ಮೌಂಟ್ ಎವರೆಸ್ಟ್ ಶಿಖರ ಏರಿದ ವ್ಯಕ್ತಿಗೆ ತೃಪ್ತಿ ದೊರೆತಿರುವೆದೆಲ್ಲಿ.? ಇದನ್ನೋದಿ
ದಿನಕ್ಕೊಂದು ಕಥೆ
ಸಾಲು ಗುರಿಗಳು
ಅಮೆರಿಕದ ಜಾರ್ಜಿಯಾ ಪ್ರಾಂತ್ಯದಲ್ಲಿದ್ದ ಹ್ಯೂ ಮಾರ್ಟನ್ ಒಬ್ಬ ಸಾಮಾನ್ಯ ವ್ಯಕ್ತಿ. ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಮೂವತ್ತಾರು ವರ್ಷದವನಿದ್ದಾಗ ಅವನು ಕಲಿತ ಶಾಲೆಯವರು ಹಳೆಯ ವಿದ್ಯಾರ್ಥಿಗಳನ್ನೆಲ್ಲ ಸಮಾರಂಭಕ್ಕೆ ಕರೆದಿದ್ದರು. ಅಲ್ಲಿ ಆತ ತನ್ನ ಹಳೆಯ ಸ್ನೇಹಿತರನ್ನೆಲ್ಲ ಭೆಟ್ಟಿಯಾದ.
ಕೆಲವರು ಬೇರೆ ಬೇರೆ ಉದ್ಯೋಗಗಳಲ್ಲಿ ತುಂಬ ಎತ್ತರಕ್ಕೇರಿದ್ದರು. ಮಾರ್ಟನ್ ಮನೆಗೆ ಬಂದು ಚಿಂತಿಸಿದ. ನನ್ನ ಗೆಳೆಯರಲ್ಲಿ ಅನೇಕರು ತುಂಬ ಸಾಧನೆ ಮಾಡಿದ್ದಾರೆ. ನಾನೇಕೆ ಹಾಗೆಯೇ ಅಲ್ಪ ತೃಪ್ತಿಯಿಂದ ಕುಳಿತುಬಿಟ್ಟೆ? ಏನಾದರೂ ಒಂದು ಗುರಿ ಸಾಧಿಸಬೇಕು ಎಂದುಕೊಂಡ.
ಮೊದಲಿಗೆ ಅತ್ಯಂತ ಸಣ್ಣ ಗುರಿ ಆಯ್ದುಕೊಂಡ. ಅವನಿಗೆ ಆಗ ಸ್ವಲ್ಪ ರಕ್ತದೊತ್ತಡ ಇತ್ತು, ತೂಕ ಹೆಚ್ಚಾಗಿತ್ತು. ಅವನು ಮೊದಲಿಗೆ ತನ್ನ ತೂಕವನ್ನು ಹತ್ತು ಕಿಲೋದಷ್ಟು ಕಡಿಮೆ ಮಾಡುವುದರೊಂದಿಗೆ ರಕ್ತದೊತ್ತಡವನ್ನು ಇಳಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ಅದಕ್ಕಾಗಿ ಶ್ರಮವಹಿಸಿ ದೂರದ ನಡಿಗೆ ಪ್ರಾರಂಭಿಸಿದ.
ನಿಧಾನವಾಗಿ ಹತ್ತಿರದ ಬೆಟ್ಟಗಳನ್ನು ಹತ್ತತೊಡಗಿದ. ಅದರಲ್ಲಿ ತುಂಬ ಆಸಕ್ತಿ ಮೂಡಿ ದೊಡ್ಡ ಪರ್ವತ ಶಿಖರಗಳನ್ನು ಏರತೊಡಗಿದ. ಒಂದಾದ ಮೇಲೊಂದರಂತೆ ಪ್ರಪಂಚದ ಎಲ್ಲ ಖಂಡಗಳ ಉನ್ನತ ಪರ್ವತ ಶಿಖರಗಳನ್ನು ಏರಿದ.
ಕೊನೆಗೆ ಭಾರತಕ್ಕೆ ಬಂದು ಮೌಂಟ್ ಎವರೆಸ್ಟ್ನ ತಳಕ್ಕೆ ಬಂದು ನಿಂತ. ಮಾರ್ಟನ್ನಿಗೆ ಆಗಲೇ ನಲವತ್ತಾರು ವರ್ಷ. ಈ ವಯಸ್ಸಿನಲ್ಲಿ ಪ್ರಪಂಚದ ಎತ್ತರದ ಶಿಖರವನ್ನು ಹತ್ತುವುದು ಸಾಧ್ಯವಾದೀತೆ ಎಂದು ಚಿಂತಿಸಿದ. ತನಗೆ ತಿಳಿದ ಹಿರಿಯ ಸಾಧಕರ ಜೀವನಗಾಥೆಗಳನ್ನು ಓದಿದ. ಬಹಳಷ್ಟು ಜನ ವಯಸ್ಸಾದ ಮೇಲೆಯೇ ಹಟತೊಟ್ಟು ಸಾಧನೆ ಮಾಡಿದವರು.
ಈತ ಹಲ್ಲುಕಚ್ಚಿ ಪ್ರಯತ್ನಿಸಿದ. ಮೂರು ವರ್ಷಗಳ ಕಠಿಣ ಪರಿಶ್ರಮದ ನಂತರ ಒಂದು ದಿನ ಮೌಂಟ್ ಎವರೆಸ್ಟ್ ಹತ್ತಿ ನಿಂತ. ಅದುವರೆಗೆ ಜಗತ್ತಿನಲ್ಲಿ ಎಲ್ಲ ಖಂಡಗಳಲ್ಲಿಯ ಏಳೂ ಅತ್ಯುನ್ನತ ಪರ್ವತ ಶಿಖರಗಳನ್ನೇರಿದ ಅರವತ್ತೊಂಬತ್ತು ಪರ್ವತಾರೋಹಿಗಳಲ್ಲಿ ಒಬ್ಬನಾದ.
ಮರಳಿ ಊರಿಗೆ ಬಂದು ಹೊಸ ಗುರಿ ಯೋಜಿಸಿದ. ಒಂದು ಕಂಪನಿ ಕಟ್ಟಿಕೊಂಡು ಕಟ್ಟಡಗಳ, ಸೇತುವೆಗಳ ನಿರ್ಮಾಣದಲ್ಲಿ ತೊಡಗಿದ. ಅತ್ಯಂತ ಗುಣಮಟ್ಟದ ಕಟ್ಟಡಗಳ ನಿರ್ಮಾಪಕ ಎಂಬ ಪ್ರಶಸ್ತಿ ಪಡೆದ.
ಅದರೊಂದಿಗೆ ದೊಡ್ಡ ಪ್ರಮಾಣದ ಹಣವೂ ಬಂದಿತು. ಇದಾದ ನಂತರ ಬ್ಯಾಂಕುಗಳನ್ನು ಕೊಂಡು ವ್ಯವಹಾರ ನಡೆಸತೊಡಗಿದ. ತಾನು ಮೊದಲು ಕೆಲಸ ಮಾಡುತ್ತಿದ್ದ ಬ್ಯಾಂಕಿನೊಂದಿಗೆ ಇನ್ನೂ ಹತ್ತಾರನ್ನು ಖರೀದಿಸಿ ಶ್ರೇಷ್ಠ ಬ್ಯಾಂಕ್ ವಹಿವಾಟುದಾರ ಎಂದು ಹೆಸರು ಮಾಡಿದ. ಮುಂದೆ ಮತ್ತೊಂದು ಗುರಿ ಹಾಕಿಕೊಂಡ, ಐವತ್ತಾರನೇ ವರ್ಷದಲ್ಲಿ ಮಾರ್ಟಿನ್ ವಿಮಾನ ಚಾಲನೆಯಲ್ಲಿ ವೃತ್ತಿಪರ ಲೈಸೆನ್ಸ್ ಪಡೆದುಕೊಂಡ. ತನ್ನದೇ ವಿಮಾನ ಕಂಪನಿಯನ್ನು ನಡೆಸಿದ.
ಇವೆಲ್ಲವೂ ಆದ ಮೇಲೆ ಆತ ಹೀಗೆ ಯೋಚಿಸಿದ. ತಾನು ವಿವಿಧ ಗುರಿಗಳನ್ನು ಹಾಕಿಕೊಂಡು ಅವುಗಳನ್ನು ತಲುಪಲು ಶ್ರಮಿಸಿದವ. ಗುರಿ ತಲುಪಿದಂತೆ ಅವನಿಗೆ ಗೊತ್ತಿಲ್ಲದಂತೆ, ಅಪೇಕ್ಷೆ ಇಲ್ಲದಿದ್ದರೂ ಬಹಳಷ್ಟು ಹಣ ಬಂದು ಸೇರಿತ್ತು. ಗುರಿ ಸಾಧನೆಯ ಸಂತೋಷ ತನ್ನದು ಆದರೆ ಅದರೊಂದಿಗೆ ಬಂದ ಹಣ ನನ್ನದಲ್ಲ. ಅದನ್ನು ಸಮಾಜ ಕಾರ್ಯಕ್ಕೇ ಬಳಸಬೇಕೆಂದು ತೀರ್ಮಾನಿಸಿ ಬೇರೆ ಸಮಾಜ ಸೇವಾ ಸಂಘಗಳೊಡನೆ ಸೇರಿ ಬೇರೆ ಬೇರೆ ದೇಶಗಳಲ್ಲಿ ಹಣ ದಾನ ಮಾಡಿದ.
ಅದರಲ್ಲಿ ಬಹುಪಾಲು ನಮ್ಮ ದೇಶದ ಚೆನ್ನೈನಲ್ಲಿ ಕುಷ್ಠರೋಗಿಗಳ ಸೇವೆಗೆ ವಿನಿಯೋಗಿಸಿದ. ಮೊಬೈಲ್ ವ್ಯಾನುಗಳಲ್ಲಿ ವೈದ್ಯರು ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದಾರೆ. ಹ್ಯೂ ಮಾರ್ಟನ್ ಹೇಳುತ್ತಾನೆ, ‘ಈ ಕಾರ್ಯ ನನಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಕ್ಕಿಂತ ಹೆಚ್ಚು ತೃಪ್ತಿ ನೀಡುತ್ತಿದೆ’. ನಮ್ಮ ಬದುಕಿನಲ್ಲಿ ಒಂದೇ ಗುರಿ ಇರುವುದು ಸಾಧ್ಯವಿಲ್ಲ.
ಒಂದು ಗುರಿ ಸಾಧಿಸಿದ ನಂತರ ಮತ್ತೊಂದು ಗುರಿ ಕಾಣುತ್ತದೆ. ಅದರ ನಂತರ ಮತ್ತೊಂದು. ಹೀಗೆ ಗುರಿಗಳ ಸಾಲುಗಳನ್ನು ಏರಿ ನಿಲ್ಲುವುದೇ ಸಾರ್ಥಕ ಜೀವನದ ಪಯಣ. ಗುರಿಯೇ ಇಲ್ಲವೆಂದವರಿಗೆ ಯಾವುದೂ ಕಾಣುವುದಿಲ್ಲ. ಪ್ರಯತ್ನಶೀಲರಿಗೆ ಗುರಿಗಳ ಸಾಲುಸಾಲೇ ತೋರುತ್ತದೆ…..
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882
ಒಳ್ಳೆಯ ಸ್ಪೂರ್ತಿದಾಯಕ ಲೇಖನ ಗುರೂಜಿ