ದಿನಕ್ಕೊಂದು ಕಥೆ
ಮಹಾತ್ಮರ ಲೋಕಕಾರುಣ್ಯ
ಸಂತ ನಾಮದೇವರು ಮಹಾರಾಷ್ಟ್ರದಲ್ಲಿ ಆಗಿ ಹೋದ ಒಬ್ಬ ಮಹಾಸಂತರು. ಅವರು ಪಾಂಡುರಂಗನ ಅನನ್ಯ ಭಕ್ತರಾಗಿದ್ದರು. ಪಂಡರಪುರದ ಪಾಂಡುರಂಗನಿಗೆ ಸ್ವತಃ ತಮ್ಮ ಕೈಯಿಂದ ಊಟ ಮಾಡಿಸುತ್ತಿದ್ದರೆಂಬ ಪ್ರತೀತಿ ಇದೆ. ಎಲ್ಲ ಜೀವರಾಶಿಗಳಲ್ಲೂ ಪಾಂಡುರಂಗನನ್ನೇ ಕಾಣುತ್ತಿದ್ದರು.
ಒಮ್ಮೆ ನಾಮದೇವರು ಕಾಲಡಿಗೆಯಲ್ಲಿ ಪಂಢರಾಪುರಕ್ಕೆ ಹೊರಟಿದ್ದರು. ದಾರಿಯಲ್ಲಿ ಉಣ್ಣುವುದಕ್ಕೆಂದು ಕೆಲವು ಚಪಾತಿಗಳನ್ನು ಹಾಗೂ ಸಲ್ಪ ತುಪ್ಪವನ್ನು ತೆಗೆದುಕೊಂಡರು. ಮಧ್ಯಾಹ್ನದ ವರೆಗೆ ನಡೆದು ನಡೆದು ಸುಸ್ತಾದ ನಾಮದೇವರು ವಿಶ್ರಾಂತಿಗಾಗಿ ಒಂದು ಮರದ ನೆರಳಿಗೆ ಹೋದರು.
ಪಕ್ಕದಲ್ಲಿ ಬುತ್ತಿಯ ಗಂಟನಿಟ್ಟುಕೊಂಡು ಮರಕ್ಕೆ ಒರಗಿಕೊಂಡು ವಿಶ್ರಾಂತಿಯನ್ನು ಪಡೆಯುತ್ತಿದಾಗ ಒಂದು ನಾಯಿಯು ಬಂದು ಅವರ ಬುತ್ತಿಯ ಗಂಟನ್ನು ಎತ್ತಿಕೊಂಡು ಓಡತೊಡಗಿತು. ಆಗ ನಾಮದೇವರಿಗೆ ಎಚ್ಚರವಾಯಿತು.
ನಾಯಿ ತಮ್ಮ ಬುತ್ತಿಯ ಗಂಟನು ಎತ್ತಿಕೊಂಡು ಹೋದುದಕ್ಕೆ ಹಸಿದಿದ್ದ ನಾಮದೇವರಿಗೆ ಸ್ವಲ್ಪವೂ ಕೋಪವುಂಟಾಗಲಿಲ್ಲ. ಬದಲಾಗಿ ಅದು ತುಪ್ಪವನ್ನು ಅಲ್ಲೇ ಬಿಟ್ಟು ಹೋದುದಕ್ಕೆ ಅವರಿಗೆ ಆತಂಕವುಂಟಾಯಿತು. ಆದ್ದರಿಂದ ಅವರು ತುಪ್ಪದ ಭರಣಿಯನ್ನು ತೆಗೆದುಕೊಂಡು ನಾಯಿಯನ್ನು ಬೆನ್ನಟ್ಟಿದರು.
ಬುತ್ತಿಯ ಗಂಟನ್ನು ಕಸಿದು ಕೊಳ್ಳಲು ಅವರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿದ ನಾಯಿ ಇನ್ನಷ್ಟು ವೇಗವಾಗಿ ಓಡತೊಡಗಿತು. ಅದನ್ನು ಹಿಡಿಯಲೇಬೇಕೆಂಬ ಹಟದಿಂದ ನಾಮದೇವರು ಕೂಡ ವೇಗವಾಗಿ ಓಡತೊಡಗಿದರು.
ಮುಂದೆ ನಾಯಿ ಹಿಂದೆ ನಾಮದೇವರು ನೋಡುವವರಿಗೆ ಅದೊಂದು ಮೋಜಿನ ದೃಶ್ಯವಾಗಿತ್ತು. ಕೊನೆಗೂ ನಾಮದೇವರು ನಾಯಿಯನ್ನು ಹಿಡಿದು ತುಪ್ಪದ ಜೊತೆಗೆ ಅದಕ್ಕೆ ಚಪಾತಿಯನ್ನು ತಿನ್ನಿಸಿದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.