ದಣಿವರಿಯದ ಧಣಿ, ಪತ್ರಿಕಾರಂಗದ ಬುನಾದಿ ರಘುನಾಥ ತಿಳಗೂಳ ನಿಧನ
ದಣಿವರಿಯದ ಧಣಿ, ಪತ್ರಿಕಾರಂಗದ ಬುನಾದಿ ರಘುನಾಥ ತಿಳಗೂಳ ನಿಧನ
ಶಹಾಪುರಃ ಕಳೆದ 40 ವರ್ಷದಿಂದ ಪತ್ರಿಕಾ ವಿತರಕರಾಗಿದ್ದ ದಣಿವರಿಯದ ಧಣಿ ಹಿರಿಯ ಜೀವಿ ರಘುನಾಥರಾವ್ ಜಿ.ತಿಳಗೂಳ(85) ಇಂದು ದೈವಾಧೀನರಾದರು.
ಶಹಾಪುರ ತಾಲೂಕಿನಲ್ಲಿ ಹಳೇ ಬಸ್ ನಿಲ್ದಾಣದಲ್ಲಿ ತಿಳಗೂಳ ಬುಕ್ ಸ್ಟಾಲ್ ನಡೆಸುತ್ತಿದ್ದ ಇವರು, ನಗರ ಸೇರಿದಂತೆ ತಾಲೂಕಿನಾದ್ಯಂತ ಕನ್ನಡ ದಿನ ಪತ್ರಿಕೆಗಳನ್ನು ಸೇವಾ ಮನೋಭಾವದಿಂದ ತಲುಪಿಸುವ ಕಾರ್ಯ ಮಾಡುತ್ತಿದ್ದರು.
ಶಹಾಪುರದದಲ್ಲಿ ಪತ್ರಿಕೆ ಓದುವ ಅಭಿರುಚಿ ಬೆಳೆಯಲು ಇವರ ಸೇವೆ ಶ್ಲಾಘನೀಯವಾದದು. ದಿನ ಪತ್ರಿಕೆ, ಸುದ್ದಿ ಎಂದರೆ ಅರಿವಿರದ ಕಾಲದಲ್ಲಿ ಅದನ್ನು ಅಚ್ಚುಕಟ್ಟಾಗಿ ಯಾವುದೇ ಲಾಭಾಂಶ ಲೆಕ್ಕವಿಲ್ಲದೆ ಸೇವಾ ಮನೋಭಾವದಿಂದ ಹಗಲಿರಳು ದುಡಿದ ಕಾಯಕ, ತಾಲೂಕಿನಲ್ಲಿ ಪತ್ರಿಕಾರಂಗ ವಿಕಾಸಹೊಂದಲು ಬುನಾದಿ ಹಾಕಿದ ಕೀರ್ತಿ ದಿ.ರಘುನಾಥರಾವ್ ಅವರದ್ದಾಗಿದೆ.
ಬುಕ್ ಸ್ಟಾಲ್ ನ್ನು ಅಂದಿನ ಜ್ಞಾನದ ಶಕ್ತಿ ಕೇಂದ್ರವಾಗಿ ರೂಪಿಸಿದ್ದರು. ದಿನ ನಿತ್ಯ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಪತ್ರಿಕಾ ವಿತರಣೆ ಕಾಯಕದಲ್ಲಿ ತೊಡಗಿಸಿಕೊಳ್ಳುವ ಇವರು, ಹಲವಾರು ಪತ್ರಿಕಾ ಹಂಚಿಕೆ ಹುಡುಗರನ್ನು ಬೆಳೆಸಿದರು.
ಬುಕ್ ಸ್ಟಾಲ್ ನಲ್ಲಿ ವಿವಿಧ ಸಾಹಿತ್ಯ ಪುಸ್ತಕಗಳು ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕೈಗೆಟುಕುವಂತೆ ಮಾಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಸ್ಪೂರ್ತಿಯಾಗಿದ್ದರು.
ವಿದ್ಯಾರ್ಥಿಗಳು ಓದಲು ಬೇಕಾದ ವಿವಿಧ ಸಾಹಿತ್ಯ, ಆಧ್ಯಾತ್ಮಿಕ ಪ್ರಕಾರ ಪುಸ್ತಕಗಳನ್ನು ತರಿಸಿಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಚಿತರಿಗೆ ದಾದಾ ಎಂಥಲೇ ಗುರುತಿಸಿಕೊಂಡಿದ್ದರು.
ವಿದ್ಯಾರ್ಥಿಗಳು, ಹಿರಿಯರು, ಕಿರಿಯರು ಬುಕ್ ಸ್ಟಾಲ್ ಕ್ಕೆ ಬಂದರೆ, ರಘುನಾಥ ಅವರನ್ನು ದಾದಾ ಅಂತಲೇ ಕರೆಯುವರು. ಬಹು ಸೌಮ್ಯ ಗುಣದ ಕಾಯಕ ಜೀವಿಯಾದ ಹೀರಿಯ ಜೀವಿಯನ್ನು ಕಳೆದುಕೊಂಡ ನಮಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಭಗವಂತ ಆ ಉತ್ಕೃಷ್ಟ ಕಾಯಕ ಜೀವಿಯ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ.
–ವಿನಯವಾಣಿ