ಕಾಂಗ್ರೆಸ್ ಆಡಳಿತಾವಧಿ ಗೋವಾಕ್ಕೆ ಅನ್ಯಾಯ – ಅಮಿತ್ ಶಾ ಆರೋಪ
ಕಾಂಗ್ರೆಸ್ ಆಡಳಿತಾವಧಿ ಗೋವಾಕ್ಕೆ ಅನ್ಯಾಯ – ಅಮಿತ್ ಶಾ
ಕಾಂಗ್ರೆಸ್ ಆಡಳಿತದಲ್ಲಿ ಕೇವಲ 432 ಕೋಟಿ, ಬಿಜೆಪಿ ನೀಡಿದ್ದು 2567 ಕೋಟಿ
ಗೋವಾಃ ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಬಜೆಟ್ ನಲ್ಲಿ ಗೋವಾಕ್ಕೆ ಕೇವಲ 432 ಕೋಟಿ ರೂ ನೀಡಿತ್ತು, ಆದರೆ ಇಂದು ಬಿಜೆಪಿ ಕೇಂದ್ರ ಸರ್ಕಾರ ಗೋವಾಕ್ಕೆ 2567 ಕೋಟಿ ರೂ. ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಇಲ್ಲಿನ ಸಾಖಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗೋವಾಕ್ಕೆ ಸ್ವಾತಂತ್ರ್ಯ ನೀಡುವಲ್ಲಿಯೂ ಅನ್ಯಾಯ ಮಾಡಿದ ಕಾಂಗ್ರೇಸ್ ಪಕ್ಷ ಅಭಿವೃದ್ಧಿ ವಿಚಾರದಲ್ಲಿಯೂ ಗೋವಾ ರಾಜ್ಯವನ್ನು ಸೈಡ್ ಲೈನ್ ಮಾಡಿದೆ ಎಂದು ಆರೋಪಿಸಿದರು.
ಗೋವಾದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮುಂದಡಿ ಇಟ್ಟಿದ್ದು, ಅಟಲ್ ಸೇತು ನಿರ್ಮಿಸಿದೆ, ಜುವಾರಿ ಸೇತುವೆಯನ್ನು ನಿರ್ಮಿಸಿದೆ, ರಾಜ್ಯದಲ್ಲಿ ಎರಡನೇಯ ಅತಿದೊಡ್ಡ ವಿಮಾನ ನಿಲ್ದಾಣವನ್ನು ಇಲ್ಲಿಯೇ ನಿರ್ಮಿಸಲಾಗಿದೆ.
2009 ರಿಂದ 2014 ರವರೆಗೆ ಕಾಂಗ್ರೇಸ್ ಸರ್ಕಾರ ಗೋವಾದ ರಸ್ತೆಗಳಿಗೆ ಕೇವಲ 120 ಕೋಟಿ ರೂ. ನೀಡಿತ್ತು, ಆದರೆ ಪ್ರಸಕ್ತ ಕೇಂದ್ರ ಸರ್ಕಾರವು ಇಲ್ಲಿನ ರಸ್ತೆಗಳ ನಿರ್ಮಾಣಕ್ಕೆ 2500 ಕೋಟಿ ರೂ. ನೀಡಿದೆ.
ಕಾಂಗ್ರೇಸ್ ಸರ್ಕಾರ ಇದ್ದಾಗ ಆ ಪಕ್ಷದ ಮುಖಂಡರು ಗೋವಾಕ್ಕೆ ಪ್ರವಾಸಿಗರಾಗಿ ಮಾತ್ರ ಆಗಮಿಸಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳಲು ಅಲ್ಲ ಇದಕ್ಕೆ ಗಾಂಧಿ ಕುಟುಂಬವು ಹೊರತಲ್ಲ ಎಂದು ಆಪಾದಿಸಿದರು.
ಗೋವಾದಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಬಹು ದೊಡ್ಡ ಕಾರ್ಯವನ್ನು ಬಿಜೆಪಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದಲ್ಲಿ ಮಾಡಲಾಗಿದೆ.
ಅಲ‌್ಲದೆ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಿದೆ. ಕೋವಿಡ್ ವೇಳೆ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದೆ. ಕಾರಣ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುವ ಮೂಲಕ ಅಭೂತಪೂರ್ವ ಜಯ ತಂದು ಕೊಡಬೇಕೆಂದು ಮನವಿ ಮಾಡಿದರು.