ಹೋರಾಟದ ಮಗ್ಗಲು ಬದಲಾಯಿಸಬೇಕಿದೆ-ಜಾರಕಿಹೊಳಿ
ಭೂಮಿ ಇರುವತನಕ ಸಂವಿಧಾನ ಇರಲಿ-ಜಾರಕಿಹೊಳಿ
ಯಾದಗಿರಿ, ಶಹಾಪುರ: ಧಾರ್ಮಿಕ ಕಟ್ಟುಪಾಡುಗಳಿಂದ ತಳ ಸಮುದಾಯದವರು ಶೋಷಣೆಗೊಳಗಾಗುತ್ತಿದ್ದಾರೆ. ಅಲ್ಲದೆ ಮೂಢ ನಂಬಿಕೆ ಕ್ಯಾನ್ಸರ್‍ನಂತೆ ಅಂಟುಕೊಂಡಿದೆ. ಹೀಗಾಗಿ ತಳ ಸಮುದಾಯದ ಪ್ರಗತಿಗೆ ಕೊಡ್ಲಿ ಪೆಟ್ಟು ಬೀಳುತ್ತಿದೆ. ಈ ಕುರಿತು ಜಾಗೃತರಾಗುವ ಮೂಲಕ ನಾವೆಲ್ಲ ಬದಲಾಗಬೇಕಿದೆ. ಮತ್ತು ನಮ್ಮ ನಡೆ ನುಡಿ, ಆಚಾರ ವಿಚಾರ ಪರಿವರ್ತನೆಯಾಗಬೇಕಿದೆ ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ತಿಳಿಸಿದರು.
ತಾಲ್ಲೂಕಿನ ಭೀಮರಯನ ಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ 72ನೇ ಗಣರಾಜ್ಯೋತ್ವತ್ಸವ ಸಂವಿಧಾನ ಸಂಭ್ರಮಾಚರಣೆ ಅಂಗವಾಗಿ “ಭಾರತ ಸಂವಿಧಾನ ಮತ್ತು ಅದರ ಮುಂದಿರುವ ಸವಾಲುಗಳು’ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸಂವಿಧಾನ ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಂವಿಧಾನ ಪರಿಶಿಷ್ಟರಿಗೆ ಮಾತ್ರ ಸಿಮೀತವಾಗಿದೆ ಎಂಬ ವಿಷ ಬೀಜವನ್ನು ಮನುವಾದಿಗಳು ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಪ್ರತಿಭಟನೆ, ಧರಣಿ, ಹೋರಾಟ ಹೀಗೆ ಹಲವು ವಿಷಯಗಳ ಸಂಘರ್ಷದಿಂದ ಹೆಚ್ಚು ವರ್ಷಗಳನ್ನು ಸವೆಸಿದ್ದೇವೆ. ಈಗ ಹೋರಾಟದ ಮಗ್ಗಲುವನ್ನು ಬದಲಾಯಿಸುವ ಅಗತ್ಯವಿದೆ.
ಬುದ್ಧ, ಬಸವ ಅಂಬೇಡ್ಕರರಂತ ಆದರ್ಶ ಮಹನೀಯರು ನಮಗೆಲ್ಲ ಬೆಳಕಾಗಿದ್ದಾರೆ. ಭೂಮಿ ಇರುವ ತನಕ ಸಂವಿಧಾನ ಇರಬೇಕು. ಶಿಕ್ಷಣದ ವ್ಯವಸ್ಥೆ ಬದಲಾಗಬೇಕು. ದೇವರ ಹೆಸರಿನಲ್ಲಿ ಹಣ ವೆಚ್ಚ ಮಾಡುವುದಕ್ಕಿಂತ ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ವೆಚ್ಚಮಾಡಿ ಎಂಬ ಸಲಹೆ ನೀಡಿದರು.
ಸಂವಿಧಾನ ಮತ್ತು ಅದರ ಮುಂದಿರುವ ಸವಾಲುಗಳು ಕುರಿತು ಚಿಂತಕ ಬಸವರಾಜ ಮೌರ್ಯ ಮಾತನಾಡಿ, ಸಂವಿಧಾನದಲ್ಲಿ ಎಲ್ಲವೂ ಇದೆ. ಅದು ಉತ್ತಮ ರೀತಿಯಲ್ಲಿ ಜಾರಿಯಾಗಬೇಕು. ಸರ್ಕಾರ ಇಲಾಖೆಯನ್ನು ನಯವಾಗಿ ಮುಚ್ಚಲಾಗುತ್ತಿದೆ. ಖಾಸಗಿಕರಣಗೊಳಿಸುತ್ತಾ ಮೀಸಲಾತಿಯನ್ನು ನಮಗೆ ಅವರಿಗೆ ಬಾರದಂತೆ ಕಿತ್ತುಕೊಳ್ಳಲಾಗುತ್ತಿದೆ. ಕೊರೊನಾ ಹೆಸರಿನಲ್ಲಿ ಚರ್ಚೆ ಇಲ್ಲದೆ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕತ್ತು ಹಿಸುಕುವ ಕೆಲಸ ಸಾಗಿದೆ. ನಾವು ಜಾಗೃತಗೊಳ್ಳದಿದ್ದರೆ ನಮ್ಮ ಸಾವು ಖಚಿತವಾಗಲಿದೆ ಎಂದರು.
ಧಮ್ಮಗಿರಿ ಬೌದ್ದ ವಿಹಾರದ ಭಂತೆ ಕರುಣಾನಂದ, ಚಿಗರಹಳ್ಳಿ ಮರುಳಶಂಕರ ದೇವರ ಗುರುಪೀಠದ ಸಿದ್ದಬಸವ ಕಬೀರ ಸ್ವಾಮೀಜಿ, ಕೆಕೆಬಿ ಎಂಜಿನಿಯರ್ ಕಂಪನಿಯ ನಿರ್ದೇಶಕ ದೇವಿಂದ್ರಪ್ಪಗೌಡ ಗೌಡಗೇರಿ, ದಲಿತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹಣಮಂತ ಯಳಸಂಗಿ, ಜಿಪಂ ಅದ್ಯಕ್ಷ ಬಸವನಗೌಡ ಯಡಿಯಾಪುರ, ಜಿಪಂ ಸದಸ್ಯ ಕಿಶನ ರಾಠೋಡ, ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ, ಡಾ.ಭೀಮಣ್ಣ ಮೇಟಿ, ಡಾ.ಗಾಳೆಪ್ಪ ಪೂಜಾರಿ, ಚೆನ್ನಪ್ಪ ಆನೇಗುಂದಿ, ನಾಗಣ್ಣ ಬಡಿಗೇರ, ಹನುಮೇಗೌಡ ಮರಕಲ್, ಬಸವರಾಜ ಸಿನ್ನೂರ, ಬಸಪ್ಪ ಭಂಗಿ, ಹೊನ್ನಯ್ಯ ಕೊಳ್ಳೂರ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಶಿವಕುಮಾರ ತಳವಾರ, ಮೋನಯ್ಯ ಹೊಸ್ಮನಿ, ಅಶೋಕ ಹೊಸ್ಮನಿ, ನಿಂಗಣ್ಣ ಗೋನಾಲ, ಮೌನೇಶ ಬಿರನೂರ ಇದ್ದರು.