ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗೆ ಎಐಟಿಯುಸಿ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆಗೆ ಎಐಟಿಯುಸಿ ಪ್ರತಿಭಟನೆ
yadgiri, ಶಹಾಪುರಃ ಸ್ಕೀಮ್ ವರ್ಕರ್‍ಗಳನ್ನು ಖಾಯಂ ಕಾರ್ಮಿಕರೆಂದು ಪರಿಗಣಿಸಲು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಸಂಘಟನೆಗಳ ಜಂಟಿ ಸಮಿತಿಯಿಂದ ನಗರದ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಜಗನ್ನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಸಂಚಾಲಕ ಜೈಲಾಲ ತೋಟದಮನಿ, ದೇಶದ ಕೇಂದ್ರ ಕಾರ್ಮಿಕ ಸಂಘಟನೆಗಳು ಯೋಜನಾ ಕಾರ್ಮಿಕರ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಗಮನ ಸೆಳೆಯುತ್ತಲೇ ಬಂದಿವೆ. ಆದಾಗ್ಯು ಸರ್ಕಾರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಕಾಲದಲ್ಲಿ ಯೋಜನಾ ಕಾರ್ಮಿಕರು ಅದರಲ್ಲೂ ವಿಶೇಷವಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ)ಕಾರ್ಯಕರ್ತರು ಹಾಗೂ ಆರೋಗ್ಯ ಕ್ಷೇತ್ರದಲ್ಲಿರುವ ಇತರರು ಕರೋನಾ ವಿರುದ್ಧದ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದಾರೆ.
ತಳಮಟ್ಟದ ಕೆಲಸಗಾರರಾದ ಇವರಿಗೆ ಯಾವುದೇ ಸಮರ್ಪಕ ಸುರಕ್ಷತೆ ಒದಗಿಸಿಲ್ಲ. ಈ ಸಂದರ್ಭದಲ್ಲಿ ಅಸುರಕ್ಷತೆಯಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರಧಾರಿಗಳಾದ ಇವರಿಗೆ ಸುರಕ್ಷೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರ ಸಂಘಟನೆಗಳು ಹೋರಾಟ ಮಾಡುತ್ತಲೇ ಬರುತ್ತಿವೆ ಆದರೆ ಯಾವುದೇ ಸ್ಪಂಧನೆ ನೀಡಿರುವದಿಲ್ಲಿ. ಕೂಡಲೇ ಸರ್ಕಾರ ಇಂತಹ ಕಾರ್ಮಿಕರ ಕೆಲಸಗಾರರಿಗೆ ಮಾಸಿಕ 21 ಸಾವಿರ ವೇತನ ನೀಡಬೇಕು. ಅಲ್ಲದೆ ಮಾಸಿಕ 10 ಸಾವಿರ ಪಿಂಚಣಿ ನೀಡುವ ಜೊತೆಗೆ ಹಲವು ಸಮಸ್ಯೆಗಳನ್ನು ಪರಿಹರಿಸಿ ಅನುಕೂಲ ಕಲ್ಪಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಇದುವರೆಗೂ ಕೋವಿಡ್-19 ನಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ 5 ಜನ ಅಂಗನವಾಡಿ ನೌಕರರು, ಇಬ್ಬರು ಆಶಾ ಕಾರ್ಯಕರ್ತೆಯರು ಈಗಾಗಲೇ ಮರಣ ಹೊಂದಿದ್ದಾರೆ. ಮತ್ತು ಸುಮಾರು 35 ಜನರು ಸೋಂಕಿತರಾಗಿದ್ದಾರೆ. ಮಾತ್ರವಲ್ಲದೇ ಕೆಲಸದ ಒತ್ತಡಗಳಿಂದ 23 ಜನ ನೌಕರರು ನಿಧನರಾಗಿದ್ದಾರೆ. ಇವರಿಗೆಲ್ಲ ತಕ್ಷಣ ಸೂಕ್ತ ಪರಿಹಾರ ಒದಗಿಸಿಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ತಾಲ್ಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಅಂಗನವಾಡಿ ನೌಕರರ ಸಂಘದ ತಾಲ್ಲೂಕ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಸುನಂದಾ ಹಿರೇಮಠ, ತಾಲ್ಲೂಕ ಕಾರ್ಯದರ್ಶಿ ಈರಮ್ಮ ಹಯ್ಯಾಳಕರ್, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ದೇವಕಿ, ಎ.ಆಯ್.ಟಿ.ಯು.ಸಿ.ಯ ಬಸಮ್ಮ ತಡಿಬಿಡಿ, ಗಂಗಮ್ಮ ಕುರಕುಂದಿ, ಮಂಜುಳಾ ಹೊಸಮನಿ, ಯಲ್ಲಮ್ಮ, ಬೇಬಿ ಇಂದ್ರಾ, ಸಿದ್ದಮ್ಮ, ಕಾರ್ಮಿಕ ಮುಖಂಡ ದಾವಲಸಾಬ ನದಾಫ್, ರೈತ ಮುಖಂಡರಾದ ಎಸ್.ಎಂ.ಸಾಗರ, ಬಸವರಾಜ ಭಜಂತ್ರಿ, ಮರಲಿಂಗಪ್ಪ ನಾಗನಟಗಿ ಇತರರಿದ್ದರು.