ಸಗರನಾಡಿನ ಪ್ರತಿಭೆ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ
ಸಿನೆಮಾ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಸಗರನಾಡಿನ ಪ್ರತಿಭೆ – ವಿಶಾಲ್ ಕುಮಾರ್ ಶಿಂಧೆ
–ರಾಘವೇಂದ್ರ ಹಾರಣಗೇರಾ
ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಸೃಜನಶೀಲ ಪ್ರತಿಭೆ ಇರುತ್ತದೆ. ಆದರೆ ಈ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ, ತರಬೇತಿ ಹಾಗೂ ಉತ್ತೇಜನ ಬೇಕು. ಅಭ್ಯಾಸ ಬೇಕು, ಶ್ರದ್ಧೆ, ಪರಿಶ್ರಮ, ನಿರಂತರ ಪ್ರಯತ್ನ ಬೇಕು.
ಈ ಹಿನ್ನಲೆಯಲ್ಲಿನ ಸೃಜನಶೀಲ ಮನಸ್ಸಿನ ಪ್ರತಿಭಾವಂತ ನಾಟಕ ಕಲಾವಿದ, ಕವಿ ವಿಶಾಲ್ ಕುಮಾರ್ ಶಿಂಧೆ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿರುವ ಕಲ್ಯಾಣ ಕರ್ನಾಟಕದ ಸಗರನಾಡಿನ ಯುವ ಪ್ರತಿಭಾವಂತ ಕಲಾವಿದರಾಗಿದ್ದಾರೆ.
ಸರಳ ಸಜ್ಜನಿಕೆಯ ವಿನಯ ಸಂಪನ್ನತೆಯ ವಿಶಾಲ್ ಕುಮಾರ್ ಅವರು ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮುರಾರಿರಾವ್ ಮತ್ತು ಶ್ರೀಮತಿ ವತ್ಸಲಭಾಯಿ ಎಂಬ ಸುಸಂಸ್ಕೃತ ದಂಪತಿಗಳ ಉದರದಲ್ಲಿ 06.12.1990 ರಂದು ಜನಿಸಿದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ್ವಗ್ರಾಮದಲ್ಲಿ ಪೂರೈಸಿ ಪದವಿ ಪೂರ್ವ ಶಿಕ್ಷಣ ಶಹಾಪುರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಾಗೂ ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಬಿ.ಎ. ಪದವಿ ಅಧ್ಯಯನ ಮಾಡಿದರು.
ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದಿಂದ ಎಂ.ಎ ಪತ್ರಿಕೋದ್ಯಮ ಮತ್ತು ಮಾದ್ಯಮ ಅಧ್ಯಯನ ( MA, M.J.M.S) ಪದವಿ ಪಡೆದು ಪ್ರಸ್ತುತವಾಗಿ ವಿಜಯವಾಣಿ ಪತ್ರಿಕೆಯಲ್ಲಿ ಗ್ರಾಮೀಣ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ತನ್ನ ಅಭ್ಯಾಸದ ಜೊತೆಗೆ ಕಾವ್ಯ ಬರಹ, ನಾಟಕ ಅಭಿನಯ, ಭಾಷಣ ಮುಂತಾದ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತುಂಬಾ ಕ್ರಿಯಾಶೀಲತೆಯಿಂದ ಭಾಗವಹಿತ್ತಿದ್ದ ವಿಶಾಲ್ ಕುಮಾರ್ ತನ್ನ 16 ನೆಯ ವಯಸ್ಸಿನಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕಗಳಲ್ಲಿ ಅಭಿನಯಿಸತೊಡಗಿದ.
ಈತನ ಅಭಿನಯ ಕಲೆ, ರಂಗಾಸಕ್ತಿಯನ್ನು ಗುರುತಿಸಿದ ಹಿರಿಯ ಕಲಾವಿದ ಪರಮಾನಂದ ಹೂಗಾರ ಅವರು ರಂಗಭೂಮಿ ಕಲೆಯ ಜ್ಞಾನ ನೀಡಿ ಪ್ರೋತ್ಸಾಹ ನೀಡಿದರು. ಸಿದ್ದಾರೂಢರ ಮಹಾತ್ಮೆ, ಮಹಾಂತೇಶ್ವರ ಮಹಾತ್ಮೆ, ಅಣ್ಣತಂಗಿ, ಧನಿಕರ ದೌರ್ಜನ್ಯ, ಮನೆಯನ ಮಾನ ಅಣ್ಣನ ಪ್ರಾಣ, ರೌಡಿ ರಾಕ್ಷಸ, ಪ್ರೇಮದ ಚೆಲ್ಲಾಟ ಮುಂತಾದ ಸಾಮಾಜಿಕ ಮತ್ತು ಆಧ್ಯಾತ್ಮಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿರುವ ವಿಶಾಲ್ ಕುಮಾರ್ ಸ್ಪಷ್ಟ ಉಚ್ಚಾರ, ಏರಿಳಿತದ ಸಂಭಾಷಣೆ ಹಾಗೂ ಹಾಸ್ಯ ಮತ್ತು ಗಂಭೀರ ಅಭಿನಯದ ಮೂಲಕ ಜನಮನ ಸೂರೆಗೊಂಡ ಗ್ರಾಮೀಣ ರಂಗಭೂಮಿ ಕಲಾವಿದ.
ಈ ಗ್ರಾಮೀಣ ರಂಗಭೂಮಿ ವಿಶಾಲ್ ಕುಮಾರ್ ಅವರಿಗೆ ದಾರವಾಹಿ, ಸಿನೆಮಾಗಳಿಗೆ ಏಳೆದು ತಂದಿರುವುದು ಹೆಮ್ಮೆಯ ಸಂಗತಿ. ” ಗಂಗಾ” ಧಾರವಾಹಿಯಲ್ಲಿ ಸಹ ನಟನಾಗಿ, ” ಅಬ್ಭೆ ತುಮಕೂರಿನ ವಿಶ್ವರಾಧ್ಯ” ಸಿನೆಮಾದಲ್ಲಿ ಸಹ ನಟನಾಗಿ, “ಕ್ರಾಂತಿಯೋಗಿ ಮಹಾದೇವ” ಸಿನೆಮಾದಲ್ಲಿ ತಮ್ಮನ ಪಾತ್ರ, ಬಿಡುಗಡೆಗೆ ಸಿದ್ದವಾಗಿರುವ ” ಹುಲಿಬೇಟೆ ” ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ತನ್ನ ಅಭಿನಯ ಕಲೆಯಲ್ಲಿ ಅಷ್ಟೇ ಅಲ್ಲದೆ ಸಾಹಿತ್ಯದಲ್ಲಿಯೂ ವಿಶಿಷ್ಟ ಕೃಷಿ ಮಾಡುತ್ತಿರುವ ಉದಯೋನ್ಮುಖ ಸಾಹಿತಿಯಾಗಿ ಸವಿಸವಿ ನೆನಪು ” ದೇವರು ಅರ್ಜಿ ಬಿಟ್ಟಿದ್ದಾನೆ” ಎಂಬ ಎರಡು ಕವನ ಸಂಕಲನಗಳು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.
ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಡೆದ ಕವಿಗೋಷ್ಠಿಗಳಲ್ಲಿ ಮತ್ತು ದಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಸಾಮಾಜಿಕ ಕಾಳಜಿ, ಪ್ರೀತಿ, ಪ್ರೇಮ, ನಾಡು- ನುಡಿಯ ಚಿಂತನೆ, ಸಮಾಜದ ಅವ್ಯವಸ್ಥೆ, ತಲ್ಲಣಗಳು ಮುಂತಾದವು ಅವರ ಕಾವ್ಯಗಳಲ್ಲಿ ಕಂಡುಬರುತ್ತವೆ.
ಅದಮ್ಯ ಪ್ರೀತಿಯ ಉತ್ಸಾಹದ ಬುಗ್ಗೆಯಾಗಿರುವ ವಿಶಾಲ್ ಕುಮಾರ್ ಶಿಂಧೆ ಅವರು ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರದಲ್ಲಿ ತಾನು ಬೆಳೆಯುವದಲ್ಲದೆ ಯುವ ಕಲಾವಿದರಿಗೂ ಉತ್ಸಾಹ ತುಂಬಿ ಬೆಳೆಸುತ್ತಿರುವ ವಿಶಾಲ ಮನೋಭಾವದ ಪ್ರೀತಿಯ ಅಂತಃಕರಣದ ಕಲಾವಿದ.
ಅನೇಕ ಹಿರಿಯ ರಂಗ ಕಲಾವಿದರ ಗಮನ ಸೆಳೆದಿರುವ ವಿಶಾಲನಿಗೆ ಅವರು ಎದೆತುಂಬಿ, ಮನತುಂಬಿ ಉತ್ತೇಜಿಸಿದ್ದಾರೆ. ಪ್ರಮಾಣಿಕತೆ, ವಿನಯಶೀಲತೆ, ಶ್ರದ್ಧೆ, ಕ್ರಿಯಾಶೀಲತೆ, ಉತ್ಸಾಹ ಸಾಹಿತ್ಯ ಹಾಗೂ ರಂಗಭೂಮಿಯ ಮೇಲಿನ ಅಪಾರ ಪ್ರೀತಿಯಿಂದ ವಿಶಾಲ್ ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ರಂಗಭೂಮಿ ಮತ್ತು ಸಾಹಿತ್ಯ ಸೇವೆಗೆ ತಾಲೂಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ, ನಾಲವಾರ ಕೋರಿಸಿದ್ದೇಶ್ವರ ಮಠದಿಂದ ರಂಗಭೂಮಿ ಕಲಾ ರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಬಸವೇಶ್ವರ ಶಿಕ್ಷಣ ಸಂಸ್ಥೆ ರಂಗಂಪೇಟ ಯುವ ಸಾಹಿತ್ಯ ಸಾಧಕ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಿಂದ ಸನ್ಮಾನ, ಗೌರಿ ಲಂಕೇಶ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ.
ನಟನೆಯಲ್ಲಿ, ಅಭಿನಯ ಕಲೆಯಲ್ಲಿ ತಾನು ಇನ್ನೂ ಬಹಳಷ್ಟು ಕಲಿಯಬೇಕು, ತಿಳಿದುಕೊಳ್ಳಬೇಕು ಎಂದು ವಿನಯದಿಂದ ನುಡಿಯುವ ವಿಶಾಲ್ ಕುಮಾರ್ ಅವರು ತಮ್ಮ ಕಲೆಯ ಮೂಲಕ ನಾಟಕ, ಸಾಹಿತ್ಯ , ಪತ್ರಿಕೋದ್ಯಮ, ಸಿನೆಮಾ ಕ್ಷೇತ್ರದಲ್ಲಿ ವಿಶಿಷ್ಠವಾದದ್ದನ್ನು ನೀಡಲಿ ಎಂದು ಆಶಿಸೋಣ.
–ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.