ಕಥೆ

ಸಮುರಾಯ್ಗಳಿಗೆ ಅಭ್ಯಾಸ ಮುಖ್ಯವೋ? ಅಸೂಯೆ ಮುಖ್ಯವೋ?

ಸಮುರಾಯ್ಗಳಿಗೆ ಅಭ್ಯಾಸ ಮುಖ್ಯವೋ? ಅಸೂಯೆ ಮುಖ್ಯವೋ?

ಸಮುರಾಯ್ಗಳು ಎಂದರೆ ಹಿಂದಿನ ಕಾಲದಲ್ಲಿ ಜಪಾನಿನಲ್ಲಿ ಇರುತ್ತಿದ್ದ ಒಂದು ಜನಾಂಗ. ಅವರು ವೃತ್ತಿಯಲ್ಲಿ ಯೋಧರು. ಅಂದಿನ ರಾಜರು ಈ ಸಮುರಾಯ್ಗಳನ್ನು ಯುದ್ಧದ ಸಮಯಗಳಲ್ಲಿ ತಮ್ಮ ಪರವಾಗಿ ಕಾದಾಡಲು ತಾತ್ಕಾಲಿಕವಾಗಿ ನೇಮಿಸಿಕೊಳ್ಳುತ್ತಿದ್ದರಂತೆ. ಅವರಿಗೆ ಕೈತುಂಬ ಸಂಬಳ ಕೊಡುತ್ತಿದ್ದರು. ಸಂಬಳದ ಸಂಗಡ ಸಾಕಷ್ಟು ಉಡುಗೊರೆ ಗಳನ್ನೂ, ನಗದು ಬಹುಮಾನಗಳನ್ನೂ ಕೊಟ್ಟು ಕಳುಹಿಸುತ್ತಿದ್ದರಂತೆ.

ಒಂದು ಯುದ್ದ ಮುಗಿದ ನಂತರ ಮುಂದಿನ ಯುದ್ದದವರೆಗೆ ಅವರಿಗೆ ಬಿಡುವು ಕೊಡುತ್ತಿದ್ದರು. ಒಂದೂರಿನಲ್ಲಿ ಇಬ್ಬರು ಯೋಧರಿದ್ದರು. ಇಬ್ಬರೂ ಬಾಹುಬಲದಲ್ಲಿ ಸಮಬಲರೇ. ಆದರೆ ಬುದ್ಧಿಬಲದಲ್ಲಿ ಮಾತ್ರ ಬೇರೆ ಬೇರೆ! ಮೊದಲನೆಯಾತ ತನ್ನ ಕಾರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ. ಎರಡನೆಯಾತ ಮಾತ್ರ ಮತ್ತೊಬ್ಬನಿಗೆ ಏನು ಸಿಕ್ಕಿತು ಎಂಬುದರ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿದ್ದ. ತನಗೆ ಕಡಿಮೆ ಸಿಕ್ಕಿತು, ಮತ್ತೊಬ್ಬನಿಗೆ ಹೆಚ್ಚು ಸಿಕ್ಕಿತು ಎಂದು ಅಸೂಯೆ ಪಡುತ್ತಿದ್ದ.

ಒಮ್ಮೆ ಇಬ್ಬರೂ ಅಲ್ಲಿನ ರಾಜರ ಪರವಾಗಿ ಯುದ್ಧದಲ್ಲಿ ಭಾಗವಹಿಸಿದ್ದರು. ಮೊದಲನೆಯ ಯೋಧನ ಯುದ್ಧ ಕೌಶಲವು ರಾಜರಿಗೆ ಹೆಚ್ಚು ಮೆಚ್ಚುಗೆಯಾಯಿತು. ಆತನಿಗೆ ರಾಜರಿಂದ ಬಿರುದು- ಬಾವಲಿಗಳೂ, ನಗದು ಬಹುಮಾನಗಳೂ ಸಿಕ್ಕವು. ಎರಡನೆಯಾತ ಎಂದಿನಂತೆ ತನ್ನ ಕರ್ತವ್ಯಕ್ಕಿಂತ ಹೆಚ್ಚಾಗಿ ಮೊದಲನೆಯಾತನ ಕಾರ್ಯದ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿದ್ದ. ಆತನ ಹೋರಾಟ ಕಳಪೆಯದ್ದಾಗಿತ್ತು. ಹಾಗಾಗಿ ರಾಜರು ಆತನಿಗೆ ಸಲ್ಲಬೇಕಾದಷ್ಟೇ ಸಂಬಳವನ್ನು ಮಾತ್ರ ಕೊಟ್ಟು ಕಳುಹಿಸಿದರು. ಇಬ್ಬರೂ ತಮ್ಮೂರಿಗೆ ಬಂದಾಗ ಮೊದಲನೆಯಾತನಿಗೆ ವೀರೋಚಿತ ಸ್ವಾಗತ ಸಿಕ್ಕಿತು.

ಆತನಿಂದ ತಮ್ಮೂರಿನ ಮರ್ಯಾದೆ ಹೆಚ್ಚಾಯಿತೆಂದು ಪರಿಗಣಿಸಿದ ಊರಿನ ಜನ ಆತನ ಪ್ರತಿಮೆಯನ್ನು ಊರಿನಲ್ಲಿ ಸ್ಥಾಪಿಸಿ ಗೌರವಿಸಿದರು. ಎರಡನೆಯಾತ ಊರಿಗೆ ಮರಳಿ ಬಂದುದನ್ನು ಗಮನಿಸಲೂ ಇಲ್ಲ. ಇದರಿಂದಾಗಿ ಎರಡನೆಯಾತನ ಹೊಟ್ಟೆ ಉರಿ ಹೆಚ್ಚಾಯಿತು. ಪ್ರತಿ ಬಾರಿ ಮೊದಲನೆಯ ಯೋಧನ ಪ್ರತಿಮೆಯ ಮುಂದೆ ನಡೆದು ಹೋಗುವಾಗ ಈತ ಅಸೂಯೆಯಿಂದ ಕುದಿಯುತ್ತಿದ್ದ. ಅವರಿಬ್ಬರಿಗೂ ಮುಂದಿನ ಯುದ್ಧಕ್ಕೆ ಹೋಗುವುದರ ಮೊದಲು ನಾಲ್ಕು ವಾರಗಳ ಬಿಡುವು ಸಿಕ್ಕಿತ್ತು. ಬಿಡುವಿನ ಕಾಲದಲ್ಲಿ ಮೊದಲನೆಯಾತ ವ್ಯಾಯಾಮ ಶಾಲೆಗೆ ಹೋಗುತ್ತಿದ್ದ. ತಮ್ಮ ಗುರುಗಳ ಬಳಿಗೆ ಹೋಗುತ್ತಿದ್ದ, ಮತ್ತಷ್ಟು ಅಭ್ಯಾಸ ಮಾಡುತ್ತಿದ್ದ.

ಆದರೆ ಎರಡನೆಯಾತ ಅಸೂಯೆಯಿಂದ ಕುದಿಯುವುದನ್ನು ಬಿಟ್ಟು ಮತ್ತೇನೂ ಮಾಡುತ್ತಿರಲಿಲ್ಲ. ರಾತ್ರಿಯ ಹೊತ್ತು ಊರಿನವರೆಲ್ಲಾ ಮಲಗಿದ್ದಾಗ ಮೊದಲನೆಯಾತನ ಪ್ರತಿಮೆಯ ಬಳಿ ಹೋಗಿ ಅದರ ಬುಡವನ್ನು ಒಂದಷ್ಟಷ್ಟೇ ಕಡಿದು ಬರುತ್ತಿದ್ದ. ಕೆಲವು ದಿನಗಳ ನಂತರ ಆ ಪ್ರತಿಮೆಯು ತಾನೇ ತಾನಾಗಿ ನೆಲಕ್ಕೆ ಉರುಳಿ ಬೀಳುತ್ತದೆಂದು ಭಾವಿಸುತ್ತಿದ್ದ. ನಾಲ್ಕು ವಾರಗಳ ಸಮಯ ಕಳೆಯಿತು. ಮರುದಿನ ಯುದ್ಧಕ್ಕೆ ಹೊರಡಬೇಕಿತ್ತು. ದಿನಾ ಮಾಡುತ್ತಿದ್ದ ಸಮರಾಭ್ಯಾಸದಿಂದ ಮೊದಲನೆಯ ಯೋಧನ ಧೈರ್ಯ-ಸ್ಥೈರ್ಯಗಳು ಹೆಚ್ಚಾದವು. ಆತ ಆತ್ಮ ವಿಶ್ವಾಸದಿಂದ ಎದೆಯುಬ್ಬಿಸಿ ನಡೆಯುತ್ತಿದ್ದ.

ಎರಡನೆಯಾತ ನಾಳೆ ಪ್ರತಿಮೆ ಕುಸಿದು ಬೀಳುವ ನಿರೀಕ್ಷೆಯಲ್ಲಿ ಒಳಗೊಳಗೇ ಖುಷಿ ಪಟ್ಟುಕೊಳ್ಳುತ್ತಿದ್ದ. ಅಂದು ರಾತ್ರಿಯೂ ಆತ ಮಧ್ಯರಾತ್ರಿ ಸಮಯದಲ್ಲಿ ಪ್ರತಿಮೆಯ ಬಳಿ ಹೋಗಿ ಪ್ರತಿಮೆಯ ಬುಡವನ್ನು ಕಿತ್ತೆಸೆಯುವ ಕಾರ್ಯ ಮಾಡುತ್ತಿದ್ದ. ಅವರು ಅಂದುಕೊಂಡಂತೆ ಪ್ರತಿಮೆಯು ಕುಸಿದು ಬಿತ್ತು. ಆದರೆ ಬುಡದಲ್ಲಿ ಕುಳಿತಿದ್ದ ಅವನ ಮೇಲೆಯೇ ಬಿತ್ತು. ಅವನ ಬಲಿ ತೆಗೆದುಕೊಂಡಿತು.

ಮರುದಿನ ಮುಂಜಾನೆ ಯೋಧನ ವಿಜಯ ಯಾತ್ರೆಯ ಆರಂಭದ ಜತೆಯಲ್ಲೇ ಎರಡನೆಯ ಯೋಧನ ಕಳೇಬರದ ಅಂತಿಮ ಯಾತ್ರೆಯನ್ನೂ ಊರಿನವರು ಮಾಡಬೇಕಾಗಿ ಬಂದಿತ್ತು! ಈಗ ಶತಮಾನಗಳ ಹಿಂದೆ ಸಮುರಾಯ್ಗಳ ಬದುಕಿನಲ್ಲಿ ಅಭ್ಯಾಸ ಅಥವಾ ಅಸೂಯೆಗಳು ಉಂಟು ಮಾಡುವ ಪರಿಣಾಮದ ಬಗ್ಗೆ ನೋಡಿದ್ದೇವಲ್ಲವೇ? ಇಂದಿನ ಶತಮಾನದ ನಮ್ಮ ಬದುಕಿಗೂ ಅವು ಅನ್ವಯವಾಗುತ್ತವೆ ಅಲ್ಲವೇ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button