ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ- ಡಿವೈಎಸ್‍ಪಿ ಹುಗಿಬಂಡಿ
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಸನ್ಮಾನ
yadgiri, ಶಹಾಪುರಃ ಪ್ರತಿಭಾವಂತ, ಸಾಧನೆಗೈದ ಮಕ್ಕಳಿಗೆ ಪ್ರೋತ್ಸಾಹ ಅಗತ್ಯವಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ನಡುವೆಯೂ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು. ಮಕ್ಕಳಿಗಾಗಿ ಆಸ್ತಿ ಅಂತಸ್ತು ಮಾಡುವ ಬದಲು ಶೈಕ್ಷಣಿಕವಾಗಿ ಅವರನ್ನು ಬೆಳೆಸಬೇಕು ಎಂದು ಡಿವೈಎಸ್‍ಪಿ ವೆಂಕಟೇಶ ಹುಗಿಬಂಡಿ ತಿಳಿಸಿದರು.
ಸಮೀಪದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ 2019-20 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನೋರಂಜನೆ ಎನ್ನುವದು ಶೈಕ್ಷಣಿಕ ವರ್ಷಗಳಲ್ಲಿ ಮಕ್ಕಳಿಗೆ ಉಪ್ಪಿನಕಾಯಿ ತರಹ ತರ ಇರಬೇಕು ಜೀವನವೇ ಮನೋರಂಜನೆಯತ್ತ ಸಾಗಬಾರದು. ಮಕ್ಕಳಿಗೆ ಓದಿನತ್ತ ಅಭಿರುಚಿ ಹುಟ್ಟಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಭೂಮಿಕಾ ತಂದೆ ಮಹೇಶ ಬಿದರಿ ಶೇ.95.52, ಮಂಜುನಾಥ ತಂದೆ ನಾಗರಾಜ ಗಂದಿಗುಡಿ ಶೇ.92.16 ಮತ್ತು ರುಚಿತಾ ಹುಸೇನಪ್ಪ ಶೇ.89.76, ಕೃತಿಕಾ ತಂದೆ ಕೃಷ್ಣಾಮೂರ್ತಿ ಶೇ.85.76 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಪೊಲೀಸ್ ಸಿಬ್ಬಂದಿ ಅಲ್ಲದೆ ಕೆಂಭಾವಿಯ ಇನ್ನೋರ್ವರ ಮಗಳು ಶೇ.98 ರಷ್ಟು ಫಲಿತಾಂಶ ಪಡೆದಿರುವ ಕಾರಣ ಗೌರವ ಧನ ನೀಡಿ ವಿದ್ಯಾರ್ಥಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುರಪುರ, ಶಹಾಪುರ ಮತ್ತು ಹುಣಸಗಿ ಸಿಪಿಐ ಸೇರಿದಂತೆ ಸುರಪುರ ಉಪವಿಭಾಗದ ಎಲ್ಲಾ ಪಿಎಸ್‍ಐ ಉಪಸ್ಥಿತರಿದ್ದರು. ಇಲಾಖೆಯ ಸಿಬ್ಬಂದಿ ಅಧಿಕಾರ ವರ್ಗ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಆಯೋಜಿಸಿ ಡಿವೈಎಸ್‍ಪಿ ಅವರ ಪೊಲೀಸ್ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿ ಸಂತಸ ಹಂಚಿಕೊಂಡರು.