ಗಜಲ್ ದ ಸಂಕ್ಷಿಪ್ತ ಪರಿಚಯ ಮತ್ತು ವ್ಯಾಖ್ಯಾನ, ವಿವರಣೆ ಕುರಿತು ಗಜಲ್ ಕಾರ ಹೊನ್ಕಲ್ ಬರಹ ಮಾಹಿತಿ
ಗಜಲ್ ಕುರಿತು ಸಂಪೂರ್ಣ ಮಾಹಿತಿ ನೀಡಿದ ಹಿರಿಯ ಸಾಹಿತಿ ಹೊನ್ಕಲ್
ಗಜಲ್ ದ ಸಂಕ್ಷಿಪ್ತ ಪರಿಚಯ ಮತ್ತು ವ್ಯಾಖ್ಯಾನ- ವಿವರಣೆ ನನಗೊಲಿದಂತೆ ಇತರ ಸಾಧಕರ ಓದಿನಿಂದ…
ಈ ಗಜಲ್ ಕಾವ್ಯ ಬರೆಯುವ ಮುನ್ನ ಈ ಸಂದರ್ಭದಲ್ಲಿ *ಗಜಲ್* ಎಂದರೇನು ಎಂದು ಸಹ ತಿಳಿದು.ಕೊಳ್ಳುವುದು ಬಹುಮುಖ್ಯವಾಗಿದೆ.ಕಾರಣ ಕಾವ್ಯ ಕ್ಷೇತ್ರದಲ್ಲಿರುವ ಹೊಸಬರನೇಕರು ಈಗ ಗಜಲ್ ಕಾವ್ಯದೆಡೆಗೆ ದಿನನಿತ್ಯ ಆಕರ್ಷಿತರಾಗುತ್ತಿದ್ದಾರೆ.
*ಗಜಲ್* ಎಂಬುದು ಮೂಲಭೂತವಾಗಿ ಅರಬ್ಬಿ ಪದ. ಆದರೆ ಅದು ಅಲ್ಲಿ ಒಂದು ಪರಿಪೂರ್ಣ ಕಾವ್ಯ ಪ್ರಕಾರವಾಗಿ ಬೆಳೆಯಲಿಲ್ಲ.ಅದು ಅಲ್ಲಿಂದ ಪರ್ಷಿಯನ್ ದೇಶಕ್ಕೆ ಹೋಗಿ ಅಲ್ಲಿಯ ಪಾರ್ಸಿ ಭಾಷೆಯಲ್ಲಿ ಸಮೃದ್ಧವಾಗಿ ಬೆಳೆಯಿತು. ನಂತರ ಅದು ಪಾರ್ಸಿಯಿಂದ ಉರ್ದುವಿಗೆ ಬಂದು ಉರ್ದುವಿನಲ್ಲಿ ವ್ಯಾಪಕವಾಗಿ ಗರಿಬಿಚ್ಚಿ ಕುಣಿಯುವ ನವಿಲಂತೆ ಸುಂದರವಾಗಿ ಬೆಳೆಯಿತು.ಎಷ್ಟರಮಟ್ಟಿಗೆ ಅಂದರೆ ಗಜಲ್ ಅಂದರೆ ಉರ್ದುವಿನ ಕಾವ್ಯದ ರಾಣಿ ಎಂದು ಗುರುತಿಸಿಕೊಂಡು ಅರಮನೆಯಿಂದ ಪ್ರೇಮದ ಫಕೀರನ ಗುಡಿಸಿಲಿನವರೆಗೆ ಬೆಳೆಯಿತು.ಜನಪ್ರಿಯವಾಯಿತು.
ಅರಬ್ ದೇಶದಲ್ಲಿ ಗಜಾಲಾ ಎಂಬ ಒಂದು ಊರಿದ್ದು ಅದು ಅಲ್ಲಿಂದ ಇದು ಬೆಳೆಯಿತು ಎಂಬ ಮಾತು ಅನೇಕ ಪೂರ್ವಸೂರಿಗಳು ಹೇಳುತ್ತಾರೆ.ಅರಬ್ ದೇಶದಲ್ಲಿ ಗಜಲಾ ಎಂಬ ನಾಮಧೇಯದ ಒಬ್ಬ ವ್ಯಕ್ತಿ ಇದ್ದನಂತೆ.ಆತ ತನ್ನ ಬದುಕಿನ ಉದ್ದಕ್ಕೂ ಪ್ರೀತಿ ಪ್ರೇಮದಲ್ಲಿ ಮುಳುಗಿದ್ದು ಆತ ಸುಂದರ ಗಜಲ್ ರಚಿಸುತ್ತಾ; ಹಾಡುತ್ತಾ ಕಳೆದನಂತೆ.ಆತನ ನೆನಪಿಗಾಗಿ ಗಜಲ್ ಎಂದು ಈ ಹೆಸರು ಬಂದಿದೆ ಎಂದು ಸಾಕಷ್ಟು ಇಂತಹ ರಂಜಿತ ಕಥೆಗಳಿವೆ.
ಗಜಲಾ ಎಂದರೆ ಜಿಂಕೆ ಮರಿ ಎಂದು ಸಹ ಅರ್ಥವಿದೆ. ಗಜಲ್ ಅಂದರೆ ಅರ್ತನಾದ.ಜಿಂಕೆ ಮರಿಯ ಆ ಅರ್ಥನಾದವೇ ಗಜಲ್ ಗೆ ಪ್ರೇರಣೆ ಎಂಬ ಕಥೆಯೊಂದಿದೆ. ಅಮಾಯಕ ಜಿಂಕೆಯೊಂದು ಮೈಮರೆತು ಹುಲ್ಲು ಮೇಯುವಾಗ ಕಟುಕನೊಬ್ಬನು ಬಾಣಪ್ರಯೋಗ ಮಾಡಿ ಕೊಲ್ಲುತ್ತಾನೆ.ಅದು ಅನಿರೀಕ್ಷಿತ ಆಘಾತದಿಂದ ಆಹ್!!! ಎಂದು ಚಿತ್ಕರಿಸಿ ಪ್ರಾಣತ್ಯಾಗ ಮಾಡುತ್ತದೆ.ಆದರ ಅಂತಿಮ ಯಾತನೆಯ ನೋವೇ ಆಹ್!!! ಎಂಬ ಉದ್ಗಾರ! ಇದೇ ಗಜಲ್ ನ ಮೂಲ ಎನ್ನುತ್ತಾರೆ ಕೆಲವರು.
ಅಂದರೆ ಅನಿರೀಕ್ಷಿತ ಆಘಾತಗಳಿಗೆ, ಅದು ಸಾವಿನ ಅಂತಿಮ ಯಾತನೆಯು ಆಗಿರಬಹುದು.ನಿಷ್ಪಾಪಿ ಜೀವವೊಂದರ ಅಸಹಾಯಕ ಅರ್ಥನಾದವೇ *ಗಜಲ್* ರಚನೆಗೆ ಮೂಲದ್ರವ್ಯ.ಲೋಕದ ನೋವು ಸಂಕಟಗಳಿಗೆ ಕಂಬನಿಯಾದವರು ಸೂಫಿಗಳು, ಚಿಂತಕರು, ತತ್ವ ಪದಕಾರರು, ದಾಸರು,ಶರಣರು ಮುಂತಾದವರು. ಇವರಲ್ಲಿ ಉರ್ದು ಕಾವ್ಯ ಚಿಂತಕರು ತಮ್ಮ ಲೌಕಿಕ ನೋವುಗಳಿಗೆ ಮತ್ತು ದೈವತ್ವದ ಸಾಕ್ಷಾತ್ಕಾರಕ್ಕೆ ಈ ಪ್ರಕಾರವನ್ನು ಆರಿಸಿಕೊಂಡಿದ್ದು ಸಾಕಿಯ ಸನ್ನಿಧಿಯಲ್ಲಿ ಆತ್ಮದರ್ಶನ ಹಾಗೂ ಲೋಕದರ್ಶನ ಎರಡರ ಸಾಧ್ಯತೆಗಳನ್ನು ಕಂಡರಿಸಿದ್ದಾರೆ.ಸಹೃದಯರನ್ನು ಮಾರ್ದವಗೊಳಿಸುವ ಒಂದು ತೀವ್ರ ವಿಷಾದದ ಗ್ಲಾನಿಯು ಈ ಪ್ರಕಾರದ ಕಾವ್ಯಕ್ಕೆ ಮೂಲ ತಿರುಳು ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.
ಅದೇನೇನೋ ಕಾರಣದಿಂದ ಗಜಲ್ ಎಂದು ಹೆಸರು ಬಂದಿರಬಹುದು.ಅದೀಗ ಉರ್ದುವಿನಿಂದ ೧೯೭೦ ರ ದಶಕದಲ್ಲಿ ಉರ್ದು ಕಲಿತ ಕನ್ನಡದ ಲೇಖಕರಾದ ನಾಡೋಜ ಶಾಂತರಸ,ಪ್ರೊ.ಅಬ್ದುಲ್ ಮಜೀದ ಖಾನ್,ಡಾ.ದೇವೇಂದ್ರಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠ ಹಾಗೂ ನಮ್ಮ ಸಗರನಾಡಿನ ಸುರಪುರದ ಡಾ.ಕೆ.ಮುದ್ದಣ್ಣನವರು, ರಂಗಂಪೇಟೆಯ ತನಹಾ ತಿಮ್ಮಪುರಿಯವರು, ಹೀಗೆ ಮುಂತಾದವರು ಉರ್ದು ಸಾಹಿತ್ಯದ ರಾಣಿಯಾಗಿದ್ದ ಗಜಲ್ ಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಕನ್ನಡ ಗಜಲ್ ಕ್ಷೇತ್ರದ ಪಿತಾಮಹರಾಗಿದ್ದಾರೆ.
*ಜಗತ್ತಿನ ಕಾವ್ಯದಲ್ಲಿ ಗಜಲ್ ಗಳಿಗೆ ವಿಶಿಷ್ಟವಾದ ಸ್ಥಾನವಿದೆ.ಗಜಲ್ ಉರ್ದು ಕಾವ್ಯದ ಕೆನೆ,ಘನತೆ,ಗೌರವ, ಪ್ರತಿಷ್ಠೆಗಳ ಪ್ರತೀಕ.ಗಜಲ್ ಪ್ರೇಮ ಸಾಮ್ರಾಜ್ಞಿ.ರಸ ಜಲದಿ. ಬದುಕಿನ ರುಚಿ ಮತ್ತು ಬಟ್ಟೆ;ಆತ್ಮಾನಂದದ ತಂಬೆಳಕು* ಎಂದು *ನಾಡೋಜ ಶಾಂತರಸರು* ವ್ಯಾಖ್ಯಾನಿಸಿದ್ದಾರೆ.
*ಗಜಲ್ ಅಂದರೆ ಪ್ರೀತಿ ಪ್ರೇಮ ವಿರಹ ಅನುರಾಗ ಮೋಹ ಮಮತೆ ಒಲವು ಚೆಲುವು ದುಃಖ-ದುಮ್ಮಾನ, ಕಳೆದುಕೊಂಡ ನೋವು,ಅನುಭವಿಸಲಾಗದ ಕೊರಗು. ಅನುಭವಿಸಿದ ಸಂತಸ.ಸೂಫಿ ಸಂತರ ಶರಣರ ಮಾರ್ಗದ ಅನುಭಾವದ ಅಲೌಕಿಕ ಮಿಲನ.ಅದೊಂದು ಪ್ರೀತಿ ಪ್ರೇಮ ಲೋಕದ ದಿವ್ಯ ಹುಡುಕಾಟ.ಅಕ್ಕನ ಕಿಚ್ಚಿಲ್ಲದ ಬೇಗೆ ಮತ್ತು ಮೀರಾಳ ಯಾಚನೆ,ರಾಧೆಯ ಮೋಹದಂತಹದು. ಗುಲಾಬಿಯ ಪಕಳೆಯಂತಹ ಎರಡು ಸುಂದರ ಮನಸ್ಸುಗಳ ಪಿಸುಮಾತು ಆಗಿದೆ- ಹೊನ್ನಸಿರಿ* ಎಂದು ನನ್ನದೇ ಒಂದು ವ್ಯಾಖ್ಯಾನವಿದೆ.
ಗಜಲ್ ಎಂದರೆ ಸಾಮಾನ್ಯ ಅರ್ಥದಲ್ಲಿ ನಲ್ಲೆಯೊಂದಿಗೆ ಅಥವಾ ಹೆಂಗಸರೊಂದಿಗೆ,ಸಖಿಯೊಂದಿಗೆ ಪಿಸು ಮಾತಾಡುವುದೆಂದು ಅರ್ಥವಿದೆ.ಒಟ್ಟಾರೆ ಗಜಲ್ ಅಂದ್ರೆ ಅನೂಹ್ಯ ಪ್ರೇಮ ಸಾಮ್ರಾಜ್ಯದಲ್ಲಿ ತೇಲಿ ಹೋಗುವಂತಹದ್ದು.ಎರಡು ಸುಂದರ ಮನಸ್ಸುಗಳು ಪಿಸು ಮಾತಲಿ ತಮ್ಮ ಮೋಹ ಹಂಚಿಕೊಳ್ಳುವಂತಹ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿದೆ.
ಈ ಗಜಲ್ ದಲ್ಲಿ ಕನಿಷ್ಠ ೫ ದ್ವಿಪದಿಗಳಿಂದ ೨೫ ದ್ವಿಪದಿಗಳವರೆಗೆ ರಚನೆ ಮಾಡಬೇಕು.ಆರಂಭ ಶೇರ್ ಗೆ ಅಂದ್ರೆ ದ್ವಿಪದಿಗೆ ಮತ್ಲಾ ಎಂತಲೂ, ಕೊನೆಯ ದ್ವಿಪದಿಗೆ ಮಕ್ತಾ ಎಂದು ಅಂದರೆ ಮುಕ್ತಾಯ ಎನ್ನಲಾಗುತ್ತದೆ. ಅಲ್ಲಿ ಕವಿಯು ತನ್ನ ಅಂಕಿತನಾಮ ‘ತಕಲ್ಲೂಸ’ ಬರಬೇಕು ಅನ್ನಲಾಗುತ್ತದೆ.ಗಜಲ್ ದಲ್ಲಿ ಕಾಫಿಯ ಪದ ತುಂಬಾ ಮುಖ್ಯ. ಕಾಫಿಯಾ ಇಲ್ಲದೆ ಗಜಲ್ ಬರೆಯಲಾಗದು.ರಧಿಫ ರಹಿತ ಗಜಲ್ ಬರೆಯಬಹುದು. ಆದರೆ ಬದಲಾಗುವ ಕಾಫಿಯಾ ಪದ ಮಾತ್ರ ಪ್ರತಿ ಗಜಲ್ ದಲ್ಲಿ ಮುಖ್ಯ. ಮತ್ಲಾದಲ್ಲಿ ೨ ಸಾಲುಗಳು ಸಹ ಕಾಫಿಯಾ ಪದ ಇರಬೇಕು. ನಂತರ ೪ ನೇಸಾಲು, ೬ನೇ ಸಾಲು, ೮ನೇ ಸಾಲು ಹಾಗೂ ೧೦ನೇ ಸಾಲಿನ ಕೊನೆಯ ಮಕ್ತಾದಲ್ಲಿ ಅಂದರೆ ಕೊನೆಯ ದ್ವಿಪದಿಯ ಕೊನೆಯ ಸಾಲಿನಲ್ಲಿ ಕಾಫಿಯಾ ಪದ ಬರುತ್ತದೆ.ಕಾಫಿಯಾ ರವಿ ಹೊಂದಿದ್ದು ಬದಲಾಗುತ್ತ ಹೋಗಬೇಕು.ಗಜಲ್ ಗೆ ಆಕೃತಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ಗಜಲ್ ಕಟ್ಟಿಕೊಡುವ ಹೃದಯ ಭಾಗವು ಮುಖ್ಯ. ಅನೇಕರು ಆಕೃತಿಯ ದೃಷ್ಟಿಯಿಂದ ಮಾತ್ರ ಗಜಲ್ ರಚನೆಗೆ ತೊಡಗಿದ್ದು,ಹೃದಯ ಭಾವವಿಲ್ಲದೆ ಸೊರಗಿ ಹೋಗುತ್ತಿರುವುದು ಇತ್ತೀಚಿಗೆ ಕಾಣಬಹುದಾಗಿದೆ.
ಗಜಲ್ ಗೆ ತನ್ನದೇ ಆದ ಒಂದು ಛಂದಸ್ಸು ಇದ್ದು, ಬಳಸುವ ಕಾಫಿಯಾ ಪದಗಳು ಒಂದು ಪ್ರಾಸಗಳು ಹೊಂದಿದ್ದು ಅದು ಹಾಡಲು ಪೂರಕವಾಗುವಂತೆ ಹಾಗೂ ದ್ವಿಪದಿಗಳ ಸಾಲುಗಳು ಸಮವಾದ ಪದಗಳ ಮೂಲಕ ರಚಿತ ಗೊಂಡಿದ್ದರೆ,ಅದು ಅರ್ಥವತ್ತಾದ ರೂಪಕಗಳಿಂದ, ಪದ ಪುಂಜಗಳಿಂದ ರಚಿತಗೊಂಡಿದ್ದರೆ ಕೇಳುಗರ, ಓದುಗರ ಮನಕ್ಕೆ ಅಹ್ಲಾದ ನೀಡುತ್ತದೆ.
*ಗಜಲ್ ನಿಯಮಗಳು ಹಾಗೂ ಗಜಲ್ ಲಕ್ಷಣಗಳು ಶಾಂತರಸರ ಪ್ರಕಾರ*
ಗಜಲ್ *ದ್ವಿಪದಿಗಳಿಂದ* ಕೂಡಿದೆ.
ಗಜಲ್ *೫ ರಿಂದ ೨೫* ದ್ವಿಪದಿಗಳಿಂದ ಕೂಡಿವೆ.
ಗಜಲ್ ನ ಒಂದ ಚರಣಕ್ಕೆ *ಮಿಸ್ರ* ಎನ್ನುತ್ತಾರೆ.
ದ್ವಿಪದಿಗೆ *ಶೇರ್* ಎನ್ನುತ್ತಾರೆ.
ಗಜಲ್ ರಚನೆಯಲ್ಲಿ *ನಾಲ್ಕು* ಅಂಗಗಳಿವೆ.
೧) *ಮತ್ಲಾ*- ಗಜಲ್ ನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ.ಇದರ ಎರಡಯ ಚರಣಗಳಲ್ಲಿ ಕಾಫಿಯ ಮತ್ತು ರದೀಫ ಎರಡು ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.
೨) *ಕಾಫಿಯಾ*- ಇದು ಒಂದು ಪ್ರಾಸ.ರದೀಫ ದ ಹಿಂದೆ ಬರುತ್ತದೆ.ನಿಶ್ವಿತವಾದ ಶಬ್ದ ಬೇರೆ ಬೇರೆ ಅರ್ಥ ಕೊಡುವಂತೆ ಬರಬೇಕು.(ಸ್ಥಾಯಿಯಾಗಿ ಅಲ್ಲ)
*ರವಿ* – ಕಾಫಿಯಾದ ಕೊನೆ ಅಕ್ಷರಕ್ಕೆ ರವಿ ಎನ್ನುತ್ತಾರೆ.
ಕಾಫಿಯಾಕೆ ರವಿ ಬರಲೇಬೇಕು.
೩) *ರದೀಫ*-ಇದೊಂದು ಪ್ರಾಸ.ಈ ಶಬ್ದ ನಿಶ್ಚಿತವಾಗಿ ಪುನಃ ಪುನಃ ಕಾಫಿಯಾದ ಬಳಿಕ ಬರುತ್ತದೆ.
೪) *ಮಕ್ತ*-ಗಜಲ್ ನ ಕೊನೆಯ ದ್ವಿಪದಿ ಇದು.
ಕವಿ ತನ್ನ *ಕಾವ್ಯನಾಮವನ್ನಿಲ್ಲಿ* ಹೇಳಿಕೊಳ್ಳುತ್ತಾನೆ.
ಗಜಲ್ ನ್ನು *ಭಾವಪೂರ್ಣವಾಗಿ* ಹಾಡಬಹುದು.ಗಜಲ್ ಗೆ
*ತಲೆಬರಹವಿರುವುದಿಲ್ಲ.*
ಗಜಲ್ ವೈಶಿಷ್ಟವೇನೆಂದರೆ
*ಮೃದು* , *ಮಧುರ* *ಭಾವ* ಶಬ್ದಗಳನ್ನು ಬಳಸಿ ಬರೆಯುವಂತಹದ್ದು….ಮೋಹಕ ಪದಗಳಿಂದ ತನ್ನ ನಲ್ಲೆಗೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವದು.
೧) ರದೀಫ ಒಂದೇ ರೀತಿಯ ಪದವಾಗಿರಲಿ
೨) ಕಾಫಿಯಾ ಒಂದೇ ರವಿಯಾಗಿರಲಿ.ಸಾಧ್ಯವಾದಷ್ಟೂ ಒಂದೇ ಅಳತೆಯ ಪದಗಳಾಗಿರಲಿ
೩) ಮತ್ಲ ಹಾಗೂ ಮಕ್ತ ಗಜಲ್ ನ ಭಾವ ಬಿಂಬಿಸಲಿ
೪) ಪ್ರತಿ ಷೇರ್ ದ್ವಿಪದಿಗಳಾಗಿರಲಿ.ಸಾಧ್ಯವಾದಷ್ಟೂ ಒಂದೇ ರೀತಿಯ ಅಳತೆಯಲ್ಲಿರಲಿ
೫) ದ್ವಿಪದಿಗಳೆಲ್ಲವೂ ಏಕ ವಾಕ್ಯ ತರಹ ಇರಬಾರದು. ಎರಡು ಸಾಲುಗಳು ಪ್ರತ್ಯೇಕವಾಗಿಯೂ ಅರ್ಥ ಕೊಡಬೇಕೆಂಬುದು ಅತಿ ಮುಖ್ಯ.
೬) ಷೇರ್ ನ ದ್ವಿಪದಿಗಳು ಪ್ರಶ್ನೆ ಉತ್ತರ ಮಾದರಿ ಕೆಲವು ಸಾಲುಗಳಲ್ಲಾದರೂ ಇರಲಿ.
೭) ರದೀಫ ಕಾಫಿಯಾಗಳಿಗೋಸ್ಕರ ಹೆಣೆದ ಸಾಲುಗಳ ವಿಭಕ್ತಿ ಬಗ್ಗೆ ಗಮನವಿರಲಿ.
೮) ಷೇರ್ ಗಳ ಪ್ರಥಮ ಹಾಗೂ ದ್ವಿತೀಯ ಸಾಲುಗಳು ಉಪಮಾನ ಉಪಮೇಯಾತ್ಮಕವಾಗಿಯೂ ಇದ್ದರೆ ಚಂದ
೯) ಎರಡೂ ಸಾಲುಗಳನ್ನು ಒಟ್ಟಾಗಿಸಿ ಓದುವಾಗ ಅದೂ ಸಹ ಒಂದು ವಿಶಿಷ್ಟ ಅರ್ಥ ಕೊಡುವಂತಿರಲಿ
೧೦) ರದೀಫ ರಹಿತ ಗಜಲ್ ಗೈರ್ ಮುರದ್ದಫ್ (ಕಾಫಿಯಾನಾ) ದಲ್ಲಿ ಕಾಫಿಯಾದ ರವಿಯ ಬಗ್ಗೆ ಗಮನ ಮುಖ್ಯ.ಸಾಧ್ಯವಾದರೆ ಕೊನೆಯ ಎರಡು ಅಕ್ಷರ ಒಂದೇ ರವಿಯನ್ನು ಹೊಂದಿದ್ದರೆ ಚಂದ. ( ವಿರಹ, ಬರಹ,ತರಹ ಹೀಗೆ)
ಉಕ್ಕೇರುವ ಭಾವಗಳಲಿ ಬಂಧಿಸಿ ಆಕಾಶದ ಎತ್ತರಕ್ಕೆ ಬಾಂಧವ್ಯದ ಬಳ್ಳಿ ಹಬ್ಬಿಸಿಬಿಟ್ಟಿರುವೆ ಅರಿವಿದೆಯಾ ಸಾಕಿ ಕಣ್ಣಲ್ಲೆ ಕಾಮನಬಿಲ್ಲು ತೋರಿಸಿ ನಿನ್ನ ಆತ್ಮವಂಚನೆ ನೀ ಮಾಡಿಕೊಂಡು ಕೈಬಿಟ್ಟಿರುವೆ ಸುಖಿಯಿರುವೆಯಾ ಸಾಕಿ
ಹೊನ್ನಸಿರಿ
ಇದು ಜುಲ್ ಕಾಫಿಯಾನಾ ಗಜಲ್ ಅಂತೂ ಹೌದು, ಜೊತೆಗೆ ಸಂಪೂರ್ಣ ಮತ್ಲಾ ಗಜಲ್.
ಅಲ್ಲದೆ, ಕಾಫಿಯಾದಲ್ಲಿ ಸ್ವರ ಕಾಫಿಯಾ ಮತ್ತು ಅಕ್ಷರ ಕಾಫಿಯಾ ಅಂತ ಎರಡು ಪ್ರಕಾರಗಳಿವೆ.
ಕಾಫಿಯಾ ಸುಮಾರು ೪ ಅಕ್ಷರಗಳ ವರೆಗೆ ಪಾಲಿಸುತ್ತಾರೆ. ಅದರಲ್ಲಿ
ಪ್ರಥಮ ಅಕ್ಷರ ರವಿ
ದ್ವಿತೀಯ ಅಕ್ಚರ ರವಿಶ್
ತೃತೀಯ ಅಕ್ಷರ ಕೈದು
ಚತುರ್ಥ ಅಕ್ಷರ ತಸೀಸ್
ಇದು ಓದು ಹಾಗೂ ಬರಹದ ಅನುಭವ ವಿಸ್ತಾರಗೊಂಡಂತೆ ಮೈಗೂಡುತ್ತದೆ.
ರದೀಫ, ಕಾಫಿಯಾ, ಮತ್ಲ, ಮಕ್ತ ಇವಿಷ್ಟು ಸರ್ವೇ ಸಾಮಾನ್ಯ ಗಮನದಲ್ಲರುವ ಗಜಲ್ ಅಂಶಗಳು.
ಇವಲ್ಲದೆ,ಅವುಗಳ ಪ್ರಕಾರಗಳ ಒಳಗೆ ಇಣುಕಿದಾಗ ಮಹತ್ವದ ಅಂಶಗಳು ಕಂಡು ಬರುತ್ತವೆ.
*ಕಾಫಿಯಾವು ಎಲ್ಲಾ ಗಜಲ್ ಗೂ ಜೀವಾಳ*
– ಕಾಫಿಯಾವು ರದೀಫ ನ ಹಿಂದಿನ ಪದ.
– “ತಷಬೀಬ್ ಎಂಬ ಒಂದು ಪ್ರಕಾರವು ಗಜಲ್ ನಂತೆಯೇ ಹಾಡುವ ಪ್ರಕಾರವಾಗಿದೆಯಂತೆ.
-ಶೇರ್ ಗಳಿಗೆ ಬೈತ್ ಎಂಬ ಹೆಸರೂ ಇದೆ.
-ಒಂದು ಚರಣಕ್ಕೆ ಮಿಸ್ರ ಎಂದು ಹೆಸರು.
-ಮತ್ಲಾವು ಗಜಲ್ ನ ಲಯ ಪ್ರವೇಶಿಕೆ ಮತ್ತು ವಿಷಯವನ್ನು ತಿಳಿಸಬೇಕು.
-ಮತ್ಲಾಸಾನಿ ಎಂದರೆ ಹುಸ್ನೆ ಮತ್ಲಾ ಅಥವಾ ಚೆಲುವಿನ ಬಗೆಗಿನ ಪ್ರಕಾರ.
-ಪೂರ್ಣ ಮತ್ಲಾ ಎಂದರೆ ಎಲ್ಲವೂ ಮತ್ಲ ಗಳಾಗಿರುವುದು.
-ಹರ್ಫ್ ಮುಸ್ತಕಿಲ್ ಎಂದರೆ ಕಾಫಿಯಾದ ಕೊನೆಯ ಅಕ್ಷರ.
-ಹರ್ಫ್ ಮುಕ್ ಬದಿರ್ ಅಂದರೆ ರವಿಯ ಹಿಂದಿನ ಅಕ್ಷರ.
-ಅಲಾಮತ್ ಅಂದರೆ ರವಿಯ ಹಿಂದಿನ ಅಕ್ಷರ.
-ಏಕ್ ಅಲಾಮತ್ ಅಂದರೆ ಸ್ವರ ಒಂದೇ ಇರುವುದು.
-ಬಹು ಅಲಾಮತ್ ಅಂದರೆ ಅಲಾಮತ್ ಬೇರೆ ಬೇರೆಯಾಗಿ ಬಳಸುವಂತಹದು.
-ಬಾಜ್ ಕಾಫಿಯಾ ಅಂದರೆ ಅರ್ಥ ವ್ಯತ್ಯಾಸವುಳ್ಳ ಒಂದೇ ಕಾಫಿಯಾ.
-ಹಮ್ ಕಾಫಿಯಾ ಅಂದರೆ ನಿರ್ದಿಷ್ಟ ಶಬ್ದದೊಂದಿಗೆ ಬರುವ ಇನ್ನೊಂದು ಅಕ್ಷರ.
-ಜುಲ್ ಕಾಫಿಯಾ ಅಂದರೆ ಕಾಫಿಯಾದ ಹಿಂದೆ ಬರುವ ಇನ್ನೊಂದು ಕಾಫಿಯಾ.
-ಹರ್ಫ್ಮುಸ್ತಕಿಲ್ ಅಂದರೆ ಸ್ವರ ಕಾಫಿಯಾ.
-ಸೆಹ ಗಜಲ್ ಅಂದರೆ ಪುನಹ ಮತ್ಲ ಹಾಕಿ ಬರೆದ ಗಜಲ್.
-ತಖಲ್ಲೂಸ್ ಅಂದರೆ ಮಕ್ತದಲ್ಲಿ ಬಳಸುವ ಅಂಕಿತ ನಾಮ.
-ಮುಸಲ್ಸಿಲ್ ಅಂದರೆ ಸುಸಂಬದ್ಧ ವಿಷಯದ ಪ್ರತಿಪಾದನೆ.
-ಗೈರ್ ಮುಸಲ್ ಸಿಲ್ ಅಂದರೆ ಅಸಂಗತ ವಿಷಯಗಳ ಗಜಲ್,
– ತರ್ಹಿ ಗಜಲ್ ಅಂದರೆ ಇಷ್ಟ ವಿಷಯಗಳ ಬೇರೆ ಬೇರೆ ಸಾಲುಗಳು.
-ನಜರೀ ಗಜಲ್ ಅಂದರೆ ಗದ್ಯಾತ್ಮಕವಾಗಿರುವುದು.
-ಜಿನ್ ಸಿ ಗಜಲ್ ಅಂದರೆ ಲೈಂಗಿಕ ವಿಚಾರಗಳ ಸಾಲುಗಳು.
-ಝೆನ್ ಗಜಲ್ ಅಂದರೆ ಬೌದ್ಧ ಸಿದ್ಧಾಂತ ಆಧರಿತವಾದುದು.
-ರಾಜಕೀಯ ಗಜಲ್ ವಿದ್ಯಮಾನದ ವಿಚಾರಗಳದ್ದು -ಅಜಾದಿ ಗಜಲ್ ಅಂದರೆ ಮುಕ್ತ ಛಂದಸ್ಸು ಹೊಂದಿರುವಂತಹ ಗಜಲ್ ಆಗಿರುತ್ತದೆ.
ಈಗಾಗಲೇ ಈ ಲೇಖನ ಓದಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೆಲವು ಹೊಸಬರು ಗಜಲ್ ದಲ್ಲಿ *ಕಾಫಿಯ ರದೀಫ್* ಬಗ್ಗೆ ಅರ್ಥವಾಗುವಂತೆ ಒಂದೆರಡು ಗಜಲ್ ಉಲ್ಲೇಖ ಮಾಡಿ ಮಾಹಿತಿ ನೀಡಿದರೆ ನಿಮ್ಮ ಈ ಲೇಖನ ಪರಿಪೂರ್ಣ ಆಗುವದು,ನಮಗೆ ಗಜಲ್ ರಚನೆಗೆ ಸಹಾಯ ಆಗುವುದು ಎಂದು ಕೇಳಿದ್ದಾರೆ. ಸಲಹೆ ನೀಡಿದ್ದಾರೆ.ಆ ಹಿನ್ನೆಲೆಯಲ್ಲಿ ಈ ಕೆಳಗಿನ ನನ್ನವೇ ಎರಡು ಗಜಲ್ ನಿಮ್ಮ ಓದಿಗಾಗಿ.ರಚನೆಗೆ ನೆರವಾಗಲು.
ಕಾಫಿಯ ಮತ್ತು ರದೀಫ್ ಬಗ್ಗೆ ಮಾಹಿತಿ ಗಜಲ್ ದಲ್ಲಿ.ಎರಡು ಗಜಲ್ ಅವಲೋಕಿಸಿ.
*ಗಜಲ್* ೧
ಅವಳು ಮುನಿದುಹೋದ ಮೇಲೆ ಅವಳಂತೆ ಮತ್ತಾರೂ ಬೇಕೆನಿಸಲಿಲ್ಲ
ಜನ ಸಾಗರದಲ್ಲಿ ಮತ್ತೆ ನೋಡಿದೆ ಇವಳಂತೆ ಮತ್ತಾರೂ ಬೇಕೆನಿಸಲಿಲ್ಲ
ಆಡಿದ ಪಿಸುಮಾತು ಮಧುರ ನೆನಪಾಗಿ ಕಾಡುವವು ಅವು ಬದುಕಿಗಾಧಾರ
ನಾನಿಲ್ಲಿ ಅವಳಲ್ಲಿ ಏಕಾಂಗಿತನ ಕಾಡುವುದಂತೆ ಮತ್ತಾರೂ ಬೇಕೆನಿಸಲಿಲ್ಲ
ಪ್ರೇಮದಲಿ ಕಣ್ಣು ಮತ್ತು ಕರುಳು ಅರಿತಷ್ಟು ಬೇರೇನು ಅರಿಯಲಾರವು
ಕೆಲವರು ಬಂದು ಆವಳಿಗೂ ಇಷ್ಟವಾಗದೆ ಹೋದರಂತೆ ಮತ್ತಾರೂ ಬೇಕೆನಿಸಲಿಲ್ಲ
ನಮ್ಮೀರ್ವರ ಆಯ್ಕೆಗಳು ನೋವು ಒಂದೆಂದು ಮೆಚ್ಚಿ ಹಚ್ಚಿಕೊಂಡಿದ್ದಳು
ಬಿಟ್ಟಿರಲಾರೆ ಇಡೀ ಬದುಕೆಂದವಳು ಮಾತು ಮರೆತಳಂತೆ ಮತ್ತಾರೂ ಬೇಕೆನಿಸಲಿಲ್ಲ
ಪ್ರೀತಿಯಲಿ ಬೆರೆತು ಸವಿ ಖುಷಿ ಮಾತು ಹಂಚಿಕೊಂಡೆವು ಸುವರ್ಣಕಾಲ
ಹೋಗುವ ಮುನ್ನ ಬಿಟ್ಟ ನೆನಹುಗಳು ಸದಾ ಜೊತೆಗಿದ್ದಂತೆ ಮತ್ತಾರೂ ಬೇಕೆನಿಸಲಿಲ್ಲ
ಮನಸ್ಸಿಂದ ಗುಣವಂತೆ ಹೃದಯವಂತೆ ಸಹನಶೀಲೆ ಅಪ್ಪಟ ಬಂಗಾರವವಳು
ಕಪಟಿಗರ ಸುಳ್ಳು ಮಾತು ನಂಬಿ ದೂರಾದಳಂತೆ ಮತ್ತಾರು ಬೇಕೆನಿಸಲಿಲ್ಲ
ಅವಳಿಗೆ ಬೇಕೆನಿಸಿದರೆ ಸಿಗಲಿ,ಬರುವುದಾದರೆ ಅವಳೇ ಮರಳಲಿ ಸದಾ ಕಾದಿರುವೆ
ಹೊನ್ನಸಿರಿ’ಕನಸಲೂ ಬೇರಾರನು ಕಾಣನಂತೆ ಮತ್ತಾರೂ ಬೇಕೆನಿಸಲಿಲ್ಲ
*ಹೊನ್ನಸಿರಿ*
@@@@@@
೨)
*ಗಜಲ್-*
ಯಾಕೋ ಸುಮ್ಮನೆ ಒಂದು ಮಧುರ ಯಾತನೆ ಮನದಲಿ ಕಾಡುವುದು
ಹುಚ್ಚು ಖೋಡಿ ಮನವಿದು ಬೇಡ ಅಂದಿದ್ದೆ ನಿತ್ಯ ಕಾಡಿ ಬೇಡುವುದು
ಯಾರಿಗೆ ಹೇಳಲಿ ಈ ಹೃದಯದ ದಾವಾನಲ ಮೂಕ ರೋದನವಾಗಿದೆ
ಮಾತು ಮಾತಿನಲೇ ಪ್ರೇಮ ಮಾತಿನಲೇ ಕಲಹ ದೂರಾಗಿಸುವುದು
ಮೈಗೆ ಆದ ಗಾಯ ಮಾಯಲಿವೆ ಮನಸಿನ ಗಾಯಕೆ ಮುಲಾಮು ತರಬಾರದೇ
ಮುಚ್ಚಿದ ಕಣ್ಣ ಪರದೆಯ ತುಂಬಾ ನಿನ್ನ ಬಿಂಬವೇ ತುಂಬಿರುವುದು
ನಿದ್ದೆ ನೀರಡಿಕೆ ಹಸಿವು ತೃಷೆಗಳು ಅರ್ಥವಿರದೆ ದೂರಾಗಿವೆ
ಹೇಳಲಾಗದ ಸಂಕಟ ಗಂಟಲು ಕಟ್ಟಿ ಕಣ್ಣೀರಾಗಿ ಹರಿಯುತಿರುವುದು
ಮನದ ಮಾತು ಮನಕಲ್ಲದೆ ಅನ್ಯರಿಗೆ ಅರ್ಥವಾಗುವುದೇ ಸಖಿ
ಹೊನ್ನಸಿರಿ’ಮರೆತು ನೀ ಬದುಕಲಾರೆ ಬಲ್ಲೆ ನಿನ್ನ ಸಂಕಟವೇ ನನ್ನಲ್ಲಿ ಅಕ್ಷರವಾಗುವುದು
*ಹೊನ್ನಸಿರಿ*
@@@@
ಅವಳಂತೆ
ಇವಳಂತೆ
ಕಾಡುವುದಂತೆ
ಹೋದರಂತೆ
ಮರೆತಳಂತೆ
ಜೊತೆಗಿದ್ದಂತೆ
ದೂರಾದಳಂತೆ
ಕಾಣನಂತೆ
ಇವೆಲ್ಲ *ಕಾಫಿಯ* ಪದಗಳು
ಮತ್ತಾರು ಬೇಕೆನಿಸಲಿಲ್ಲ… ಅಂತ ಪ್ರತಿಸಲ ಬಳಸಿದ್ದು ರದೀಫ್ ಪದ.ಮೊದಲ ಗಜಲ್ ದಲ್ಲಿ ಗಮನಿಸಿ.
ಈ ಗಜಲ್ ಕಾಫಿಯ ರದೀಫ್ ಎರಡು ಹೊಂದಿದೆ.
ಎರಡನೇ ಗಜಲ್…ಬರೀ ಕಾಫಿಯ ಪದ ಹೊಂದಿದೆ.ರದೀಫ್ ರಹಿತ ಗಜಲ್ ಬರೀಬಹುದು.ಕಾಫಿಯ ಪದ ಇಲ್ಲದೇ ಗಜಲ್ ಬರೆಯಲಾಗದು..
ಕಾಡುವುದು
ಬೇಡುವುದು
ದೂರಾಗಿಸುವುದು
ತುಂಬಿರುವುದು
ಹರಿಯುತಿರುವುದು
ಅಕ್ಷರವಾಗುವುದು…ಹೀಗೆ ಕಾಫಿಯ ಪದಗಳು ಎರಡನೇ ಗಜಲ್ ದಲ್ಲಿ.
ಸಾಂಪ್ರದಾಯಿಕ ಗಜಲ್ ಕಾರರು ಈ ಗಜಲ್ ಗಳು ಮಧುರಾನುಭೂತಿಯನ್ನು ಕಟ್ಟಿಕೊಡುವ ಒಂದು ಕಾವ್ಯ ಪ್ರಕಾರವಾಗಿದ್ದು,ಪ್ರೀತಿ,ಪ್ರೇಮ,ವಿರಹ,ನೋವು,ನಲಿವು,ಸಾಂಗತ್ಯ,ಕಳೆದುಕೊಂಡ ಹತಾಶೆ,ಹೀಗೆ ಮನುಷ್ಯನ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳಿಗೆ ಮೀಸಲಾದದ್ದು ಎಂದು ಹೇಳುತ್ತಾರೆ. ಆದರೆ ಇತ್ತೀಚೆಗೆ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸದವ ಕವಿಯೇ ಅಲ್ಲ ಎಂಬ ವಾದಗಳೂ ಸಹ ತಲೆದೋರಿದ್ದು,ಗಜಲ್ ದಲ್ಲಿ ಸಹಾ ಜನಮುಖಿ, ಸಮಾಜಮುಖಿ,ಆಶಯದ ಗಜಲ್ ಗಳೂ ಬರುತ್ತಿವೆ.ಇಡೀ *ರೋಮ್ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದ* ಎಂಬ ಮಾತೊಂದಿದೆ.ಆತನದು ಅಸಂಗತ ನಡವಳಿಕೆ ಕುರಿತಂತೆ.ಜಗತ್ತು ಹಸಿವು ,ಬಡತನ,ಅನ್ಯಾಯ, ಶೋಷಣೆ,ಅಸಮಾನತೆ,ಜಾತೀಯತೆ,ಭ್ರಷ್ಟತೆಯಿಂದ ಬಳಲುತ್ತಿರುವಾಗ ಕವಿಯಾದವ ಅದಕ್ಕೆ ಕುರುಡಾಗಿ ಕೇವಲ ಪ್ರೀತಿ,ಪ್ರೇಮದ ಬಗ್ಗೆ ಬರೆಯುತ್ತಾ ಕೂಡಲಾಗದು. ಗಜಲ್ ಕೂಡಾ ಒಂದು ಕಾವ್ಯಪ್ರಕಾರ.ಈ ಕಾವ್ಯದಲ್ಲೂ ಸಹ ಸಮಾನತೆಯ, ಸೌಹಾರ್ದತೆಯ ಗಜಲ್ ಗಳು ಬರೆಯುವುದು ಅಸಿಂಧುವಲ್ಲವೆಂಬ ವಾದವು ಸೇರಿಕೊಂಡು,ಇಂದು ನಿಧಾನವಾಗಿ ಗಜಲ್ ಗಳಲ್ಲೂ ಅದರ ಮೂಲ ಸಂವೇದನೆಗಳ ಜೊತೆಯಲ್ಲಿ ಸಮಾಜಮುಖಿ ಗಜಲ್ ಸಾಹಿತ್ಯ ಈಗ ಕಾಲಿಡುತ್ತಿದೆ.ಅದು ಸರಿಯೆಷ್ಟು ಅನ್ನುವುದು ಕಾಲ ನಿರ್ಧರಿಸುತ್ತದೆ.ನಿಮ್ಮ ಸಮಾಜಮುಖಿ ಬರವಣಿಗೆಗೆ ಕವನ ಬರೆಯಿರಿ,ಗಜಲ್ ಪ್ರೇಮಕ್ಕೆ ಮಾತ್ರ ಮೀಸಲಿರಲಿ ಎಂಬ ಮಾತು ಸಹ ಇದೆ.
ಇಂದು ಕನ್ನಡದಲ್ಲಿ ಸುಮಾರು 300 ಕಿಂತ ಹೆಚ್ಚು ಲೇಖಕರು ಗಜಲ್ ಬರೆಯುತ್ತಿದ್ದಾರೆ.ಮೊದಲ ಕೃತಿ ತಂದ ಲೇಖಕಿ ಮುಕ್ತಾಯಕ್ಕ ರಾಯಚೂರು,ಸುಬ್ರಾಯ ಭಟ್, ಶಶಿಕಲಾ ವಸ್ತ್ರದರವರು, ಚಿದಾನಂದ ಸಾಲಿ, ಸಿದ್ಧರಾಮ ಹಿರೇಮಠ, ಸಿದ್ಧರಾಮ ಹೊನ್ಕಲ್, ಗಿರೀಶ್ ಜಕಾಪುರೆ, ಪ್ರಭಾವತಿ ದೇಸಾಯಿ, ಡಾ.ಕಾಶಿನಾಥ ಅಂಬಲಗೆ, ಡಾ.ಸರಜು ಕಾಟಕರ್,ಶೂದ್ರ ಶ್ರೀನಿವಾಸ್,ಡಾ.ಬಸವರಾಜ ಸಬರದ, ಅಲ್ಲಾ ಗಿರಿರಾಜ್, ಡಾ.ಗೋವಿಂದ ಹೆಗಡೆ,ಅಬ್ದುಲ್ ಹೈ ತೋರಣಗಲ್ಲು,ನೂರ ಅಹ್ಮದ ನಾಗನೂರು,ಸೀರಾಜ ಅಹ್ಮದ, ಪ್ರೇಮಾ ಹೂಗಾರ, ಶ್ರೀದೇವಿ ಕೆರೆಮನಿ,ಡಾ.ದಿನ್ನಿ, ಜಯದೇವಿ ಗಾಯಕವಾಡ,ಅರುಣಾ ನರೆಂದ್ರ,ಮಹಿ ಮುನ್ನೂರು, ಮಲ್ಲಿನಾಥ ತಳವಾರ, ಚಂಪು, ಸಿಕಂದರ ಅಲಿ, ಜಬಿವುಲ್ಲಾ ಅಸದ, ನಂರುಷಿ, ಸಾವನ್,ಸಹದೇವ ಯರಗೊಪ್ಪ,ಶೈಲಶ್ರೀ ಶಶಿಧರ,ಮಹಾದೇವ ಪಾಟೀಲ,ಹೀಗೆ ಶ್ವೇತಪ್ರಿಯರಂತಹ ಯುವಕರವರೆಗೆ ಅನೇಕರು.. ಹೀಗೆ ಪಟ್ಟಿ ಬೆಳೀತಾ ಹೋಗುತ್ತದೆ.ಬಹು ದೊಡ್ಡದಿದೆ. ಮುನ್ನೂರು ಲೇಖಕರ ಹೆಸರು ಉಲ್ಲೇಖಿಸುವುದು ಕಷ್ಟ. ಇನ್ನೂ ಹಲವರ ಹೆಸರು ಮನದಲ್ಲಿವೆ.ನಾನು ಸಹ ಇನ್ನೂ ಕಲಿಕಾರ್ಥಿ.., ಎಂಬ ವಿನಯದೊಂದಿಗೆ ಈ ಲೇಖನ ಮುಗಿಸುವೆ.🌷🌹😊🙏
ನಮಸ್ಕಾರ.
–ಸಿದ್ಧರಾಮ ಹೊನ್ಕಲ್
ಗಜಲ್ ಲೇಖಕರು,&
ಸಮಾಜಶಾಸ್ತ್ರ ಬೋಧಕರು, ಅಂಚೆ-ಶಹಾಪುರ-೫೮೫೨೨೩
ಯಾದಗಿರಿ ಜಿಲ್ಲಾ.
೯೯೪೫೯೨೨೧೫೧
(ಲೇಖನ ಹಿರಿಯ ಗಜಲ್ಕಾರರ ಓದಿನಿಂದ ತಿಳಿದದ್ದು, ಅಲ್ಲದೆ ಅನೇಕ ಗಜಲ್ ಕಾರರ ಕೃತಿಯಲ್ಲಿ ಓಡಾಡುವ ಸಾಮಾನ್ಯ ಪದಗಳು,ಹಾಗೂ ಮಾಹಿತಿ ಆಧರಿಸಿ ಬರೆದಿರುವೆ.)