ಮಳೆಗೆ ಮೇಲ್ಛಾವಣೆ ಕುಸಿತ, ವೃದ್ಧ ದಂಪತಿ ನೆಲ ಸಮಾಧಿಃ ಮತ್ತೊಂದು ಕಡೆ ಗೋಡೆ ಕುಸಿದು ದಂಪತಿ ಸಾವು
ಮನೆ ಗೋಡೆ, ಮೇಲ್ಛಾವಣೆ ಕುಸಿತದಿಂದ ದಂಪತಿಗಳ ಸಾವು
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಮನೆಯೊಂದರಲ್ಲಿ ಮಲಗಿದ್ದ ದಂಪತಿಗಳ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ದಂಪತಿಗಳಿಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಇದೇ ತಾಲೂಕಿನ ಜೇವೂರ ಗ್ರಾಮದಲ್ಲಿ ಮೇಲ್ಛಾವಣಿ ಕುಸಿದು ಇನ್ನಿಬ್ಬರು ವೃದ್ಧ ದಂಪತಿಗಳು ಮೃತಪಟ್ಟ ಪ್ರತ್ಯೇಕ ಘಟನೆ ಶುಕ್ರವಾರ ನಡೆದಿದೆ.
ಹಳಗುಣಕಿ ಗ್ರಾಮದಲ್ಲಿ ಗುರುವಾರ ಸಂಜೆ ಜೋರಾಗಿ ಸುರಿದ ಮಳೆಯಿಂದಾಗಿ ನೆನೆದಿದ್ದ ಗೋಡೆಗಳು, ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಬೆಳಗಿನ ಜಾವದಲ್ಲಿ ಮನೆಯ ಗೋಡೆ ಕುಸಿದು ದಂಪತಿಗಳ ಮೇಲೆ ಬಿದ್ದಿದೆ ಎನ್ನಲಾಗಿದೆ.
ರಾಚಪ್ಪ ಗಣಪತಿ ಬಡಿಗೇರ (65) ಹಾಗೂ ಸಿದ್ದವ್ವ ಬಡಿಗೇರ (60) ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಇದೇ ವೇಳೆಗೆ ಜೇವೂರ ಗ್ರಾಮದ ತೋಟದ ಮನೆಯೊಂದರಲ್ಲೂ ದುರ್ಘಟನೆ ನಡೆದಿದೆ. ಮಳೆಗೆ ನೆನೆದಿದ್ದ ಮೇಲ್ಛಾವಣೆ ಕುಸಿದ ಪರಿಣಾಮ ರಾತ್ರಿ ಮಲಗಿದ್ದ ವೃದ್ಧ ದಂಪತಿಗಳು ನೆಲದಲ್ಲಿಯೇ ಸಮಾಧಿಯಾಗಿದ್ದಾರೆ. ಕರಬಸಪ್ಪ ಕಳವಾಡಿ (75) ಮತ್ತು ಆತನ ಪತ್ನಿ ಇಂದಿರಾಬಾಯಿ ಆಕಳವಾಡಿ (65) ಮೃತ ದುರ್ದೈವಿಗಳಾಗಿದ್ದಾರೆ. ದಂಪತಿಗಳಿಬ್ಬರ ಮೇಲೆ ರಾತ್ರಿ ಸಮಯದಲ್ಲಿ ಹಠಾತ್ತನೆ ಕುಸಿದು ಬಿದ್ದ ಮೇಲ್ಛಾವಣೆ ದಂಪತಿಗಳಿಬ್ಬರನ್ನು ನೆಲಸಮ ಮಾಡಿದ ಘಟನೆ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಒಂದೇ ತಾಲೂಕಿನ ಎರಡು ಗ್ರಾಮಗಳಲ್ಲಿ ಅವಘಡ ಸಂಭವಿಸಿದ್ದು, ನಾಗರಿಕರಲ್ಲಿ ನೀರವ ಮೌನ ಮೂಡಿದೆ.