ಪ್ರಮುಖ ಸುದ್ದಿ

ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ದೀಪಾವಳಿ ಆಚರಿಸಿ – ಜಿಲ್ಲಾಧಿಕಾರಿ ಕರೆ

ಯಾದಗಿರಿಃ ಬೆಳಕಿನ ಹಬ್ಬ ದೀಪಾವಳಿಯನ್ನು ಈ ಬಾರಿ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ ಶಾಂತಿ, ಸರಳ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಜಿಲ್ಲೆಯ ಜನತೆಗೆ ಕರೆ ನೀಡಿದರು.

ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸರಳ ಆಚರಣೆ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೀಪಾವಳಿಯನ್ನು ಪ್ರತಿ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತಿತ್ತು. ಈ ಬಾರಿ ಕೋವಿಡ್-19 ಸೋಂಕಿನಿಂದಾಗಿ ಹಬ್ಬ ಆಚರಿಸಲು ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ, ಅದರಲ್ಲಿ ಪರಿಸರಕ್ಕೆ ಪೂರಕವಾದ ಹಸಿರು ಪಟಾಕಿಗಳನ್ನೇ ಸಾರ್ವಜನಿಕರು ಬಳಸುವಂತೆ ಕೋರಲಾಗಿದೆ,

ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಬೇಕು, ಸಿಎಸ್ಐಆರ್ ಚಿನ್ಹೆಯುಳ್ಳ ಹಸಿರು ಪಟಾಕಿಗಳನ್ನು ಬಳಸಬೇಕು, ಅದನ್ನು ಹೊರತು ಪಡಿಸಿ ಬೇರೆ ಪಟಾಕಿಗಳನ್ನು ಉಪಯೋಗಿಸಬಾರದು, ಈ ದಿಸೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕೆಂದು ಅವರು ಹೇಳಿದರು.

ಆರೋಗ್ಯ ಇಲಾಖೆಯ ಮಾನದಂಡಗಳ ಪ್ರಕಾರ 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೀರಿದ ವ್ಯಕ್ತಿಗಳು, ಗರ್ಭಿಣಿಯರು, ಬಾಣಂತಿಯರು ಮತ್ತು ಜ್ವರ, ಕೆಮ್ಮು ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಭಾಗವಹಿಸಬಾರದು, ಕೋವಿಡ್-19 ಹಿನ್ನಲೆಯಲ್ಲಿ ಸ್ವಚ್ಛತೆ ಕಾಪಾಡುವುದು, ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಜರ್ ಬಳಸಬೇಕು. ಮಾಸ್ಕ್ ಧರಿಸದವರ ವಿರುದ್ದ ಸರ್ಕಾರದ ನಿರ್ದೇಶನದಂತೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ವೆಂಕಟೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮುಖಂಡರು ಸಭೆಯಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button