ಅಂಕಣ

“ಶರಣ ಚಿಂತಕ ಶಿವಣ್ಣ ಇಜೇರಿ” ಹಾರಣಗೇರಾ ಬರಹ

ಸಾಹಿತಿ, ಶರಣ ಚಿಂತಕ – ಶಿವಣ್ಣ ಇಜೇರಿ 

-ರಾಘವೇಂದ್ರ ಹಾರಣಗೇರಾ

ಶಹಾಪುರದ ಸಾಂಸ್ಕೃತಿಕ ಲೋಕವನ್ನು ಸದಾ ಆರೋಗ್ಯ- ಕರವಾಗಿಡಲು, ಎಚ್ಚರವಾಗಿಡಲು, ಕ್ರಿಯಾಶೀಲವಾಗಿಡಲು ಶ್ರಮಿಸಿದ ಅನೇಕ ಆಧ್ಯಾತ್ಮಿಕ ಚಿಂತಕರು, ಸಾಹಿತಿಗಳು, ವಿವಿಧ ಕಲಾವಿದರು, ಪ್ರಗತಿಪರ ವಿಚಾರವಂತರಲ್ಲಿ ಹಿರಿಯ ಸಾಹಿತಿ ಶಿವಣ್ಣ ಇಜೇರಿ ಅವರು ಒಬ್ಬರಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರಮುಖ ಸಾಹಿತಿಗಳಲ್ಲಿ, ಶರಣ ಚಿಂತಕರಲ್ಲಿ ಒಬ್ಬರಾಗಿರುವ ಶಿವಣ್ಣ ಇಜೇರಿ ಅವರು ಸುಸಂಸ್ಕೃತ ದಂಪತಿಗಳಾದ ಶ್ರೀ ಬಸಣ್ಣ ಇಜೇರಿ ಮತ್ತು ಪರಮ್ಮವ್ವ ಇಜೇರಿ ಉದರದಲ್ಲಿ 03.05.1952 ರಂದು ಜನಿಸಿದರು. ಜಾತಿ, ಜನಾಂಗ, ಮತ, ಪಂಥದ ಗೋಡೆಗಳನ್ನು ಕಟ್ಟಿಕೊಳ್ಳುತ್ತಿರುವರೇ ಹೆಚ್ಚಾದ ಸಮಾಜದಲ್ಲಿ ತಾಯಿ ಪರಮವ್ವ ಅಂದು ಎಲ್ಲಾ ಸಮುದಾಯದ ಜನರೊಂದಿಗೆ ನಾವು ನಮ್ಮವರು ಎಂಬ ಭಾವನಾತ್ಮಕ ಬಾಂಧವ್ಯವನ್ನು ಬೆಳೆಸುತ್ತ ಇವನಾರವ ಇವನಾರವ ಎಂದೆನಿಸದೆ ಇವ ಮನೆಯ ಮಗನೆಂದೆಣಿಸಯ್ಯ ಎಂಬ ಬಸವಣ್ಣನವರ ನುಡಿಯಂತೆ ಶರಣ ಜೀವನ ಸಾಗಿಸಿದವರು.

ಶಿವಣ್ಣ ಇಜೇರಿ ಅವರ ಮೇಲೆ ಶರಣಜೀವಿ ತಂದೆತಾಯಿಗಳ ಪ್ರಭಾವ ಕಂಡುಬರುತ್ತದೆ. ಕಾಯಕವೇ ಕೈಲಾಸ ಎಂಬ ಶರಣರ ಕಾಯಕ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಶಿವಣ್ಣ ಇಜೇರಿ ಅವರು ಖಾಸಗಿ ಸಂಸ್ಥೆಯೊಂದರಲ್ಲಿ 68 ರ ಇಳಿ ವಯಸ್ಸಿನಲ್ಲೂ ಕೆಲಸ ಮಾಡುತ್ತ , ಕೆಲಸವನ್ನು ಗೌರವಿಸುತ್ತ ಪತ್ನಿ ಶ್ರೀಮತಿ ಈರಮ್ಮ ಹಾಗೂ ಮಕ್ಕಳು ಮೊಮ್ಮಕ್ಕಳೊಂದಿಗೆ ತುಂಬು ಸಾರ್ಥಕದ ಸಂತೃಪ್ತ ಸಂಸಾರಿಕ ಜೀವನವನ್ನು ಸಾಗಿಸುತ್ತಿದ್ದಾರೆ.

ಮೂವರು ಮಕ್ಕಳಲ್ಲಿ ಡಾ. ಬಸವರಾಜ ಇಜೇರಿ ಅವರು ವೈದ್ಯರಾಗಿ, ಸಾಹಿತ್ಯ, ಸಾಂಸ್ಕೃತಿಕ ಚಿಂತಕರಾಗಿ, ಸಾಯಿಕುಮಾರ ಇಜೇರಿ ಅವರು ಬ್ಯಾಂಕ್ ನಲ್ಲಿ ಮತ್ತು ಮಗಳು ಶ್ರೀಮತಿ ಮಡಿವಾಳಮ್ಮ ಅವರು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಡಿನ ಪ್ರಮುಖ ಸಾಹಿತಿ, ವೈಚಾರಿಕ ಶರಣ ಚಿಂತಕರಾಗಿದ್ದ ಶ್ರೀ ಲಿಂಗಣ್ಣ ಸತ್ಯಂಪೇಟೆ ಅವರೊಂದಿಗೆ ಹಲವು ದಶಕಗಳವರೆಗೆ ಬಸವಾದಿ ಶರಣರ ತತ್ವ ವಿಚಾರಗಳನ್ನು ಜನಮಾನಸದಲ್ಲಿ ಬಿತ್ತಲು ಶ್ರಮಿಸಿದ್ದಾರೆ. ಸತ್ಯಂಪೇಟೆ ಅವರ ಲಿಂಗೈಕ್ಯದ ನಂತರ ಅವರ ಸುಪುತ್ರ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಅವರೊಂದಿಗೆ ಬಸವ ಮಾರ್ಗ ಪ್ರತಿಷ್ಠಾನದ ಮೂಲಕ ಶರಣರ ಬದುಕು ಮತ್ತು ವಿಚಾರಗಳನ್ನು ನಾಡಿನಾದ್ಯಂತ ಪ್ರಚುರಪಡಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನೇರ, ನಿಷ್ಟುರತೆಯ, ಸರಳ, ಸಜ್ಜನಿಕೆಯ ನಿರ್ಮಲ ಸ್ನೇಹಾಂತಃಕರಣದ ಸದಾಚಾರದ ಸಾತ್ವಿಕ ಕವಿ, ಲೇಖಕ, ಸಾಹಿತಿಗಳಾದ ಶಿವಣ್ಣ ಇಜೇರಿ ಅವರು ಸಾಹಿತ್ಯ ಲೋಕಕ್ಕೆ ” ಉಡಿಯಲ್ಲಿನ ಊರಿ” (ಕವನ ಸಂಕಲನ), “ಕರಗದ ಬೆಣ್ಣೆ” ” ಕಣ್ಣ ಮರೆಯ ಬೆಳಕು” ( ವ್ಯಕ್ತಿ ಚಿತ್ರಗಳ ಸಂಕಲನ), ‘ಆಧುನಿಕ ವಚನಗಳು’ ” ದಾರಿದೀಪ (ಲಿಂಗಣ್ಣ ಸತ್ಯಂಪೇಟೆ ಅವರ ಒಡನಾಟದ ಬರಹಗಳು) ಮುಂತಾದ ಕೃತಿಗಳು ಅರ್ಪಿಸಿದ್ದಾರೆ. ಅವರ ಅನೇಕ ಲೇಖನಗಳು, ಕವನಗಳು, ವಚನಗಳು, ವಿವಿಧ ಬರಹಗಳು ಸಂಯುಕ್ತ ಕರ್ನಾಟಕ, ಬಸವ ಮಾರ್ಗ, ಶರಣ ಮಾರ್ಗ ಮುಂತಾದ ಪತ್ರಿಕೆಗಳಲ್ಲಿ, ಸಾಹಿತ್ಯ ಸಮ್ಮೇಳನಗಳ ಸ್ಮರಣ ಸಂಚಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ.

ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಶರಣ ಸಾಹಿತ್ಯ ಸಮ್ಮೇಳನಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದ್ದಾರೆ ಮತ್ತು ಉಪನ್ಯಾಸ ನೀಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಹಾಗೂ ನಾಡಿನ ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಿವೆ.

ಸರಳ ಸಹಜತೆಯಿಂದ ಕೂಡಿರುವ ಇಜೇರಿ ಅವರ ಸಾಹಿತ್ಯ ಬರಹಗಳಲ್ಲಿ ಸಾಂಸ್ಕೃತಿಕ ಕಾಳಜಿ, ಶರಣ ಪರಂಪರೆಯ ಮೌಲ್ಯಗಳು, ಸಮಾಜದ ಅವ್ಯವಸ್ಥೆ ಬಗ್ಗೆ ಆಕ್ರೋಶ, ನಾಡು, ನುಡಿ ಪರಂಪರೆಯ ಕುರಿತು ಪ್ರೀತಿ, ಸಮಕಾಲೀನ ಸಂದರ್ಭಗಳಿಗೆ ಸ್ಪಂದನೆ ಮುಂತಾದವು ಕಂಡುಬರುತ್ತವೆ. ಇವರ ಬರಹದ ದಾಟಿ, ಲಯ, ಶೈಲಿ ವಿಶಿಷ್ಟತೆಯಿಂದ ಕೂಡಿದೆ.

ಅವರ ಕಾವ್ಯ ಬರೀ ಶಬ್ದಗಳ ಜಾಲವಾಗಿರದೆ ಸಮಾಜದ ವಿವಿಧ ಆಯಾಮಗಳಿಗೆ ಮುಖಾಮುಖಿಯಾಗುತ್ತವೆ. ಜೀವನ ಪ್ರೀತಿ, ಶರಣ ಚಿಂತನೆ ಹಾಗೂ ಅನುಭಾವಗಳ ಹುಡುಕಾಟ ಕಾಣಬಹುದು.

ಯಾವುದೇ ಪ್ರಚಾರವನ್ನು ಬಯಸದ, ಆಡಂಬರ ಇಲ್ಲದ ಸರಳ ಜೀವಿಗಳಾದ ಸಾಹಿತಿ ಶಿವಣ್ಣ ಇಜೇರಿ ಅವರೊಂದಿಗಿನ ನನ್ನ ಒಡನಾಟ, ಪ್ರೀತಿಯ ಅಪ್ಪುಗೆ, ಹಿರಿಯ ಕಿರಿಯರೆನ್ನದೆ ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುವ, ಪ್ರೀತಿಯಿಂದ ಮಾತನಾಡಿಸುವ, ಬರೆಯುವ, ಹಾಡುವ, ಇತರ ಕಲೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರೋತ್ಸಾಹ ನೀಡಿ ಮೆಚ್ಚುಗೆ ವ್ಯಕ್ತಪಡಿಸುವ ಅವರು ನಮ್ಮೆಲ್ಲರ ಪ್ರೀತಿಯ ಮೆಚ್ಚುಗೆಗೆ ಪಾತ್ರರಾದ ಹಿರಿಯ ಸಾಹಿತಿಗಳಾಗಿದ್ದಾರೆ.

ಅದಮ್ಯ ಪ್ರೀತಿಯ ಉತ್ಸಾಹದ ಬುಗ್ಗೆಯಾಗಿರುವ ಅವರು ನಮ್ಮಲ್ಲೂ ಉತ್ಸಾಹ ತುಂಬುತ್ತಾ ನಮ್ಮೆಲ್ಲಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವ ಅವರ ಸಹೃದಯತೆ ನಮಗೆಲ್ಲಾ ಅನುಕರಣೀಯ.

ಪೇರಿಯಾರ್ ವಿಚಾರ ಸಂಘ, ಯುವಜನ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ಬಸವ ಮಾರ್ಗ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಶಿವಣ್ಣ ಇಜೇರಿ ಅವರು ಸಾಮಾಜಿಕ, ಸಾಹಿತ್ಯಿಕ ಕಾಳಜಿವುಳ್ಳ ಸಾಂಸ್ಕೃತಿಕ ಸಂಘಟಕರಾಗಿದ್ದಾರೆ‌.

ಇವತ್ತಿನ ಸಮಯ ಸಾಧಕತನದ ಕಾಲದಲ್ಲಿ ತಮ್ಮದೇಯಾದ ದೃಷ್ಟಿಕೋನವನ್ನು ಕಾಪಾಡಿಕೊಂಡು ಬಂದವರು. ಇದ್ದದನ್ನು ಇದ್ದ ಹಾಗೆ ನೇರವಾಗಿ ಹೇಳುವ ಎದೆಗಾರಿಕೆವುಳ್ಳವರು. ಊರೆಲ್ಲ ನೆಂಟರು, ಕೇರಿಯಲ್ಲ ಬಳಗ ಧಾರುಣಿಯೆಲ್ಲ ಕುಲದೈವವಾಗಿರಲು ಯಾರನ್ನು ಬಿಡಲಿ ಸರ್ವಜ್ಞ ಎನ್ನುವಂತಹ ವಿಶಾಲ ಹೃದಯ ಸಿರಿವಂತಿಕೆವುಳ್ಳವರಾದ ಶಿವಣ್ಷ ಇಜೇರಿ ಅವರು ನಿಗರ್ವಿಗಳು. ಎಲ್ಲರನ್ನೂ ಒಳಗೊಳ್ಳುವ ವ್ಯಕ್ತಿತ್ವವುಳ್ಳವರಾಗಿದ್ದಾರೆ.

ಜನರ ಹೊಗಳಿಕೆ, ತೆಗಳಿಕೆಗಳಿಗೆ ಹಿಗ್ಗದೆ, ಕುಗ್ಗದೆ ಮನಮೆಚ್ಚುವಂತೆ ಶರಣ ಮಾರ್ಗದ ಜೀವನ ಸಾಗಿಸುತ್ತಿರುವ ಸಾಹಿತಿ ಶಿವಣ್ಣ ಇಜೇರಿ ಅವರು ಬದುಕು ಬರಹಗಳ ನಡುವೆ ಸಾಮರಸ್ಯ ಸಾಧಿಸಿದವರು. ನಂಬಿದ ಮೌಲ್ಯಗಳಿಗೆ ಬದ್ದರಾಗಿ ನಡೆಯುವ ನೈತಿಕತೆ, ಕಾಯಕ ನಿಷ್ಠೆ, ಪ್ರಾಮಾಣಿಕತೆ, ಶರಣ ಚಿಂತನೆಯ ಅವರ ಬದುಕು ನಮಗೆಲ್ಲಾ ಮಾದರಿ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ ಮೊ.ನಂ 9901559873

Related Articles

Leave a Reply

Your email address will not be published. Required fields are marked *

Back to top button