ಅಂಬೇಡ್ಕರ್ ಚಿಂತನೆ ಮೇಳೈಸಿಕೊಳ್ಳಿ – ಡಾ.ಸಾಲಿಮನಿ
ಅಂಬೇಡ್ಕರ್ ಚಿಂತನೆಗಳು ನಮಗೆಲ್ಲ ದಾರಿದೀಪ
yadgiri, ಶಹಾಪುರಃ ಅಂಬೇಡ್ಕರ ಅವರ ಚಿಂತನೆಗಳು ನಾವೆಲ್ಲ ಮೈಗೂಡಿಸಿಕೊಂಡು ನಡೆಯಬೇಕಿದೆ. ಶಿಕ್ಷಣ, ಹಕ್ಕು ಮತ್ತು ಹೋರಾಟ ಈ ಮೂರನ್ನು ಮೊದಲು ರೂಢಿಸಿಕೊಳ್ಳಲು ಅವರು ತಿಳಿ ಹೇಳುತ್ತಿದ್ದರು. ಆ ನಿಟ್ಟಿನಲ್ಲಿ ನಾವುಗಳು ನಡೆಯಬೇಕಿದೆ ಎಂದು ಚಿತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಕುಮಾರ ಸಾಲಿಮನಿ ಅಭಿಪ್ರಾಯಪಟ್ಟರು.
ನಗರದ ವಿಶ್ವಜ್ಯೋತಿ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್‍ರವರ ಮಹಾ ಪರಿ ನಿರ್ವಾಣ ಅಂಗವಾಗಿ ಭಾರತದ ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು ಶೀರ್ಷಿಕೆಯಡಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಎಂಬ ದೈತ್ಯ ಚಿಂತಕ ತತ್ವದಾರ್ಶಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಅವುಗಳನ್ನು ಸಮರ್ಪಕವಾಗಿ ಓದಿಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿಗಳಿಗೆ ಅಂಬೇಡ್ಕರರ ತತ್ವ ಬೋಧನೆಗಳ ಕುರಿತು ಮನನ ಮಾಡಿಕೊಡಬೇಕು ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಸಾಮಾಜಿಕ ನ್ಯಾಯವನ್ನು ಅಂಬೇಡ್ಕರ್‍ಅವರು ತಮ್ಮ ವೈಚಾರಿಕತೆಯ ನರನಾಡಿಯನ್ನಾಗಿಸಿಕೊಂಡಿದ್ದರು. ಸಮಾಜದ ಸ್ವಾಸ್ಥ್ಯಕ್ಕೆ ಜಾತಿ ವಿನಾಶವಾಗಬೇಕೆಂದು ಅವರು ಪ್ರತಿಪಾದಿಸುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಇಲ್ಲಿನ ಸಪ್ರದರ್ಜೆ ಕಾಲೇಜಿನ ಪ್ರಾಂಶುಪಾಲ ಚನ್ನಾರಡ್ಡಿ ತಂಗಡಿಗಿ ಅವರ ಬದುಕು ಮತು ಸಾಧನೆ ಕುರಿತು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಖಜಾಂಚಿ ಡಾ.ರವಿಂದ್ರನಾಥ ಹೊಸಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ಮರೆಪ್ಪ ಬಿ. ಜಾಲಿಮಂಚಿ ಅದ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಗೀತಾ ಶಾಂತಪ್ಪ ಕಟ್ಟಿಮನಿ ಹಾಗೂ ಡಾ. ನಾಗಪ್ಪ ಚವಳಕರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಭೀಮರಾಯ ಸೈದಾಪುರ, ರಾಜಶೇಖರ ದಿಗ್ಗಿ, ಬಾಬುರಾವ್ ಭೂತಾಳಿ, ಮರೆಪ್ಪ ಚಟ್ಟರಕರ್, ಮರೆಪ್ಪ ಮೈತ್ರಿ, ಗೋಪಾಲ ತಳಿಗೇರಿ ಇತರರಿದ್ದರು.