ರಾಜ್ಯಕ್ಕೆ ಮಾದರಿ ಈ ಸಂಕ್ಲಾಪುರ ಸರ್ಕಾರಿ ಶಾಲೆ
ಇಡೀ ಕರ್ನಾಟಕಕ್ಕೇ ಮಾದರಿ ಶಿವಮೊಗ್ಗದ ಸಂಕ್ಲಾಪುರ ಸರಕಾರಿ ಶಾಲೆ
ಸರಕಾರಿ ಶಾಲೆಯೆಂದರೆ ಸಾಕು ಮೂಗು ಮುರಿಯುವವರೇ ಅನೇಕರು. ಏ ಬಿಡ್ರಿ ಅಲ್ಯಾರು ಹೋಗ್ತಾರೆ? ಏನು ಸೌಲಭ್ಯ ಇದೆ ? ಅಂತ ನಾವು ಮಕ್ಕಳನ್ನು ಅಲ್ಲಿಗೆ ಕಳುಹಿಸಬೇಕು. ಒಂದು ಟ್ಯೂಷನ್ ಇಲ್ಲ, ಸಿಂಗಿಂಗ್ ಕ್ಲಾಸ್, ಡಾನ್ಸ್ ಕ್ಲಾಸ್ ಏನು ಇಲ್ಲದ ಗೊಡ್ಡು ಶಾಲೆ.
ನಮ್ಮ ಮಕ್ಕಳು ರೆಪ್ಯೂಟೆಡ್ ಶಾಲೆಯಲ್ಲಿ ಓದಿದ್ರೆ ದೊಡ್ಡ ಕೆಲ್ಸ ಸಿಗುತ್ತೆ. ಅಲ್ಲೇನು ಸಿಗುತ್ತೆ ಹೋಗ್ರಿ..” ಎಂದು ರಾಗ ಎಳೆಯುವವರು ಅನೇಕರು.
ಆದರೆ ಇಲ್ಲೊಂದು ಸರ್ಕಾರಿ ಶಾಲೆಯಿದೆ. ಅದು ಎಲ್ಲಾ ಶಾಲೆಗಳಿಗಿಂತ ಸ್ವಲ್ಪ ಭಿನ್ನ. ಇಲ್ಲಿರುವವರು ಕೇವಲ ಇಬ್ಬರು ಶಿಕ್ಷಕರು ಮಾತ್ರ.
ಮಕ್ಕಳನ್ನು ಶಾಲೆಗೆ ಕರೆದ್ಯೊಯ್ಯಲು ಸಾಮಾನ್ಯವಾಗಿ ನಾವೆಲ್ಲರೂ ಅನುಸರಿಸುವ ಪದ್ಧತಿ ಆಟೋ ಅಥವಾ ಟೆಂಪೋದಲ್ಲಿ ಕಳುಹಿಸುವುದು.
ಆದರೆ ಈ ಶಾಲೆಯ ಪರಿಸ್ಥಿತಿ ಬೇರೆ.
ತೀರ್ಥಹಳ್ಳಿಯಿಂದ ಸುಮಾರು 37 ಕಿ.ಮೀ. ಒಳಗಿರುವ ಸಂಕ್ಲಾಪುರದ ಈ ಸರ್ಕಾರಿ ಶಾಲೆಗೆ ಮಕ್ಕಳು ಬರುವುದಿರಲಿ ಶಿಕ್ಷಕರು ಹೋಗುವುದು ಅಸಾಧ್ಯ.
ಕುಗ್ರಾಮಗಳಲ್ಲಿ ನಡೆದು ಹೋಗುವುದಂತೂ ಇನ್ನು ಕಷ್ಟ. ಅಂತಹುದರಲ್ಲಿ ಕಾಡಿನ ಮಧ್ಯೆ ರೂಪಿತವಾಗಿರುವ ಈ ವಿದ್ಯಾಮಂದಿರಕ್ಕೆ ದಿನ ಮಕ್ಕಳು ಹೇಗೆ ಬರುತ್ತಾರೆ.
ಆದರೆ ಇಲ್ಲಿನ ಶಾಲಾ ಶಿಕ್ಷಕರಾದ ಗೋವಿಂದಪ್ಪ ಹಾಗೂ ರೇಣುಕಾರಾಧ್ಯ ಮಕ್ಕಳನ್ನು ತಾವೇ ಖುದ್ದು ಹೋಗಿ ದೂರದ ಹಳ್ಳಿಗಳಿಂದ ಕರೆತಂದು ಪಾಠ ಮಾಡುತ್ತಾರೆ. ನಂತರ ಅವರೇ ಬಿಟ್ಟು ಬರುತ್ತಾರೆ.
ಕೆಲ ಬಡ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು ಹಾಗೂ ವಾಪಾಸ್ ಕರೆದುಕೊಂಡು ಹೋಗುವುದೇ ದೊಡ್ಡ ಸಮಸ್ಯೆ.
ಹಾಗಾಗಿ ಈ ಹೊರೆ ಪೋಷಕರಿಗೆ ಸಮಸ್ಯೆಯಾಗಬಹುದೆಂದು ಬಡವರ ಮಕ್ಕಳನ್ನು ತಾವೇ ಪೋಷಕರಂತೆ ಶಾಲೆಗೆ ಕರೆದುಕೊಂಡು ಬಂದು ಪುನಃ ವಾಪಸ್ ಕರೆದುಕೊಂಡು ಬಿಡುತ್ತಾರೆ.
ವಿಷಯ ಇಷ್ಟೇ ಅಲ್ಲ, ಈ ಶಾಲೆಯಲ್ಲಿ ಕಲಿಕೆ ಹೇಗಿದೆ, ಮಕ್ಕಳಿಗೆ ಯಾವ ರೀತಿ ಪ್ರೋತ್ಸಾಹಿಸಲಾಗುತ್ತದೆ? ಶಿಕ್ಷಕರ ಹಾಗೂ ಪೋಷಕರ ಪಾತ್ರವೇನು ಎಂಬುದರ ಕುರಿತು ವಿಶೇಷ ಲೇಖನವಿದು.
ಇಂದು ಶಿಕ್ಷಕರ ದಿನಾಚರಣೆ. ಈ ಸಂದರ್ಭದಲ್ಲಿ ಎಲೆಮರಿ ಕಾಯಿಯಂತಿರುವ ಈ ಶಿಕ್ಷಕರ ಬಗ್ಗೆ ನಾವು ಹೇಳಲೇಬೇಕಿದೆ.
ಮಕ್ಕಳಿಗೆ ವಿನೂತನ ಶೈಲಿಯೊಂದಿಗೆ ಪಾಠ
ರೇಣುಕಾರಾಧ್ಯ ಕಳೆದ 8 ವರುಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಗೋವಿಂದಪ್ಪ 15 ವರುಷಗಳಿಂದ ಇದೇ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಇನ್ನು ನಲಿ – ಕಲಿ ಪಠ್ಯದಡಿ ಇಡೀ ಶಾಲಾ ಪರಿಸರವನ್ನು ಕಲಿಕಾ ಸ್ನೇಹಿಯಾಗಿ ಪರಿವರ್ತಿಸಿದ್ದಾರೆ ರೇಣುಕಾರಾಧ್ಯ. ಪರಿಸರದೊಂದಿಗೆ, ನಾಟಕ ಪ್ರಯೋಗದೊಂದಿಗೆ, ವಿನೂತನ ಶೈಲಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧನೆ ಮಾಡುತ್ತಾರೆ.
ಇದಕ್ಕಾಗಿಯೇ ತಮ್ಮ ಸಂಬಳದ ಸ್ಪಲ್ಪ ಭಾಗವನ್ನು ಮೀಸಲಿಡುತ್ತಾರೆ. ಸುಮಾರು 150ಕ್ಕೂ ಹೆಚ್ಚು ವಿಧವಾದ ಭೋಧನಾ ಸಾಮಾಗ್ರಿಗಳನ್ನು ಮಾಡಿರುವ ಇವರು ಖಾಸಗಿ ಶಾಲಾ ಶಿಕ್ಷಕರೇ ನಾಚಿಸುವಂತೆ ಪಾಠ ಮಾಡುತ್ತಾರೆ.
ವಿಭಿನ್ನವಾಗಿ ಸರಳ ಕಲಿಕೆ –
ತಮ್ಮ ನಲಿ-ಕಲಿ ಕೊಠಡಿಯಲ್ಲಿ ವಿವಿಧ ಕೀಟಗಳ, ಪಕ್ಷಿಗಳ ಗೂಡುಗಳನ್ನು ಸಂಗ್ರಹಿಸಿ ಹೂ ಮಾದರಿಯ ಕಲಿಕಾ ತಂತ್ರವನ್ನೇ ಹೆಣೆಯುವ ಪದ್ಧತಿಯನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಕವಿಗಳ, ರಾಜ ಮಹಾರಾಜ ಚಿತ್ರಪಟಗಳು ಶಾಲೆಯ ಗೋಡೆಯ ಮೇಲೆ ರಾರಾಜಿಸುತ್ತಿವೆ.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ನಿತ್ಯವೂ ಒಂದೊಂದು ಸರಳ ಪ್ರಯೋಗವನ್ನು ಇಲ್ಲಿ ಮಾಡಲಾಗುತ್ತದೆ. ಇತಿಹಾಸ, ಪರಿಸರ ವಿಜ್ಞಾನ, ಖಗೋಳ, ಗಣಿತ, ಇಂಗ್ಲೀಷ್ ಹೀಗೆ ಎಲ್ಲಾ ವಿಷಯಗಳನ್ನು ತುಂಬಾ ಸರಳವಾಗಿ ಮಕ್ಕಳಿಗೆ ಕಲಿಸುತ್ತಿದ್ದಾರೆ ಈ ಶಿಕ್ಷಕರು.
ಶಾಲೆಯ ಕುರಿತು
ಶಿಕ್ಷಕ ರೇಣುಕಾರಾಧ್ಯ ಅನಿಸಿಕೆ
ಮೇಷ್ಟ್ರು ಅಂದ್ರೆ ಸಾಕು ಬರೀ ಪಾಠ ಮಾಡಿ ಮನೆಗೆ ಹೋಗುತ್ತಾರೆ ಎಂಬ ಮಾತು ಸಾಮಾನ್ಯ. ಆದರೆ ಇದರ ಹೊರತಾಗಿಯೂ ಕೆಲ ಮೇಷ್ಟ್ರು ಒಂದಿಷ್ಟು ಒಳ್ಳೆ ಕೆಲಸ ಮಾಡುತ್ತಾರೆ ಎಂಬುದಕ್ಕೆ ಇವರು ಸಾಕ್ಷಿ. ತಾವೇ ಮನೆ ಮನೆಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸುತ್ತಾರೆ.
ಅರಿವು ಮೂಡಿಸುವ ವಿಶೇಷ ಕೆಲಸಕ್ಕೆ ಕೂಡ ಈ ಶಿಕ್ಷಕರು ಕೈ ಹಾಕುತ್ತಾರೆ. ಅವರ ಶ್ರಮಕ್ಕೆ ಫಲ ಕೂಡಾ ಸಿಕ್ಕಿದೆ ಎನ್ನುತ್ತಾರೆ ರೇಣುಕಾರಾಧ್ಯರವರು. ಎಲ್ಲಾ ವಿಷಯಗಳನ್ನು ತುಂಬಾ ಸರಳವಾಗಿ ಮಾದರಿಗಳ ಮೂಲಕ ಪಾಠ ಮಾಡುವುದರಿಂದ ಮಕ್ಕಳಿಗೆ ಕ್ಲಿಷ್ಟವೆನಿಸುವುದಿಲ್ಲ. ನಮ್ಮ ಶಾಲೆ ಇತರೆಗಿಂತ ಭಿನ್ನ.
ಸರ್ಕಾರಿ ಶಾಲೆಯೆಂದರೆ ಮಕ್ಕಳಿಗೆ ಕುತೂಹಲ ಮೂಡುವಂತೆ ಮಾಡಬೇಕು. ನಮ್ಮ ಕುಗ್ರಾಮದ ಶಾಲೆಯಲ್ಲೂ ಕಂಪ್ಯೂಟರ್ ವ್ಯವಸ್ಥೆ ಇದೆ. ಇದರ ಸಹಾಯದಿಂದಲೂ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಮಕ್ಕಳು ಈ ತೆರನಾಗಿ ಕುತೂಹಲದಿಂದ ಓದುತ್ತಾರೆ. ಅದೇ ನಮಗೆ ಖುಷಿ. ಪಾಠ ಮಾಡಿ ಬರುವದಷ್ಟೇ ಅಲ್ಲ ಶಿಕ್ಷಕನ ಕೆಲಸ.
ಅದನ್ನು ಕೊನೆಯವರೆಗೂ ನೆನಪಿನ ಸ್ಮೃತಿಯಲ್ಲಿರುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ನಸುನಗುತ್ತಲೆ ನುಡಿಯುತ್ತಾರೆ ರೇಣುಕಾರಾಧ್ಯವರು.
ಶಾಲೆಯಲ್ಲಿ
ಶಿಕ್ಷಕ ಗೋವಿಂದಪ್ಪ ಕಾರ್ಯಕ್ಕೂ ಮೆಚ್ಚುಗೆ
ಇನ್ನು ಈ ಶಾಲೆಯಲ್ಲಿ ಸುಮಾರು 100ಕ್ಕೂ ಅಡಿಕೆ ಸಸಿ, ತೆಂಗು, ಬಾಳೆ ಸೇರಿದಂತೆ ಹಲವು ತರಕಾರಿ ಗಿಡಗಳನ್ನು ನೆಟ್ಟು, ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವಲ್ಲಿಯೂ ಇಲ್ಲಿನ ಮತ್ತೊಬ್ಬ ಶಿಕ್ಷಕರಾದ ಗೋವಿಂದಪ್ಪರವರು ಮುಂದಾಗಿದ್ದಾರೆ.
ಮಕ್ಕಳಿಗಂತೂ ದಿನನಿತ್ಯವೂ ಇಲ್ಲಿ ವೆರೈಟಿ ಅಡುಗೆಗಳು. ಹೋಳಿಗೆ, ಸೀಕರಣೆ, ಕಡುಬು, ಪಾಯಸ, ತರಹೇವಾರಿ ಸಾಂಬಾರು, ದಿನವೂ ಪಲ್ಯ, ಚಟ್ನಿ..ಹೀಗೆ ಕೇಳಿದರೆ ಸಾಕು ಬಾಯಲ್ಲಿ ನೀರೂರತ್ತದೆ. ಮಕ್ಕಳಿಗೆ ಪಾಠದೊಂದಿಗೆ ಪುಷ್ಕಳ ಭೋಜನವನ್ನು ನೀಡಿ ಸಂತುಷ್ಟಪಡಿಸುತ್ತಿರುವ ಇಂತಹ ಶಿಕ್ಷಕರು ಎಲ್ಲರಿಗೂ ಮಾದರಿ.
ಇವರ ಮಕ್ಕಳು ಕೂಡ ಇದೇ ಶಾಲೆಯಲ್ಲಿಯೇ ಬಂದು ವಿದ್ಯೆ ಕಲಿಯುತ್ತಿರುವುದು ಸಹ ಪ್ರಶಂಸನಾರ್ಹ. ಈ ಇಬ್ಬರು ಶಿಕ್ಷಕರು ತಮ್ಮ ಸಂಬಳದಲ್ಲಿಯೇ ಬಡಮಕ್ಕಳಿಗೆ ಇಂತಿಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವರ ಸೇವೆಗೆ ಕುಟುಂಬವೂ ಕೂಡ ಸಾಥ್ ನೀಡಿದೆ.
ಇಂತಹ ಶಿಕ್ಷಕರು ನಮ್ಮ ಸಮಾಜಕ್ಕೆ ಮಾದರಿ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿ, ಖಾಸಗಿ ಶಾಲೆಯನ್ನು ಮೀರಿಸುವಂತಗಾಲಿ ಎಂಬುದೇ ನಮ್ಮ ಆಶಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882