ಪ್ರಮುಖ ಸುದ್ದಿ

ಕೆಕೆಆರ್‍ಡಿಬಿ ಕಾಮಗಾರಿ ಕಾಲಮಿತಿಯಲ್ಲಿ ನಿರ್ವಹಣೆ ಮಾಡಿ :ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ

ಕೆಕೆಆರ್‍ಡಿಬಿ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ– ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾರ್ಮಗಾರಿಗಳ ನಿರ್ವಹಣೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಲವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಕೆಆರ್‍ಡಿಬಿ ಮೈಕ್ರೋ-ಮ್ಯಾಕ್ರೋ ಹಾಗೂ ಸಿಎಂಓಕ್ಯೂವ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೆಕೆಆರ್‍ಡಿಬಿ ಅನುದಾನದಡಿಯಲ್ಲಿ ವಿವಿಧ ಇಲಾಖೆಗಳ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಆಯಾ ಇಲಾಖೆಗಳಿಗೆ ರಾಜ್ಯದಿಂದ ನಿಗದಿಯಂತೆ ಬಿಡುಗಡೆಯಾಗುವ ಅನುದಾನದಲ್ಲಿ ನಿಯಮಿತ ಕಾಮಗಾರಿಗಳನ್ನು ನಡೆಸಬೇಕು. ಅದೇ ರೀತಿ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಬೇಕು. ವಿಶೇಷವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಕೊರತೆ ನೀಗಿಸಲು ಅಥಿತಿ ಶಿಕ್ಷಕರನ್ನು ನೇಮಕ ಮಾಡಿ, ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಆಧ್ಯತೆಯ ಮೂಲಕ ಕಾರ್ಯನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

2017-18ನೇ ಸಾಲಿನ ವರೆಗಿನ ಎಚ್‍ಕೆಆರ್‍ಡಿಬಿ ಯೋಜನೆಯಡಿ ಕೈಗೊಂಡು ಪ್ರಾರಂಭಿಸದ/ಪ್ರಾರಂಭಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಯಾ ಏಜೆನ್ಸಿ, ಇಲಾಖೆಗಳು ಹೆಚ್ಚಿನ ಗಮನಹರಿಸಬೇಕು. ಪ್ರಸಕ್ತ ವರ್ಷದ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿದ್ಯಾರ್ಥಿಗಳ ಅಧ್ಯಯನದ ಅನುಕೂಲಕ್ಕಾಗಿ ಪದವಿ ಕಾಲೇಜುಗಳ ಗ್ರಂಥಾಲಯಗಳಿಗೆ ವಿಷಯಾಧಾರಿತ ಪುಸ್ತಕಗಳನ್ನು ಪೂರೈಸಲು ಕೆಕೆಆರ್‍ಡಿಬಿ ಅನುದಾನದಡಿ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ. ರಜಪೂತ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನಿಲ್ ಬಿಸ್ವಾಸ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯಾದಗಿರಿ ಕೋಶದ ತಾಂತ್ರಿಕ ಸಲಹೆಗಾರ ಸಂಗಮೇಶ ಗುಬ್ಬೇವಾಡ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಭಗವಂತ ಅನವಾರ, ನಗರಸಭೆಯ ಪೌರಾಯುಕ್ತರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button