ಅಂಕಣ

ಓದುವ ಸಂಸ್ಕೃತಿಯನ್ನು ಬೆಳೆಸಿದ ಪತ್ರಿಕಾ ವಿತರಕ- ರಘುನಾಥರಾವ್ ತಿಳಗೂಳ

ಓದುವ ಸಂಸ್ಕೃತಿಯನ್ನು ಬೆಳೆಸಿದ ಪತ್ರಿಕಾ ವಿತರಕ- ರಘುನಾಥರಾವ್ ತಿಳಗೂಳ

-ರಾಘವೇಂದ್ರ ಹಾರಣಗೇರಾ 

ಶಹಾಪುರ ತಾಲೂಕಿನಲ್ಲಿ ಕಳೆದ 4 ದಶಕಗಳಿಂದ ಪತ್ರಿಕಾ ವಿತರಕರಾಗಿ ಅನುಪಮ ಸೇವೆಯನ್ನು ಸಲ್ಲಿಸಿದ ನನ್ನ ಪ್ರೀತಿಯ ಹಿರಿಯರಾದ ಶ್ರೀ ರಘುನಾಥರಾವ್ ತಿಳಗೂಳ ಅವರು ನಿಧನರಾದ ಸುದ್ದಿ ಕೇಳಿ ಮನಸ್ಸು ತುಂಬಾ ಭಾವುಕತೆಗೆ ಒಳಗಾಯಿತು.

ಶಹಾಪುರದಲ್ಲಿ ಅವರು ಕೇವಲ ಪತ್ರಿಕಾ ವಿತರಕರು ಮಾತ್ರ ಆಗಿರಲಿಲ್ಲ ಪತ್ರಿಕಾ ಮತ್ತು ಓದುವ ಸಂಸ್ಕೃತಿಯನ್ನು ಬೆಳಿಸಿದವರು. ಬೆಳಗ್ಗೆ 4 ಗಂಟೆಗೆ ೧೧ ಗಂಟೆಯವರೆಗೆ ಶಹಾಪುರದ ಹಳೆ ಬಸ್ ನಿಲ್ದಾಣದಲ್ಲಿ ಇರುವ ಅವರ ಪತ್ರಿಕೆ ಹಾಗೂ ಬುಕ್ಕಸ್ಟಾಲ್ ಮುಂದೆ ಕಿಕ್ಕಿರಿದು ತುಂಬಿರುವ ಓದಗರು ನೋಡಿದಾಗ ಬೇರೆ ಯಾವ ತಾಲೂಕು ಮತ್ತು ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಇಷ್ಟೊಂದು ಜನ ಸೇರುವುದಿಲ್ಲ ಅನಿಸುತ್ತದೆ.

ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಗ್ರಾಹಕರೊಂದಿಗೆ ಪ್ರೀತಿಯ ಭಾವನಾತ್ಮಕ ಭಾಂಧವ್ಯ ಹೊಂದಿದ್ದ ಅವರು ಓದುಗರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳು, ಸಾಹಿತ್ಯ, ಸಂಸ್ಕೃತಿ, ಕಲೆ, ಸಿನೆಮಾ ಮುಂತಾದ ಎಲ್ಲಾ ಪ್ರಕಾರದ ಪುಸ್ತಕಗಳು ಓದುಗರಿಗೆ ದೊರೆಯುವ ವ್ಯವಸ್ತೆ ಮಾಡಿದ್ದರು.

ಒಂದುವೇಳೆ ಯಾವುದೆ ಪುಸ್ತಕ, ಸಂಚಿಕೆ ಸಿಗದೆ ಇದ್ದಲ್ಲಿ ಒಂದೇರೆಡು ದಿನಗಳಲ್ಲಿ ತರಿಸಿಕೊಡುವ ವ್ಯವಸ್ಥೆ ಮಾಡುತ್ತಿದ್ದರು. ಈ ಪರಂಪರೆಯನ್ನು ಅವರ ಸುಪುತ್ರ ಪ್ರಲ್ಹಾದರಾವ್ ತಿಳಗೂಳ ಅವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. 85 ವರ್ಷದ ಇಳಿಯ ವಯಸ್ಸಿನಲ್ಲಿಯೂ ಪತ್ರಿಕಾ ಮತ್ತು ಪುಸ್ತಕ ವಿತರಣೆಯ ಕಾರ್ಯನಿರ್ವಹಿಸುತ್ತಿದ್ದರು.

ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪುರಂದರ ದಾಸರ ಕುರಿತು ಬರೆದ ನನ್ನ ಲೇಖನ ಓದಿ, ಚೆನ್ನಾಗಿ ಬರೆದಿದ್ದಿರಿ ಬೆಳಗ್ಗೆ ಮನೆಯಲ್ಲಿ ಓದಿ ತುಂಬಾ ಖುಷಿ ಆಯ್ತು ಎಂದು ಹೇಳಿದರಲ್ಲದೆ ತಿರುಪತಿಯಿಂದ ಬರುವ ಸಂಚಿಕೆಗಳನ್ನು ಮತ್ತು ದಾಸರ ಪರಂಪರೆಯ ಕುರಿತಾದ ಪುಸ್ತಕಗಳನ್ನು ಕೊಟ್ಟು ಓದಲು ತಿಳಿಸಿದ ಸಹೃದಯಿ ಹಿರಿಯರು.

ಅವರ ಸೇವೆಯನ್ನು ಗುರುತಿಸಿ ಹಿರಿಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಅವರು ತಮ್ಮ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಜೀವ ರಘುನಾಥರಾವ್ ಅವರಿಗೆ ಸನ್ಮಾನಿಸಿ ಸತ್ಯಂಪೇಟೆ ಅವರಿ ರಘುನಾಥರಾವ್ ಅವರ ಸುದೀರ್ಘ ಕಾಲದ ಪತ್ರಿಕಾ ಸೇವೆ ಮತ್ತು ಅವರ ವ್ಯಕ್ತಿತ್ವ ಕುರಿತು ತಿಳಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಘುನಾಥರಾವ್ ಅವರಿಗೆ ನನಗೂ ಸನ್ಮಾನಿಸಲು ಅವಕಾಶ ಮಾಡಿಕೊಟ್ಟರು. ಯಾವುದೇ ಸನ್ಮಾನ, ಪ್ರಶಸ್ತಿ, ಪರಸ್ಕಾರಗಳಿಂದ ದೂರ ಇದ್ದು ಸರಳ, ಸಜ್ಜನಿಕೆಯಿಂದ ಪತ್ರಿಕಾ ವಿತರಣೆಯ ಸೇವೆ ಮಾಡುತ್ತ ಕುಟುಂಬದ ಅನೇಕ ಸಮಸ್ಯೆಗಳ ನಡುವೆ ಅದಮ್ಯ ಜೀವನ ಪ್ರೀತಿಯಿಂದ ಅರ್ಥಪೂರ್ಣ ತುಂಬು ಜೀವನ ಸಾಗಿಸಿದ ರಘುನಾಥರಾವ ಅವರಿಗೆ ತಾಲೂಕಿನ ಅನೇಕ ಸಂಘಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ.

ರಘುನಾಥರಾವ್ ಮತ್ತು ಬದುಕಿನ ಹೆಗಲಿಗೆ ಹೆಗಲು ಕೊಟ್ಟ ಸಹೋದರ ನಿವೃತ್ತ ಶಿಕ್ಷಕ ಮಧುಸೂದನ್ ತಿಳಗೂಳ ಇಬ್ಬರೂ ರಾಮ- ಲಕ್ಷ್ಮಣನಂತೆ ಕೂಡಿ ಜೀವನ ಸಾಗಿಸಿ ಮಾದರಿಯಾಗಿದ್ದಾರೆ. ಬದುಕಿನುದ್ದಕ್ಕೂ ಅಣ್ಣತಮ್ಮಂದಿರಿಬ್ಬರು ಒಬ್ಬರನ್ನು ಬಿಟ್ಟು ಒಬ್ಬರಿರುತ್ತಿರಲಿಲ್ಲ. ತುಂಬಾ ಅನ್ಯೋನ್ಯತೆಯಿಂದ ಸಹೋದರರಿಬ್ಬರು ಸುಖ ದುಃಖಗಳನ್ನು ಸಮನಾಗಿ ಹಂಚಿಕೊಂಡು ಜೀವನ. ಸಾಗಿಸಿದವರು‌.

ಶಹಾಪುರದ ಸಾಂಸ್ಕೃತಿಕ ಪರಿಸರಕ್ಕೆ ಪತ್ರಿಕಾ ಮತ್ತು ಪುಸ್ತಕ ವಿತರಣಾ ಕಾರ್ಯದ ಮೂಲಕ ವಿಶಿಷ್ಟ ಸೇವೆ ಸಲ್ಲಿಸಿದ ಮಾನವೀಯ ಹೃದಯವಂತ ಹಿರಿಯರಾದ ರಘುನಾಥರಾವ್ ತಿಳಗೂಳ ಅವರು ಪತ್ರಿಕಾ ಹಾಗೂ ಸಾಹಿತ್ಯ ಲೋಕ ಅವರ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ಅಪಾರ ಸಾಂಸ್ಕೃತಿಕ ಮನಸ್ಸುಗಳನ್ನು, ಬಂಧು ವರ್ಗವನ್ನು ಅಗಲಿದ ರಘುನಾಥರಾವ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ವಿನಯವಾಣಿ ಬಳಗ ಪ್ರಾರ್ಥಿಸುತ್ತದೆ.

-ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

Leave a Reply

Your email address will not be published. Required fields are marked *

Back to top button