ಉದ್ಯಮ ಶೀಲತಾ ಯೋಜನೆ ಸಬ್ಸಿಡಿ ಕಡಿತ ದಸಂಸ ಧರಣಿ
ಯಾದಗಿರಿಃ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಡಿಯಲ್ಲಿ ನೀಡಲಾಗುವ ವಿವಿಧ ಉದ್ಯಮಶೀಲತಾ ಯೋಜನೆಯಡಿ ನೀಡಲಾಗುವ ಸಾಲದಲ್ಲಿ ಸಬ್ಸಿಡಿ ಅನುದಾನವನ್ನು ಶೇ. 75 ರಷ್ಟು ಕಡಿತಗೊಳಿಸಿರುವ ಸರ್ಕಾರದ ಕ್ರಮ ಸರಿಯಲ್ಲ ಇದನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿವಾಸದ ಎದುರಿಗೆ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು, ಸರ್ಕಾರ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತಿದ್ದ ಫಲಾನುಭವಿಗಳ ಸಬ್ಸಿಡಿ ಮೊತ್ತವನ್ನು ಐದು ಲಕ್ಷದಿಂದ ಒಂದು ಲಕ್ಷದ ವರೆಗೆ ಇಳಿಕೆ ಮಾಡಿರುವುದು ತೀರ ಅನ್ಯಾಯವಾಗಿದ್ದು, ಇದನ್ನು ಕೂಡಲೇ ಕೈಬಿಟ್ಟು ಎಂದಿನಂತೆ ಸಬ್ಸಿಡಿ ನೀಡಬೇಕು. ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.
ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಸರ್ಕಾರ ಸ್ವಯಂ ಉದ್ಯೋಗ ಕೈಗೊಳ್ಳುವ ದಲಿತರಿಗೆ ನಿಡುತ್ತಿದ್ದ ಸಬ್ಸಿಡಿ ಅನುದಾನದಲ್ಲಿ ಶೇ. 75 ರಷ್ಟು ಕಡಿತಗೊಳಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಕೂಡಲೇ ಸರ್ಕಾರ ಕ್ರಮ ಕೈಬಿಟ್ಟು ಎಂದಿನಂತೆ ಸಬ್ಸಿಡಿ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದ ಮನವಿಯನ್ನು ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಸಲ್ಲಿಸಿದರು. ಶಾಸಕರ ಪರವಾಗಿ ಆಪ್ತಕಾರ್ಯದರ್ಶಿ ಸುಧೀರ ಪಾಟೀಲ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಟ್ಟೆಪ್ಪ ನಾಗರಾಳ, ನಿಂಗಪ್ಪ ಕಟಿಗಿ ಶಹಾಪೂರ, ಬುದ್ಧಿವಂತ ನಾಗರಾಳ, ಮಲ್ಲಿಕಾರ್ಜುನ ಕುರಕುಂದಿ, ಚಂದ್ರಕಾಂತ ಹಂಪಿನ, ತಿಪ್ಪಣ್ಣ ಶೆಳ್ಳಗಿ, ಮರಲಿಂಗಪ್ಪ ಹುಣಸಿಹೊಳೆ, ಮಲ್ಲಿಕಾರ್ಜುನ ಉಕ್ಕಿನಾಳ, ಮಲ್ಲಿಕಾರ್ಜುನ ಆಶನಾಳ, ಮಲ್ಲಿಕಾರ್ಜುನ ಮಳ್ಳಳ್ಳಿ, ಬಸವರಾಜ ಗೋನಾಲ, ಮಹಿಮೂದಸಾಬ ನಾಯಿಕೋಡಿ, ಶರಣಪ್ಪ ಉಳ್ಳೆಸುಗೂರು, ಗೌತಮ ಕ್ರಾಂತಿ, ಮರೆಪ್ಪ ಹಾಲಗೇರಾ, ಬಸವರಾಜ ಕಲ್ಲದೇವನಳ್ಳಿ, ಮಲ್ಲಪ್ಪ ಖಾನಾಪೂರ, ಮಹೇಶ ಸುಂಗಲ್ಕರ್ ಇನ್ನಿತರರು ಇದ್ದರು.