ಪ್ರಶಾಂತ್ ಭೂಷಣ್ ವಿರುದ್ಧದ ತೀರ್ಪು ಹಿಂಪಡೆಗೆ ಮನವಿ
ಪ್ರಶಾಂತ್ ಭೂಷಣ್ ವಿರುದ್ಧದ ತೀರ್ಪು ಹಿಂಪಡೆಗೆ ಮನವಿ
yadgiri, ಶಹಾಪುರ: ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಪ್ರಶಾಂತ್ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ತೀರ್ಪು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ ಮಂಗಳವಾರ ಅಖಿಲ ಭಾರತ ವಕೀಲರ ಒಕ್ಕೂಟವು ತಹಶೀಲ ಕಚೇರಿಗೆ ಆಗಮಿಸಿ ತಹಶೀಲ್ದಾರ ಜಗನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿತು.
ಅಖಿಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು ವನದುರ್ಗ ಮಾತನಾಡಿ, ತೀರ್ಪು ವಾಪಸ್ಸಿಗಾಗಿ ಪ್ರಗತಿಪರ ಚಿಂತಕರು, ಸಾಹಿತಿಗಳು, ನಿವೃತ್ತ ನ್ಯಾಯಮೂರ್ತಿಗಳಿಂದ ದೇಶದಲ್ಲಿ ಹೋರಾಟ ನಡೆಯುತ್ತಲಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾ ಪ್ರಹಾರ ಮಾಡಿದೆ. ಕಾನೂನಿನಲ್ಲಿ ಎಲ್ಲರೂ ಸಮಾನರು. ಎಷ್ಟೆ ದೊಡ್ಡ ವ್ಯಕ್ತಿ ತಪ್ಪು ಮಾಡಿದ್ದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇದೆ. ಜನರ ಧ್ವನಿಯಾಗಿ ನಿರ್ಭೀತಿಯಿಂದ ಪ್ರಾಮಾಣಿಕವಾಗಿ ನ್ಯಾಯಕ್ಕಾಗಿ ಹೋರಾಟ ಮಾಡುವ ಭೂಷಣ್ ಅವರ ಮೇಲೆ ನ್ಯಾಯಾಂಗ ನಿಂದನೆ ತೀರ್ಪು ಮರು ಪರಿಶೀಲಿಸಬೇಕೆಂದು ಮನವಿ ಮಾಡಿದರು.
ಭೂಷಣ ಅವರಿಗೆ ಯಾವುದೇ ಶಿಕ್ಷೆ ನೀಡಬಾರದು. ಯಾರೇ ಇರಲಿ ಅನ್ಯಾಯದ ವಿರುದ್ಧ ಪ್ರಶ್ನಿಸುವ ಹಕ್ಕಿದೆ. ಕೆಲ ಪ್ರಕರಣದಲ್ಲಿ ಭೂಷಣವರನ್ನು ನ್ಯಾಯಾಂಗ ನಿಂದನೆಯಡಿ ಶಿಕ್ಷಿಸುವದು ಸರಿಯಲ್ಲ. ಅವರೊಬ್ಬ ಮಾನವಿಯ ಅಂತಃಕರಣದ ಹೋರಾಟಗಾರರು ಹೌದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಭಾಸ್ಕರರಾವ, ವಕೀಲರಾದ ಆರ್.ಎಂ.ಹೊನ್ನಾರಡ್ಡಿ ಮಾತನಾಡಿದರು. ಯೂಸೂಫ್ ಅತಾವುರ ರಹಿಮಾನ ಸಿದ್ದಕಿ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಮಲ್ಲಪ್ಪ ಪೂಜಾರಿ, ಮಲ್ಕಣ್ಣ ಪಾಟೀಲ್ ಕನ್ಯಾಕೊಳ್ಳೂರ, ಮಲ್ಲಿಕಾರ್ಜುನ ಬುಕ್ಕಲ, ಉಮೇಶ ಮುಡಬೂಳ, ಮಲ್ಲಿಕಾರ್ಜುನ ಹತ್ತಿಕುಣಿ, ಮಲ್ಲಿಕಾರ್ಜುನ ಕಾಳೆ, ಸಿದ್ರಾಮಪ್ಪ ತಳವಾರ, ದೊಡ್ಡೇಶ ದರ್ಶನಾಪುರ ಇದ್ದರು.