124 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ಖರ್ಗೆ ಪತ್ರ
124 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ಖರ್ಗೆ ಪತ್ರ
ಕಲಬುರಗಿಃ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪಟ್ಟಿಯಲ್ಲಿನ 124 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದ ಅವರು, ನವೆಂಬರ್ 13, 2019 ರಂದು ಕರ್ನಾಟಕ ಲೋಕಸೇವಾ ಆಯೋಗ ಹೊರಡಿಸಿದ ಅಭ್ಯರ್ಥಿಗಳ ಆಯ್ಕೆಪಟ್ಟಿಯಲ್ಲಿ ಹೆಸರಿರುವ ವಿವಿಧ ಇಲಾಖೆಗಳ 661 ಅಭ್ಯರ್ಥಿಗಳ ಪೈಕಿ ನೇಮಕಾತಿ ಆದೇಶ ಕೊಡದ ಸರ್ಕಾರದ ಬೇರೆ ಬೇರೆ ಇಲಾಖೆಗಳ 124 ಅಭ್ಯರ್ಥಿಗಳಿಗೆ ಈ ಕೂಡಲೇ ನೇಮಕಾತಿ ಆದೇಶ ಕೊಡುವಂತೆ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ಹೊರಡಿಸಿದ ಅಧಿಸೂಚನೆ ಸಂಖ್ಯೆ 🙁 ಆರ್ (3) 45/2016-17) ನಡೆಸಿದ ಶೀಘ್ರ ಲಿಪಿಗಾರರು ಹಾಗೂ ಬೆರಳಚ್ಚುಗಾರರ ಹುದ್ದೆ ನೇಮಕಾತಿಯಲ್ಲಿ ಉತ್ತೀರ್ಣರಾದ 661 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ದಿ.ನ13, 2019 ರಂದು ಪ್ರಕಟಿಸಲಾಗಿತ್ತು
ಆ ನಂತರ ಅಭ್ಯರ್ಥಿಗಳ ಸಿಂಧುತ್ವ ಹಾಗೂ 371 ( J ) ಹಾಗೂ ಇತರೆ ದಾಖಲಾತಿಗಳನ್ನು ಪರಿಶೀಲಿಸಿ, ನೇಮಕಾತಿ ಆದೇಶ ನೀಡಲಾಗಿ 537 ಅಭ್ಯರ್ಥಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆದರೆ,
ಸಾರಿಗೆ, ವಿಕಲಚೇತನ, ಸಹಕಾರ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗಳು ಉಳಿದ 124 ಅಭ್ಯರ್ಥಿಗಳಿಗೆ ಇಲ್ಲಿಯವರೆಗೂ ಯಾವುದೇ ನೇಮಕಾತಿ ಆದೇಶ ನೀಡಿರುವುದಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ ನೇಮಕಾತಿ ಪ್ರಕ್ರಿಯೆ ನಡೆದು 4 ವರ್ಷ ಕಳೆದಿದ್ದು, ಯಾವುದೇ ಉದ್ಯೋಗ ಇಲ್ಲದ ಈ 124 ಅಭ್ಯರ್ಥಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಬಡತನದ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವ ಅಭ್ಯರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಆಯೋಗ ನಡೆಸುವ ಶೀಘ್ರ ಲಿಪಿಗಾರರು ಹಾಗೂ ಬೆರಳಚ್ಚುಗಾರರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆದರೆ, ನೇಮಕಾತಿ ಆದೇಶದ ವಿಳಂಬದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಹೀಗಾಗೊ ಸರಕಾರ ಈ ಕೂಡಲೇ ಆ ಎಲ್ಲಾ 124 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ದೊರಕಿಸಿಕೊಡುವ ಮೂಲಕ ಬಡ ಕುಟುಂಬದ ಅಭ್ಯರ್ಥಿಗಳ ಬಾಳಿಗೆ ಬೆಳಕಾಗಬೇಕೆಂದು ಅವರು ಮನವಿ ಮಾಡಿದ್ದಾರೆ.




