ಮೊಮ್ಮಗನ ಪ್ರೀತಿ, ಆಪ್ತತೆಗೆ ಅಜ್ಜಿಯ ಅನಾರೋಗ್ಯ ಮಾಯ
ದಿನಕ್ಕೊಂದು ಕಥೆ
ವೃದ್ಧೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳು. ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಕೈಯಿಂದಾದ ಪ್ರಯತ್ನ ಮಾಡಿ ಕೊನೆಗೆ ಕೈಚೆಲ್ಲಿ ‘ಈಗ ಯಾವುದೇ ಚಿಕಿತ್ಸೆ ನೀಡಿದರೂ ಅವರು ಸ್ಪಂದಿಸೋದಿಲ್ಲ. ಅವರ ಜೀವನದ ಕೆಲವೇ ದಿನಗಳು ಉಳಿದಿವೆ. ಮನೆಗೆ ಕರೆದುಕೊಂಡು ಹೋಗಿ‘ ಎಂದರು.
ಮಗ-ಸೊಸೆ ಆ ವೃದ್ಧೆಯನ್ನು ನೋಡಿಕೊಳ್ಳಲು ನರ್ಸ್ನ್ನು ನೇಮಿಸಿ ಆಫೀಸಿನ ಜಂಜಾಟದಲ್ಲಿ ಮುಳುಗಿದರು. ಹಾಸ್ಟೇಲ್ನಲ್ಲಿದ್ದ ಪುಟ್ಟ ಮೊಮ್ಮಗ ರಜೆಗೆಂದು ಮನೆಗೆ ಬಂದವನೇ ಅಜ್ಜಿ ಬಳಿ ಹೋಗಿ ಅವಳ ತಲೆ ಮೇಲೆ ಕೈಯಾಡಿಸಿ ‘ನಿಂಗೆ ಏನೂ ಆಗಿಲ್ಲ ಅಜ್ಜಿ, ಬೇಗ ಹುಷಾರಾಗ್ತಿ‘ ಎಂದು ತನ್ನ ಬಾಲಭಾಷೆಯಲ್ಲೇ ನುಡಿದ.
ನಗುವನ್ನೇ ಮರೆತಿದ್ದ ಆ ಅಜ್ಜಿಯ ಮೊಗದಲ್ಲಿ ಅಂದು ನಗು ಅರಳಿತು-ಇನ್ನೂ ಬದುಕಬೇಕು ಎಂಬ ಆಶಾವಾದವೂ ಚಿಗುರೊಡೆಯಿತು. ಸ್ವಲ್ಪ ಹೊತ್ತಲ್ಲೇ ಮತ್ತೆ ಅಜ್ಜಿ ಕೋಣೆಗೆ ಬಂದ ಮಗು ‘ನೀನು ತುಂಬ ಚೆನ್ನಾಗಿ ಅಡುಗೆ ಮಾಡ್ತಿಯಂತೆ, ನನಗಾಗಿ ಅಡುಗೆ ಮಾಡಿ ತುತ್ತು ತಿನಿಸೋದಿಲ್ವೆ?‘ ಎಂದು ಕೇಳಿತು.
ಇದನ್ನು ನೋಡಿ ಗದರಿದ ನರ್ಸ್ ‘ಅವರಿಗೆ ಹುಷಾರಿಲ್ಲ ಅಂತ ಗೊತ್ತಿಲ್ವ ನಿನಗೆ, ಆಚೆ ಹೋಗು. ತೊಂದರೆ ಕೊಡಬೇಡ‘ ಎಂದಳು. ಮಗುವನ್ನು ಗದರಿಸಬೇಡ ಎಂದು ಕಣ್ಸನ್ನೆಯಲ್ಲೇ ನರ್ಸ್ಗೆ ಸೂಚಿಸಿದಳು ಅಜ್ಜಿ. ಮರುದಿನ ಒಂದಿಷ್ಟು ಚೈತನ್ಯ ಬಂತು. ನರ್ಸ್ ನೆರವಿನಿಂದ ಸ್ನಾನ ಮಾಡಿದ ಆಕೆ ‘ನನ್ನನ್ನು ಅಡುಗೆಮನೆಗೆ ಕರೆದು ಕೊಂಡು ಹೋಗು‘ ಎಂದಳು.
ಅಡುಗೆ ಕೆಲಸದಲ್ಲೂ ನರ್ಸ್ನಿಂದಲೇ ಸಣ್ಣಪುಟ್ಟ ಸಹಾಯ ಪಡೆದು ಊಟ ತಯಾರಿಸಿಯೇ ಬಿಟ್ಟಳು ಅಜ್ಜಿ. ಮೊಮ್ಮಗನನ್ನು ನೆಲದ ಮೇಲೆ ಕೂರಿಸಿ, ಕೈತುತ್ತು ತಿನಿಸಿದಳು. ಅಷ್ಟರಲ್ಲೇ, ಆ ವೃದ್ಧೆಯ ಕಣ್ಣಂಚು ಒದ್ದೆಯಾದವು. ‘ಯಾಕೇ ಅಳ್ತಾ ಇದ್ದಿ’ ಎಂದು ಮಗು ಕೇಳಿದಾಗ ‘ಏನಿಲ್ಲ, ನಿನ್ನ ಅಪ್ಪನಿಗೂ ಹೀಗೆ ಕೈತುತ್ತು ಹಾಕಿದ್ದೆ. ಆಗೆಲ್ಲ ಖುಷಿಪಡ್ತಿದ್ದ. ಈಗ ಆತ ಬರೀ ದುಡ್ಡಲ್ಲೇ ಖುಷಿ ಪಡ್ತಾನೆ ಕಣಪ್ಪ, ಹುಷಾರಿಲ್ಲದ ಅಮ್ಮನನ್ನು ಮಾತನಾಡಿಸಲೂ ಆತನಿಗೆ ಪುರುಸೋತ್ತಿಲ್ಲ ನೋಡು’ ಅಂದಾಗ ಥಟ್ಟನೇ ಅಜ್ಜಿ ಕೈ ಹಿಡಿದುಕೊಂಡ ಮಗು ‘ನಾನು ಹಾಸ್ಟೇಲ್ಗೆ ಹೋಗೋಲ್ಲ. ಇಲ್ಲೇ ಇದ್ದು ಚೆನ್ನಾಗಿ ಓದ್ತೇನೆ. ನಿನಗೆ ಔಷಧ ಕೊಟ್ಟು ಕಾಯಿಲೆ ವಾಸಿ ಮಾಡ್ತೇನೆ’ ಎಂದಿತು.
ಈ ಪ್ರೀತಿಯ ಮಾತಿಗೆ, ಆಪ್ತತೆಯ ಸ್ಪರ್ಶಕ್ಕೆ ಅಜ್ಜಿ ಮತ್ತೆ ಗೆಲುವಾದಳು!! ಇದು ಒಂದು ಮನೆಯ ಕಥೆಯೇನಲ್ಲ, ಕಹಾನಿ ಘರ್ ಘರ್ ಕೀ ಎನ್ನಬಹುದೇನೋ. ಪ್ರೀತಿ ಮತ್ತು ಸಂಬಂಧಗಳಿಗೆ ಇರುವ ಶಕ್ತಿಯೇ ಅಸೀಮ ಮತ್ತು ಅದಮ್ಯವಾದದ್ದು. ಆಸರೆ, ಸಾಂತ್ವನದ ಒಂದು ಮಾತು, ಏನೇ ಆಗಲಿ ಕಷ್ಟವನ್ನು ಮೀರಿ ಬೆಳೆಯೋಣ ಎಂಬ ಭಾವ, ನಮ್ಮವರು ಎಂಬ ಕಳಕಳಿ, ಸಮಷ್ಟಿಯನ್ನು ಸಂವೇದನೆಯಿಂದ ಕಾಣುವ ದೃಷ್ಟಿಕೋನ… ಇದೆಲ್ಲವೂ ಅಸಾಧಾರಣ ಪರಿವರ್ತನೆಗೆ ನಾಂದಿ ಹಾಡಬಲ್ಲವು. ಕೊರಗುವುದನ್ನು ಬಿಟ್ಟು, ಬಾಳುವುದನ್ನು ಕಲಿತು, ಇತರರಿಗೂ ಖುಷಿ ಹಂಚುತ್ತ ಸಾಗುವುದೇ ನಿಜವಾದ ಜೀವನ.
ಯಾರೋ, ಕೇಳಿದರಂತೆ ಜೀವನಕ್ಕೇನು ಅರ್ಥವಿದೆ ಅಂತ. ಅದಕ್ಕೆ ಚಿಂತಕ ನೀಡಿದ ಚೆಂದದ ಉತ್ತರ- ಅರ್ಥ ನೀಡಲೆಂದೇ ಆ ಜೀವನವನ್ನು ನಮಗೆ ಭಗವಂತ ನೀಡಿದ್ದಾನೆ. ಹಾಗಾಗಿ, ಜೀವನಕ್ಕೆ ಅರ್ಥ, ಬಣ್ಣ, ಬೆಳಕು ತುಂಬೋಣ. ಏನಂತೀರಿ?
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882