ಕಥೆ

ನಿಜವಾದ ಸಂಬಂಧಗಳು ಅದ್ಭುತ ಕಥೆ ಇದನ್ನೋದಿ

ನಿಜವಾದ ಸಂಬಂಧಗಳು

ಹಿಮಾಲಯದ ತಪ್ಪಲಿನಲ್ಲಿ ಇದ್ದದ್ದು ಪಾಂಚಗಾವ. ಅದೊಂದು ಪುಟ್ಟ ಹಳ್ಳಿ. ಅಲ್ಲಿ ಗೋವರ್ಧನದಾಸ ಒಂದು ಕಿರಾಣಿ ಸಾಮಾನುಗಳ ಅಂಗಡಿ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದ. ಅವನ ಸೋದರ­ಳಿಯ ಸುಂದರ ಕೆಲಸದಲ್ಲಿ ಸಹಾಯಕ­ನಾಗಿದ್ದ.

ಒಂದು ದಿನ ಸಂಜೆ ಗೋವ­ರ್ಧನದಾಸ ಮನೆಗೆ ಬರುತ್ತಿದ್ದಾಗ ಮನೆಯ ಮುಂದೆ ಕಟ್ಟೆಯ ಮೇಲೆ ಏನೋ ಬಿದ್ದಂತೆ ಕಂಡಿತು. ಹತ್ತಿರ ಹೋಗಿ ನೋಡಿದರೆ ಅದೊಂದು ರಣಹದ್ದು. ಅದು ಹಾರಲು ಪ್ರಯತ್ನಿ­ಸುತ್ತಿದೆ. ಆದರೆ, ಹಾರಲಾಗುತ್ತಿಲ್ಲ. ಅದರ ಕಾಲಿಗೇನೋ ಪೆಟ್ಟಾಗಿರಬೇಕು. ಹೊರಗೆ ವಿಪರೀತ ಚಳಿ ಬೇರೆ. ಅದು ಗಡಗಡನೆ ನಡುಗುತ್ತಿದೆ.

ರಾತ್ರಿಯೆಲ್ಲ ಹೀಗೆಯೇ ಚಳಿಯಲ್ಲಿ ಬಿದ್ದಿದ್ದರೆ ಅದು ಸತ್ತೇ ಹೋಗುತ್ತದೆ ಎನ್ನಿಸಿತು. ಗೋವ­ರ್ಧನ­ದಾಸ ಕರುಣೆಯಿಂದ ಆ ರಣ­ಹದ್ದನ್ನು ನಿಧಾನವಾಗಿ ಎತ್ತಿಕೊಂಡು ಮನೆಯೊಳಗೆ ಕರೆದೊಯ್ದ. ಪಡ­ಸಾಲೆಯ ಮೂಲೆಯಲ್ಲಿ ಮಲಗಿಸಿದ. ದೂರದಲ್ಲಿ ಸ್ವಲ್ಪ ಬೆಂಕಿ ಹಾಕಿ ಬೆಚ್ಚಗೆ ಮಾಡಿದ.

ಅದಕ್ಕೊಂದಿಷ್ಟು ಆಹಾರ ತಂದು ಹಾಕಿದ. ಎರಡು ದಿನಗಳಲ್ಲಿ ರಣ­ಹದ್ದು ಸರಿಯಾಯಿತು. ಗರಿಗೆದರಿ ಹಾರಿ ಹೋಗಿಬಿಟ್ಟಿತು. ಗೋವರ್ಧನ­ದಾಸನಿಗೆ ಸಂತೋಷ.

ರಣಹದ್ದು ಹಾರಿ ತನ್ನ ಮನೆಗೆ ಹೋಗಿ ತನ್ನ ಬಾಂಧವ­ರನ್ನೆಲ್ಲ ಕರೆದು ಸೇರಿಸಿತು. ಅವರಿಗೆಲ್ಲ ಗೋವರ್ಧನದಾಸ ಮಾಡಿದ ಉಪಕಾರ­ವನ್ನು ತಿಳಿಸಿ ಆತನಿಗೆ ತಾವೆಲ್ಲ ಸೇರಿ ಹೇಗಾದರೂ ಮಾಡಿ ಕೃತಜ್ಞತೆ ತೀರಿಸ­ಬೇಕು ಎಂದಿತು.

ಆಗ ಮತ್ತೊಂದು ರಣಹದ್ದು ಸಲಹೆ ನೀಡಿತು. ‘ನಾವು ಅಲ್ಲಲ್ಲಿ ಹಾರಾಡು­ವಾಗ ಯಾವುದಾದರೂ ಬೆಲೆಬಾಳುವ ವಸ್ತು ಕಣ್ಣಿಗೆ ಬಿದ್ದರೆ ಅದನ್ನು ಎತ್ತಿ­ಕೊಂಡು ಹೋಗಿ ಗೋವರ್ಧನ­ದಾಸನ ಮನೆಯ ಅಂಗಳದಲ್ಲಿ ಹಾಕಿ ಬಂದು ಬಿಡೋಣ’. ಎಲ್ಲ ರಣಹದ್ದುಗಳು ಅದನ್ನೇ ಸರಿ ಎಂದವು.

ಮರುದಿನದಿಂದ ಈ ಹದ್ದುಗಳು ಎಲ್ಲ ಕಡೆಗೆ ಹಾರಾಡುತ್ತ, ಎಲ್ಲೆಲ್ಲಿ ಆಭರಣಗಳು ಕಂಡವೋ, ಬೆಲೆಬಾಳುವ ಬಟ್ಟೆಗಳು ಕಂಡವೋ ಅವನ್ನೆಲ್ಲ ಸರಕ್ಕನೇ ಹಾರಿ ಕೆಳಗೆ ಬಂದು ಎತ್ತಿಕೊಂಡು ಗೋವರ್ಧನ ದಾಸನ ಮನೆಯ ಅಂಗಳಕ್ಕೆ ಹಾಕಿ ಹೋಗ­ತೊಡ­ಗಿದವು. ಗೋವರ್ಧನದಾಸನಿಗೆ ಆಶ್ಚರ್ಯ ಹಾಗೂ ಭಯ. ಅವು ಯಾರ ವಸ್ತುಗಳೋ ತಿಳಿಯದು.

ಅವನು ಪ್ರಾಮಾಣಿಕನಾದ್ದರಿಂದ ಅವೆಲ್ಲ ವಸ್ತುಗಳನ್ನು ಬೇರೆಯಾಗಿಯೇ ತೆಗೆ­ದಿಟ್ಟ. ಅವನ ಸೋದರಳಿಯ ಸುಂದರ ಮಾವ ಮನೆಯಲ್ಲಿ ಇಲ್ಲದಿದ್ದಾಗ ಬಿದ್ದ ವಸ್ತುಗಳನ್ನು ತಾನೇ ಎತ್ತಿ ಬಳಸಿಕೊ­ಳ್ಳುತ್ತಿದ್ದ.

ಅನೇಕ ಜನ ನಾಗರಿಕರು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಕಳೆದು­ಕೊಂಡವರು ಹೋಗಿ ರಾಜನಿಗೆ ದೂರು ಕೊಟ್ಟರು. ರಾಜ ತನ್ನ ದೂತರಿಗೆ ಹೇಳಿ ರಣಹದ್ದುಗಳ ಹಾರಾಟದ ಬಗ್ಗೆ ಗಮನವಿಡುವಂತೆ ಸೂಚಿಸಿದ. ಸುಂದರ­ನಿಗೆ ದುರಾಸೆ ಬಂದಿತು.

ತಾನೇ ಹೋಗಿ ರಾಜನಿಗೆ ತನ್ನ ಮಾವನೇ ಎಲ್ಲ ವಸ್ತುಗಳನ್ನು ಹೊಡೆದಿದ್ದಾನೆ ಎಂದು ತಿಳಿಸಿದರೆ ಅವನನ್ನು ರಾಜದೂತರು ಬಂಧಿ­ಸುತ್ತಾರೆ. ಆಗ ಅವನು ಕೂಡಿ­ಹಾಕಿದ್ದ ವಸ್ತುಗಳೆಲ್ಲ ತನ್ನವೇ ಆಗುತ್ತವೆ ಎಂದು­ಕೊಂಡು ದೂರು ಕೊಟ್ಟ.

ರಾಜದೂತರು ಗೋವರ್ಧನದಾಸನನ್ನು ಬಂಧಿಸಿ ಕರೆ­ದೊ­ಯ್ದರು. ಗೋವರ್ಧನ­ದಾಸ ರಾಜನ ಮುಂದೆ ನಡೆದದ್ದನ್ನೆಲ್ಲ ವಿವರವಾಗಿ ತಿಳಿಸಿ ತನಗೆ ದೊರೆತ ಎಲ್ಲ ವಸ್ತುಗಳನ್ನು ಒಪ್ಪಿಸಿದ. ಕಳೆದು­ಕೊಂಡಿದ್ದ ಜನ ಬಂದು ತಮ್ಮ ತಮ್ಮ ವಸ್ತುಗಳನ್ನು ಪಡೆದು ಹೋದರು. ಕೆಲವರ ವಸ್ತುಗಳು ಮಾತ್ರ ಸಿಗಲೇ ಇಲ್ಲ. ಯಾಕೆಂದರೆ ಅವುಗಳನ್ನು ಸುಂದರ ಹೊಡೆದಿದ್ದ.

ಇಷ್ಟೆಲ್ಲಾ ವಸ್ತುಗ­ಳನ್ನೂ ಪ್ರಾಮಾಣಿಕವಾಗಿ ಮರಳಿಸಿದ ದಾಸ ಕೆಲವನ್ನೇ ಯಾಕೆ ಇಟ್ಟು­ಕೊಂಡಿರಬೇಕು ಎಂದು ಸಂಶಯದಿಂದ ದೂತರಿಗೆ ಸೂಚನೆ ಕೊಟ್ಟಾಗ ಅವರು ಸುಂದ­ರನಿಗೆ ತಿಳಿಯ­ದಂತೆ ಅವನನ್ನು ಹಿಂಬಾಲಿಸಿ ಆ ವಸ್ತುಗಳನ್ನು ವಶಪಡಿಸಿ­ಕೊಂಡು ಅವ­ನನ್ನು ಬಂಧಿಸಿ­ದರು.

ಗೋವರ್ಧನ­ದಾಸನಿಗೆ ತುಂಬಾ ದುಃಖವಾ­ಯಿತು. ರಣಹದ್ದು­ಗಳಿಗಿದ್ದ ಕೃತಜ್ಞತೆ ಮನುಷ್ಯ­ನಾದ, ಅಳಿಯನಾದ ಸುಂದರನಿಗೆ ಇಲ್ಲದೇ ಹೋಯಿ­ತಲ್ಲ ಎಂದು ಸಂಕಟ­ಪಟ್ಟ.

ನಮ್ಮ ಬದುಕಿನಲ್ಲಿ ಅನೇಕ ಬಾರಿ ಹಾಗೆ ಆಗಿದ್ದು ಉಂಟ­ಲ್ಲವೇ? ಸಂಬಂಧವೇ ಇಲ್ಲದವರು, ಸಂಬಂಧ­ದಲ್ಲಿ ಅತ್ಯಂತ ದೂರವಾ­ದವರು ಅನಿ­ರೀಕ್ಷಿ­ತವಾಗಿ, ಅನಪೇಕ್ಷಿತವಾಗಿ ಸಹಾಯ ಮಾಡುತ್ತಾರೆ.

ಆದರೆ, ಅತ್ಯಂತ ಹತ್ತಿ­ರದ ರಕ್ತ ಸಂಬಂಧಿಗಳೇ ನಮ್ಮ ಬುಡಕ್ಕೆ ಕತ್ತರಿ ಇಡುತ್ತಾರೆ. ನಿಜವಾದ ಸಂಬಂಧ ಈ ಆತ್ಮೀಯತೆಯ ಬಂಧವೇ. ತೋರಿ­ಕೆಯ ಸಂಬಂಧಗಳಿಗಿಂತ ನಮ್ಮ ಹೃದ­ಯದ ಭಾವನೆಗಳಿಗೆ ಸಂವಾದಿಯಾಗುವ ಪರಿಚಯವಿಲ್ಲದ ಜನ, ಪಶು ಪಕ್ಷಿಗಳು ಎಷ್ಟೋ ಪಾಲು ಮೇಲು ಎನ್ನಿಸುತ್ತದೆ.ನೀವೇನಂತಿರಿ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button