ತ್ಯಾಗ, ಭಕ್ತಿ, ನಿಷ್ಠೆ, ಖುರುಬಾನಿ… ಬಕ್ರೀದ್ ಕುರಿತು ಹಾರಣಗೇರಾ ಬರಹ
ತ್ಯಾಗ, ಭಕ್ತಿ, ನಿಷ್ಠೆಯ ನೆನಪು ಈ ಬಕ್ರೀದ್ ಹಬ್ಬ
ಧಾರ್ಮಿಕ ಸಹಿಷ್ಣುತೆ ಮೆರೆದ ನಮ್ಮ ದೇಶದಲ್ಲಿ ಹಲವು ಹಬ್ಬಗಳನ್ನು ವಿವಿಧ ಧರ್ಮಿಯರು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಹಬ್ಬ-ಹರಿದಿನಗಳು ಹಾಗೂ ವ್ರತ ಆಚರಣೆಗಳು ನಮ್ಮ ಪರಂಪರೆಯ ಸಂಕೇತಗಳಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮುಸ್ಲಿಂ ಬಾಂಧವರು ಆಚರಿಸುವ ಎರಡು ವಿಶಿಷ್ಟ ಹಬ್ಬಗಳಲ್ಲಿ ‘ಬಕ್ರೀದ್’ ಅತ್ಯಂತ ಪವಿತ್ರವಾದ ದೊಡ್ಡ ಹಬ್ಬವಾಗಿದೆ. ಇದಕ್ಕೆ ಅರಬ್ಬಿ ಭಾಷೆಯಲ್ಲಿ ‘ಈದ್-ಉಲ್-ಅಝಾ ಹಾಗೂ ಈದ್-ಉಲ್-ಝಹಾ, ಈದುಲ್-ಅಜ್-ಹಾ’ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇದು ಅರೇಬಿಕ್ ಕಾಲಮಾನದ 12ನೇ ತಿಂಗಳಾದ ಜಲ್ಹೇಜಾ ಅಥವಾ ಜಿಲ್-ಹಜಾ ಮಾಸದ ಹತ್ತನೇ ದಿನ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ.
‘ಈದುಲ್ ಅಝಾ’ ಅಥವಾ ‘ಬಲಿದಾನದ’ ಹಬ್ಬ ಎಂಬ ಹೆಸರು ಸೂಚಿಸುವಂತೆ ಕಠಿಣ ಪರೀಕ್ಷೆ, ತ್ಯಾಗ ಮತ್ತು ಸಮರ್ಪಣೆಯ ಸ್ಮರಣೆಗಳನ್ನು ಜಾಗೃತಗೊಳಿಸುವ ಹಾಗೂ ಸರ್ವಸ್ವವನ್ನೂ ಮರೆತು ತಾವು ಕೇವಲ ಅಲ್ಲಾಹನ ಭಕ್ತರೆಂದು ಸಮರ್ಪಣಾ ಮನೋಭಾವನೆಯನ್ನು ಸಾರುವ ಆಚರಣೆಯಾಗಿದೆ. ಈ ಬಲಿದಾನದ ಹಬ್ಬವು ಸತ್ಯ ಮತ್ತು ಧರ್ಮದ ಪ್ರಚಾರಕರಾಗಿದ್ದ ಪ್ರವಾದಿ ಇಬ್ರಾಹಿಂರ ಜೀವನವನ್ನು ಜ್ಞಾಪಿಸುತ್ತದೆ. ಇವರನ್ನು ಬಹುಸಂಖ್ಯಾತ ಆಸ್ಥಿಕ ಮುಸ್ಲಿಂ ಬಾಂಧವರು ಓರ್ವ ಪುಣ್ಯಪುರುಷನೆಂಬ ನಂಬಿಕೆಯಿಂದ ಆರಾಧಿಸುತ್ತಾರೆ.
ಅರಬ್ಬರ ಮೂಲಪುರುಷ ಎಂದು ಕರೆಯುವ ಇಬ್ರಾಹಿಂರು ಸುಮಾರು 4000 ವರ್ಷಗಳ ಹಿಂದೆ ಇದ್ದ ಪ್ರವಾದಿ. ಈ ಪ್ರವಾದಿಯ ಜೀವನದಲ್ಲಿ ಒಂದು ಸತ್ವ ಪರೀಕ್ಷೆ ನಡೆದಿತ್ತು. ಇಬ್ರಾಹಿಂರ ಸ್ವಪ್ನದಲ್ಲಿ ದೇವರು ಪ್ರತ್ಯಕ್ಷನಾಗಿ ಆತನ ಪ್ರಿಯವಾದ ವಸ್ತುವನ್ನು ತನಗೆ ನೀಡಬೇಕೆಂದು ಹೇಳಿದಂತಾಯಿತು. ಇದರಿಂದ ಇಬ್ರಾಹಿಂರು ತನಗೆ ಪ್ರಿಯವಾದ ವಸ್ತು ಯಾವುದೆಂದು ತಿಳಿಯಲು ಬಹಳಷ್ಟು ಯೋಚನೆ ಮಾಡತೊಡಗಿದರು. ಅಲ್ಲಾಹನ ಅಥವಾ ದೇವರ ಈ ಬಯಕೆಯ ನಿಲುವು ತಿಳಿಯದಂತಾಯಿತು. ಇಬ್ರಾಹಿಂನು ತನ್ನ ಏಕೈಕ ಸುಪುತ್ರ ಇಸ್ಮಾಯಿಲ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ. ದೇವರು ಇದನ್ನೇ ಅಪೇಕ್ಷಿಸಿರಬಹುದು ಎಂದು ಭಾವಿಸಿ ಈ ವಿಷಯವನ್ನು ಮಗನಿಗೆ ತಿಳಿಸಿ ಒಪ್ಪಿಸಿದ. ಇಸ್ಮಾಯಿಲ್ನ ತಲೆಯನ್ನು ಅರ್ಪಿಸಲು ಸ್ವತಃ ತಂದೆಯೇ ಸಿದ್ಧನಾದ. ಕ್ಷಣಹೊತ್ತು ಬಿಟ್ಟು ದಿವ್ಯ ಚಕ್ಷುವಿನಿಂದ ಕಾಣಲಾಗಿ ಮಗನ ಬದಲಿಗೆ ಮೇಕೆ (ಕುರಿ)ಯೊಂದು ಹತವಾಗಿತ್ತು. ಈ ಇಬ್ರಾಹಿಂರೆ ಅರೇಬಿಯಾದ ಮಕ್ಕಾ ಪಟ್ಟಣದಲ್ಲಿರುವ ಪ್ರಾಚೀನ ದೇವಾಲಯವಾದ ‘ಕಾಬಾ’ ಮಂದಿರವನ್ನು ಕಟ್ಟಿಸಿದ್ದಾರೆ.
ಇಬ್ರಾಹಿಂರ ತ್ಯಾಗ, ಭಕ್ತಿ ನಿಷ್ಠೆಯ ಸವಿನೆನಪು ಈ ಹಬ್ಬ. ‘ಖುರಬಾನಿ’ (ಬಲಿದಾನ) ಮಾನವನ ಶ್ರದ್ಧಾ-ಭಕ್ತಿಗಳ ಪ್ರತೀಕವೂ ಹೌದು. ಸಮಯ, ಸಂದರ್ಭಗಳು ಒದಗಿದಾಗ, ನಾಡಿಗಾಗಿ, ತನ್ನವರಿಗಾಗಿ, ಸತ್ಕಾರ್ಯಕ್ಕಾಗಿ, ಪರೋಪಕಾರಕ್ಕಾಗಿ ಎಂತಹ ತ್ಯಾಗ-ಬಲಿದಾನಗಳಿಗೂ ಮನುಷ್ಯನು ಸಂತೋಷದಿಂದ ಸಿದ್ಧನಾಗಿರಬೇಕೆಂಬ ಸಂದೇಶವನ್ನು ‘ಬಕ್ರೀದ್’ ಅಥವಾ ‘ಈದುಲ್-ಅಜ್-ಹಾ’ ಹಬ್ಬ ಸಾರುತ್ತದೆ.
‘ಬಕ್ರೀದ್’ನ ಹಿಂದಿನ ದಿನ ಸಾಮಾನ್ಯವಾಗಿ ಜಗತ್ತಿನ ನಾನಾ ಭಾಗಗಳಿಂದ ಮುಸ್ಲಿಂ ಬಾಂಧವರು ಮೆಕ್ಕಾ ಯಾತ್ರೆ ಕೈಗೊಂಡು ಒಂದೆಡೆ ಸೇರಿ, ಕಾಬಾ ಮಂದಿರಕ್ಕೆ ಪ್ರದಕ್ಷಿಣೆ ಹಾಕಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಇದಕ್ಕೆ ಹಜ್ ಎಂದು ಕರೆಯುತ್ತಾರೆ. ಇಸ್ಲಾಂ ಧರ್ಮದ ಪಂಚ ನಿಯಮಗಳಲ್ಲಿ ಇದೊಂದು ಪ್ರಮುಖ ಆರಾಧನಾ ಕ್ರಮವಾಗಿದೆ. ಮತ್ತು ಪ್ರತಿಯೊಬ್ಬ ಮುಸ್ಲಿಮನು ಕಡ್ಡಾಯ ಅಲ್ಲದಿದ್ದರೂ, ಹಣ ಉಳ್ಳವರು ಹಾಗೂ ಸ್ಥಿತಿವಂತರಿಗೆ ಹಜ್ ಯಾತ್ರೆ ಅನಿವಾರ್ಯ.
ತಮ್ಮ ಜೀವಿತಾವಧಿಯಲ್ಲಿ ಸಾಧ್ಯವಾದರೆ ಒಂದು ಬಾರಿಯಾದರೂ ಮೆಕ್ಕಾ ಅಥವಾ ಹಜ್ ಯಾತ್ರೆ ಮಾಡಿದವರೇ ಪುಣ್ಯವಂತರೆಂದು ನಂಬಿಕೆ ಹೊಂದಿದ್ದಾರೆ. ಹಜ್ ಯಾತ್ರೆಯಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳ ಮುಸ್ಲಿಂ ಸಮುದಾಯದ ಬಾಂಧವರು ಪಾಲ್ಗೊಳ್ಳುವುದರಿಂದ ಅವರಲ್ಲಿ ಜಾಗತಿಕ ಅಥವಾ ವಿಶ್ವಮಾನವ ಬಾಂಧವ್ಯ ಬೆಳೆಯಲು ಸಹಾಯಕವಾಗುತ್ತವೆ. ಮತ್ತು ಶ್ರೀಮಂತ, ಬಡವ, ನಿರ್ಗತಿಕ, ಉಳ್ಳವ, ಕರಿಯ, ಬಿಳಿಯ ಎಂಬ ಯಾವುದೇ ಭೇದವಿಲ್ಲದೇ ಒಂದೇ ರೀತಿಯ ಬಿಳಿಬಟ್ಟೆ ತೊಟ್ಟು ಅಲ್ಲಾಹನ ಪ್ರಾರ್ಥನೆಯಲ್ಲಿ ತೊಡಗುವುದರಿಂದ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಲ್ಲರೂ ಒಂದೇ ಎಂಬ ತತ್ವವನ್ನು ಸಾರುತ್ತದೆ.
ಒಟ್ಟಿನಲ್ಲಿ ಸಮಾಜದಲ್ಲಿ ಐಕ್ಯಭಾವನೆ ಮೂಡಲು, ಶಾಂತಿ-ನೆಮ್ಮದಿ ನೆಲೆಗೊಳ್ಳಲು ಹಬ್ಬಗಳು ಅತ್ಯಗತ್ಯ. ದೈವಾನುಗ್ರಹ ಸಂಪಾದಿಸುವುದರ ಜೊತೆಗೆ ಐಕ್ಯತಾಭಾವನೆ ಕಾಪಾಡುವುದು ಹಬ್ಬಗಳ ಮುಖ್ಯ ಗುರಿಯಾಗಬೇಕು. ಈ ಹಿನ್ನಲೆಯಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮಗಳ ಹಬ್ಬ-ಹರಿದಿನಗಳ ಆಚರಣೆಯ ಪರಂಪರೆಯನ್ನು ಇಂದು ನಾವು ಅರ್ಥೈಸಿಕೊಳ್ಳಬೇಕಾಗಿದೆ.
ಸಮಾಜಶಾಸ್ತ್ರ ಉಪನ್ಯಾಸಕರು
ಶಹಾಪುರ, ಜಿ|| ಯಾದಗಿರಿ.
ಸಂಚಾರಿ : 9901559873.
Super sir. reason for celebrating bakreed is very clearly presented.