ಕಥೆ

ಹಣಕ್ಕಲ್ಲ, ಭಾವನೆಗೆ ಬೆಲೆ..ಬದುಕಿಗೆ ಹತ್ತಿರವಾದ ಕಥೆ ಇದನ್ನೋದಿ

ಹಣಕ್ಕಲ್ಲ, ಭಾವನೆಗೆ ಬೆಲೆ..

ಗೌರಿ ಹಬ್ಬಕ್ಕೆ ಮಗಳು ಅಳಿಯ ಬರುತ್ತಾರೆಂಬ ಸಂಭ್ರಮದಲ್ಲೇ, ಇರುವ ಪುಟ್ಟ ಮನೆಯನ್ನೇ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಅಮ್ಮ. ಮುಂಚೆಯೇ ಬೇಸಾಯ ಸರಿಯಾಗಿ ಲಾಭ ಕೊಡದ, ಮನೆಯಲ್ಲಿ ದುಡ್ಡಿಲ್ಲದ ಪರಿಸ್ಥಿತಿ.

ಆದರೂ ಮಗಳು ಬಂದಾಗ ಕಡೆಯಲ್ಲಿ ಗಡಿಬಿಡಿಯಾಗಬಾರದು ಅಂತ ಅವರಿಗೆ ಊಟ ತಿಂಡಿಗೆ ಏನೇನು ಸಾಮಾನು ಬೇಕು ಅಂತ ಮುಂಚೆಯೇ ಯೋಚಿಸಿ ಶೆಟ್ಟರಂಗಡಿಯಲ್ಲಿ ಸಾಲ ಹೇಳಿ ದಿನಸಿ ತರುವ ಅಪ್ಪ. ಮನೆಯವರಿಗೆಲ್ಲ ಮಗಳು ಅಳಿಯ ಬರುವ ಸಂಭ್ರಮ.

ಬಸ್ಸಿನಿಂದ ಇಳಿದು ಬರುವವರಿಗಾಗಿ ಸಮಯ ನೋಡಿಕೊಂಡು ಬಸ್ ನಿಲ್ದಾಣದಲ್ಲೇ ಕಾಯುವ ಅಪ್ಪ. ಬಸ್ಸಿನಿಂದ ನಗುನಗುತ್ತ ಇಳಿಯುವ ಮಗಳನ್ನು ಸಂತೋಷದಿಂದ ಬರಮಾಡಿಕೊಳ್ಳುವ ಅಪ್ಪನ ಕಣ್ಣಲ್ಲಿ ಆನಂದಭಾಷ್ಪ.

ಅಳಿಯನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಲೇ ಮೊಮ್ಮಗನನ್ನೆತ್ತಿ ಹೆಗಲ ಮೇಲೆ ಕುಳ್ಳರಿಸಿಕೊಂಡು ಮನೆಯತ್ತ ದಾಪುಗಾಲು ಹಾಕುವ ಅಪ್ಪ. ಎಲ್ಲರನ್ನು ತಲೆಬಾಗಿಲಿನಿಂದಲೇ ಎದುರು ನೋಡುತ್ತ ಅವರು ಕಂಡೊಡನೆ ಖುಶಿಯಿಂದ ಬರಮಾಡಿಕೊಂಡು ಕಾಲಿಗೆ ನೀರು ಕೊಡುವ ಅಮ್ಮ.

ಅದೆಷ್ಟೋ ದಿನಗಳಾದ ಮೇಲೂ ತನಗೆ ಅನ್ನ ಹಾಕುತ್ತಿದ್ದವಳನ್ನು ನೆನೆಸಿಕೊಂಡು ಬಾಲ ಅಳ್ಳಾಡಿಸುತ್ತ ಅವಳ ಕಾಲ ನೆಕ್ಕುವ ಮುದ್ದಿನ ನಾಯಿಮರಿ ರಾಜ. ಮಿಯಾಂವ್ ಅಂತ ಒಳಗಿಂದಲೇ ಕಣ್ಣುಮಿಟುಕಿಸುವ ಬೆಕ್ಕಿನಮರಿ.

ಸದ್ದು ಕೇಳಿದೊಡನೆ ಅಲ್ಲಿ ಒಟ್ಟುಸೇರಿ ಸುಖದುಃಖ ಹಂಚಿಕೊಳ್ಳುವ ನೆರೆಹೊರೆಯವರು. ನಗುನಗುತ್ತಲೇ ಎಲ್ಲರನ್ನು ಮಾತನಾಡಿಸುತ್ತ ತಂದ ಹಣ್ಣು ಸಿಹಿತಿನಿಸುಗಳ ಎಲ್ಲರಿಗೂ ಹಂಚುವ ಆ ಸಂತಸದ ಕ್ಷಣಗಳು.

ಹೆಚ್ಚೂ ಆಗದಂತೆ ಕಡಿಮೆಯೂ ಆಗದಂತೆ ಗೌರವದಿಂದ ಅಳಿಯನ ಮಾತನಾಡಿಸುವ ಅಪ್ಪ ಅಮ್ಮ. ಅವರಿಗೆ ಬೇಸರವಾಗದಂತೆ ಚುಟುಕಾಗಿ ಉತ್ತರಿಸುವ ಅಳಿಯ. ಅಡುಗೆ ಮನೆಯಿಂದ ಬರುವ ಪಾಯಸದ ಘಮ, ಬಾಳೆಯೆಲೆ ಕೊಯ್ದು ತರಲು ಹಿತ್ತಲಿಗೆ ಕುಡುಗೋಲು ಹಿಡಿದು ಓಡುವ ಅಪ್ಪ. ಒಟ್ಟಿಗೆ ಕೂತು ಮಾತನಾಡುತ್ತ ಸವಿಯುವ ಭೋಜನ. ನಂತರದ ಎಲೆ ಅಡಿಕೆ ಜಗಿಯುತ್ತ ಮಾತುಕತೆ.

ವಿಚಾರಗಳು ಒಂದಾ, ಎರಡಾ? ದೂರದ ನಗರದ ಟ್ರಾಫಿಕ್ಕು, ಬೆಲೆ ಏರಿಕೆ, ಸರಕಾರ, ಹಗರಣಗಳು, ಹಳ್ಳಿ, ಬಾರದ ಮಳೆ, ಹೆಚ್ಚಾದ ಕೀಟಗಳು, ಮಕಾಡೆ ಮಲಗಿದ ಬೆಳೆ, ಕಾಟ ಕೊಡುವ ಮುಳ್ಳುಹಂದಿ, ಪಕ್ಕದ ಕಾಡಿನಲ್ಲಿ ಊರಿನವನನ್ನು ಹಿಡಿದು ಹಾಕಿದ ಕಿರುಬ, ಕರು ಹಾಕಿದ ಎಮ್ಮೆ, ಬತ್ತಿ ಹೋದ ಹಳ್ಳ, ಒಣಗಿದ ಹುಲ್ಲು, ಊರಿನೊಳಕ್ಕೇ ಬಂದ ಆನೆಗಳ ಹಿಂಡು……….ಅದೆಷ್ಟು ವಿಚಾರ.

ಅಳಿಯನೊಡನೆ ಮಾವ ಮಾತಿಗಿಳಿದಿದ್ದರೆ, ಅಡುಗೆ ಮನೆಯೊಳಗೆ ಅವ್ವನ ಸೆರಗು ಹಿಡಿದು ಅವಳಿಗೆ ಮಾತ್ರ ಕೇಳಿಸುವ ದನಿಯಲ್ಲಿ ಅದೇನೇನೋ ಪಿಸುಗುಟ್ಟುವ ಮಗಳು. ಮಧ್ಯೆ ಮಧ್ಯೆ ಸಮಯಕ್ಕೆ ಸರಿಯಾಗಿ ಕಾಫಿ, ಚಹಾ….
ಅವರು ಬಂದು ಇದ್ದ ಎರಡು ದಿನ ಕೇವಲ ಎರಡು ನಿಮಿಷದಂತೆಯೇ ಕಳೆದುಹೋದ ಭಾವ. ಹಬ್ಬ ಮುಗಿಸಿ ಹೊರಟ ಮಗಳು ಅಳಿಯನನ್ನು ಇನ್ನೊಂದೆರಡು ದಿನ ಇದ್ದು ಹೋಗುವಂತೆ ಒತ್ತಾಯಿಸುವ ಅಪ್ಪ. ಆದರೂ ಹೊರಡಲೇಬೇಕೆಂಬ ಹಠ ಹಿಡಿದವರ ಒತ್ತಾಯಕ್ಕೆ ಮಣಿದು ಮಗಳಿಗೆ ಅರಿಶಿನ ಕುಂಕುಮ ಕೊಡಲು ಅವ್ವ ತಯಾರು.

ಯಾರಿಗೂ ಗೊತ್ತಾಗದಂತೆ ಪಕ್ಕದ ಮನೆಯ ಹಿರಿಯರ ಬಳಿ ಓಡಿ ಸಾಲ ಮಾಡಿ ಸಾವಿರ ರೂಪಾಯಿಯ ನೋಟನ್ನು ಮಡಚಿ ತಂದು ಹೆಂಡತಿಯ ಕೈಗಿಡುವ ಅಪ್ಪ. ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಲೇ ಚಾಪೆ ಮೇಲೆ ಕುಳಿತ ಮಗಳ ಮಡಿಲಿಗೆ ಅಕ್ಕಿ ಹಾಕುತ್ತ ಅರಿಶಿನ ಕುಂಕುಮ ಕೊಟ್ಟು, ಸಾವಿರ ರೂಪಾಯಿಯ ನೋಟನ್ನು ಕೈಗಿಡುತ್ತಾಳೆ ” ಛೆ ಅಮ್ಮ ಇದ್ಯಂತಕೆ ಅರ್ಶ್ನ ಕುಂಕುಮ ಸಾಕಿತ್ತು ” ಅಂತ ಗದ್ಗದಿತಳಾಗಿ ಹೇಳುವ ಮಗಳಿಗೆ “ಇರ್ಲಿ ಇಟ್ಕ ಕಡೇ ಘಳಿಗೇಲಿ ನಿಂಗೆ ಒಂದು ಸೀರೆ ತಗುಂಡ್ ಬರುಕು ಆಗ್ಲ, ಬ್ಯಾಡ ಅನ್ನಬೇಡ ಒಂದು ಸೀರೇನೋ, ನಿನ್ ಮನೆಯವುರ್ಗೆ ಒಂದು ಪಂಚೆನೋ, ಮಗೀಗೆ ಒಂದ್ ಬಟ್ಟೆನೋ ತಗಾ. ಬ್ಯಾಡ ಅನ್ಬಡ ಕಣ್ ಮಗಳೆ” ಅಂತ ಗೋಗರೆಯುವ ಅಮ್ಮ. ಅವರ ಒತ್ತಾಯಕ್ಕೆ ಮಣಿದು ಕಣ್ಣಂಚಿನಲ್ಲಿ ತೊಟ್ಟಿಕ್ಕಿದ ನೀರನ್ನು ಒರೆಸಿಕೊಳ್ಳುತ್ತಲೇ ಆ ನೋಟನ್ನು ಮಡಚಿ ಕೈನಲ್ಲಿಟ್ಟುಕೊಳ್ಳುತ್ತಾಳೆ.

ಬೀದಿಯಲ್ಲಿ ಸದ್ದಾಗುವ ಬಸ್ಸಿನ ಹಾರ್ನ್ ಕೇಳಿದೊಡನೇ ಕೂಗು ಹಾಕುವ ಪಕ್ಕದ ಮನೆಯವರು. “ಉದಯ ಬಸ್ಬಂತು ಅಣಯಾ, ಬಸ್ ಸ್ಟ್ಯಾಂಡ ಹತ್ರ ಓಡಿ. ಇಲ್ದಿದ್ರೆ ಮುಂದಿನ ಬಸ್ಸಲ್ಲಿ ಸೀಟ್ ಸಿಕ್ಕುದ್ಲ.” ಅನ್ನುವ ಸದ್ದು ಕೇಳಿದೊಡನೆ.

ಮೊಮ್ಮಗನ ಕೆನ್ನೆಗೆ ಮುತ್ತಿಕ್ಕುತ್ತ ಅವನನ್ನು ಸೊಂಟದ ಮೇಲೆ ಹೊತ್ತು ತರುವ ಅಮ್ಮ. “ಕೊಡೀ ಮಾವ, ನಾನು ಹಿಡ್ಕೋತೀನಿ” ಅನ್ನುವ ಅಳಿಯನ ಮಾತನ್ನು ಕೇಳಿಸಿಕೊಳ್ಳದೆ ಅವರ ಲಗ್ಗೇಜುಗಳಲ್ಲಿ ಭಾರವಾದದ್ದೊಂದನ್ನು ಹಿಡಿದು ಬಸ್ ಸ್ಟ್ಯಾಂಡಿನತ್ತ ಓಡುವ ಅಪ್ಪ….. ಬೀದಿಗಳಲ್ಲಿ ಎಲ್ಲರೂ ಕೈಬೀಸುತ್ತ ಬೀಳ್ಕೊಡುತ್ತಿದ್ದರೆ ಎಲ್ಲರಿಗೂ ನಗುನಗುತ್ತಲೇ ಕೈಬೀಸುತ್ತ ಲಗುಬಗೆಯಲ್ಲಿ ಬಸ್ಸಿನತ್ತ ಓಡುವ ಮಗಳು.

ಟಾರು ಹಾಕದ ಮಣ್ಣು ರಸ್ತೆಯ ಮೇಲೆ ಬುಗ್ಗನೆ ಧೂಳೆಬ್ಬಿಸಿಕೊಂಡು ಬಂದು ನಿಲ್ಲುವ ಉದಯ ಬಸ್ಸು. ತುಂಬಿದ್ದ ಬಸ್ಸಿಗೆ ಹತ್ತುವಾಗಲೂ “ಅಪ್ಪಂಗೆ ಬೇಜಾರ್ ಮಾಡ್ಬೇಡ ಅಮ್ಮ, ಹುಶಾರು. ಎಲ್ಲರ್ನೂ ಚೆಂನ್ನಗ್ ನೋಡ್ಕೋ” ಅನ್ನುತ್ತ ಕಣ್ತುಂಬಿಕೊಳ್ಳುತ್ತ, ಕೈಲಿ ಮಡಚಿಟ್ಟಿದ್ದ ಅದೇ ಸಾವಿರ ರೂಪಾಯಿಯ ನೋಟನ್ನು ಯಾರಿಗೂ ಗೊತ್ತಾಗದಂತೆ ಮತ್ತೆ ಅಪ್ಪನ ಅಂಗಿಯ ಜೇಬಿಗೆ ತುರುಕಿ ಕೈಬೀಸುವ ಮಗಳು.

‘ರೈ….ರೈಟ್” ಅನ್ನುತ್ತ ಶಿಳ್ಳೆ ಹಾಕಿದೊಡನೆ ತುಂಬುಬಸುರಿಯಂತೆ ನಿಧಾನವಾಗಿ ಮುನ್ನುಗ್ಗುವ ಕಿಕ್ಕಿರಿದು ತುಂಬಿದ ಉದಯ ಬಸ್ಸು. ಬೀದಿಯ ತಿರುವು ಕಾಣುವವರೆಗೂ ಹೋಗುವ ಬಸ್ಸನ್ನೇ ನೋಡುತ್ತ ಕಣ್ಣೊರೆಸಿಕೊಳ್ಳುತ್ತ ಕೈಬೀಸುವ ಅಪ್ಪ ಅಮ್ಮ. ದು:ಖ ಹೇಳಿಕೊಳ್ಳಲಾಗದೇ ಸುಮ್ಮನೆ ಅದೇ ದಿಕ್ಕಿನತ್ತ ಮೂಕವಾಗಿ ನೋಡುವ ನಾಯಿಮರಿ ರಾಜ.

ಎಲ್ಲವನ್ನೂ ಕೇವಲ ಹಣದಲ್ಲೇ ಅಳೆಯಲಾಗುವುದಿಲ್ಲ. ಪ್ರೀತಿಯನ್ನೇ ಉಸಿರಾಗಿಸಿಕೊಂಡ ಭಾವುಕರಿಗೆ ಹಣದ ಹಂಗಿರುವುದಿಲ್ಲ. ಅಲ್ಲಿ ಕೇವಲ ಭಾವನೆಗಳಿಗೆ ಬೆಲೆಯಿರುತ್ತದೆ ಅಷ್ಟೇ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button