ಅಂಕಣಸರಣಿ

ಸಾಮಾಜಿಕ ಕಾಳಜಿಯ ಕೃಷಿಕ  ರಾಯಪ್ಪ ಸಾಲಿಮನಿ

ಸಾಮಾಜಿಕ ಕಾಳಜಿಯ ಕೃಷಿಕ  ರಾಯಪ್ಪ ಸಾಲಿಮನಿ

ರಾಘವೇಂದ್ರ ಹಾರಣಗೇರಾ

ಸಾಮಾಜಿಕ ಪರಿಸರದಲ್ಲಿ ನಾವು ಅನೇಕ ಬುದ್ದಿ ಜೀವಿಗಳ, ಸಾಹಿತಿಗಳ, ಚಿಂತಕರ, ಸಂಶೋಧಕರ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಬದುಕು, ಸಾಧನೆಯ ಬಗ್ಗೆ ಮಾತಾನಾಡುತ್ತೇವೆ, ಅವರಿಗೆ ವಿವಿಧ ಸ್ಥಾನಮಾನಗಳನ್ನು ನೀಡಿ ಗೌರವಿಸಿ ಸನ್ಮಾನಿಸುತ್ತೇವೆ.

ಆದರೆ ಅದೇ ಸಮಾಜದಲ್ಲಿ ಸಮಾಜದ ಸ್ವಾಸ್ಥ್ಯವನ್ನು, ಜನರ ಸ್ವಸ್ಥ ಆರೋಗ್ಯಕರ ಬದುಕನ್ನು ಕಾಪಾಡಲು ಸಾಮಾಜಿಕ ಕಾಳಜಿಯಿಂದ ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಶ್ರಮಿಸುತ್ತಿರುವರ ಬಗ್ಗೆ ನಾವು ಬಹಳಷ್ಟು ಗಮನಿಸುವುದೇ ಇಲ್ಲ.

ಇಂತಹ ಸಾಮಾಜಿಕ ಕಾಳಜಿಯ ಕೃಷಿಕರಾದ ಶ್ರೀ ರಾಯಪ್ಪ ಸಾಲಿಮನಿ ಅವರು ನಮಗೆ ತುಂಬಾ ಮುಖ್ಯವಾಗುತ್ತಾರೆ. ಶಹಾಪುರದ ಶ್ರೀ ಭೀಮರಾಯ ಶ್ರೀಮತಿ ದೇವೆಕೆಮ್ಮ ಸಾಲಿಮನಿ ಎಂಬ ದಂಪತಿಗಳ ಸುಪುತ್ರರಾದ ರಾಯಪ್ಪ ಸಾಲಿಮನಿ ಅವರು, ಶಹಾಪುರದ ಸಾರ್ವಜನಿಕ ಪರಿಸರದಲ್ಲಿ ಎಲ್ಲರಿಗೂ ಬೇಕಾಗುವ ವ್ಯಕ್ತಿಯಾಗಿ ಕಂಡುಬರುತ್ತಾರೆ.

ಸಾಮಾಜಿಕ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುವ ಪತ್ನಿ ಶ್ರೀಮತಿ ಅಯ್ಯಮ್ಮ ಮತ್ತು ಇಬ್ಬರು ಪುತ್ರರು, ಒಬ್ಬ ಪುತ್ರಿಯೊಂದಿಗೆ ಅರ್ಥಪೂರ್ಣ ಸಂಸಾರಿಕ ಜೀವನವನ್ನು ಸಾಗಿಸುತ್ತಿರುವ ರಾಯಪ್ಪ ಸಾಲಿಮನಿ ಅವರು 40 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಎಲ್ಲರೊಂದಿಗೆ ಪ್ರೀತಿಯ ಸ್ನೇಹ ಬಯಸುವ, ಇತರರ ಅಭಿಪ್ರಾಯಗಳನ್ನು ಗೌರವಿಸುವ ಹಾಗೂ ಅವುಗಳಿಗೆ ಮನ್ನಣೆ ನೀಡುವ ಸರಳ, ಸೌಜನ್ಯ ಮೂರ್ತಿಗಳಾಗಿದ್ದಾರೆ.

ರಾಯಪ್ಪ ಸಾಲಿಮನಿ ಜೊತೆ ವಿನಯವಾಣಿ ಬಳಗದ ಲೇಖಕ ರಾಘವೇಂದ್ರ ಹಾರಣಗೇರಾ.

ಒಂದು ಬಾರಿ ಶಹಾಪುರದ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ರಾಯಪ್ಪ ಸಾಲಿಮನಿ ಅವರಿಗೆ ರಾಜಕೀಯ ಬದಕು ಬಹಳಷ್ಟು ಇಡಿಸಲಿಲ್ಲ. ಕೃಷಿಯ ಕಾಯಕದಲ್ಲಿ ತುಂಬಾ ನೆಮ್ಮದಿ, ಸಂತೃಪ್ತಿ ಇದೆ ಎಂದು ವ್ಯವಸಾಯ ಜೀವನಕ್ಕೆ ಹೆಚ್ಚು ಒಲವನ್ನು ತೋರಿದರು.

ಕೃಷಿಯಲ್ಲಿ ನನಗೆ ಲಾಭ- ನಷ್ಟ ಮುಖ್ಯವಲ್ಲ ಇದರಲ್ಲಿ ಶ್ರಮದ ಆರೋಗ್ಯಕರ ಜೀವನ ಇದೆ ಎಂದು ನಂಬಿ ಕೃಷಿಯಲ್ಲಿ ನಿರತರಾಗಿದ್ದೇನೆ ಎಂದು ಹೆಮ್ಮೆಯಿಂದ ನುಡಿಯುವ ರಾಯಪ್ಪ ಸಾಲಿಮನಿ ಅವರು ಹೊಲದಲ್ಲಿ ಜೇನು ಸಾಕಾಣಿಕೆ, ದಾಳಿಂಬೆ ಬೆಳೆ ಬೆಳೆಯುವ ಮತ್ತು ಈಜು ಕೊಳ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಕೃಷಿ ಜೀವನದೊಂದಿಗೆ ಜನರ ಅನೇಕ ಸಮಸ್ಯೆಗಳನ್ನು ನ್ಯಾಯ ಪಂಚಾಯತಿಯ ಮೂಲಕ ಪರಿಹರಿಸುವ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶಹಾಪುರದ ಹಾಗೂ ಸುತ್ತಲಿನ ತಾಲೂಕುಗಳ, ಹಳ್ಳಿಗಳ ಅನೇಕ ಜಾತಿ, ಜನಾಂಗ, ಪಂಥದ ಜನರು ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಅವುಗಳಗೆ ಪರಿಹಾರ ಕಂಡುಕೊಳ್ಳಲು ಇವರಲ್ಲಿ ಬರುತ್ತಾರೆ.

ಹಣ, ಆಸ್ತಿ, ಅಂತಸ್ತು, ಕೌಟುಂಬಿಕ ವಿವಿಧ ಕಾರಣಗಳಿಗಾಗಿ ಉಂಟಾದ ಜಗಳ, ತಕರಾರು, ವೈಮನಸ್ಸು, ದ್ವೇಷ ಮುಂತಾದವುಗಳಿಂದ ಜನರು ಕೋರ್ಟ್, ಕಛೇರಿ, ಜೈಲುಗಳಿಗೆ ತಿರುಗಾಡಲು ಅವಕಾಶ ಕೊಡದೆ ಆ ಸಮಸ್ಯೆಗಳನ್ನು ಪರಿಹರಿಸಿ ಪ್ರೀತಿ, ವಿಶ್ವಾಸ, ಹೊಂದಾಣಿಕೆಯಿಂದ ಬದುಕು ಸಾಗಿಸಲು ಮಾರ್ಗ ತೋರುತ್ತಾರೆ.

ಯಾವ ಶಾಲೆ, ಕಾಲೇಜುಗಳಲ್ಲಿ ಓದಿ ಶಿಕ್ಷಣ ಪಡೆಯದ ರಾಯಪ್ಪ ಸಾಲಿಮನಿ ಅವರು ಅನೇಕ ಪದವಿ, ಅಂತಸ್ತು, ಉದ್ಯೋಗ, ಸ್ಥಾನಮಾನ ಪಡೆದವರ ಹಲವಾರು ಕೌಟುಂಬಿಕ, ಆರ್ಥಿಕ, ವಿವಿಧ ಸಮಸ್ಯೆಗಳನ್ನು ನ್ಯಾಯಸಮ್ಮತವಾಗಿ ಬಗೆಹರಿಸಿ ಅನೇಕ ಸಮುದಾಯಗಳ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದಾರೆ.

ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಜನರು ಹಲವಾರು ದೃಷ್ಟಿಕೋನದಿಂದ ಕಾಣುತ್ತಾರೆ. ನಾವು ಯಾರು ಪರಿಪೂರ್ಣರಲ್ಲ ಆದರೆ ನಾವು ವ್ಯಕ್ತಿಯ ಒಳ್ಳೆಯ ಕೆಲಸ, ಕಾರ್ಯಗಳನ್ನು ಗುರತಿಸಿ ಗೌರವಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ಪ್ರೀತಿ, ವಿಶ್ವಾಸ, ಸ್ನೇಹಕ್ಕೆ ಭಾಗುವ ರಾಯಪ್ಪ ಸಾಲಿಮನಿ ಅವರು ನೇರ, ನಿಷ್ಠೆ, ಪ್ರಾಮಾಣಿಕತೆ, ನ್ಯಾಯ ಸಮ್ಮತ ನಡುವಳಿಕೆಯ, ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡಿಸುವ, ಇರುವುದನ್ನು ನೇರವಾಗಿ ಹೇಳುವ ಎದಗಾರಿಕೆಯ ಮುಕ್ತ ಮನಸ್ಸಿನ ವ್ಯಕ್ತಿಯಾಗಿ ಎಲ್ಲರಿಗೂ ಆಪ್ತರಾಗಿ ಕಂಡುಬರುತ್ತಾರೆ.

ಅನೇಕ ಸಂಘ ಸಂಸ್ಥೆಗಳೊಂದಿಗೆ ಒಡನಾಟವನ್ನು ಇಟ್ಟುಕೊಂಡಿರುವ ಅವರು ಶಹಾಪುರದ ಆದಿತ್ಯ ಶಿಕ್ಷಣ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ತಳ ಸಮುದಾಯಗಳ ಜನರು ಕ್ಷುಲ್ಲಕ ಕಾರಣಗಳಿಗಾಗಿ ಕೋರ್ಟ್ ಕಛೇರಿಗಳಿಗೆ ಅಲೆದು ಜೀವನ ಹಾಳು ಮಾಡಿಕೊಳ್ಳದೆ ಪರಸ್ಪರ ಕುಳಿತು ತಾಳ್ಮೆ, ಸಹನೆ, ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಿ ಒಳ್ಳೆಯ ಜೀವನ ಸಾಗಿಸಬೇಕೆಂಬ ಕಾಳಜಿ ಹೊಂದಿರುವ ರಾಯಪ್ಪ ಸಾಲಿಮನಿ ಅವರು ಹಣ, ಪ್ರತಿಷ್ಠೆ, ಅಂತಸ್ತಿಗಿಂತ ಪ್ರೀತಿ, ವಿಶ್ವಾಸವೇ ನಿಜವಾದ ಸಂಪತ್ತು ಎಂದು ನಂಬಿದವರು.

ಇಂದಿನ ಲಾಭ ನಷ್ಟದ ವ್ಯಾಪಾರಿ ಮನೋಭಾವ ಹೊಂದಿರುವವರು ಹೆಚ್ಚಾಗಿ ಕಂಡು ಬರುತ್ತಿರುವ ಸಂದರ್ಭದಲ್ಲಿ ಸರಳ ವಿನಯವಂತಿಕೆ, ಪ್ರಾಮಾಣಿಕತೆಯ ಕೃಷಿಕ ಹಾಗೂ ಸಾಮಾಜಿಕ ಕಾಳಜಿಯ ರಾಯಪ್ಪ ಸಾಲಿಮನಿ ಅವರು ತುಂಬಾ ಮುಖ್ಯವಾಗಿ ಕಂಡುಬರುತ್ತಾರೆ.

ಜನರಿಗೆ ಒಳ್ಳೆಯದನ್ನೆ ಮಾಡಬೇಕೆನ್ನುವ ಸಾತ್ವಿಕ ಹಂಬಲ, ನಿಷ್ಠೆ, ನಿಷ್ಠುರತೆ, ಬದ್ದತೆ ಹೊಂದಿರುವ ರಾಯಪ್ಪ ಸಾಲಿಮನಿ ಅವರು ಸಮಾಜದಲ್ಲಿ ಸಂಬಂಧಗಳು ಮುರಿ ಬಾರದು, ಅರಳಬೇಕು. ಪರಸ್ಪರರ ಭಾವನೆಗಳಿಗೆ ಗೌರವಿಸಬೇಕು, ಬೆಲೆ ಕೊಡಬೇಕು. ಮೋಸ, ವಂಚನೆ ಮಾಡಬಾರದು ಎಂದು ಮಾನವೀಯ ಕಾಳಜಿ ಅವರಲ್ಲಿ ಕಾಣುತ್ತೇವೆ.

ಶಹಾಪುರದ ಸಾಮಾಜಿಕ ಪರಿಸರದಲ್ಲಿ ಎಲ್ಲಾ ಜಾತಿ, ಜನಾಂಗ, ಮತ, ಧರ್ಮದವರಿಗೆ ಬೇಕಾಗುವ ಪ್ರಾಮಾಣಿಕ ವ್ಯಕ್ತಿಯಾಗಿ, ಕಿರಿಯರಿಗೆ ರಾಯಪಣ್ಣನಾಗಿ ಹಿರಿಯರಿಗೆ ಸಹೋದರ ರಾಯಪ್ಪನಾಗಿ ಗುರುತಿಸಿಕೊಂಡಿದ್ದಾರೆ.

-ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ. -ಉಪನ್ಯಾಸಕರು.

Related Articles

Leave a Reply

Your email address will not be published. Required fields are marked *

Back to top button