ನಿರಂತರ ಅಧ್ಯಯನದಿಂದ ಗುರಿ ಸಾಧನೆ – ಹೊಸಮನಿ
ಸ್ವಾಗತ ಹಾಗೂ ಬೀಳ್ಕೊಡುಗೆ, ವಿವಿಧ ಸಾಂಸ್ಕøತಿಕ ಸಮಾರಂಭ
yadgiri, ಶಹಾಪುರಃ ವಿದ್ಯಾರ್ಥಿಗಳು ಹುಡುಗಾಟಿಕೆಯಿಂದ ಬದುಕು ಹಾಳು ಮಾಡಿಕೊಳ್ಳದೆ, ನಿರಂತರ ಅಧ್ಯಯನ ಮಾಡುವ ಮೂಲಕ ಗುರಿ ತಲುಪಬೇಕು ಎಂದು ಸುರಪುರ ಎಸ್ಪಿ ಮತ್ತು ಜೆಎಂಬಿ ಕಾಲೇಜು ಪ್ರಾಂಶುಪಾಲ ಡಾ.ಸಂಗಣ್ಣ ಹೊಸಮನಿ ತಿಳಿಸಿದರು.
ನಗರದ ಪ್ರಜ್ಞಾ ಪದವಿ ಮಹಾ ವಿದ್ಯಾಲಯದಲ್ಲಿ ನಡೆದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿದ್ದು, ಯಾವುದೇ ಕ್ಷೇತ್ರ ಅಷ್ಟೊಂದು ಸುಲಭವಾಗಿಲ್ಲ. ಹೀಗಾಗಿ ಪ್ರತಿ ಕ್ಷೇತ್ರದಲ್ಲಿ ಸಂಖ್ಯೆ ಮೀರಿ ಸ್ಪರ್ಧೆಯೊಡ್ಡುವವರಿದ್ದಾರೆ. ಅದೆನ್ನೆಲ್ಲ ಮೆಟ್ಟಿ ನಿಲ್ಲಬೇಕೆಂದರೆ, ನೀವೆಲ್ಲ ಹಗಲುರಾತ್ರಿ ವಿರಮಿಸದೆ ಅಭ್ಯಾಸ ಮಾಡಬೇಕು. ಗುರುಗಳ ಮಾರ್ಗದರ್ಶನ ಪಡೆದು ನೀವು ಅಂದುಕೊಂಡ ಗುರಿ ತಲುಪಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಬೇಕು.
ಪದವಿ ಕಾಲೇಜಿನ ಮೆಟ್ಟಿಲು ಏರಿದ ನಿಮಗೆ ಅಸಲಿ ಬದುಕು ಇಲ್ಲಿಂದಲೇ ಶುರುವಾಗಲಿದೆ. ಪ್ರಾಮಾಣಿಕವಾಗಿ ಕಾಲೇಜಿಗೆ ಆಗಮಿಸಿ ಗುರುವೃಂದದ ಮಾರ್ಗದರ್ಶನದಂತೆ ಓದಿ ಸಾಧನೆಯ ಹಾದಿ ಕಂಡುಕೊಳ್ಳಬೇಕು. ಬರಿ ಹುಡುಗಾಟಿಕೆ, ಮನೋರಂಜನೆ ಮಾಡಿ ಪದವಿ ವರ್ಷಗಳನ್ನು ಕಳೆದರೆ, ತಂದೆ-ತಾಯಿಗೆ ಮೋಸ ಮಾಡಿದಂತೆ. ಪದವಿ ಓದುತ್ತಿರುವ ನಿಮಗೆಲ್ಲ ಸಾಕಷ್ಟು ತಿಳುವಳಿಕೆ ಬಂದಿರುತ್ತದೆ. ಬದುಕಿನ ಮಜಲು ಕುರಿತು ಚಿಂತನ ಮಂಥನ ಮಾಡಬೇಕು. ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಬದುಕು ದುಸ್ತರವಾಗಲಿದೆ ಎಂಬುದನ್ನು ಅರಿತು ನಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಎಂ.ಎನ್.ಹುಂಡೇಕಾರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ನಿರಂತರ ಅಧ್ಯಯನಶೀಲರಾಗುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಉಡುಗೊರೆ ನೀಡಿ ಸ್ವಾಗತಿಸಿದರು. ಅಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಶುಭ ಕೋರಿದರು.
ಜಿಪಂ ಮಾಜಿ ಉಪಾಧ್ಯಕ್ಷ ನಾಗಣ್ಣಗೌಡ ಸುಬೇದಾರ, ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ಪ್ರಜ್ಞಾ ಕಾಲೇಜು ಪ್ರಾಂಶುಪಾಲ ಸಯ್ಯದ್ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಚಿದಾನಂದ ಬಡಿಗೇರ, ಉದ್ಯಮಿ ಜಗಧೀಶ ಹೊನ್ಕಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಿರ್ಮಲಾ ಮತ್ತು ಶರಣಮ್ಮ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು. ಸುವರ್ಣ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.