ಸುಳಿ ಗಾಳಿ ಕಂಡಿದ್ದೀರಿ ಮಳೆ ಸುರಿಸುವ ಸುಳಿ ಮೋಡ ಕಂಡಿದ್ದೀರಾ.?
ಸುಳಿ ಗಾಳಿ ಕಂಡಿದ್ದೀರಿ ಮಳೆ ಸುರಿಸುವ ಸುಳಿ ಮೋಡ ಕಂಡಿದ್ದೀರಾ.?
ಯಾದಗಿರಿಃ ಸುಳಿ ಗಾಳಿ, ಬಿರುಗಾಳಿ ಕಂಡಿದ್ದೀರಿ ಆದರೆ ಒಂದೇ ಸಮ ಮಳೆ ಸುರಿಸುವ ಸುಳಿ ಮೋಡ ಎಲ್ಲಾದರೂ ಕಂಡಿದ್ದೀರಾ.? ಇಲ್ಲ ಅಲ್ವಾ.?
ಹೌದು ಈ ವಿಚಿತ್ರ ದೃಶ್ಯ ಇಂದು ಬೆಳಗ್ಗೆ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮ ಸಮೀಪ ಕಂಡು ಜನ ಬೆರಗಾಗಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ತೋರಿಸುವಂತೆ ಸಾಕ್ಷಾತ್ ವರುಣದೇವ ಆಕಾಶದಿಂದ ಧರೆಗಿಳಿಯುವಾಗ ತೋರಿಸುವ ದೃಶ್ಯದಂತೆ ಆಕಾಶದಿಂದ ಮಳೆ ಕೋಟೆ ಸುತ್ತಿಕೊಂಡು ಸುರ್ರನೆ ಧರೆಗೆ ಬಂದು ವರುಣದೇವ ಪ್ರತ್ಯಕ್ಷ ವಾಗುವಂತ ದೃಶ್ಯ ಇಂದು ಅಣಬಿ, ಹೊಸೂರ, ಸೇರಿದಂತೆ ಭೀಮಾನದಿ ತೀರದ ಹಲವಾರು ಗ್ರಾಮದ ಜನ ಈ ಅದ್ಭುತ ದೃಶ್ಯ ಕಣ್ತುಂಬಿಕೊಂಡಿದ್ದಾರೆ. ಆದರೆ ಈ ನಿಜ ದೃಶ್ಯದಲ್ಲಿ ವರುಣದೇವ ಮಾತ್ರ ಪ್ರತ್ಯಕ್ಷ ವಾಗಿಲ್ಲ.
ಈ ಮನಮೋಹಕ ದೃಶ್ಯವನ್ನು ಜನರು ವಿಡಿಯೋ ಮಾಡಿ ಎಲ್ಲಡೆ ಪಸರಿಸಿದ್ದಾರೆ.
ಈ ಅದ್ಭುತ ದೃಶ್ಯ ಕಂಡು ಬರುವದು ಬಹುತೇಕ ಕಡಿಮೆ. ವಿಚಿತ್ರ ವೆನಿಸಿದರು ಸತ್ಯ. ಅಣಬಿ ಗ್ರಾಮದ ಹೊರ ವಲಯದಲ್ಲಿ ಆಕಾಶದಿಂದ ಸುಳಿ ಮೋಡವಂದು ಸುರ್ರನೆ ಅತಿ ದೊಡ್ಡ ಪಿಚಕಾರಿಯಂತೆ ರಭಸದಿ ಮಳೆ ಸುರಿಯುತ್ತಿರುವದು ಕಂಡು ಜನ ನಿಬ್ಬೆರಗಾಗಿದ್ದಾರೆ.
ಅಲ್ಲದೆ ವಿಡಿಯೋ ಮಾಡುವಲ್ಲಿ ಕೆಲವರು ಖುಷಿಯಿಂದ ಕೇಕೆ ಹಾಕಿದರೆ, ಇನ್ನು ಕೆಲವರು ಅಬ್ಬಬ್ಬಾ ಇಂತಹದು ನೋಡೇ ಇಲ್ಲಾ ಬಿಡು ಅದರಾಗ ಸಿಲುಕಿದ್ದಲ್ಲಿ ಮನುಷ್ಯರ ಪ್ರಾಣ ಹೋಗ್ತದ ಅನ್ನೋ ಮಾತುಗಳು ವಿಡಿಯೋ ಮಾಡುವಾಗ ಜನರ ಬಾಯಿಂದ ಕೇಳಿ ಬಂದಿವೆ.
ಆಕಾಶವೇ ಧರೆಗಿಳಿದಂತೆ ಗೋಚರಿಸಿದ ಅದ್ಭುತ ದೃಶ್ಯ ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿಯುವ ಮೂಲಕ ಈ ಅಪರೂಪದ ದೃಶ್ಯ ವಿಡಿಯೋವನ್ನು ಸ್ನೇಹಿತರಿಗೂ ಬಂಧುಗಳೊಡನೆ ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ಜನರು ಈ ಕುರಿತು ಮಾತುಗಳನ್ನಾಡಿದ್ದಾರೆ.
ಇದೊಂದು ಚಂಡ ಮಾರುತ ರೂಪದ ಮೋಡ, ಹಿಮ ಕಣ ಎಂದು ವ್ಯಾಖ್ಯಾನ ನೀಡಿದರೆ, ಗ್ರಾಮೀಣಿಗರು ಇದನ್ನು ಕುದುರೆ ಬಾಲದ ಮೋಡವೆಂದು ಕರೆದಿದ್ದಾರೆ. ಇದೊಂದು ರಾಕ್ಷಸರೂಪಿ ಮೋಡ ಧೋ.. ಎಂದು ಒಂದಡೆ ಮಳೆ ಸುರಿಯುತ್ತಲೇ ಮುಂದೆ ಸಾಗುತ್ತದೆ ಎನ್ನಲಾಗಿದೆ.
ಇದನ್ನು ಕಾವ್ಯ ಭಾಷೆಯಲ್ಲಿ ಮುಗಿಲ ಜೋಗ, ಬಾನ ಜೋಗ, ಆಕಾಶ ಗಂಗೆ, ಬಾನಿಂದ ಭೂವಿಗೆ ಇಳಿದ ಗಂಗೆ, ವರುಣ ದೇವ ಧರೆಗಿಳಿಯುವ ಪರಿ, ಸುಳಿ ಮಳೆ, ಸುಂಟರ ಮಳೆ, ಮಳೆ ಕೋಟೆಯಡಿ ವರುಣ ದೇವ ಹೀಗೆ ಸಾಲು ಕಲ್ಪನೆಗಳ ಸರಮಾಲೆ ಅಲ್ಲಲ್ಲ ಕಲ್ಪನೆಗಳ ಮಳೆ ಮಾಲೆಯನ್ನೆ ಕವಿಯೊಬ್ಬ ಕಟ್ಟಬಹುದು ಏನಂತೀರಿ..?
ಅಲ್ಲದೆ ಮಳೆ, ಮೋಡಗಳ ಕುರಿತು ಸಂಶೋಧನೆ ಎಷ್ಟೇ ಮುಂದುವರೆದರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲವೆಂದು ವಿಜ್ಞಾನವೇ ಹೇಳಿದೆ. ಇದೊಂದು ಪ್ರಕೃತಿ ಸಹಜ ಪ್ರಕ್ರಿಯೆ ಅವಾಗವಾಗ ಇಂತಹ ಅಪರೂಪದ ಘಟನೆಗಳು ಜರುಗುತ್ತವೆ.
ಹಲವು ಬಾರಿ ತಮಗೆ ತೋಚದನ್ನು ವಿಜ್ಞಾನಿಗಳು ಇದೊಂದು ಸೂಪರ್ ಪಾವರ್ ಕಣ್ಣಿಗೆ ಗೋಚರಿಸದ ಶಕ್ತಿ ಎಂದು ಜರಿದಿದ್ದಾರೆ. ನಾವದನ್ನೆ ದೇವರೆನ್ನುತ್ತೇವೆ ಅಷ್ಟೆ ಅಲ್ವಾ.?
–ಮಲ್ಲಿಕಾರ್ಜುನ ಮುದನೂರ.
ಅದ್ಭುತ ದೃಶ್ಯ ಸರ್
Thank u sir..