ಧರಣಿ
ಸಿಪಿಐ ದೌರ್ಜನ್ಯ ಖಂಡಿಸಿ ದಲಿತರ ಧರಣಿ
yadgiri, ಶಹಾಪುರಃ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಹಾಗೂ ಪರಿಶಿಷ್ಟ ಜಾತಿ ಮಂದಿ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆಯನ್ನು ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ, ದಲಿತ ಸಂಘಟನೆಯ ಒಕ್ಕೂಟದಿಂದ ನಗರದ ತಹಸೀಲ್ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಧರಣಿ ಜರುಗಿತು.
ಕೊರೊನಾ ಹಾವಳಿಯಿಂದಾಗಿ ಜಾರಿಗೊಂಡಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಹಲವಾರು ದಲಿತರ ಮೇಲೆ ಅನಗತ್ಯ ಆರೋಪ ಮಾಡುವ ಮೂಲಕ ಹಲ್ಲೆ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಧರಣಿನಿರತ ಮುಖಂಡರು ಆರೋಪಿಸಿದರು.
ನಗರಠಾಣೆ ಸಿಪಿಐ ಹನುಮರಡ್ಡೆಪ್ಪ ಮತ್ತು ಪಿಎಸ್ಐ ಪರಶುರಾಮ ಲಾಕ್ ಡೌನ್ ವೇಳೆ ಇಲ್ಲಿನ ದಲಿತ ಮುಖಂಡ ಬಸವರಾಜ ತಳವಾರ ಮತ್ತು ದೇವಿಂದ್ರಪ್ಪ ಗೌಡೂರು, ಅಶೋಕ ತಳವಾರ ಮೇಲೆ ತೀವ್ರ ತರದ ಹಲ್ಲೆ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿದರು. ನಗರದಲ್ಲಿ ಕಳ್ಳತನ ಹೆಚ್ಚಾಗಿದ್ದು, ಕೊರೊನಾ ಹಾವಳಿ ನಡುವೆಯೂ ಟ್ರಾಫಿಕ್ ಸಮಸ್ಯೆ ತಿವ್ರತೆ ಪಡೆದುಕೊಂಡಿದ್ದು, ಸ್ವತಃ ಕೊರೊನಾ ನಿಯಮಗಳನ್ನು ಪಾಲಿಸದ ಇಲ್ಲಿನ ಪೊಲೀಸ್ ಅಧಿಕಾರಿಗಳು ತಮ್ಮ ಮನಬಂದಂಥೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಠಾಣೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಧನದಾಹಿಯಂತೆ ಸಿಪಿಐ ವರ್ತಿಸುತ್ತಿದ್ದು, ಲಾಕ್ ಡೌನ್ ವೇಳೆ ಜವಳಿ ವ್ಯಾಪಾರಸ್ಥರು, ಕಿರಾಣಿ ಅಂಗಡಿ, ಫ್ರೂಟ್ಸ್ ವ್ಯಾಪಾರಸ್ಥರ ಮೇಲೂ ದೌರ್ಜನ್ಯ ನಡೆಸಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿದ್ದಾರೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು. ತಿಂಗಳಿಗೊಮ್ಮೆಯಾದರೂ ಪ್ರಕರಣಗಳ ಸ್ಥಿತಗತಿ ಕುರಿತು ಸಭೆ ನಡೆಸಬೇಕು. ಆದರೆ ಈ ಪಿಐ ಠಾಣೆಗೆ ಬಂದ ಮೇಲೆ ಇಲ್ಲಿವರೆಗೂ ಯಾವೊಂದು ಪ್ರಕರಣದ ಸ್ಥಿತಿಗತಿ ಮಾಹಿತಿ ಸಭೆ ನಡೆಸಿರುವದಿಲ್ಲ. ಕೇಳಿದ್ದಲ್ಲಿ ಉಡಾಫೆ ಮಾತನಾಡಿ ಪ್ರಶ್ನೆ ಮಾಡಿದಂತವರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಆರೋಪಿಸಿದರು.
ಹೀಗೆ ದಲಿತ ಮುಖಂಡರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಪಿಐ ಹನುಮರಡ್ಡೆಪ್ಪ ಮತ್ತು ಪಿಎಸ್ಐ ಪರಶುರಾಮ ಸೇರಿದಂತೆ ಪೊಲೀಸ್ ಸಿಬ್ಬಂದಗಳಾದ ಭಾಗಣ್ಣ, ವೀರೇಶ ಇವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಉಳಿದಂತೆ ದೂರಿನಲ್ಲಿ ತಿಳಿಸಿರುವ ಕಾನ್ಸ್ಟೇಬಲ್ಗಳನ್ನು ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ನಾಗಣ್ಣ ಬಡಿಗೇರ, ಶಿವಪುತ್ರ ಜವಳಿ, ಭೀಮರಾಯ ಹೊಸ್ಮನಿ, ಬಸವರಾಜ ತಳವಾರ, ತಾಲೂಕು ಸಂಚಾಲಕರ ಮರೆಪ್ಪ ಜಾಲಿಬೆಂಚಿ, ರಾಯಪ್ಪ ಸಾಲಿಮನಿ, ಹೊನ್ನಪ್ಪ ಗಂಗಾನಾಳ, ಶರಣರೆಡ್ಡಿ, ದೇವಿಂದ್ರಪ್ಪ ಗೌಡೂರ, ಜಯರಡ್ಡಿ ಹೊಸ್ಮನಿ, ಚಂದ್ರು ಬೇವಿನಹಳ್ಳಿ, ರಾವುತ್ತಪ್ಪ ತಳವಾರ, ಅಶೋಕ ಹೊಸ್ಮನಿ ಅವರು ತಹಶೀಲ್ದಾರ ಮುಖಾಂತರ ಸಿಎಂ ಯಡಿಯೂರಪ್ಪ ನವರಿಗೆ ಮನವಿ ಪತ್ರ ಸಲ್ಲಿಸಿದರು.