ಕಥೆ

ಸಿಕ್ಕಿರುವುದು ಲೆಕ್ಕಕ್ಕಿಲ್ಲ! ಸಿಕ್ಕದೆ ಇರುವುದಕ್ಕೆ ದುಃಖ!

ದಿನಕ್ಕೊಂದು ಕಥೆ

ಸಿಕ್ಕಿರುವುದು ಲೆಕ್ಕಕ್ಕಿಲ್ಲ! ಸಿಕ್ಕದೆ ಇರುವುದಕ್ಕೆ ದುಃಖ!

ಮನುಷ್ಯನ ಮನಸ್ಸು ಎಷ್ಟು ವಿಚಿತ್ರವೆಂಬುದಕ್ಕೆ ಮೇಲಿನ ಸಾಕ್ಷಿ! ನಮಗೆ ಏನೆಲ್ಲಾ ಸಿಕ್ಕಿರುತ್ತದೆಯೋ ನಾವು ಅದನ್ನು ಲೆಕ್ಕಕ್ಕಿಡುವುದಿಲ್ಲ. ಆದರೆ ನಮಗೆ ಇರಬಹುದಾದ ಒಂದೆರಡರ ಬಗ್ಗೆ ದುಃಖಿಸುತ್ತೇವೆ! ಇಲ್ಲಿ ಕೆಳಗೆ ನಿರೂಪಿತವಾಗಿರುವ ಎರಡು ಘಟನೆಗಳು ಮೇಲಿನ ಮಾತುಗಳನ್ನು ಎತ್ತಿ ತೋರಿಸುತ್ತವೆ.

ಮೊದಲನೆಯದ್ದು :- ಮೆಕ್ಸಿಕೋ ದೇಶದಲ್ಲಿ ಒಂದು ಪ್ರಕೃತಿ ವೈಚಿತ್ರ ಇದೆಯಂತೆ. ಅಲ್ಲಿನ ಪರ್ವತ ಪ್ರದೇಶವೊಂದರಲ್ಲಿ ಬಿಸಿನೀರಿನ ಬುಗ್ಗೆಗಳು ಇವೆಯಂತೆ. ಅವು ಸದಾ ಬಿಸಿನೀರನ್ನು ಚಿಮ್ಮುತ್ತಲೇ ಇರುತ್ತವೆ. ಇನ್ನೂ ವಿಚಿತ್ರವೆಂದರೆ ಈ ಬಿಸಿನೀರಿನ ಬುಗ್ಗೆಯ ಪಕ್ಕದಲ್ಲೇ ತಣ್ಣೀರು ಚಿಮ್ಮುವ ತಣ್ಣೀರು ಇರುತ್ತವೆ.

ಅಲ್ಲಿನ ಮಹಿಳೆಯರು ಕೊಳೆ ಬಟ್ಟೆಗಳನ್ನು ತಂದು ಮೊದಲು ಬಿಸಿ ನೀರಿನಲ್ಲಿ ಒಗೆದು, ಆನಂತರ ತಣ್ಣೀರಿನಲ್ಲೂ ಜಾಲಿಸುತ್ತಾರೆ. ಖರ್ಚಿಲ್ಲದೆ ಅವರ ಬಟ್ಟೆಗಳು ಶುಭ್ರವಾಗುತ್ತವೆ.

ಇದನ್ನು ಗಮನಿಸಿದ ವಿದೇಶಿಯರೊಬ್ಬರು ಮಹಿಳೆಯರನ್ನು ‘ಬಿಸಿನೀರಿನ ತಣ್ಣೀರಿನ ಬುಗ್ಗೆಗಳು ಅಕ್ಕಪಕ್ಕದಲ್ಲಿ ಇರುವುದರಿಂದ ನಿಮ್ಮ ಬಟ್ಟೆ ಒಗೆಯುವ ಕಾರ್ಯ ಅತಿ ಸುಲಭವಾಗಿ ಮುಗಿಯುತ್ತದೆ. ಪ್ರಕೃತಿ ನಿಮಗೆಷ್ಟು ಸಹಾಯ ಮಾಡಿದೆಯಲ್ಲವೇ?’ ಎಂದು ಪ್ರಶ್ನಿಸಿದರು.

ಅದಕ್ಕೆ ಮಹಿಳೆಯರು ಪ್ರಕೃತಿ ಎಲ್ಲಾ ಸರಿಯಾಗಿಯೇ ಮಾಡಿದೆ. ಆದರೆ ಸ್ವಲ್ಪ ಕೊರತೆಯನ್ನು ಉಳಿಸಿದೆ. ಮತ್ತು ತಣ್ಣೀರಿನ ಬುಗ್ಗೆಗಳ ಪಕ್ಕದಲ್ಲೇ ಸೋಪಿನ ನೀರಿನ ಬುಗ್ಗೆಯೂ ಇದ್ದಿದ್ದರೆ ನಾವು ಸೋಪು ತರಬೇಕಾದ ಶ್ರಮ ಉಳಿತಾಯವಾಗುತ್ತಿತ್ತು. ಅದೊಂದು ಕೊರತೆ ನಮ್ಮನ್ನು ಕಾಡುತ್ತದೆ ಎಂದರಂತೆ!

ಎರಡನೆಯದ್ದು :- ಒಮ್ಮೆ ನಿರುದ್ಯೋಗಿ ಯುವಕನೊಬ್ಬ ತನ್ನ ಗೆಳೆಯರಿಗೆಲ್ಲ ಸಿಹಿ ಹಂಚಿದ. ಏಕೆಂದು ಕೇಳಿದಾಗ, ನನಗೆ ಮೂರು ಜನ ಚಿಕ್ಕಪ್ಪಂದಿರು. ಆ ಮೂವರೂ ಅವಿವಾಹಿತರು. ಅವರಲ್ಲೊಬ್ಬರು ಇಂದು ತೀರಿಕೊಂಡರು. ಅವರು ತಮ್ಮ ಉಳಿತಾಯದ ಹಣವನ್ನೆಲ್ಲ ನನಗೇ ಬಿಟ್ಟುಹೋಗಿದ್ದಾರೆ. ನನಗೆ ಇಂದು ಒಂದು ಲಕ್ಷ ರುಪಾಯಿಗಳು ಇಂದು ನಾನು ಲಕ್ಷಾಧಿಪತಿ. ಅದಕ್ಕೇ ಸಿಹಿ ಹಂಚುತ್ತಿದ್ದೇನೆ ಎಂದ, ಗೆಳೆಯರೆಲ್ಲರೂ ಆತನ ಸಂತೋಷವನ್ನು ಹಂಚಿಕೊಂಡರು.

ಕೆಲವು ದಿನಗಳ ನಂತರ ಆತ ಗೆಳೆಯರಿಗೆ ಮತ್ತೆ ಸಿಹಿ ಹಂಚಿ, ನನ್ನ ಎರಡನೆಯ ಚಿಕ್ಕಪ್ಪನೂ ತೀರಿಕೊಂಡರು. ಅವರೂ ಕೂಡ ಒಂದು ಲಕ್ಷ ರುಪಾಯಿಗಳನ್ನು ನನಗೆ ಬಿಟ್ಟು ಹೋಗಿದ್ದಾರೆ. ಈಗ ನನ್ನ ಬಳಿ ಎರಡು ಲಕ್ಷ ರುಪಾಯಿಗಳಿವೆ. ಅದಕ್ಕೆ ಸಿಹಿ ಹಂಚುತ್ತಿದ್ದೇನೆ ಎಂದ. ಮತ್ತೆ ಎಲ್ಲರೂ ಸಿಹಿ ತಿಂದು ಆತನೊಟ್ಟಿಗೆ ಸಂತೋಷವನ್ನು ಹಂಚಿಕೊಂಡರು. (ಕೆಲವರು ಒಳಗೊಳಗೆ ಅಸೂಯೆ ಪಟ್ಟುಕೊಂಡರು)

ಅದಾದ ಕೆಲವು ದಿನಗಳಲ್ಲಿ ಆತ ಮತ್ತೆ ತನ್ನ ಗೆಳೆಯರ ಬಳಿ ಬಂದ. ಮುಖ ಜೋತು ಬಿದ್ದಿತ್ತು. ಕಣ್ಣುಗಳಲ್ಲಿ ಕಳೆಯೇ ಇರಲಿಲ್ಲ. ಏಕೆಂದು ಕೇಳಿದಾಗ, ನನ್ನ ಮೂರನೆಯ ಚಿಕ್ಕಪ್ಪನವರೂ ಇಂದು ತೀರಿಕೊಂಡರು. ಅವರೂ ನನಗೆ ಒಂದು ಲಕ್ಷ ರುಪಾಯಿಗಳನ್ನು ಬಿಟ್ಟುಹೋಗಿದ್ದಾರೆ.

ನಾನೀಗ ಮೂರು ಲಕ್ಷ ರೂಪಾಯಿಗಳ ಸಾಹುಕಾರ ಎಂದ. ಎಲ್ಲರೂ ಅವನನ್ನು ಅಭಿನಂದಿಸಿ ಇಂದೇಕೆ ಸಿಹಿ ಹಂಚುತ್ತಿಲ್ಲ? ಇಂದೇಕೆ ದುಃಖದಲ್ಲಿದ್ದೀಯೆ? ಎಂದು ಕೇಳಿದಾಗ, ಆತ ನನಗಿದ್ದ ಚಿಕ್ಕಪ್ಪಂದಿರೂ ತೀರಿಕೊಂಡು ನನಗೆ ಒಂದೊಂದು ಲಕ್ಷ ರುಪಾಯಿ ಬಿಟ್ಟು ಹೋದರು. ಇನ್ನು ತಾವು ಸತ್ತು ನನಗೆ ಮತ್ತೊಂದು ಲಕ್ಷ ರುಪಾಯಿ ಬಿಡುವ ಚಿಕ್ಕಪ್ಪಂದಿರು ಒಬ್ಬರೂ ಉಳಿದಿಲ್ಲ. ಅದಕ್ಕಾಗಿ ದುಃಖಿಸುತ್ತಿದ್ದೇನೆ ಎಂದನಂತೆ.

ನಾವೂ ಆ ಮೆಕ್ಸಿಕೋ ಮಹಿಳೆಯರಂತೆಯೋ ಅಥವಾ ಆ ಯುವಕನಂತೆಯೋ ವರ್ತಿಸುತ್ತೇವೆಯೇ? ನಮಗೆ ಸಾಕಷ್ಟು ಸಿಕ್ಕಿರುವುದನ್ನು ಲೆಕ್ಕಕ್ಕಿಟ್ಟುಕೊಳ್ಳದೇ, ಸಿಕ್ಕದೆ ಉಳಿದಿರುವ ಒಂದೆರಡು ವಸ್ತುಗಳ ಬಗ್ಗೆ ದುಃಖಿಸುತ್ತಾ ಕುಳಿತಿದ್ದೇವೆಯೇ? ಈ ಲೆಕ್ಕಾಚಾರ ನಮ್ಮದಲ್ಲವಾದರೆ, ನಮ್ಮಷ್ಟು ಲಕ್ಕಿ ಯಾರೂ ಇಲ್ಲ ಅಲ್ಲವೇ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button