ಪಕ್ಷ-ಭೇದ ಮರೆತು ಜನರ ಸಮಸ್ಯೆಗೆ ಸ್ಪಂದಿಸೋಣ:ಸಚಿವ ಬಸವರಾಜ
70 ಕೊಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ
70 ಕೊಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ
ಪಕ್ಷ-ಭೇದ ಮರೆತು ಜನರ ಸಮಸ್ಯೆಗೆ ಸ್ಪಂದಿಸೋಣ:ಸಚಿವ ಬಸವರಾಜ
ಯಾದಗಿರಿಃ ಶಹಾಪುರದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಇಂದು ಭೀಮಾ ನದಿಯಿಂದ ಇಂಗಳಗಿ ಮತ್ತು ಮಡ್ನಾಳ ಗ್ರಾಮಗಳೆರಡು ಸೇರಿದಂತೆ ನಗರದ 31 ವಾರ್ಡ್ಗಳಿಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಹಾಗೂ ನಗರಸಭೆ, ಶಹಾಪುರ ಆಶ್ರಯದಲ್ಲಿ 70 ಕೋಟಿ ರೂ, ವೆಚ್ಚದ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನಿಗೆ ಕುಡಿಯುವ ನೀರು ಅತ್ಯವಶ್ಯವಾಗಿದ್ದು, ರಾಜ್ಯದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಿರುವದು ಸಂಚಲನ ಮೂಡಿದೆ. ಜನರ ಸಮಸ್ಯೆಗಳ ನಿವಾರಣೆಗೆ ಪಕ್ಷ-ಭೇದಗಳನ್ನು ಮರೆತು ಸ್ಪಂದನೆ ಮಾಡುವದು ಅಗತ್ಯವಾಗಿದೆ. ಅಧಿಕಾರಕ್ಕಿಂತ ಅಭಿವೃದ್ಧಿ ದೊಡ್ಡದು. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಭಾಗದಲ್ಲೂ 700-800 ಕೋಟಿಯ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸಂಚಲನ ಮೂಡಿದೆ ಎಂದರು.
ಲೋಕಸಭೆ ಸದಸ್ಯ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಸರ್ವ ಸಂಪತ್ತುಗಳಲ್ಲಿ ಜಲ ಸಂಪತ್ತು ಶ್ರೇಷ್ಠವಾಗಿದ್ದು, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲಧಾರೆ ಯೋಜನೆಯನ್ನು ಪ್ರಧಾನಿ ಮೋದಿಜಿಯವರ ಆಸೆಯಂತೆ ಮುಂದಿನ ದಿನಮಾನಗಳಲ್ಲಿ ಮನೆ-ಮನೆಗೆ ನೀರು ಎನ್ನುವ ಧ್ಯೇಯ ಹೊಂದಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಯೋಜನೆಯ ಫಲಕಾರಿಗಾಗಿ ಪರಿಣಾಮಕಾರಿಯಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಸುರಪುರ ಶಾಸಕ ರಾಜೂಗೌಡ ಮಾತನಾಡಿ. ಜಿಲ್ಲೆಯ ನಾಲ್ವರು ಶಾಸಕರು ಪಕ್ಷ ಬೇಧ ಮರೆತು ಅಭಿವೃದ್ಧಿ ಪಥದಲ್ಲಿ ಒಂದಾಗಿ ಹೆಜ್ಜೆ ಹಾಕುತ್ತೇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ಗೆಲುವು ಆದ ಮೇಲೆ ಅಭಿವೃದ್ಧಿ ಚಿಂತನೆಯಲ್ಲಿ ಒಂದಾಗಿ ಜಿಲ್ಲೆಯ ಕ್ಷೇತ್ರಗಳ ಅಭಿವೃದ್ಧಿಗೆ ಪರಸ್ಪರರು ಸಹಾಯ ಸಹಕಾರದೊಂದಿಗೆ ಮುನ್ನಡೆಯುತ್ತೇವೆ. ಶಹಾಪುರ ನಗರದಲ್ಲಿ ಮುಂದೆ ಕುಡಿಯುವ ನೀರಿನ ಭವಣೆ ಬಾರದಂತೆ ಶಾಶ್ವತ ಪರಿಹಾರ ಕಂಡು ಕೊಳ್ಳುತ್ತಿದ್ದು, ಜನರು ನಿರಾಳರನ್ನಾಗಿಸಿದ ಶಾಸಕರ ಪರಿಶ್ರಮ ದೊಡ್ಡದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ನಗರ ಜನರ ಬಹು ದಿನಗಳ ಆಶೋತ್ತರಗಳಲ್ಲಿ ಒಂದಾದ ಶಾಶ್ವತ ಕುಡಿಯುವ ನೀರು ಪೂರೈಕೆಯ ಯೋಜನೆ ಸಾಕಾರಗೊಂಡು ಇಂದು ಅಡಿಗಲ್ಲು ನೇರವೇರಿದೆ. ಪ್ರತಿ ವರ್ಷ ಜಲಕ್ಷಾಮದ ಕರಿನರಳಿನಲ್ಲಿ ಜನರು ನರಳುತ್ತಿದ್ದರು. 120 ಕೋಟಿ ರೂ.ಗಳ ಅವಶ್ಯಕವಾಗಿದ್ದು, ಮುಂದಿನ ದಿನಮಾನಗಳಲ್ಲಿ 4 ಎಮ್,ಎಲ್,ಟಿ, ಇದ್ದ ಕುಡಿಯುವ ನೀರಿನ ಘಟಕ ಮುಂದೆ 12 ಎಮ್,ಎಲ್,ಟಿ ಯಾಗಿ ಶುದ್ಧೀಕರಣಗೊಳ್ಳುತ್ತದೆ. ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಶಹಾಪುರ ಜನರು ನಿರಾಳರಾಗುತ್ತಿದ್ದಾರೆ. ಅಭಿವೃದ್ದಿ ಒಂದೇ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದು ಒತ್ತಿ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಬಿಜಿ ಪಾಟೀಲ್, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ. ನಗರಸಭೆ ಅಧ್ಯಕ್ಷ ಕಮಲಾಬಾಯಿ ಚಂದ್ರಶೇಖರ ಲಿಂಗದಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಬಿ ವೇದಮೂರ್ತಿ. ಅಪÀರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ. ಯಾದಗಿರಿ ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ನಗರಸಭೆ ಪೌರಾಯುಕ್ತ ಓಂಕಾರ ಪೂಜಾರಿ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.