ಪ್ರಮುಖ ಸುದ್ದಿ

ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಇಂದು ವಿಧಿವಶರಾಗಿದ್ದಾರೆ. ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಬಿರ್​ಬೂಮ್ ಜಿಲ್ಲೆಯ ಮಿರತಿಯಲ್ಲಿ ಜನಿಸಿದ್ದರು. ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ನಿನ್ನೆಯಷ್ಟೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅಂತೆಯೇ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೆಲದಿನದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದು ಸೇನೆಯ ಆರ್​ಆರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ 2012ರ ಜು‌ಲೈ 25ರಿಂದ 2017ರ ಜುಲೈ 25ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ್ದ ಪ್ರಣಬ್​ ಪತ್ರಕರ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು. 1957ರ ಜುಲೈ 13ರಂದು ಶುಭಾರನ್ನು ಜತೆ ವಿವಾಹವಾಗಿದ್ದ ಪ್ರಣಬ್ ರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾರೆ.

1969ರಲ್ಲಿ ಕಾಂಗ್ರೆಸ್​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು 1975, 1981, 1993, 1999ರಲ್ಲಿ ಪುನಾರಾಯ್ಕೆಯಾಗಿದ್ದರು. 1982ರಿಂದ 1984ರವರೆಗೆ ಕೇಂದ್ರ ಹಣಕಾಸು ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರಲ್ಲದೆ ರಕ್ಷಣಾ, ಹಣಕಾಸು, ಆಂತರಿಕಾ ಭದ್ರತಾ ಇಲಾಖೆ, ಸಾರಿಗೆ, ವಾಣಿಜ್ಯ ಮತ್ತು ಉದ್ದಿಮೆ ಸಚಿವರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದ ಪ್ರಣಬ್ ಮುಖರ್ಜಿ ಅವರು 2019ರ ಜನವರಿಯಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button