ದಿನಕ್ಕೊಂದು ಕಥೆ
ಮೂರ್ಖ ರಾಜ ಜಾಣ ಮಂತ್ರಿ
ಸುರಪುರವೆಂಬ ರಾಜ್ಯದಲ್ಲಿ ಸುರವೀರನೆಂಬ ರಾಜನಿದ್ದ. ಆತನಿಗೆ ಸುರಹರನೆಂಬ ಮಗನೊಬ್ಬನಿದ್ದ, ಸುರವೀರನು ಮಹಾ ಹುಂಬನೂ, ಅವಿವೇಕಿಯೂ, ಮೂರ್ಖನೂ ಆಗಿದ್ದ ತಂದೆಗೆ ತಕ್ಕ ಮಗನಾಗಿ ತಂದೆಯಂತೆ ನಡೆದುಕೊಳ್ಳುತ್ತಿದ್ದ. ಅವನಿಗೆ ಮಹಾಮಂತ್ರಿಯೊಬ್ಬನಿದ್ದ. ಕುಶಮತಿಯು ಮೇಧಾವಿಯೂ, ಹೆಸರಿಗೆ ತಕ್ಕಂತೆ ಕುಶಾಗ್ರಮತಿಯೂ ಆಗಿ ನಡೆದುಕೊಳ್ಳುತ್ತಿದ್ದ. ಆತನ ಬದ್ಧಿಮತ್ತೆಯಿಂದಲೇ ರಾಜ್ಯಭಾರ ಸರಾಗವಾಗಿ ನಡೆಯುತ್ತಿತ್ತು.
ರಾಜ ಸುರವೀರನ ಮೂರ್ಖತನಕ್ಕೆ ಎಣೆಯೇ ಇಲ್ಲದೆ ಪ್ರಜೆಗಳು ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದರು. ಒಮ್ಮೆ ರಾಜ್ಯಕ್ಕೆ ಬರ ಬಂದೊದಗಿದಾಗ ಸೂಕ್ತ ಪರಿಹಾರ ಕೈಗೊಳ್ಳುವ ಬದಲು ಬರಪೀಡಿತ ಪ್ರದೇಶದ ಜನರನ್ನೇ ದೇಶ ಬಿಟ್ಟು ಓಡಿ ಹೋಗುವಂತೆ ಆಜ್ಞಾಪಿಸಿದ್ದ, ಅದರಂತೆ ಒಮ್ಮೆ ರಾಜ್ಯದಲ್ಲಿ ಅತಿವೃಷ್ಟಿ ಕಾಡಿದಾಗ ಎಲ್ಲಾ ಕೆರೆ, ಕಾಲುವೆಗಳನ್ನು ಮುಚ್ಚುವಂತೆ ಆಜ್ಞಾಪಿಸಿದ್ದ, ತನ್ನ ಆಜ್ಞೆಗಳನ್ನು ಪಾಲಿಸದವರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದ.
ಆದ್ದರಿಂದ ಮಂತ್ರಿಯಿಂದ ಹಿಡಿದು ಎಲ್ಲರೂ ಹೆದರಿ ಅವನ ಎದುರು ಮಾತಾಡಲು ಅಂಜುತ್ತಿದ್ದರು. ತಂದೆಯ ಅವಗುಣಗಳನ್ನೇ ಬಳುವಳಿ ಪಡೆದ ಮಗನೂ ಹಾಗೆಯೇ ವರ್ತಿಸುತ್ತಿದ್ದ. ಇದರಿಂದ ಪ್ರಜೆಗಳೆ ಬೇಸತ್ತು ಹೋಗಿದ್ದರು.
ಹೀಗಿರುವಾಗ ಒಮ್ಮೆ ರಾಜನಿಗೆ ಯಾವದೋ ಗಂಭೀರ ಕಾಯಿಲೆಯೊಂದು ಅಂಟಿಕೊಂಡಿತು. ರಾಜನಿಗೆ ಪಂಡಿತರೂ, ದೇಶ ವಿದೇಶಗಳ ವೈದ್ಯರುಗಳೆಲ್ಲ ಪರೀಕ್ಷಿಸಿದರೂ ಏನೆಂದು ಪತ್ತೆ ಮಾಡಿ ಸರಿಯಾದ ಮದ್ದು ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಬೆಸತ್ತ ರಾಜ ತನ್ನ ಕಾಯಿಲೆ ಗುಣಪಡಿಸುವವರಿಗೆ ಅರ್ಧ ರಾಜ್ಯವನ್ನು ನೀಡುವುದಾಗಿ ರಾಜ್ಯದೆಲ್ಲೆಡೆ ಡಂಗುರ ಹೊರಡಿಸಿದ, ಅರ್ಧ ರಾಜ್ಯದ ಆಸೆಗೆ ಅದೆಷ್ಟೋ ಜನ ವೈದ್ಯರು ಬಂದು ಔಷಧ ನೀಡಿದರೂ ಏನೂ ಪ್ರಯೋಜವಾಗದೆ. ರಾಜನ ಅಂತಿಮ ಕ್ಷಣ ಸಮೀಪಿಸುತ್ತಿರುವುದು.
ಆಗ ರಾಜನಿಗೆ ಇದ್ದಕಿದ್ದಂತೆ ಒಂದು ಬಯಕೆ ಮನದಲ್ಲಿ ಮೂಡಿತು. ತಾನು ಹೇಗೂ ಸತ್ತು ಬೇರೆ ಲೋಕಕ್ಕೆ ಹೋಗುತ್ತಿದ್ದೇನೆ. ಹೋಗುವಾಗ ಇಲ್ಲಿಂದ ಒಂದಿಷ್ಟು ಆಸ್ತಿ, ಸಂಪತ್ತನ್ನು ಒಯ್ಯಬೇಕು ಎಂಬ ಆಸೆ ಮೂಡಿತು. ಏನನ್ನು ಒಯ್ಯಬಹುದೆಂದು ಮಂತ್ರಿಯನ್ನು ಕರೆದು ಕೇಳಿದ. ಮಂತ್ರಿಗೆ ಈ ವಿಚಾರ ಬಹಳ ಫಜೀತಿಗಿಟ್ಟು ಕೊಂಡಿತು.
ತೆಗೆದುಕೊಂಡು ಹೋಗಬಹುದು ಎಂದು ಹೇಳಿದರೆ ಅದನ್ನು ಸಿದ್ಧಪಡಿಸಿ ಅಲ್ಲಿಗೆ ಮುಟ್ಟಿಸಿ ತನಗೆ ತೋರಿಸಬೇಕೆಂದು ರಾಜ್ಯ ಪಟ್ಟು ಹಿಡಿಯುತ್ತಾನೆ. ಸಾಧ್ಯವಿಲ್ಲವೆಂದರೆ ಸಿಟ್ಟಿನಿಂದ ತನ್ನ ತಲೆಯನ್ನೇ ತೆಗೆಯುವಂತೆ ಆದೇಶ ಹೊರಡಿಸಬಹುದು, ಹೀಗಾಗಿ ಏನು ಮಾಡಬೇಕೆಂದು ತಿಳಿಯದೆ ಮಂತ್ರಿ ಸ್ವಲ್ಪ ಗೊಂದಲಕ್ಕೆ ಒಳಗಾದನು.
ಸ್ವಲ್ಪ ಆಲೋಚನೆ ಮಾಡಿದ ನಂತರ ಒಂದು ಉಪಾಯ ಹೊಳೆಯಿತು. ರಾಜವೈದ್ಯರನ್ನು ಭೇಟಿ ಮಾಡಿ “ನೀವು ರಾಜನಿಗೆ ಇನ್ನೂ ಕೆಲವು ದಿನ ಬದುಕುತ್ತೀರೆಂದು ಹೇಳಬೇಕು. ನಾನು ರಾಜನಲ್ಲಿ ಉತ್ತರ ಹೇಳಲು ಸಮಯ ಬೇಡುವೆನು” ಎಂದು ತಿಳಿಸಿದನು. ಅದರಂತೆ ರಾಜವೈದ್ಯ ರಾಜನಲ್ಲಿ “ನೀವು ಇನ್ನೂ ಕೆಲವು ಕಾಲ ಬದುಕುವಿರಿ ಯಾವುದೇ ಹೆದರಿಕೆಯಿಲ್ಲ” ಎಂದು ಆಶ್ವಾಸನೆ ನೀಡಿದನು.
ಇದೇ ಸಮಯ ನೋಡಿ ಮಂತ್ರಿಯು ರಾಜನ ಬಳಿ ಸಾರಿ ಅವನ ಬಯಕೆಯನ್ನು ಈಡೇರಿಸಲು ಎರಡು ದಿನ ಸಮಯಾವಕಾಶ ಬೇಕೆಂದೂ, ಸಂಪತ್ತನ್ನು ಒಯ್ಯುವ ವಿಧಾನ ತಿಳಿಸುವುದಾಗಿಯೂ ಬೇಡಿಕೊಂಡನು. ಆದರೆ ರಾಜನು ಮಾರನೇ ದಿನವೇ ತೀರಿ ಹೋದನು. ರಾಜನ ಆಸೆ ಹಾಗೇ ಉಳಿಯಿತು. ಮಂತ್ರಿ ಸಂಕಟದಿಂದ ಪಾರಾದನೆಂದು ಸಂತಸಪಟ್ಟನು.
ಆದರೆ ಈ ವಿಚಾರ ರಾಜನ ಮಗನಾದ ಸುರಹರನಿಗೆ ತಿಳಿಯಿತು, ಕೂಡಲೇ ಮಂತ್ರಿಯನ್ನು ಬರಹೇಳಿ ತನ್ನ ತಂದೆಯ ಆಸೆಯನ್ನು ಏಕೆ ಈಡೇರಿಸಿಲ್ಲವೆಂದು ಸಿಟ್ಟಿನಿಂದ ಕೂಗಾಡಿ ಮಂತ್ರಿಗೆ ಕಠಿಣ ಶಿಕ್ಷೆ ನೀಡುವಂತೆ ಆಜ್ಞಾಪಿಸಿದನು
ಆಗ ಮಂತ್ರಿ ಬುದ್ಧಿವಂತಿಕೆಯಿಂದ ‘”ಯುವರಾಜ, ನಿಮ್ಮ ತಂದೆ ಹೇಳಿದಂತೆ ನಡೆದುಕೊಂಡಿದ್ದರೆ ಸಂಪೂರ್ಣ ರಾಜ್ಯದ ಸಂಪತ್ತನ್ನೆಲ್ಲ ನೀಡಬೇಕಾಗಿತ್ತು, ಆಗ ನಿಮಗೆ ಏನೂ ಉಳಿಯುತ್ತಿರಲಿಲ್ಲ.
ಆದ್ದರಿಂದ ನಾನು ಹಾಗೆ ಮಾಡಬೇಕಾಯಿತು” ಎಂದು ಅರುಹಲು, ಮೊದಲೇ ಮೂರ್ಖನಾಗಿದ್ದ ಯುವರಾಜ ಸುರಹರನು ಸಂತಸಗೊಂಡು ಮಂತ್ರಿಯನ್ನು ಹೊಗಳಿ ರಾಜ್ಯದ ಹೊಣೆಯನ್ನು ಒಪ್ಪಿಸಿದನು. ಹೀಗೆ ಮಂತ್ರಿ ಬುದ್ಧಿಮತ್ತೆಯಿಂದ ಕಷ್ಟಗಳ ನಿವಾರಣೆ ಮಾಡಿಕೊಂಡನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.