ಅಂಕಣ

ಅಂತಃಕರಣದ “ಗುರು ಆನಂದ” ಸಾಸನೂರ – ಹಾರಣಗೇರಾ ಬರಹ

ಪ್ರೀತಿಯ ಅಂತಃಕರಣದ ಗುರು ಆನಂದಕುಮಾರ ಸಾಸನೂರ

-ರಾಘವೇಂದ್ರ ಹಾರಣಗೇರಾ

“ಪ್ರೀತಿ ಎಂದರೆ ಇನ್ನೇನೂ ಅಲ್ಲ, ಒಳ್ಳೆತನ ಅಷ್ಟೇ. ಏಕೆಂದರೆ ನಮ್ಮೆಲ್ಲರಿಗೂ ಇದು ಅರ್ಥವಾಗುತ್ತದೆ. ಆದರೆ ಈ ಪ್ರೀತಿ ಎನ್ನುವ ದಿವ್ಯವಾದ ವಸ್ತುವು ಕೇವಲ ಪದಗಳಲ್ಲಿ ಮಾತ್ರ ಸಿಕ್ಕುವುದಿಲ್ಲ. ಇನ್ನೊಬ್ಬರ ಒಳಿತಿಗಾಗಿ ನಾವು ಮಾಡುವ ಕೆಲಸಗಳಲ್ಲಿ ಇದು ಅಡಗಿರುತ್ತದೆ ” ಲಿಯೋ ಟಾಲ್ಸ್ಟಾಯ್ ಅವರ ಈ ಚಿಂತನೆ ಪ್ರೀತಿಯ ಅಂತಃಕರಣದ ಗುರು ಆನಂದಕುಮಾರ ಸಾಸನೂರ ಅವರಿಗೆ ತುಂಬಾ ಅನ್ವಯಿಸುತ್ತದೆ.

ಬದುಕಿನಲ್ಲಿ ಹಲವಾರು ವೈರುದ್ಯತೆಗಳನ್ನು, ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿದ ಅವರು ಅವುಗಳಿಗೆ ಹೆದರದೆ, ಹತಾಶೆರಾಗದೆ, ಅವೆಲ್ಲವುಗಳನ್ನು ದೈರ್ಯದಿಂದ, ತಾಳ್ಮೆಯಿಂದ ಎದುರಿಸು ಗಟ್ಟಿಯಾಗಿ ಬೆಳೆದು ಬದುಕು ಕಟ್ಟಿಕೊಂಡವರು. ಯಾರಲ್ಲಿಯೂ ವೈರತ್ವ ಸಾಧಿಸದೆ, ಇತರರ ನಿಂದನೆಗಳಿಗೆ ವಿಚಲಿತರಾಗದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತ ಗಟ್ಟಿಯಾಗಿ ಬದುಕಿನ ಹೆಜ್ಜೆಗಳನ್ನು ಹಾಕಿದವರು.

ಪ್ರಸ್ತುತ ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದಕುಮಾರ ಸಾಸನೂರ ಅವರು ವಿದ್ಯಾರ್ಥಿಗಳ ಹಿತಚಿಂತಕರು ಹಾಗೂ ಅಪಾರ ಕಾಳಜಿ ಹೊಂದಿದ್ದಾರೆ.

ಪಠ್ಯ ಬೋಧನೆಯ ಜೊತೆಗೆ ಶಿಕ್ಷಣ ಕಲಿಕೆಗೆ ಭಿನ್ನ ಸಂಸ್ಕೃತಿ, ಪರಿಸರಗಳಿಂದ ಬಂದಿರುವ ವಿದ್ಯಾರ್ಥಿಗಳ ಬದುಕನ್ನು ಹಸನಾಗಿಸಲು, ಉಜ್ವಲ ಭವಿಷ್ಯ ಕಂಡುಕೊಳ್ಳಲು ಅವರಲ್ಲಿ ಜೀವನದ ಮೌಲ್ಯಗಳನ್ನು ಬಿತ್ತುತ್ತಾ, ಒಳ್ಳೆಯ ಕಲಿಕಾ ವಾತಾವರಣದ ನಿರ್ಮಿಸಲು ತುಂಬಾ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯ, ಪ್ರತಿಭೆ, ವಿಶಿಷ್ಟ ಅಭಿರುಚಿಗಳನ್ನು ಬೆಳೆಸಲು ಮತ್ತು ಅವರಲ್ಲಿ ಕಲಿಕಾಸಕ್ತಿ ಮೂಡಿಸಲು ಹಲವಾರು ಸೃಜನಾತ್ಮಕ ಕಾರ್ಯಚಟುವಟಿಕೆಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತ ಅವರಿಗೆ ಸಹಾಯ, ಸಹಾಕಾರ ನೀಡಿ ಓದಿಗೆ ಪ್ರೋತ್ಸಾಹ ಮಾರ್ಗದರ್ಶನ ಮಾಡುತ್ತಿರುವ ಮಾನವೀಯ ಮಮತೆಯ ಅಧ್ಯಾಪಕರಾಗಿದ್ದಾರೆ. ಕಳೆದ ಒಂದು ದಶಕದಿಂದ ಅವರೊಂದಿಗೆ ಅವರ ವಿದ್ಯಾರ್ಥಿಯಾಗಿ, ಅವರ ಕಿರಿಯ ಸಹೋದರನಾಗಿ, ಕಿರಿಯ ಅಧ್ಯಾಪಕನಾಗಿ ಶಿಕ್ಷಣ, ಸಾಹಿತ್ಯದ ಒಡನಾಟದಲ್ಲಿರುವ ನಾನು ಅವರಿಂದ ಅನೇಕ ರೀತಿಯ ಜ್ಞಾನವನ್ನು ಪಡೆದುಕೊಂಡಿದ್ದೆನೆ.

ಆನಂದಕುಮಾರ ಸಾಸನೂರ ಅವರು ಶಹಾಪುರದ ಶೈಕ್ಷಣಿಕ ಪರಿಸರದಲ್ಲಿ ಪ್ರತಿಷ್ಠಿತ ಸಾಸನೂರ ಮನೆತನದ ಶ್ರೀ ಮಲ್ಲೇಶಪ್ಪ ಸಾಸನೂರ ಮತ್ತು ಶ್ರೀಮತಿ ಬಾಳಮ್ಮ ಸಾಸನೂರ ಸುಸಂಸ್ಕೃತ ದಂಪತಿಗಳ ಸುಪುತ್ರರರಾಗಿದ್ದಾರೆ‌.

ತಂದೆ ಮಲ್ಲೆಶಪ್ಪ ಸಾಸನೂರ ಅವರು ಶೈಕ್ಷಣಿ ಕ್ಷೇತ್ರದಲ್ಲಿ ಎಮ್.ಪಿ. ಸಾಸನೂರ ಎಂದೇ ಪ್ರಸಿದ್ದಿ ಪಡೆದವರು. ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ, ಪ್ರಾಂಶುಪಾಲರಾಗಿ ವೃತ್ತಿ ಬದ್ದತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.

ಆನಂದಕುಮಾರ ಸಾಸನೂರ ಅವರು ಗುರುಮಿಠಕಲ್, ತಾಳಿಕೋಟೆ, ರಂಗಂಪೇಟ, ಶಹಾಪುರ, ಕಲ್ಬುರ್ಗಿಯ ಭಾರತೀಯ ವಿದ್ಯಾಕೇಂದ್ರ ಮುಂತಾದವುಗಳ ಕಡೆ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದರು. ಕಲ್ಬುರ್ಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಎನ್. ವಿ ಕಾಲೇಜಿನಲ್ಲಿ ಪಿ.ಯು ಶಿಕ್ಷಣ ಅದ್ಯಯನ ಮಾಡಿದ ಅವರು ಶರಣಬಸವೇಶ್ವರ ಪದವಿ ಕಾಲೇಜಿನಲ್ಲಿ ಪದವಿ ಅದ್ಯಯನ ಪೂರೈಸಿದ ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದಲ್ಲಿ ಆಂಗ್ಲ ಭಾಷೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಪಿ.ಯು.ಸಿ.ಯಲ್ಲಿ ನಾಲ್ಕು ಬಾರಿ ಫೇಲಾದರೂ ಚಿಂತೆ ಮಾಡದೇ, ದೈರ್ಯಗುಂದದೆ ಪುನಃ ಪ್ರಯತ್ನ ಮಾಡಿ ಅದ್ಯಯನ ಮಾಡಿ ಉತ್ತೀರ್ಣರಾದರು. ಇದು ಇಂದು ಫೇಲಾಗಿದ್ದಕ್ಕೆ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. 2003 ರಲ್ಲಿ ಶಹಾಪುರದ ಸಿ. ಬಿ. ಕಾಲೇಜಿನಲ್ಲಿ ಆಂಗ್ಲ ಭಾಷೆಯ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು.

ನಂತರ 2009 ರಲ್ಲಿ ಸರ್ಕಾರದಿಂದ ಆಂಗ್ಲ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡು ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ವಿನಯವಾಣಿ ಆನ ಲೈನ್ ಪತ್ರಿಕೆ ಆನಂದಕುಮಾರ ಸಾಸನೂರ ಅವರ ಬದುಕಿನ ಕಥನವನ್ನು ಅನೇಕ ಸರಣಿಯಲ್ಲಿ ಪ್ರಕಟಿಸಿತು. ಯಾವುದೇ ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಬೆಳೆದಾಗ ಅದರಿಂದಾಚೆಗೆ ಆ ವ್ಯಕ್ತಿಯನ್ನಿಟ್ಟು ನೋಡಬೇಕು. ಆ ವ್ಯಕ್ತಿಯ ಬೆಳೆದ ಪರಿಸರ, ಬದುಕಿದ ರೀತಿ, ಅವರ ಕೆಲಸ, ಕಾರ್ಯಗಳು, ಆಸಕ್ತಿಗಳು, ಹವ್ಯಾಸಗಳು, ಎದುರಿಸಿದ ಸಮಸ್ಯೆಗಳು ಇವೆಲ್ಲವೂಗಳೊಂದಿಗೆ ಅವರು ಸುಂದರ ಬದುಕನ್ನು ಹೇಗೆ ರೂಪಿಸಿಕೊಂಡರು ಎಂಬುದನ್ನು ಅರ್ಥವಾಗುತ್ತದೆ.

ಈ ಎಲ್ಲಾ ಸಂಗತಿಗಳಿಗೆ ವಿಶೇಷ ಅರ್ಥ ಬರುತ್ತದೆ. ಕೆಲವು ಸತ್ಯಗಳು ತಿಳಿಯುತ್ತವೆ. ಇಂತಹ ಒಳ್ಳೆಯ ಪ್ರಯತ್ನ ವಿನಯವಾಣಿ ಮಾಡಿದೆ. ಸರಣಿ ಪ್ರಕಟಿಸಿದ ವಿನಯವಾಣಿ ಪತ್ರಿಕೆಯ ಸಂಪಾದಕರಾದ ಮಲ್ಲಿಕಾರ್ಜುನ ಮೂದ್ನುರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಆನಂದಕುಮಾರ ಸಾಸನೂರ ಅವರು ಉಪನ್ಯಾಸಕ ವೃತ್ತಿಗೆ ಬರುವುದಕ್ಕಿಂತ ಮುಂಚೆ ತಮ್ಮ ಅದ್ಯಯನದ ಜೊತೆಗೆ ಬೇರೆಯವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ್ದಾರೆ. ನಂತರ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡು ದುಡಿದಿದ್ದಾರೆ.

ಪ್ರಜಾವಾಣಿ ಪತ್ರಿಕೆಯಲ್ಲಿ, ಈ ಟೀವಿಯಲ್ಲಿ, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಕೆಲಸವನ್ನು ಅವರು ಕೀಳಾಗಿ ಕಾಣದೆ ಪ್ರತಿಯೊಂದು ಕೆಲಸವನ್ನು ಪ್ರೀತಿಸುವ, ಗೌರವಿಸುವ ಕಾಯಕ ಪ್ರೇಮಿಯಾಗಿ ಸ್ವಾಭಿಮಾನದ ಬದುಕನ್ನು ಸಾಗಿಸಿದವರು.

ಪ್ರತಿಭಾವಂತ ಪ್ರಾಧ್ಯಾಪಕರಾದ ಆನಂದಕುಮಾರ ಸಾಸನೂರ ಅವರು ಆಂಗ್ಲ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು. ಅನೇಕ ಸಂದರ್ಭದಲ್ಲಿ ಆಂಗ್ಲ ಸಾಹಿತ್ಯದ ಅನೇಕ ಕಾವ್ಯಗಳನ್ನು, ನಾಟಕಗಳನ್ನು ಕುರಿತು ಕಣ್ಣಿಗೆ ಕಟ್ಟುವಂತೆ ನನಗೆ ಹೇಳಿದ್ದಾರೆ. ಆಂಗ್ಲ ಭಾಷೆಯಲ್ಲಿ ಬಹಳಷ್ಟು ಪ್ರಬುದ್ದತೆ ಹೊಂದಿರುವ ಅವರ ಜ್ಞಾನ, ತಿಳುವಳಿಕೆ ನನ್ನ ಓದನ್ನು ಮತ್ತು ಅರಿವು, ಹರುವು ವಿಸ್ತರಿಸಿದೆ.

ಈಗಲೂ ನನಗೆ ಸಮಯ ಸಿಕ್ಕಾಗ ಅವರ ಪಾಠವನ್ನು ವಿದ್ಯಾರ್ಥಿಗಳೊಂದಿಗೆ ಕುಳಿತು ಕೇಳುತ್ತೆನೆ. ಅವರ ಭೋದನಾ ಶೈಲಿ, ವಿಷಯದ ಪ್ರಬುದ್ಧತೆ, ವಿಶ್ಲೇಷಣೆ, ಗಾಂಭಿರ್ಯತೆ ನನಗೆ ಮಾದರಿ ಹಾಗೂ ಅನುಕರಣೀಯವಾಗಿದೆ. ವಿದ್ಯಾರ್ಥಿಗಳೊಂದಿಗೆ ಅವರು ಸ್ನೇಹಿತರಾಗುವುದರ ಮೂಲಕ ಅವರ ಕಲಿಕೆಯ ವಿಷಯದಲ್ಲಿ ಅಭಿರುಚಿ ಮೂಡಿಸುತ್ತಾರೆ.

ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ನಿರೇರೆದು ಪೋಷಿಸಿದವರು. ಪ್ರತಿಭೆಗಳನ್ನು ಅರಳಲು ಪ್ರೇರಣೆ ನೀಡುತ್ತಾರೆ. ಅಪಾರವಾದ ಜ್ಞಾನ, ಬುದ್ಧಿವಂತಿಕೆ ಇದ್ದರೂ ಸಹ ಅದನ್ನು ಎಂದಿಗೂ ತೊರ್ಪಡಿಸದೆ ಇತರರ ಜ್ಞಾನಕ್ಕೆ, ಚಿಂತನೆ, ಅಭಿಪ್ರಾಯಗಳಿಗೆ ಗೌರವದಿಂದ ಕಾಣುವ ವಿನಯವಂತರು. ಯಾವುದೇ ಬಿಗುಮಾನ, ಬಿಗುವುಗಳಿಲ್ಲದ ಸರಳ, ಸಜ್ಜಕೆಯ ಸೌಜನ್ಯಮೂರ್ತಿ. ಯಾವುದೇ ಸ್ಥಾನಮಾನಗಳನ್ನು ಬಯಸಿದವರಲ್ಲ.

ಕೆಲವು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾದಾಗ ಗೌರವದಿಂದ ಅದನ್ನು ಹೇಳಿ ಅಲ್ಲಿಂದ ಹೊರಬಂದವರು. ಯಾರು ಊಹಿಸದ ರೀತಿಯಲ್ಲಿ ಬದುಕು ಕಟ್ಟಿಕೊಂಡವರು. ಸಂವೇದನೆಯ ದೃಷ್ಟಿಕೋನ ಹೊಂದಿರುವ ಆನಂದಕುಮಾರ ಸಾಸನೂರ ಅವರು ಸಾಹಿತ್ಯಕ, ಸಾಂಸ್ಕೃತಿಕ ಕಾಳಜಿಗಳನ್ನು ಇಟ್ಟುಕೊಂಡು ಅನೇಕ ಕಾರ್ಯಚಟುವಟಿಕೆಗೆ ಪ್ರೋತ್ಸಾಹ ನೀಡಿದ್ದಾರೆ.

ನನ್ನಂತಹ ಅನೇಕ ಯುವ ಬರಹಗಾರರ ಬರಹಗಳನ್ನು ಓದಿ ಪ್ರೊತ್ಸಾಹಿಸಿದ್ದಾರೆ. ತಮ್ಮ ಆಪ್ತ ವಲಯದಲ್ಲಿ ಸೇರಿಸಿಕೊಂಡು ಸೌಜನ್ಯ ಮೆರೆದಿದ್ದಾರೆ. ಸೂಕ್ಷ್ಮ ಸಂವೇದನೆಯ ಕವಿಯಾಗಿರುವ ಆನಂದಕುಮಾರ ಸಾಸನೂರ ಅವರು ಮೌಲಿಕ ಕಾವ್ಯ, ಗಜಲ, ಹನಿಗವನ ಮುಂತಾದ ಕಾವ್ಯ ಪ್ರಕಾರಗಳ ಬರಹಗಳಲ್ಲಿ ತಮ್ಮನ್ನು ತಾವು ತುಂಬಾ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದ್ದಾರೆ.

ಆದಷ್ಟೂ ಬೇಗನೆ ಅವರ ಬರಹಗಳು ಪುಸ್ತಕ ರೂಪದಲ್ಲಿ ಹೊರಬರಲಿ ಎಂದು ಆಶಿಸುತ್ತೇವೆ. ವರ್ಗದ ಕೋಣೆಯಲ್ಲಿ ಗಾಂಭೀರ್ಯತೆ ಕಾಯ್ದುಕೊಳ್ಳುವ ಆನಂದಕುಮಾರ ಸಾಸನೂರ ಅವರು ಹೊರಬಂದಾಗ ತಾವು ಅಧ್ಯಾಪಕರೆಂಬುದು ಮರೆತು ಸ್ನೇಹಿತರಾಗಿ ವಿದ್ಯಾರ್ಥಿಗಳ ಸುಖ ದುಃಖ ವಿಚಾರಿಸುತ್ತ ಸಮಸ್ಯೆಗಳಿಗೆ ಸ್ಪಂದಿಸುವ ಸಹೃದಯಿಯಾಗಿದ್ದಾರೆ.

ನೇರ, ದಿಟ್ಟ ನಿಲುವು, ಗಂಭೀರ ಸ್ವಭಾವದ ಹೃದಯ ಶ್ರೀಮಂತಿಕೆಯ, ಸ್ವಾಭಿಮಾನದ ಸಾತ್ವಿಕ, ಮುಕ್ತ ಮನಸ್ಸಿನ ನಿರಾಡಂಬರ ವ್ಯಕ್ತಿ. ಹೊಗಳಿಕೆ, ತೆಗಳಿಕೆಗೆ ತಲೆಕೆಡಿಸಿಕೊಳ್ಳದೆ ತಮ್ಮ ಮನ ಮೆಚ್ಚವಂತೆ ನಡೆಯುವ ದೂರದೃಷ್ಟಿಯ ಅದ್ಯಾಪಕರು. ತಮ್ಮ ವೃತ್ತಿ ಬದ್ದತೆ, ಗೌರವ, ಔಚಿತ್ಯ ಅರಿತುಕೊಂಡು ತಮ್ಮ ಅಧ್ಯಾಪನ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಬೆಳೆಯಲು, ಪ್ರಜ್ಞಾವಂತರಾಗಲು, ಗುರಿಯ ಕಡೆಗೆ ಹೆಚ್ಚು ಗಮನ ಹರಿಸಲು ಮಾರ್ಗದರ್ಶನ ಮಾಡುತ್ತಿರುವ, ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಿರುವ, ಪ್ರೇರಕ ಶಕ್ತಿಯಾಗಿರುವ ಆನಂದಕುಮಾರ ಸಾಸನೂರ ಅವರು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿನೂತನವಾದುದ್ದನ್ನು ಸಾಧಿಸಲಿ. ಇಂತಹ ಪ್ರೀತಿಯ ಅಂತಃಕರಣದ ಅಧ್ಯಾಪಕರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಲಿ ಎಂದು ಆಶಿಸೋಣ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

2 Comments

  1. ನಿಮ್ಮ ಆತ್ಮೀಯತೆಗೆ ಸದಾ ಋಣಿಯಾಗಿರುವೆ ಸಹೋದರ.

Leave a Reply

Your email address will not be published. Required fields are marked *

Back to top button