ಅಗಸಿ ದುರಸ್ತಿ ಕಾರ್ಯಕ್ಕೆ ಸೂಕ್ತ ಕ್ರಮ – ಜಗನ್ನಾಥರಡ್ಡಿ
ಕನ್ಯಾಕೋಳೂರ ಅಗಸಿ ಪರಿಶೀಲಿಸಿದ ಅಧಿಕಾರಿಗಳು
ಶಹಾಪುರಃ ನಗರದ ಪೂರ್ವಭಾಗದಲ್ಲಿರುವ ಅಳವಿನಂಚಿಗೆ ತಲುಪುತ್ತಿರುವ ಐತಿಹಾಸಿಕವಾದ ಕನ್ಯಾಕೋಳೂರ ಅಗಸಿಗೆ ತಹಸೀಲ್ದಾರ ಜಗನ್ನಾಥರಡ್ಡಿ ಹಾಗೂ ಪೌರಾಯುಕ್ತ ರಮೇಶ ಪಟ್ಟೇದಾರ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅವಸಾನದ ಅಂಚಿನಲ್ಲಿರುವ ಅಗಸಿ ಸಂರಕ್ಷಣೆಗೆ ಆಗ್ರಹಿಸಿ ಇಲ್ಲಿನ ಕರ್ನಾಟಕ ಮಾದಿಗ ಸಂಘದ ಅಧ್ಯಕ್ಷ ಶಿವಕುಮಾರ ದೊಡ್ಡಮನಿ ಈಚೆಗೆ ದೂರು ಸಲ್ಲಿಸಿದ್ದರು. ಕಳೆದ ವರ್ಷದಿಂದ ಈ ಅಗಸಿಯ ಸಣ್ಣ ಪುಟ್ಟ ಕಲ್ಲುಗಳು ಉದುರಿ, ಬೃಹದಾಕಾರದ ಕಲ್ಲುಗಳು ಬೀಳುವ ಹಂತದಲ್ಲಿದ್ದು, ಅನಾಹುತ ಸಂಭವಿಸುವ ಮೊದಲೆ ಇದನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಐತಿಹಾಸ ಸ್ಥಳ ಸಂರಕ್ಷಿಸುವ ಕೆಲಸ ಮಾಡಬೇಕೆಂದು ಸಂಘ ಮನವಿ ಮಾಡಿತ್ತು.
ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಹಾಜರಿದ್ದು, ಈ ಕೂಡಲೇ ಅಗಸಿ ಸಂರಕ್ಷಣೆಗೆ ಮುಂದಾಗಬೇಕು. ನಾವೆಲ್ಲ ಈ ಅಗಸಿ ಮೂಲಕವೇ ಹೊಲ, ಜಮೀನುಗಳಿಗೆ ಸಂಚರಿಸುತ್ತೇವೆ. ಅಗಸಿ ಬೀಳುವ ಹಂತದಲ್ಲಿದ್ದು, ಅನಾಹುತ ಸಂಭವಿಸುವ ಮೊದಲೇ ಇದನ್ನು ದುರಸ್ತಿಗೊಳಿಸಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ ಜಗನ್ನಾಥರಡ್ಡಿ ಅವರು ಅಗಸಿ ದುರಸ್ತಿ ಕಾರ್ಯಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವದು. ಆನರಲ್ಲಿ ಯಾವುದೇ ಭಯ ಬೇಡ, ಹಳೇ ಕಾಲದ ಅಗಸಿಯಾಗಿದ್ದರಿಂದ ಇದನ್ನು ಉಳಿಸುವಕೊಳ್ಳುವ ಅಗತ್ಯವಿದೆ.
ಹೀಗಾಗಿ ಅಗಸಿ ದುರಸ್ತಿ ಕಾರ್ಯಕ್ಕೆ ಯೋಜನಾ ಪಟಟಿ ಸಿದ್ಧತೆ ಮಾಡಿಕೊಂಡು ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ಶಿವಕುಮಾರ ದೊಡ್ಮನಿ ಸೇರಿದಂತೆ ಇತರರು ಇದ್ದರು.