ಇಂದಿನ ದಿನಮಾನಗಳಲ್ಲಿ ಸಾಲಿ ಗೇಟಿಗೆ ನಮಸ್ಕರಿಸಿ ಕೀಲಿ ಹಾಕ್ತಿರುವವರು ಯಾರ್ರಿ ಅವರು.?
ಸಾಲಿ ಗೇಟಿಗೆ ನಮಸ್ಕರಿಸಿ ಕೀಲಿ ಹಾಕ್ತಿರುವವರು ಯಾರ್ರಿ ಅವರು ? ( ಶ್ರೀ ಎನ್ ಡಿ ಪಾಟೀಲ್ ರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ)
ನಮಸ್ಕಾರ ಮಾಡಿ ಸಾಲಿ ಕೀಲಿ ತಗೆದ ವ್ಯಕ್ತಿ ,ಸಾಲಿ ತುಂಬಾ ಪಾದರಸದಂಗ ಓಡಾಡಿ ಮಕ್ಕಳೊಂದಿಗೆ ಮಾತಾಡ್ತಾ,ಆಟ ಅಡಿಸ್ತಾ ,ಅನ್ನ ಕೊಡುವ ನೆಲ ದೇವರ ಸಮಾನ ಎಂಬ ಭಾವ ಇಟ್ಟು ದುಡಿಯುವ ಕೈ ಮತ್ತು ಮನಸ್ಸಿದೆಯಲ್ಲ ಅದು ದೊಡ್ಡ ಆಸ್ತಿ .
ಮನೆಯ ಮಕ್ಕಳಂತೆ ಶಾಲಾ ಮಕ್ಕಳನ್ನು ತುಂಬು ಪ್ರೀತಿಯಿಂದ ಬದುಕಿನ ದಾರಿ ತೋರುವ ಅಪರೂಪದ ವ್ಯಕ್ತಿ ,ನೂತನ ಹುಣಸಗಿ ತಾಲ್ಲೂಕಿನ ಸಾಂಸ್ಕೃತಿಕ ಶಕ್ತಿ ,ಮಕ್ಕಳ ಪಾಲಿನ ಮುದ್ದಿನ ಮೇಷ್ಟ್ರು ,ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರೂ ಸಾಹಿತ್ಯ,ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟತೆ ಹಾಗೂ ಯಶಸ್ವಿಯಾಗಿಸುವ ಸಂಘಟನಾ ಶಕ್ತಿ ಶ್ರೀ ನಾಗನಗೌಡ ಡಿ ಪಾಟೀಲ್ ಅವರು,ದೈಹಿಕ ಶಿಕ್ಷಣ ಶಿಕ್ಷಕರು ಬಾಲಕಿಯರ ಪ್ರೌಢಶಾಲೆ ಯುಕೆಪಿ ಕ್ಯಾಂಪ್ ಹುಣಸಗಿ.
ವಿಶ್ರಾಂತಿ ಎಂದರೆ ಕೆಲಸದ ಬದಲಾವಣೆ ಎಂಬ ತತ್ವ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರು,ಶಾಲೆಯ ಸದಸ್ಯರೆಲ್ಲರದ್ದು ಒಂದು ಮನೆಯೆಂಬ ಭಾವ ತುಂಬಿದವರು,ಸುಮ್ಮನೆ ಕುಳಿತುಕೊಳ್ಳುವುದು ಸೈತಾನನ ಅವ್ಹಾನ ಎಂದರಿತವರು ಪಾಟೀಲರು .
೨೩ ವರ್ಷಗಳ ಈ ತಮ್ಮ ಸೇವಾ ಅವಧಿಯಲ್ಲಿ 14 ವಲಯ ಮಟ್ಟದ ಕ್ರೀಡಾಕೂಟಗಳನ್ನು,ತಾಲ್ಲೂಕು ಕ್ರೀಡಾಕೂಟಗಳನ್ನು,ದಸರಾ ಕ್ರೀಡಾಕೂಟಗಳನ್ನು ಸಂಘಟಿಸಿ,ಯಶಸ್ವಿಯಾಗಿ ನಡೆಸಿದ ಶ್ರೆಯಸ್ಸು ಇವರದಾಗಿದೆ.
ಹುಣಸಗಿ ,ಕೊಡೆಕಲ್ ,ಕಕ್ಕೆರಿ,ಸುರಪುರ,
ಕೆಂಭಾವಿ ಮುಂತಾದ ಕಡೆಗಳಲ್ಲಿ ಕಬಡ್ಡಿ,ಖೋಖೊ, ಮುಂತಾದ ಟೂರ್ನಮೆಂಟ್ ಗಳಿದ್ದಲ್ಲಿ ಅವರ ಧ್ವನಿ ಹಾಗೂ ಕೊರಳಲ್ಲಿ ಹಾಕಿಕೊಂಡ ಸೀಟಿಯ ಸಪ್ಪಳ ಕೇಳದೆಯಿರಲಾದು.
ಉತ್ತಮ ಸಂಸ್ಕಾರ ಹಾಗೂ ಶರಣ ಪರಂಪರೆಯ ಮನೆತನ ಪಾಟೀಲರದ್ದು ,ಹೀಗಾಗಿ ಮಕ್ಕಳಿಗೆ ಉತ್ತಮ ಸಂದೇಶವನ್ನು ಬಿತ್ತುವಲ್ಲಿ ಹಾಗೂ ಉತ್ತಮ ಸಂಸ್ಕಾರ ಒದಗಿಸವಲ್ಲಿ ಪ್ರಮುಖ ಪಾತ್ರ ಇವರದ್ದಾಗಿದೆ.ಶಾಲಾ ಮಕ್ಕಳಿಗೆ ಯೋಗ,ಧ್ಯಾನ ,ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾರೆ.
ಸಾಮಾಜಿಕ ,ಶೈಕ್ಷಣಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಗುರ್ತಿಸಿಕೊಂಡಿರುವ ನಾಗನಗೌಡ ಪಾಟೀಲರು,ಧಾರ್ಮಿಕ ನಾಯಕರು ಹಾಗೂ ಜನ ಪ್ರತಿನಿಧಿಗಳು ,ಅಧಿಕಾರವರ್ಗದವರು ,ಪಟ್ಟದ ನಾಗರಿಕರು ಇವರ ಕಾರ್ಯವನ್ನು ಮನಸಾರೆ ಮೆಚ್ಚುತ್ತಾರೆ.
ನಿರೂಪಕರಾಗಿ,ಸಂಪನ್ಲೂಲ ವ್ಯಕ್ತಿಯಾಗಿ,ಯೋಗ ಶಿಕ್ಷಕರಾಗಿ,ಶಿಕ್ಷಕರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ರಾಜ್ಯಮಟ್ಟದವರೆಗೆ ಭಾಗವಹಿಸಿದ ಕೀರ್ತಿ ನಾಗನಗೌಡ ಪಾಟೀಲರಿಗೆ ಲಭಿಸಿದೆ.
2020 ನೇ ಸಾಲಿನ ಯಾದಗಿರಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಆರೋಗ್ಯ ಸರಿಯಿರದ ಕಾರಣ ಪ್ರಶಸ್ತಿ ಸ್ವೀಕರಿಸಲಾಗಿರಲಿಲ್ಲ. ಇಂದು ಶ್ರೀ ನಾಗನಗೌಡ ಡಿ ಪಾಟೀಲರಿಗೆ ಮಾನ್ಯ ಉಪನಿರ್ದೇಶಕರು ಪ್ರಶಸ್ತಿ ನೀಡಿ ಕಾರ್ಯಾಲಯದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಷಯ ಪರಿವೀಕ್ಷಕರಾದ ಶ್ರೀ ಈರಣ್ಣ ಕನ್ನೆಳ್ಳಿ ,ಎಪಿಸಿ ಶ್ರೀ ಚಂದ್ರಕಾಂತ ಕೊಣ್ಣುರ,
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ವಿಶ್ವನಾಥ ಕಡ್ಡಿ,ಹಾಗೂ ಕಾರ್ಯಾಲಯದ ಶ್ರೀ ಶರ್ಫಿದ್ದೀನ್ ಸರ್,
ಶ್ರೀ ಬಿ ಸಿ ಪಾಟೀಲ್ ಸರ್ ಹಾಗೂ ಶ್ರೀ ಮಲ್ಲಿಕಾರ್ಜುನ್ ಸರ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೊಳಗಿನ ಉತ್ಸಾಹ ,ಶ್ರಮಿಸುವ ಶಕ್ತಿ ,ಸೇವಾ ಮನೋಭಾವ ಸದಾ ನಮಗೆ ಮಾರ್ಗದರ್ಶಿಯೆಂದು ಬಯಸುತ್ತ ಸದಾ ಕಾಲ ಸಾಧನೆಯ ಶಿಖರ ತಮಗೆ ಒದಗಲೆಂದು ಬಯಸುತ್ತ…
ಸಾಲಿ ಗೇಟಿಗೆ ನಮಸ್ಕರಿಸಿ ಕೀಲಿ ಹಾಕ್ತಿರುವವರು ಯಾರ್ರಿ ಅವರು ? ಎಂದು ಅಂದು ನಾನೆ ಅಂದವನು.ಇಂದು ನಿಮಗೆ ಸನ್ಮಾನಿಸುತ್ತಿರುವುದು ಕಂಡು ಸಂಭ್ರಮಿಸಿದವನು ನಾನು….
ತಮಗೆ ಅನಂತ ಅನಂತ ಅಭಿನಂದನೆಗಳು ಮಾಮ…
ನಿಮ್ಮ ಸಾಧನೆಯ ಪಥವೆಮಗೆ ಕಲ್ಯಾಣಮಾರ್ಗ…
– ಸಾಹೇಬಗೌಡ ಯ. ಬಿರಾದಾರ