ಪುಂಡರಿಕ ಭಕ್ತ ಪುಂಡರಿಕನಾದ ಹೇಗೆ ಗೊತ್ತಾ.?
ದಿನಕ್ಕೊಂದು ಕಥೆ
ಹಿಂದಕ್ಕೆ ಪಂಢರಾಪುರದಲ್ಲಿ ಪುಂಡರೀಕ ಎಂಬ ಒಬ್ಬ ಬ್ರಾಹ್ಮಣನಿದ್ದ , ಅತ ಪರಮ ಅಯೋಗ್ಯ , ಕಠಿಣ ಚಿತ್ತವೃತ್ತಿಉಳ್ಳವ , ಮಾತಾಪಿತೃಗಳ ದ್ರೋಹಿ ಆಗಿದ್ದ . ಒಂದು ದಿವಸ ಆ ಊರಿನ ಆಸ್ತಿಕ ಜನರೆಲ್ಲರೂ ಕೂಡಿ ಕಾಶೀಕ್ಷೇತ್ರದ, ಗಂಗಾನದಿಯ ಮಹಿಮೆಯನ್ನು ಕೇಳಬೇಕೆಂದು ನಿಶ್ಚಯಿಸಿ ಒಬ್ಬ ಶ್ರೇಷ್ಠ ಪುರಾಣಿಕರನ್ನು ಆಮಂತ್ರಿಸಿ ಪುರಾಣ ಕೇಳಲು ಸಿದ್ಧರಾದರು.
ಪುಂಡರೀಕನ ಮಡದಿಯೂ ಕಾಶೀಕ್ಷೇತ್ರದ ಹಾಗೂ ಗಂಗಾನದಿಯ ಮಹಿಮೆಯನ್ನು ಕೇಳಿ ಅದರಿಂದ ಪ್ರಭಾವಿತಳಾಗಿ ತನ್ನ ಪತಿಯನ್ನು ಒತ್ತಾಯಪೂರ್ವಕ ಒಪ್ಪಿಸಿ ಕಾಶಿಕ್ಷೇತ್ರಕ್ಕೆ ದಂಪತಿಗಳಿಬ್ಬರೂ ಹೊರಡಲು ತಯಾರಾದಾಗ ಆತನ ಮಾತಾಪಿತೃಗಳೂ ತಾವೂ ಬರ್ತೀವಿ ಅಂದ್ರೂ ಸಹ ಅವರನ್ನು ಧಿಕ್ಕರಿಸಿ ತನ್ನ ಪತ್ನಿಯೊಡನೆ ಕಾಶಿಕ್ಷೇತ್ರಕ್ಕೆ ಹೊರಟುಬಿಟ್ಟ.
ಆದರೂ ಸಹ ತಾಯಿತಂದೆಗಳು ತಮ್ಮ ಮಗನ ಮೇಲಿನ ವಾತ್ಸಲ್ಯದಿಂದ ಹಿಂದೆ ಹಿಂದೆ ತಾವೂ ಪ್ರಯಾಣ ಬೆಳೆಸಿದರು . ಅವನು ದಾರಿಯಲ್ಲಿ ಇಳಿದುಕೊಂಡ ಸ್ಥಳದಲ್ಲಿಯೇ ತಾವೂ ವಾಸ್ತವ್ಯ ಮಾಡುತ್ತಾ ತಾವು ತಂದ ಸ್ವಲ್ಪ ಆಹಾರದಲ್ಲೇ ಸ್ವಲ್ಪ ಸ್ವಲ್ಪ ತಿನ್ನುತ್ತಾ ಸಾಗ್ತಾಯಿದ್ರು , ಆದರೆ ಪುಂಡರೀಕ ಮಾತ್ರ ತನ್ನ ಪತ್ನಿಯ ಸಮೇತ ಮೃಷ್ಟಾನ್ನ ತಿಂದು ಪ್ರಯಾಣ ಮಾಡ್ತಿದ್ದ.
ಕೆಲವು ದಿವಸಗಳಾದನಂತರ ಕಾಶಿಗೆ ಸಮೀಪದಲ್ಲಿದ್ದ ಒಂದು ಗ್ರಾಮಕ್ಕೆ ಬಂದು ರಾತ್ರಿ ಒಂದು ಛತ್ರದಲ್ಲಿ ಇಳಿದಿದ್ದನು . ಅಲ್ಲಿ ಸಮೀಪದಲ್ಲೇ ಕುಕ್ಕೂಟ ಮಹರ್ಷಿಗಳ ಆಶ್ರಮ ಇದ್ದುದರಿಂದ ಯಾವಾಗ ಬೆಳಗಾದೀತೋ ಯಾವಾಗ ಅವರ ಆಶ್ರಮಕ್ಕೆ ಹೋದೀನೋ ಅಂತ ಅಲ್ಲೇ ಕಟ್ಟಯಮೇಲೆ ಕುಳಿತು ದಾರಿ ನೋಡ್ತಾಯಿದ್ದ.
ಬರೊಬ್ಬರಿ ಅರುಣೋದಯ ಕಾಲಕ್ಕೆ ಅತ್ಯಂತ ಕಪ್ಪಾದ, ಕುರೂಪಿಗಳಾದ ಸ್ತ್ರೀಯರು ಆ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸಿ, ಕಸಗುಡಿಸಿ, ಸಾರಿಸಿ ರಂಗವಲ್ಯಾದಿಗಳಿಂದ ಅಲಂಕಾರಮಾಡಿ ಹೊರಗಡೆ ಬರುವಾಗ ಆ ಸ್ತ್ರೀಯರು ದಿವ್ಯವಾದ ದೇವತಾಸ್ತ್ರೀರೂಪವುಳ್ಳವರಾಗಿ ಹೊರಬರುತ್ತಿರುವದನ್ನು ನೋಡಿ ಈ ಪುಂಡರೀಕ ಆಶ್ಚರ್ಯಚಕಿತನಾಗಿ ಕುಕ್ಕೂಟ ಮಹರ್ಷಿಗಳು ಎಲ್ಲಿದ್ದಾರೆ ಎಂದು ಕೇಳಿದಾಗ, ಇಲ್ಲೇ ಆಶ್ರಮದಲ್ಲೇ ಇದ್ದಾರೆ ನೋಡು ಎಂದಾಗ ಆ ಮಹರ್ಷಿಗಳು ಕಾಣದಾದಾಗ ಮತ್ತೆ ಆ ಸ್ತ್ರೀಯರನ್ನು ಕುರಿತು ಎಲ್ಲಿ ಮಹರ್ಷಿಗಳು ಕಾಣಸ್ತಿಲ್ಲವಲ್ಲಾ ಎಂದು ಪ್ರಶ್ನಿಸಿದಾಗ, ಹೇ ಪಾಪಿಯೇ ನಿನ್ನ ಕಣ್ಣಿಗೆ ಅವರು ಗೋಚರರಾಗುವದಿಲ್ಲ , ಅಲ್ಲೇ ತಮ್ಮ ಮಾತಾಪಿತೃಗಳ ಸೇವೆ ಮಾಡುತ್ತಿದ್ದಾರೆ ನೋಡು ಸರಿಯಾಗಿ ಎಂದು ಹೇಳಿದಾಗ, ಮತ್ತೆ ನೋಡಲಾಗಿ ಆಗಲೂ ಕಾಣಿಸಲೇಯಿಲ್ಲ.
ಮತ್ತೆ ಆ ಸ್ತ್ರೀಯರನ್ನು ಕೇಳಿದಾಗ ಹೇ ಪಾಪಿ ನಿನ್ನ ಮಾತಾಪಿತೃಗಳು ನಿನಗಾಗಿ ಇಷ್ಟುವರ್ಷ ಸಾಕಷ್ಟು ಕಷ್ಟ ಅನುಭವಿಸಿ ಸಮಾಜದಲ್ಲಿ ನಿನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಬೆಳೆಸಿ, ಇವತ್ತು ಅವರು ನಿನ್ನಿಂದ ತುಂಬಾ ಕಷ್ಟಪಡುತ್ತಿದ್ದಾರೆ, ನೀನು ನಿನ್ನ ಮಾತಾಪಿತೃಗಳನ್ನು ತಿರಸ್ಕರಿಸಿ ಮಹಾಪಾಪವನ್ನು ಕಟ್ಟಿಕೊಂಡಿರುವೆ.
ನಿನ್ನ ಜೊತೆ ಮಾತಾಡಿದರೆ ನಮಗೂ ಸಹ ಆ ಪಾಪ ಅಂಟಿಕೊಳ್ಳುವದು ಇನ್ನು ನಾವು ಹೊರಡುತ್ತೇವೆ ಎಂದು ಹೊರಡಲು ತಯಾರಾದಾಗ ಆ ಪುಂಡರೀಕನು ” ಅಮ್ಮಾ ತಾಯಂದಿರಾ ! ನೀವು ಯಾರು ? ನೋಡಿದರೆ ದೇವತಾಸ್ತ್ರೀಯರಂತೆ ಕಾಣಿಸುತ್ತಿದ್ದೀರಿ, ಆದರೆ ಈ ಆಶ್ರಮವನ್ನು ಶುದ್ಧಿ ಮಾಡಲು ಕಾರಣವೇನು.? ಎಂದು ನಾನಾ ವಿಧವಾದ ಪ್ರಶ್ನೆಗಳನ್ನು ಕೇಳಿದಾಗ , ಆ ಸ್ತ್ರೀಯರು ಇವನ ಜೊತೆ ಮಾತನಾಡಲು ಇಷ್ಟವಿಲ್ಲದಿದ್ದರೂ ಸಹ ಇವನನ್ನು ಉದ್ಧಾರಮಾಡಬೇಕೆಂದು ಯೋಚಿಸಿ ” ಹೇ ಪಾಪಿಯೇ ಕೇಳು , *ನಾವು ಗಂಗೆ ಗೋದಾವರಿ ಮೊದಲಾದ ಸಪ್ತಗಂಗೆಯರು , ನಮ್ಮಲ್ಲಿ ಅನೇಕ ಪಾಪಿಗಳು ಸ್ನಾನವನ್ನು ಮಾಡಿ ಅವರ ಪಾಪಗಳನ್ನೆಲ್ಲಾ ನಮ್ಮಲ್ಲಿ ಬಿಟ್ಟು ಹೋಗುತ್ತಾರೆ.
ಆ ಪಾಪಗಳನ್ನು ಕಳೆದುಕೊಳ್ಳುವದಕ್ಕಾಗಿ ಮಾತಾಪಿತೃಗಳ ಸೇವಾನಿರತರಾದ ಜ್ಞಾನಿಗಳಾದ ತಮ್ಮ ಜ್ಞಾನಗಂಗೆಯಲ್ಲಿ ಸಮಸ್ತ ಸದ್ಭಕ್ತರನ್ನು ಸ್ನಾನಮಾಡಿಸಿ ಪವಿತ್ರಗೊಳಿಸುವ ಆ ಮಹಾನುಭಾವರ ಸೇವಾ ಮಾಡಿ ನಮ್ಮಲ್ಲಿರುವ ಸಮಸ್ತ ಜನರ ಪಾಪದಿಂದ ಮುಕ್ತರಾಗಿ ಹೊರಟು ಹೋಗುತ್ತೇವೆ, ಪ್ರತಿನಿತ್ಯ ನಾವು ಪಾಪದಿಂದ ಕೂಡಿ ಇಲ್ಲಿ ಬರುವಾಗ ಕುರೂಪಿಗಳಾಗಿ ಬರುವೆವು , ಆ ಜ್ಞಾನಿಗಳ ಸೇವಾ ಮಾಡಿದ್ದರಿಂದ ನಮ್ಮ ನಿಜಸ್ವರೂಪವು ನಮಗೆ ಬರುವದು.
ಈ ಮಹರ್ಷಿಗಳಿಗೆ ತಮ್ಮಮಾತಾಪಿತೃಗಳ ಸೇವಾದಿಂದಲೇ ಭಗವದ್ವಿಷಯಕ ಜ್ಞಾನ ಬಂದಿರುವದು. ಕೀರ್ತಿಯೂ ಬಂದಿರುವದು . ನೀನು ನಿನ್ನ ಮಾತಾಪಿತೃಗಳ ಸೇವಾ ಎಂಬ ಮುಖ್ಯವಾದ ಧರ್ಮವನ್ನೇ ಬಿಟ್ಟು ಯಾವ ಕಾಶಿಗಾಗಲೀ ಬದರಿಗಾಗಲಿ , ಯಾವುದೇ ತೀರ್ಥಕ್ಷೇತ್ರಗಳಿಗೆ ಹೋದರೂ ಏನೂ ಪ್ರಯೋಜನವಿಲ್ಲ ಎಂದು ಹೇಳಿದಾಗ ಆಗಿಂದಾಗಲೇ ತನ್ನ ತಪ್ಪಿನ ಅರಿವಾಗಿ ಅಲ್ಲಿಯೇ ಇರುವ ತನ್ನ ಮಾತಾಪಿತೃಗಳನ್ನ ತನ್ನ ಊರಿಗೆ ಕರದುಕೊಂಡು ಬಂದು ನಿರಂತರ ಅವರ ಸೇವೆಯಲ್ಲೇ ನಿರತನಾಗಿ ವಿಠ್ಠಲನನ್ನು ಪ್ರತ್ಯಕ್ಷೀಕರಿಸಿಕೊಂಡು *ಭಕ್ತಪುಂಡರೀಕ* ಎಂದು ಪ್ರಸಿದ್ಧಿಯಾದ.
ಇದನ್ನೇ ನಮ್ಮ ಮಾನವೀ ಪ್ರಭುಗಳು –
*ಇಟ್ಡಕಲ್ಲನು ಭಕುತಿಯಿಂದಲಿ*
*ಕೊಟ್ಟ ಭಕುತಗೆ ಮೆಚ್ಚಿ ತನ್ನನು ಕೊಟ್ಟ* ಎಂಬುದಾಗಿ ತುಂಬಾ ಮಾರ್ಮಿಕವಾಗಿ ಸ್ಪಷ್ಟಪಡಿಸಿದ್ದಾರೆ .
ಆದ್ದರಿಂದ ಗಂಗಾದಿನದ್ಯಾಭಿಮಾನಿ ದೇವತೆಗಳು ತಮ್ಮ ಪಾವಿತ್ರ್ಯವನ್ನು ಎಲ್ಲಿ ಹೆಚ್ಚಿಸಿಕೊಳ್ತಾವು ಅಂದ್ರ , ಎಲ್ಲಿ ವರ್ಣಾಶ್ರಮೋಚಿತ ಧರ್ಮಗಳು ಸರಿಯಾಗಿ ನಡೆದಿವೆಯೋ , ಎಲ್ಲಿ ಭಕ್ತಿಭರಿತವಾದ ಜ್ಞಾನ ಯಜ್ಞ ನಡೆದಿರುತ್ತದೋ ಅಲ್ಲಿ ತಾವಾಗಿಯೇ ಬಂದು ಪಾವಿತ್ರ್ಯವನ್ನು ಪಡೆದುಕೊಂಡು ಹೋಗುತ್ತಾರೆ.
ಇದನ್ನೇ ವಿಷ್ಣುಸಹಸ್ರನಾಮದಲ್ಲಿ *ಪವಿತ್ರಾಣಾಂ ಪವಿತ್ರಂ ಯೋ ಮಂಗಲನಾಂ ಚ ಮಂಗಲಂ* ಎಂಬುದಾಗಿ ತಿಳಿಸುತ್ತಾ , ಎಲ್ಲಪವಿತ್ರ ವಸ್ತುಗಳಿಗೂ ಪಾವಿತ್ರ್ಯವನ್ನು ಕರುಣಿಸುವವನು ಭಗವಂತ , ಆ ಭಗವಂತ ನಮಗೆ ಅನುಶಾಸನ ರೂಪದಲ್ಲಿ ಹೇಳಿದ ನಮ್ಮ ನಮ್ಮ ವಿಹಿತ ಧರ್ಮಗಳನ್ನು , ಅದಕ್ಕೂ ಪೂರ್ವದಲ್ಲಿ ನಮ್ಮ ನಮ್ಮ ತಾಯಿತಂದೆಗಳ ಸೇವೆಯನ್ನು ಅತ್ಯಂತ ಭಕ್ತಿಪ್ರೀತ್ಯಾದರಗಳಿಂದ ಮಾಡುವದೇ ಭಗವಂತನಿಗೆ ಹೆಚ್ಚುಪ್ರೀತಿ ಅದರಿಂದಲೇ ನಮಗೆ ಜ್ಞಾನ ಪ್ರಾಪ್ತಿ , ಆ ಜ್ಞಾನಯುಕ್ತ ಭಕ್ತಿಯಿಂದಲೇ ಭಗವಂತನ ಪ್ರಸಾದ ಪ್ರಾಪ್ತಿಯಾಗುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882